ಭಾನುವಾರ, ಮೇ 22, 2022
21 °C

ಕನಸಿನ ಯೋಜನೆ ಸಾಕಾರಕ್ಕೆ ಮುನ್ನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ತೊಟ್ಟಿಲಲ್ಲಿ ಕುಳಿತು ಬೆಟ್ಟದಿಂದ ಕೆರೆಯತ್ತ ಜಾರುವ ಕಲ್ಪನೆಯನ್ನು ಸಾಕಾರಗೊಳಿಸುವ ಕನಸಿನ ಯೋಜನೆಗೆ ಮುನ್ನುಡಿ ಬರೆಯಲಾಗಿದೆ. ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಮುಕುಟಮಣಿ ನೃಪತುಂಗ ಬೆಟ್ಟಕ್ಕೆ ಮತ್ತೊಂದು ಗರಿ ಮೂಡಿಸಲಿರುವ ರೋಪ್ ವೇ ನಿರ್ಮಾಣಗೊಳ್ಳುವ ನಿಟ್ಟಿನಲ್ಲಿ ಮೊದಲ ಹಂತದ ಪ್ರಕ್ರಿಯೆ ಆರಂಭಗೊಂಡಿದೆ.ಆದರೆ, ಯೋಜನೆಯನ್ನು ಯಾವ ರೀತಿ ಜಾರಿಗೊಳಿಸಬೇಕೆಂಬ ನಿಟ್ಟಿನಲ್ಲಿ ಆರಂಭಿಕ ಹಂತದಲ್ಲಿ ಕೈಗೊಳ್ಳಲಾಗುವ ಸಮಗ್ರ ಅಧ್ಯಯನ ಕಾರ್ಯಕ್ಕೆ ಅಂದಾಜು ಮಾಡಿರುವುದಕ್ಕಿಂತ ಹೆಚ್ಚಿನ ಸಮಯ ತಗಲುವುದು ಮಾತ್ರ ನಿಶ್ಚಿತವಾಗಿದೆ.ರಾಜ್ಯ ಸರ್ಕಾರ ವಿಶೇಷ ಅನುದಾನದ ನೆರವಿನಿಂದ ನೃಪತುಂಗ ಬೆಟ್ಟದಲ್ಲಿ ಹಲವಾರು ಕಾಮಗಾರಿಗಳನ್ನು ಕೈಗೊಂಡು ಅದರ ಸೌಂದರ್ಯವನ್ನು ಹೆಚ್ಚಿಸಲಾಗಿದೆ. ಈ ಬೆಟ್ಟವನ್ನು ಮತ್ತಷ್ಟು ಆಕರ್ಷಕ ಸ್ಥಳವನ್ನಾಗಿ ಮಾಡುವ ನಿಟ್ಟಿನಲ್ಲಿ ರೋಪ್ ವೇ ನಿರ್ಮಿಸಲು ಉದ್ದೇಶಿಸಲಾಗಿದೆ. ನಗರದ ಇನ್ನೊಂದು ಆಕರ್ಷಕ ತಾಣವಾದ ಉಣಕಲ್ ಕೆರೆಯಿಂದ ಬೆಟ್ಟದ ನಡುವೆ ಈ ರೋಪ್ ವೇ ನಿರ್ಮಿಸಲು ಆಲೋಚಿಸಲಾಗಿದೆ.ಯಾವ ರೀತಿ ಈ ರೋಪ್ ವೇ ನಿರ್ಮಿಸಬೇಕೆಂಬ ಬಗೆಗೆ ಸಮಗ್ರವಾಗಿ ಅಧ್ಯಯನ ಮಾಡಿ ವರದಿ ನೀಡುವುದಕ್ಕಾಗಿ ಕಳೆದ ನವೆಂಬರ್ 16ರಂದು ಸಲಹಾ ಸಂಸ್ಥೆಯೊಂದನ್ನು ಜಿಲ್ಲಾಧಿಕಾರಿಗಳು ನೇಮಕ ಮಾಡಿದ್ದಾರೆ. ಕೋಲ್ಕತ್ತಾದ ಇಂಡಿಯನ್ ರೋಪ್‌ವೇಸ್ ಆ್ಯಂಡ್ ಎಂಜಿನಿಯರಿಂಗ್ ಕಂಪೆನಿ ಲಿಮಿಟೆಡ್ ಎಂಬ ಸಂಸ್ಥೆ ಇದಕ್ಕೆ ನಿಯುಕ್ತಿಗೊಂಡಿದೆ. ಈ ಸೇವೆ ಒದಗಿಸಲು ಈ ಸಂಸ್ಥೆಗೆ 5.10 ಲಕ್ಷ ರೂಪಾಯಿ ಶುಲ್ಕವನ್ನು ನೀಡಲಾಗುತ್ತಿದೆ.ರೋಪ್ ವೇ ಸಾಗಲು ಸೂಕ್ತವಾದ ಮಾರ್ಗದ ಬಗೆಗೆ ಈ ಸಂಸ್ಥೆ ಅಧ್ಯಯನ ಮಾಡಬೇಕು. ಮೂರು ಉತ್ತಮ ಮಾರ್ಗಗಳನ್ನು ಸೂಚಿಸಬೇಕು. ರೋಪ್ ವೇಯ ಕೆಳಗಿನ ನಿಲ್ದಾಣ ಹಾಗೂ ಮೇಲಿನ ನಿಲ್ದಾಣ ಎಲ್ಲಿರಬೇಕೆಂಬ ಬಗೆಗೆ ಸಲಹೆ ನೀಡಬೇಕು. ರೋಪ್ ವೇಗೆ ಬಳಸಬೇಕಾದ ತಂತ್ರಜ್ಞಾನ, ಉಪಕರಣಗಳ ಗುಣಮಟ್ಟ ಮತ್ತು ಸಾಮರ್ಥ್ಯ, ಇಲ್ಲಿನ ಪರಿಸರಕ್ಕೆ ಸೂಕ್ತವಾದ ಕ್ಯಾಬಿನ್, ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕಲ್ಪಿಸಬೇಕಾದ ಸೌಲಭ್ಯ ಮುಂತಾದವುಗಳ ಬಗೆಗೆ ವಿವರ ಅಧ್ಯಯನ ಕೈಗೊಂಡು ಸೂಕ್ತ ಸಲಹೆಗಳನ್ನು ಈ ಸಂಸ್ಥೆ ನೀಡಬೇಕು.

ಯೋಜನೆಯ ಅಂದಾಜು ವೆಚ್ಚ, ಎರಡು ಶಿಫ್ಟ್‌ಗಳಲ್ಲಿ ಈ ರೋಪ್ ವೇ ಕಾರ್ಯನಿರ್ವಹಿಸಲು ಬೇಕಾಗುವ ಅಂದಾಜು ವೆಚ್ಚ ಹಾಗೂ ವ್ಯಾಪಾರದ ದೃಷ್ಟಿಯಿಂದ ಈ ಯೋಜನೆ ಕಾರ್ಯಸಾಧುವೇ ಎಂಬ ಅಂಶಗಳ ಬಗೆಗೂ ಸಮಗ್ರ ಅಧ್ಯಯನ ಕೈಗೊಂಡು ವರದಿಯನ್ನು ಈ ಸಂಸ್ಥೆ ನೀಡಬೇಕು.ಈ ಸಮಗ್ರ ಅಧ್ಯಯನ ವರದಿ ಸಲ್ಲಿಸಲು ಒಂದು ತಿಂಗಳ ಕಾಲಾವಶಕಾಶವನ್ನು ಈ ಸಂಸ್ಥೆಗೆ ಜಿಲ್ಲಾಧಿಕಾರಿಗಳು ನೀಡಿದ್ದರು. ಆದರೆ, ಇದಕ್ಕೆ ಪ್ರತಿಕ್ರಿಯಿಸಿ ಪತ್ರ ಬರೆದಿರುವ ಸಂಸ್ಥೆಯು, ಇಷ್ಟೊಂದು ಕಡಿಮೆ ಅವಧಿಯಲ್ಲಿ ಸಮಗ್ರವಾಗಿ ಅಧ್ಯಯನ ಕೈಗೊಂಡು ವರದಿ ನೀಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ. ಇದಕ್ಕಾಗಿ ತನಗೆ 12ರಿಂದ 16 ವಾರದ ಗಡುವನ್ನು ನೀಡಬೇಕೆಂದು ಅದು ಕೇಳಿಕೊಂಡಿದೆ.ಉಣಕಲ್ ಕೆರೆಯಿಂದ ಬೆಟ್ಟದವರೆಗೆ ನಿರ್ಮಿಸಲು ಉದ್ದೇಶಿಸಲಾಗಿರುವ ಈ ರೋಪ್ ವೇ ಮಾರ್ಗದಲ್ಲಿ ಹಲವಾರು ಅಡಚಣೆಗಳಿವೆ. ಉಣಕಲ್ ಕೆರೆ ಹಾಗೂ ಬೆಟ್ಟದ ನಡುವಿನ ಪ್ರದೇಶದಲ್ಲಿ ರಸ್ತೆ ಹಾಗೂ ರೈಲು ಮಾರ್ಗಗಳು, ಅನೇಕ ಕಟ್ಟಡಗಳು ಬರುತ್ತವೆ. ಈ ಕಾರಣಗಳಿಂದಾಗಿ, ರೋಪ್ ವೇ ಯಾವ ಮಾರ್ಗ ಸೂಕ್ತ ಎಂಬ ಬಗೆಗೆ ಅಧ್ಯಯನ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸಲಹಾ ಸಂಸ್ಥೆ ಕೇಳಿರುವ ಸಮಯಾವಕಾಶವನ್ನು ಜಿಲ್ಲಾಧಿಕಾರಿಗಳು ನೀಡುವ ಸಾಧ್ಯತೆಗಳಿವೆ.ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ ಆಸಕ್ತಿಯ ಫಲವಾಗಿ ಈ ಯೋಜನೆಗೆ ಚಾಲನೆ ದೊರೆತಿದೆ. ಯೋಜನೆ ಸುಸೂತ್ರವಾಗಿ ಜಾರಿಗೊಂಡರೆ ಇಡೀ ಉತ್ತರ ಕರ್ನಾಟದಲ್ಲೇ ಇಂಥ ಸೌಲಭ್ಯವಿರುವ ಏಕೈಕ ನಗರ ಎಂಬ ಹೆಗ್ಗಳಿಕೆ ಅವಳಿ ನಗರದ ಪಾಲಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.