ಭಾನುವಾರ, ಜೂನ್ 13, 2021
21 °C

ಕನಸುಗಾರನ ಕನವರಿಕೆಗಳು

ಆನಂದತೀರ್ಥ ಪ್ಯಾಟಿ Updated:

ಅಕ್ಷರ ಗಾತ್ರ : | |

ರವಿಚಂದ್ರನ್ ಮನಸ್ಸು ಹಗುರಾಗಿದೆ. ಅವರು ಇನ್ನು ಮುಂದೆ ಕ್ರೇಜಿಸ್ಟಾರ್ ಆಗಿಯೇ ಮುನ್ನಡೆಯಲಿದ್ದಾರೆ. ‘ಕ್ರೇಜಿಸ್ಟಾರ್’ ಸಿನಿಮಾ ಬಳಿಕ ತಾವೀಗ ರವಿಚಂದ್ರನ್ ಅಲ್ಲ ಎಂಬುದನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ.‘ನನ್ನ ಸಿನಿಮಾಗಳಲ್ಲಿ ಎಲ್ಲರಿಗೂ ಒಳ್ಳೆಯ ಪಾತ್ರ ಸೃಷ್ಟಿಸಿದೆ. ಆದರೆ ನನ್ನ ಪಾತ್ರ ಏನು ಅನ್ನುವುದನ್ನೇ ಮರೆತುಬಿಟ್ಟೆ. ನಾನು ಕ್ರೇಜಿಸ್ಟಾರಾ? ರವಿಚಂದ್ರನ್ನಾ? ಪ್ರತಿ ಸಾರಿ ಈ ಗೊಂದಲದಲ್ಲಿ ಬೀಳುತ್ತಿದ್ದೆ. ಈಗ ‘ಕ್ರೇಜಿಸ್ಟಾರ್’ ಆದ ಮೇಲೆ ಮನಸು ಹಗುರಾಗಿದೆ. ಖಂಡಿತ ನಾನು ಕ್ರೇಜಿಸ್ಟಾರ್. ರವಿಚಂದ್ರನ್ ಅಲ್ಲ’ ಎಂದರು ರವಿಚಂದ್ರನ್.ತಮ್ಮ ತಂಗಿಯ ಮಗ ವಿವೇಕ್ ನಾಯಕನಾಗಿ ನಟಿಸುತ್ತಿರುವ ‘ಎಂದೆಂದೂ ನಿನಗಾಗಿ’ ಹಾಡುಗಳ ಸೀಡಿ ಬಿಡುಗಡೆ ಸಮಾರಂಭದಲ್ಲಿ ಹೀಗೊಂದಷ್ಟು ನಿಗೂಢವಾಗಿ ಮಾತಾಡಿದ ರವಿಚಂದ್ರನ್, ಕಾರ್ಯಕ್ರಮ ಮುಗಿಯುತ್ತಲೇ ಸುದ್ದಿಮಿತ್ರರ ಜತೆ ಮಾತಿಗೆ ಕುಳಿತರು. ಹುಸಿಮುನಿಸು ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅದಕ್ಕೆ ಕಾರಣ-– ಈ ಕಾಲು ಶತಮಾನ ಅವಧಿಯ ಬಣ್ಣದ ಲೋಕದಲ್ಲಿ ತಮ್ಮನ್ನು ಸರಿಯಾಗಿ ನೋಡಲಿಲ್ಲ ಎಂಬುದು.‘ನೀವು ನನ್ನನ್ನು ನೋಡಿಲ್ಲ. ಬರೀ ಕಿವಿಗೊಟ್ಟಿದ್ದೀರಾ ಅಷ್ಟೇ’ ಎಂದ ರವಿಚಂದ್ರನ್. ಮರುಕ್ಷಣವೇ ‘ಇದು ಫಿಲಾಸಫಿ ಅಲ್ಲ...’ ಎಂದು ಎಲ್ಲ ಮರೆತಂತೆ ಗಹಗಹಿಸಿ ನಕ್ಕರು. ‘ಕ್ರೇಜಿಸ್ಟಾರ್’ ಸಿನಿಮಾದಲ್ಲಿನ ಕೆಲವು ಮುಖ್ಯ ಅಂಶಗಳ ಬಗ್ಗೆ ಗುರುತಿಸಬೇಕಿತ್ತು. ಅವುಗಳ ಕುರಿತು ಮಾತಾಡಬೇಕಿತ್ತು. ಆದರೆ ಅದೆಲ್ಲ ಆಗಲೇ ಇಲ್ಲ ಎಂದು ಮತ್ತೆ ಮೌನ ತಳೆದರು.ಸಿನಿಮಾ ಸಂಪೂರ್ಣ ಚೆನ್ನಾಗಿದೆ ಎಂಬ ಅಭಿಮತವನ್ನು ರವಿಚಂದ್ರನ್ ಯಾವತ್ತೂ ನಿರೀಕ್ಷಿಸುವುದಿಲ್ಲವಂತೆ. ‘ಶೇಕಡ ೮೦ರಷ್ಟು ಚಿತ್ರ ಚೆನ್ನಾಗಿಲ್ಲದೇ ಇರಬಹುದು. ಆಂದರೆ ಶೇ ೨೦ರಷ್ಟಾದರೂ ಉತ್ತಮವಾಗಿಲ್ಲವೇ? ನನ್ನ ಬರವಣಿಗೆಯಲ್ಲಿ ಬೆಳವಣಿಗೆ ಕಾಣಿಸಲಿಲ್ಲವೇ? ನನಗೊಂದು ರೈಟಿಂಗ್ ಗ್ರೋತ್ ಇದೆಯಲ್ಲ? ಅದನ್ನು ಯಾಕೆ ಯಾರೂ ಗುರುತಿಸಲಿಲ್ಲ?’ ಎಂದು ಪ್ರಶ್ನೆಗಳ ಸುರಿಮಳೆಗೈದರು.‘ಕ್ರೇಜಿಸ್ಟಾರ್‌’ನ ಮುಖ್ಯ ಪರಿಣಾಮ ಏನು? ಎಂದು ಕೆಣಕಿದಾಗ, ‘ಬದಲಾವಣೆ ಆಗಿದ್ದೀನಿ. ಅಷ್ಟಿಷ್ಟಲ್ಲ... ಭಯಂಕರ ಬದಲಾವಣೆಯಾಗಿದ್ದೀನಿ’ ಅಂದರು. ಹೇಗೆ ಎಂಬುದನ್ನು ಈಗ ಸ್ಪಷ್ಟವಾಗಿ ಹೇಳೋದಿಲ್ಲ ಅಂತ ಖಡಾಖಂಡಿತವಾಗಿ ನುಡಿದರು!

ಆಸಕ್ತಿಯಿಂದ ಕಷ್ಟಪಟ್ಟು ಮಾಡಿದ ಸಿನಿಮಾ ಸೋಲು ಕಾಣಲಿ; ಗೆಲುವನ್ನೇ ಪಡೆಯಲಿ. ಯಾವತ್ತೂ ಆ ಬಗ್ಗೆ ಯೋಚಿಸಿಲ್ಲ. ಕಲಾಕೃತಿ ನಿರ್ಮಾಣದ ಬಗ್ಗೆ ಇರುವ ತೃಪ್ತಿಯೇ ಸಾಕು ಎನ್ನುವ ಈ ಕನಸುಗಾರ, ‘ಕ್ರೇಜಿಸ್ಟಾರ್‌’ನ ಸ್ಕ್ರಿಪ್ಟ್‌ಗೆ ಆರು ತಿಂಗಳು ತೆಗೆದುಕೊಂಡಿದ್ದರಂತೆ.‘ಹಳೆಯ ಮಾದರಿಯಲ್ಲಿ ಸಿನಿಮಾ ಮಾಡುವುದು ನಂಗೆ ಕಷ್ಟಾನಾ? ಸಿನಿಮಾ ನೋಡುವ ವಿಧಾನ ಬದಲಾಗಬೇಕು ಅಂತ ಎಷ್ಟೆಲ್ಲ ಒದ್ದಾಡುತ್ತೇನೆ ಗೊತ್ತೇ? ಅದಕ್ಕಾಗಿ ಹೊಸ ಪ್ರಯತ್ನ ಮಾಡಿದಾಗ ಹತ್ತಿರದವರಾದರೂ ಅದನ್ನು ಗುರುತಿಸಬೇಡವೇ?’ ಎಂಬ ಪ್ರಶ್ನೆ ಅವರದು.

* * *

ತಮ್ಮ ಚಿತ್ರದ ಪ್ರಚಾರಕ್ಕೆ ಪೋಸ್ಟರ್ ಆಗಲೀ, ಟ್ರೈಲರ್ ಆಗಲೀ ಬೇಕಾಗಿಲ್ಲ. ಹತ್ತು ವರ್ಷಗಳಾದ ಬಳಿಕವೂ ಒಂದು ಸಿನಿಮಾಕ್ಕೆ ಪ್ರೇಕ್ಷಕ ಸಾಲುಗಟ್ಟಿದ್ದಾನೆ ಅಂದರೆ ಅದು ರವಿಚಂದ್ರನ್ ಸಿನಿಮಾ. ಬಿಡುಗಡೆಯಾಗಿ ಎರಡು ವರ್ಷವಾದರೂ ಮಾರಾಟವಾಗುವ ಸರಕು ಅದು ಎಂಬ ವಿಶ್ವಾಸಭರಿತ ಮಾತು ‘ಕ್ರೇಜಿಸ್ಟಾರ್‌’ನದು!‘ಮಲ್ಲ’ ಚಿತ್ರ ಸೆಟ್ಟೇರುವ ಮುನ್ನವೇ ಇದು ಶೇ ೧೦೦ ಹಿಟ್ ಆಗಲಿದೆ ಅಂತ ರವಿಚಂದ್ರನ್ ಹೇಳಿದ್ದರಂತೆ. ಆದರೆ ಅದನ್ನು ನೋಡಿದ ಹಲವು ನಿರ್ಮಾಪಕರು, ಇದು ಏಕಾಂಗಿ-–೨ ಅಷ್ಟೇ ಅಂತ ಬೈದಿದ್ದರಂತೆ. ಅದನ್ನೊಪ್ಪದ ರವಿಚಂದ್ರನ್, ಈ ಸಿನಿಮಾ ಹಿಟ್ ಆಗದೇ ಹೋದರೆ ಮೀಸೆ ತೆಗೆಯುವುದಾಗಿ ಸವಾಲು ಎಸೆದಿದ್ದರಂತೆ. ‘ಜನ ನನ್ನನ್ನು ಹೇಗೆ ಇಷ್ಟಪಡುತ್ತಾರೆ ಅನ್ನೋದು ನನಗೆ ಚೆನ್ನಾಗಿ ಗೊತ್ತು.ಆದರೆ ಹೊಸ ಪ್ರಯತ್ನ ಅಂತ ‘ಕ್ರೇಜಿಸ್ಟಾರ್’ ಮಾಡಿದೆ. ಅದರಲ್ಲಿ ನಾನೇ ಇದ್ದೇನೆ. ಇಡೀ ಸಿನಿಮಾ ನನ್ನ ಅನುಭವ. ಅಷ್ಟೇ ಅಲ್ಲ, ಅದು ಎಲ್ಲರ ಅನುಭವ ಕೂಡ. ಆದರೆ ನಾನು ವಿಭಿನ್ನ ಪ್ರಯತ್ನ ಮಾಡಿದ್ದು ತಪ್ಪಾಯ್ತು ಅನಿಸಿದೆ. ಮತ್ತೆ ಅದೇ ರೂಟ್‌ಗೆ ಹೋಗುತ್ತೇನೆ. ಪ್ರೇಕ್ಷಕ ಕೂಡ ಅದನ್ನೇ ಕೇಳ್ತಾ ಇದಾನೆ. ಮತ್ತೇನು ಮಾಡೋದಕ್ಕಾಗುತ್ತೆ?’ ಎಂದರು.‘ಏಕಾಂಗಿ ಬಳಿಕ ನನ್ನನ್ನು ಏನೋ ಕಾಡುತ್ತಿತ್ತು. ಅದು ‘ಕ್ರೇಜಿಸ್ಟಾರ್’ ಬಳಿಕ ಸ್ಪಷ್ಟವಾಯಿತು. ಇನ್ನು ನನ್ನ ದಾರಿ ಕಮರ್ಷಿಯಲ್ ಫಾರ್ಮ್ಯಾಟ್‌ಗಳತ್ತ. ೧೯೮೬ರಲ್ಲೇ ಅಂಥ ಸಿನಿಮಾ ಮಾಡಿ ಗೆದ್ದವನು ನಾನು. ಇಪ್ಪತ್ತೈದು ವರ್ಷದ ಬಳಿಕ ಈಗ ಹಾಗೆ ಮಾಡೋದು ಅಸಾಧ್ಯವೇ?’ ಎಂದ ರವಿಚಂದ್ರನ್, ಮುಂದಿನ ಸಿನಿಮಾ ಬಿಡುಗಡೆ ಮಾಡುವ ಮುನ್ನ ಒಂದು ಕವರ್ ಕೊಡುತ್ತಾರಂತೆ. ಆ ಸಿನಿಮಾ ನೋಡುವ ಪ್ರೇಕ್ಷಕ ಎಲ್ಲಿ ನಗುತ್ತಾನೆ, ಎಲ್ಲಿ ಅಳುತ್ತಾನೆ, ಎಲ್ಲಿ, ಎಷ್ಟು ದಿನ ಆ ಚಿತ್ರ ಓಡುತ್ತೆ ಎಂಬೆಲ್ಲಾ ವಿವರಗಳು ಅದರಲ್ಲಿ ಇರುತ್ತವಂತೆ! ‘ನನಗಿಂತ ನನ್ನ ಸಿನಿಮಾದ ಬಗ್ಗೆ ಯಾರಿಗೆ ಚೆನ್ನಾಗಿ ಗೊತ್ತಿರೋಕೆ ಸಾಧ್ಯ?’ ಎಂಬ ಸವಾಲು ಅವರದು.ಕ್ರೇಜಿಸ್ಟಾರ್ ಬಳಿಕ ಕೆಲ ಸಂಗತಿಗಳು ಅವರಿಗೆ ಸ್ಪಷ್ಟವಾದವಂತೆ. ರವಿಚಂದ್ರನ್‌ಗೆ ವಯಸ್ಸಾಗಿದೆ ಎಂಬೋದನ್ನು ಯಾರೂ ನಂಬುತ್ತಿಲ್ಲ. ಅದಕ್ಕಿಂತ ದೊಡ್ಡ ಖುಷಿ ಅವರಿಗೆ ಬೇರೊಂದಿಲ್ಲ. ‘‘ಹೀರೊಯಿನ್‌ಗಳ ಸೊಂಟಕ್ಕೆ ಹಿಂಜರಿಕೆಯಿಲ್ಲದೇ ಕೈ ಹಾಕು ಅಂತ ಪ್ರೇಕ್ಷಕ ನಂಗೆ ಕಾಪಿರೈಟ್ಸ್ ಕೊಟ್ಟಿದ್ದಾನೆ. ಕ್ರೇಜಿಸ್ಟಾರ್‌ನಲ್ಲಿ ಹಾಗೆಲ್ಲ ಯಾಕೆ ಮಾಡಿಲ್ಲ ಎಂಬ ಪ್ರಶ್ನೆ ಕೇಳಿದವರು ಅನೇಕ ಮಂದಿ.ಅಂಥ ಸಿನಿಮಾ ಹತ್ತಾರು ಮಾಡಿದ್ದೇನೆ. ನನ್ನ ಮಕ್ಕಳು ನನ್ನ ಥರ ಕಮರ್ಷಿಯಲ್ ಸಿನಿಮಾ ಮಾಡಬಹುದು. ನಾನೂ ಅದನ್ನೇ ಮಾಡಿದರೆ ವ್ಯತ್ಯಾಸವೇನು? ಹಾಗೆಂದೇ ಎರಡು ಪ್ರಯತ್ನ ಮಾಡಿದೆ. ಗುರುತಿಸದೇ ಹೋದರೆ ಮತ್ತೇನು ಮಾಡಲು ಸಾಧ್ಯ? ಹೀಗಾಗಿ ಇನ್ನು ಮುಂದೆ ನನ್ನ ದಾರಿ ಕಮರ್ಷಿಯಲ್ ಸಿನಿಮಾಗಳತ್ತ’ ಎಂದು ಸ್ಪಷ್ಟನೆ ನೀಡಿದರು.‘ಮಂಜಿನ ಹನಿ’ ಬಗ್ಗೆ ಯಾವೊಂದನ್ನೂ ರವಿಚಂದ್ರನ್ ಬಾಯಿ ಬಿಡಲಿಲ್ಲ. ಆ ಸಿನಿಮಾ ನೋಡಿದವರು ಮತ್ತೆ ನನ್ನ ಬಗ್ಗೆ ಏನನ್ನೂ ಮಾತಾಡೋಲ್ಲ ಎಂಬ ದೃಢವಿಶ್ವಾಸ ಅವರದು. ‘ಸಿನಿಮಾ ವಿಮರ್ಶೆಗೆ ಐದು ಸ್ಟಾರ್ ಮಾತ್ರ ಇರೋದಲ್ವಾ? ಮಂಜಿನ ಹನಿಗೆ ೫೦ ಸ್ಟಾರ್ ಕೊಡ್ತಾರೆ ನೋಡಿ’ ಎಂದರು!ಅಂದ ಹಾಗೆ, ‘ಕ್ರೇಜಿಸ್ಟಾರ್’ ಗಳಿಕೆಯಲ್ಲಿ ಮುಂದಿದೆ ಎಂಬ ಮಾತನ್ನೂ ಸೇರಿಸಿದರು. ಮುಂದಿನ ದಿನಗಳಲ್ಲಿ ಈ ಸಿನಿಮಾದ ಬಗ್ಗೆ ಇನ್ನಷ್ಟು ಒಳ್ಳೆಯ ಮಾತು ಕೇಳಿಬರಬಹುದಲ್ವಾ? ಎಂಬ ಪತ್ರಕರ್ತರ ಆಶಾವಾದದ ಮಾತಿಗೆ ವಿಚಿತ್ರವಾಗಿ ನೋಡಿದ ರವಿಚಂದ್ರನ್, ‘ಏಕಾಂಗಿ ಸಿನಿಮಾ ಈಗ ಚೆನ್ನಾಗಿದೆ ಅಂದರೆ ಏನುಪಯೋಗ?’ ಎಂಬ ಮರುಪ್ರಶ್ನೆ ಹಾಕಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.