ಭಾನುವಾರ, ಮೇ 16, 2021
28 °C

ಕನ್ನಡಪರ ಸಂಘಟನೆಗಳು ಒಗ್ಗೂಡಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕನ್ನಡದ ಪ್ರಶ್ನೆ ಬಂದಾಗ ಎಲ್ಲಾ ಕನ್ನಡಪರ ಸಂಘಟನೆಗಳು ತಮ್ಮ ಮಿತಿಗಳನ್ನು ಮೀರಿ ಒಂದಾಗಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಆ ದಿಕ್ಕಿನಲ್ಲಿ ಕೆಲಸ ಮಾಡಬೇಕು~ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಕರೆ ನೀಡಿದರು.ತಮಗೆ ಪಂಪ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಸ್ವಾಭಿಮಾನಿ ಕರ್ನಾಟಕ ವೇದಿಕೆ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.`ಕನ್ನಡದ ವಿಚಾರವಾಗಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಸಾಹಿತ್ಯ ಪರಿಷತ್ತು ಸರಿಯಾದ ನಿಲುವು ತಾಳುತ್ತಿಲ್ಲ. ಎರಡೂ ಸಂಸ್ಥೆಗಳ ಅಧ್ಯಕ್ಷರು ಕನ್ನಡಕ್ಕಾಗಿ ದುಡಿದವರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕನ್ನಡದ ಅಳಿವು ಉಳಿವಿನ ಸಂದರ್ಭದಲ್ಲಿ ಈ ಸಂಸ್ಥೆಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಅರಿತು ವರ್ತಿಸಬೇಕು. ಹಾಗೆ ನಡೆದುಕೊಳ್ಳದಿದ್ದರೂ ಕನ್ನಡದ ಚಳವಳಿ ನಿಲ್ಲುವುದಿಲ್ಲ. ಚಳವಳಿಗೆ ಯಾರೂ ಅನಿವಾರ್ಯವಲ್ಲ~ ಎಂದು ಎಚ್ಚರಿಕೆ ನೀಡಿದರು.`ರಾಜ್ಯದಲ್ಲಿರುವಷ್ಟು ಭಾಷಾ ಪರ ಸಂಘಟನೆಗಳನ್ನು ಬೇರೆಲ್ಲೂ ಕಾಣಲಾಗದು. ಎಲ್ಲಿ ರೋಗಿ ಗಳಿರುತ್ತಾರೋ ಅಲ್ಲಿ ಔಷಧಾಲಯ ಇರುತ್ತದೆ. ಕನ್ನಡಪರ ಸಂಘಟನೆಗಳು ಔಷಧಾಲಯವಿದ್ದಂತೆ. ಆದರೆ ಕೆಲವರು ರೋಗ ಹಾಗೇ ಇರಲೆಂದು ಬಯಸುವುದು ದುರದೃಷ್ಟದ ಸಂಗತಿ~ ಎಂದು ಹೇಳಿದರು.`ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತದ್ದನ್ನು ಪಾಟೀಲ ಪುಟ್ಟಪ್ಪನವರು ಟೀಕಿಸಿದರು. ಇದು ಅವರ ವ್ಯಕ್ತಿತ್ವಕ್ಕೆ ಉಚಿತವಾದ ಮಾತಲ್ಲ. ಟೀಕಿಸುವ ಸಂದರ್ಭ ಇದಲ್ಲ. ಜಗಳ ಬೇರೆ, ವಿಚಾರ ಬೇರೆ. ಕನ್ನಡಕ್ಕೆ ದೊಡ್ಡ ಪ್ರಶಸ್ತಿ ಬಂದಾಗ ಅದನ್ನು ಒಪ್ಪುವ ಸಹೃದಯತೆ ಇರಬೇಕು~ ಎಂದರು.ಸಂಶೋಧಕ ಡಾ. ಹಂಪ ನಾಗರಾಜಯ್ಯ, `ಪಂಪ ತನಗೆ ಆಶ್ರಯ ನೀಡಿದ ಅರಿಕೇಸರಿಯನ್ನು ಕಾವ್ಯದಲ್ಲಿ ಟೀಕಿಸಿದ. ಚಂಪಾ ಕೂಡ ಸರ್ಕಾರವನ್ನು ಮುಖ್ಯಮಂತ್ರಿಗಳನ್ನು ಟೀಕಿಸಿದವರು. ಕನ್ನಡದ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ನಿರ್ಭಿಡೆಯಿಂದ ದನಿ ಎತ್ತಿದವರು. ಅವರು ಕನ್ನಡದ ದೊಡ್ಡ ಸಾಕ್ಷಿ ಪ್ರಜ್ಞೆ~ ಎಂದು ಮೆಚ್ಚುಗೆ ಸೂಚಿಸಿದರು.`ಚಂಪ ಜಗಳಗಂಟಿ ಎನ್ನುತ್ತಾರೆ. ಆದರೆ ಪ್ರತಿ ಊರಿನಲ್ಲೂ ನೀರನ್ನು ಸಮನಾಗಿ ಹಂಚುವ ನೀರುಗಂಟಿ ಇರುತ್ತಾರೆ. ಜಗಳಗಂಟಿಯೂ ಸಹ ನೀರುಗಂಟಿಯಂತೆ ಸಮಾನತೆಗಾಗಿ ಹೋರಾಡುವವರು. ಅವರು ಎಂದೂ ಹೃದಯವನ್ನು ಅಶುಚಿಗೊಳಿಸಿಕೊಂಡವರಲ್ಲ~ ಎಂದರು.ಕವಿ ಜರಗನಹಳ್ಳಿ ಶಿವಶಂಕರ್, ಲೇಖಕಿ ಪ್ರೊ.ಬಿ.ನಾರಾಯಣಮ್ಮ, ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವ.ಚ.ಚನ್ನೇಗೌಡ, ವೇದಿಕೆಯ ಕಾರ್ಯಾಧ್ಯಕ್ಷ ದ್ವಾರನಕುಂಟೆ ಪಾತಣ್ಣ, ಉಪಾಧ್ಯಕ್ಷ ರು.ಬಸಪ್ಪ, ಖಜಾಂಚಿ ನಾ.ಮಲ್ಲಿಕಾರ್ಜುನ, ಲೇಖಕಿ ಎಂ.ಎಸ್.ಶಶಿಕಲಾಗೌಡ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.