ನಿಪ್ಪಾಣಿ: `ಬೆಳಗಾವಿ ಜಿಲ್ಲೆಯು ಕನ್ನಡ ಮತ್ತು ಮರಾಠಿ ಭಾಷೆಯ ಸಾಂಸ್ಕೃತಿಕ ಕೇಂದ್ರವಾಗಿದೆ. ಆದ್ದರಿಂದ ಕನ್ನಡ-ಮರಾಠಿ ಅನುವಾದ ಕೇಂದ್ರ ಸ್ಥಾಪನೆಯಾಗಬೇಕು' ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಸರಜೂ ಕಾಟ್ಕರ್ ಹೇಳಿದರು.

ಇಲ್ಲಿನ ಜಿ.ಐ. ಬಾಗೇವಾಡಿ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಶನಿವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅನುವಾದ ಕೇಂದ್ರವನ್ನು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಆರಂಭಿಸಬೇಕು. ಇದರಿಂದ ಕನ್ನಡವನ್ನು ಇನ್ನಷ್ಟು ಶ್ರೀಮಂತಗೊಳಿಸಲು ಸಹಕಾರಿಯಾಗುತ್ತದೆ ಎಂದರು.

ಕನ್ನಡವನ್ನು ಶ್ರೀಮಂತಗೊಳಿಸುವ ಕೆಲಸ ಯಾವ ನಿಟ್ಟಿನಿಂದ ನಡೆದರೂ ಅದು ಸ್ವಾಗತಾರ್ಹ. ಬೇರೆ ಬೇರೆ ಭಾಷೆಗಳಲ್ಲಿರುವ ಶ್ರೇಷ್ಠವಾದ ಕೃತಿಗಳು ಕನ್ನಡಕ್ಕೆ ಬರಬೇಕು. ಕನ್ನಡದ ಕೃತಿಗಳು ಬೇರೆ ಭಾಷೆಗಳಿಗೆ ಅನುವಾದಗೊಳ್ಳಬೇಕು. ಅದಕ್ಕಾಗಿ ಅನುವಾದ ಕೇಂದ್ರ ಸ್ಥಾಪಿಸುವುದು ಯೋಗ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಳಗಾವಿ ನಗರವು ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಗಡಿಯಿಂದ ಆವೃತ್ತಗೊಂಡಿದೆ. ಇಲ್ಲಿಯ ಕನ್ನಡ ಗಂಡು ಭಾಷೆಗೆ, ಮರಾಠಿಯ ಸುಮಧುರದ ಲೇಪ ಹತ್ತಿದೆ. ಗಡಿ ಸೀಮೆಯ ಬಗ್ಗೆ ಆಗೀಗ ತಿಕ್ಕಾಟಗಳು ನಡೆದರೂ, ಇಲ್ಲಿಯ ಕನ್ನಡ ಮರಾಠಿ ಸಾಂಸ್ಕೃತಿಕ ಜೀವನಕ್ಕೆ ಅದು ಎಂದಿಗೂ ಚ್ಯುತಿ ತಂದಿಲ್ಲ. ಗಡಿ ಸಂಬಂಧದ ಇಲ್ಲಿಯ ಘರ್ಷಣೆಗಳು ತಾತ್ಕಾಲಿಕವಾದವುಗಳು. ಬೆಳಗಾವಿಯಲ್ಲಿ ಖ್ಯಾತ ಮರಾಠಿ ಲೇಖಕರೂ ಇದ್ದಾರೆ.

ಅವರ್ಯಾರನ್ನೂ ಕರ್ನಾಟಕವು ಹೊರಗಿನ ಲೇಖಕರೆಂದು ಕಂಡಿಲ್ಲ ಎಂದ ಅವರು, ಬೆಳಗಾವಿ ಜಿಲ್ಲೆಯ ಸಮಗ್ರ ಚಿತ್ರಣವನ್ನು ಎಳೆ ಎಳೆಯಾಗಿ ತಮ್ಮ ಭಾಷಣದಲ್ಲಿ ಬಿಚ್ಚಿಟ್ಟರು.

ನಿಪ್ಪಾಣಿಯಲ್ಲಿ ನಡೆಯುತ್ತಿರುವ ಈ ಸಮ್ಮೇಳನವನ್ನು ಭಾಷಾ ಬಾಂಧವ್ಯದ ಗಟ್ಟಿ ಧ್ವನಿ ಎಂಬ ವಾಕ್ಯದೊಂದಿಗೆ ಕರೆದಿರುವುದು ಸೂಕ್ತವಾಗಿದೆ. ಇದೊಂದು ವಿಶೇಷವಾದ ಸಮ್ಮೇಳನ. ನಿಪ್ಪಾಣಿ ಪರಿಸರದಲ್ಲಿ ಮರಾಠಿ ಭಾಷಿಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ. ಈ ಜನರೂ ಕರ್ನಾಟಕದ ಅಭಿವೃದ್ಧಿಯಲ್ಲಿ ತಮ್ಮ ಕಾಣಿಕೆ ನೀಡಿದ್ದಾರೆ. ಇಲ್ಲಿ ಮರಾಠಿ ಭಾಷಿಕರು ಕನ್ನಡದ ಹೃದಯಕ್ಕೆ ಹತ್ತಿರದವರು. ಕನ್ನಡ- ಮರಾಠಿ ಸಂಸ್ಕೃತಿಗಳು ಒಂದೆಂದು ಈ ಸಮ್ಮೇಳನ ಇಂದು ಮುನ್ನುಡಿ ಬರೆಯುತ್ತಲಿದೆ ಎಂದು ಕಾಟ್ಕರ್ ಹೇಳಿದರು.

ಕರ್ನಾಟಕ ಮತ್ತು ಮಹಾರಾಷ್ಟ್ರವನ್ನು ಆಚಾರ-ವಿಚಾರದಲ್ಲಿ, ನಡವಳಿಕೆಗಳಲ್ಲಿ, ಆಹಾರ- ವಿಹಾರಗಳ ಕ್ರಮದಲ್ಲಿ ಪ್ರತ್ಯೇಕ ರಾಜ್ಯಗಳೆಂದು ಹೇಳಲು ಸಾಧ್ಯವಿಲ್ಲ. ಎರಡೂ ರಾಜ್ಯಗಳಲ್ಲಿ ಪ್ರಾಚೀನ ಕಾಲದಿಂದಲೂ ಕರುಳಬಳ್ಳಿಯ ಸಂಬಂಧವಿದೆ ಎಂದರು.

ಕನ್ನಡ ಮಾಧ್ಯಮದಲ್ಲಿ ಕಲಿಯುವವರಿಗೆ ಸರ್ಕಾರಿ ಮತ್ತು ಅರೆ ಸರ್ಕಾರಿ ಕೆಲಸಗಳು ಖಂಡಿತವಾಗಿ ಸಿಗುತ್ತವೆಂದು ಸರ್ಕಾರದ ನೀತಿ ಜಾರಿಗೆ ಬರಬೇಕು. ಇದೇ ನೀತಿಯನ್ನು ಖಾಸಗಿ ವಲಯದಲ್ಲೂ ವಿಸ್ತರಿಸಬೇಕು. ಮಹಿಷಿ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದ ಎಲ್ಲ ಹಂತಗಳಲ್ಲೂ ಕನ್ನಡ ಆಡಳಿತ ಭಾಷೆ ಆಗಬೇಕು. ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧಕ್ಕೆ ಕನ್ನಡದ ದೀಕ್ಷೆ ನೀಡುವುದು ಅವಶ್ಯವಿದೆ. ವಿಧಾನಸೌಧ ರಿಪೇರಿಯಾದರೆ ಇಡೀ ಆಡಳಿತವು ತನ್ನಿಂದ ತಾನೇ ರಿಪೇರಿಯಾಗುತ್ತದೆ ಎಂದು ತಿಳಿಸಿದರು.

ಜಾಗತೀಕರಣ ಪ್ರಕ್ರಿಯೆಯು ಕನ್ನಡ ಮತ್ತು ಇತರ ದೇಸಿ ಭಾಷೆಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ. ಕನ್ನಡ ಮತ್ತು ಇಂಗ್ಲಿಷ್ ಕಲಿಕೆಯ ಕಂದಕ ದೊಡ್ಡದಾಗುತ್ತಿದೆ. ಕನ್ನಡಕ್ಕೆ ಅನ್ನ ನೀಡುವ ಶಕ್ತಿ ಇಲ್ಲವೆಂಬ ನಂಬಿಕೆ ಜಾಸ್ತಿಯಾಗುತ್ತಿದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಮ್ಮೇಳನಗಳಲ್ಲಿ ಚಿಂತನೆ ನಡೆಯಬೇಕು ಎಂದು ಆಶಿಸಿದರು.

ಕನ್ನಡವು ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದು. ಈಗ ಅದಕ್ಕೆ ಆಧುನಿಕತೆಯ ಆವಿಷ್ಕಾರವನ್ನು ನೀಡಬೇಕಾಗಿದೆ. ಮಾಹಿತಿ ತಂತ್ರಜ್ಞಾನಕ್ಕೆ ಕನ್ನಡ ಅಪರಿಚಿತವಾಗಬಾರದು. ಅದು ಸಾರ್ವಕಾಲಿಕ ಚೈತನ್ಯ ಶಕ್ತಿಯಾಗಿ ಉಳಿದರೆ ಕರ್ನಾಟಕ ಉಳಿಯುತ್ತದೆ. ಕರ್ನಾಟಕ ಉಳಿದರೆ ಕನ್ನಡಿಗರು ಉಳಿಯುತ್ತಾರೆ ಎಂದರು.

ಸಾಹಿತ್ಯ ಸಮ್ಮೇಳನಗಳಲ್ಲಿ ಸ್ವೀಕರಿಸುವ ಗೊತ್ತುವಳಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಅವುಗಳು ಜಾರಿಗೆ ಬರುವಂತೆ ಯೋಜನೆ ರೂಪಿಸಬೇಕು ಎಂದ ಅವರು, ಸಾಹಿತಿಗಳಿಂದ, ಸಾಹಿತ್ಯ ಕ್ಷೇತ್ರದಿಂದ ಜನರು ಬಹಳಷ್ಟನ್ನು ನಿರೀಕ್ಷಿಸುತ್ತಾರೆ. ಶಬ್ದಗಳೊಂದಿಗೆ, ಭಾವನೆಗಳೊಂದಿಗೆ ವ್ಯವಹರಿಸುವ ಕವಿ ತಾನು ಒಳ್ಳೆಯತನದ ಆರಾಧಕ ಎನ್ನುವಂತೆ ತನ್ನ ಜೀವನವನ್ನು ನಡೆಸಬೇಕು ಎಂದರು.

ಇತ್ತೀಚೆಗೆ ಸಾಹಿತಿಗಳು ಮತ್ತು ರಾಜಕಾರಣದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಕೆಲವು ಸಾಹಿತಿಗಳು ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ಒಬ್ಬ ಸೃಜನಶೀಲ ಸಾಹಿತಿ ಯಾವ ಪ್ರಮಾಣದಲ್ಲಿ ರಾಜಕೀಯ ಪ್ರವೇಶ ಮಾಡಬೇಕು ಎಂಬುದು ಪ್ರಸ್ತುತ ಪ್ರಶ್ನೆ. ಪಕ್ಷ ರಾಜಕೀಯಕ್ಕಿಂತ ತತ್ವ ರಾಜಕೀಯ ಪ್ರಜ್ಞೆಯ ತಳಹದಿಯ ಮೇಲೆ ಆತ ರಾಜಕೀಯ ಸಂಬಂಧ ಹೊಂದಬಹುದು ಎಂದು ಅಭಿಪ್ರಾಯಪಟ್ಟರು.

ಜಗತ್ತು ಭರದಿಂದ ಬದಲಾಗುತ್ತಿದೆ. 21ನೇ ಶತಮಾನ ಅನೇಕ ಆತಂಕ, ತಲ್ಲಣಗಳನ್ನು ತನ್ನ ಉಡಿಯಲ್ಲಿ ಕಟ್ಟಿಕೊಂಡು ಬಂದು ನಿಂತಿದೆ. ಜಾಗತೀಕರಣದ ಭೂತ, ಭಯೋತ್ಪಾದನೆ, ಆರ್ಥಿಕ ಹಿಂಜರಿತ ಜಗತ್ತನ್ನು ಕಾಡಿಸುತ್ತಿವೆ. ಪ್ರಜಾಪ್ರಭುತ್ವದ ಮೂಲತತ್ವವನ್ನು ಹೊಸಕಿ ಹಾಕಿ, ಕಟ್ಟಕಡೆಯ ಮನುಷ್ಯನನ್ನು ಇನ್ನೂ ಅಲ್ಲಿಯೇ ಇಡಲು ಏನನ್ನು ಮಾಡಬೇಕೆಂಬುದನ್ನು ರಾಜಕಾರಣಿಗಳು, ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಬಂಡವಾಳದಾರರು ಹಗಲೂ ರಾತ್ರಿ ಯೋಚಿಸುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಈ ಸಂದಿಗ್ಧ ಕಾಲದಲ್ಲಿ ಸಾಹಿತಿಗಳು, ಕಲಾವಿದರು, ಲೇಖಕರು ಮತ್ತು ಪತ್ರಕರ್ತರ ಮೇಲೆ ಬಹಳಷ್ಟು ಜವಾಬ್ದಾರಿ ಇದೆ. ಇವರೆಲ್ಲರೂ ತಮ್ಮ ಜವಾಬ್ದಾರಿ ಅರಿತು ಉತ್ತಮ ನಾಗರಿಕ ಸಮಾಜ ನಿರ್ಮಾಣ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.