ಗುರುವಾರ , ಮೇ 13, 2021
34 °C

ಕನ್ನೂರ: ದೇವರ ಆಡಿಸುವ ಆಟದ ಮೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಅಲ್ಲಿ ಭಕ್ತಿ ಪರಾಕಾಷ್ಠೆ ತಲುಪಿತ್ತು. ಎಲ್ಲ ದೇವರುಗಳಿಗೆ ಹೂವು-ಹಣ್ಣು-ಕಾಯಿ ಸಮರ್ಪಿಸಿ ವರ ಬೇಡುವುದು ವಾಡಿಕೆಯಾಗಿದ್ದರೆ ಈ ಗ್ರಾಮದ ಯುವ ಸಮೂಹ `ದೇವರ ದಾಳಿ' ಎದುರಿಸಲು ಕೋಲುಗಳೊಂದಿಗೆ ಸನ್ನದ್ಧರಾಗಿದ್ದರು!ತಾಲ್ಲೂಕಿನ ಕನ್ನೂರ ಗ್ರಾಮದಲ್ಲಿ ಸೋಮವಾರ ನಡೆದ ರೇವಣಸಿದ್ಧೇಶ್ವರ ಜಾತ್ರೆಯಲ್ಲಿ ನಡೆದ `ದೇವರ ಆಟ'ದ ಮೋಡಿ ಇದು.

ಹುಣಸೆ ಮರದ ಕೋಲುಗಳನ್ನು ಅವರೆಲ್ಲ ಹಿಡಿದುಕೊಂಡಿದ್ದರು. ರೇವಣಸಿದ್ಧೇಶ್ವರ ದೇವರ ಮುಖವಾಡ ಧರಿಸಿದ ವ್ಯಕ್ತಿ ಕೋಲುಗಳಿಂದ ದಾಳಿ ಮಾಡುವುದು ಹಾಗೂ ಆ ದಾಳಿಯನ್ನು ಎದುರಿಸುವುದು ಈ ಆಟದ ವಿಶೇಷತೆ. ದಾಳಿ ಎದುರಿಸುವ ಯುವಕರು ಎರಡು ಗುಂಪುಗಳಾಗಿ ವಿಂಗಡಣೆಯಾಗಿದ್ದರೆ, ದೇವರ ಮುಖವಾಡ ಧರಿಸುವ ವ್ಯಕ್ತಿಗಳು ಮೇಲಿಂದ ಮೇಲೆ ಬದಲಾಗುತ್ತಿದ್ದರು.ಹಿನ್ನೆಲೆ: ಈ ಆಚರಣೆಯ ಹಿನ್ನೆಲೆಯೂ ವಿಚಿತ್ರವಾಗಿದೆ. `ಗ್ರಾಮದ ಗೌಡನಿಗೆ ಇಬ್ಬರು ಪತ್ನಿಯರಿದ್ದರು. ಒಬ್ಬ ಪತ್ನಿಗೆ ಏಳು ಜನ ಮಕ್ಕಳು. ಇನ್ನೊಬ್ಬ ಪತ್ನಿ ಪದ್ಮಾವತಿಗೆ ರೇವಣಸಿದ್ಧ ಒಬ್ಬನೇ ಮಗ. ಪದ್ಮಾವತಿ ಮನೆಯಲ್ಲಿ ಧಾನ್ಯ ಬೀಸುತ್ತಿದ್ದ ಸಮಯದಲ್ಲಿ `ನನ್ನ ಸವತಿಗೆ ಏಳು ಮಕ್ಕಳು, ನನಗೊಬ್ಬನೇ ಮಗ. ಏಳು ಮಕ್ಕಳಿಗೆ ನನ್ನ ಒಬ್ಬನೇ ಮಗ ಸಮ...' ಎಂದು ಹಾಡುತ್ತಿದ್ದಳು. ಇದನ್ನು ಕೇಳಿಸಿಕೊಳ್ಳುತ್ತಿದ್ದ ಪದ್ಮಾವತಿಯ ಸವತಿ, ಕೋಪ ಕೊಂಡು ರೇವಣಸಿದ್ಧನನ್ನು ಕೊಲ್ಲಿಸಲು ಸಂಚು ರೂಪಿಸಿದ್ದಳು' ಎಂಬುದು ಪ್ರತೀತಿ.`ರೇವಣಿಸಿದ್ಧ ಕುರಿ ಕಾಯಲು ಹೋಗುತ್ತಿದ್ದ. ಚಪ್ಪಲಿ ಸಿದ್ಧಪಡಿಸಲು ಆತನ ಕಾಲಿನ ಅಳತೆ ತೆಗೆದುಕೊಳ್ಳುವ ನೆಪದಲ್ಲಿ ವ್ಯಕ್ತಿಯೊಬ್ಬ ರೇವಣಸಿದ್ಧನ ಕಾಲಿನ ಹಿಂಬದಿಯ ನರ ಕತ್ತರಿಸಿದ. ಸಾಯುವ ಮುನ್ನವೇ ಆತನನ್ನು ಹೂಳಲಾಗಿತ್ತು. ನಂತರ ತಾಯಿಯ ಕನಸಿನಲ್ಲಿ ಬಂದ ರೇವಣಸಿದ್ಧ, ನಡೆದಿದ್ದನ್ನು ವಿವರಿಸಿದ್ದ. ಮಗನನ್ನು ಹುಡುಕಲು ಹೊರಟಿದ್ದ ಪದ್ಮಾವತಿಗೆ ಗ್ರಾಮಸ್ಥರು ಸಹಾಯ ಮಾಡಿದ್ದರು. ಅಂದು ಸಹಾಯ ಮಾಡಿದ್ದ ಪ್ರತಿಯೊಂದು ಸಮಾಜದ ವ್ಯಕ್ತಿಗಳಿಗೂ ಈ ಜಾತ್ರೆಯಲ್ಲಿ ಒಂದೊಂದು ಜವಾಬ್ದಾರಿ ನೀಡಲಾಗಿದೆ. ತನ್ನನ್ನು ಕೊಲೆ ಮಾಡಿದವರ ಮೇಲೆ ರೇವಣಸಿದ್ಧ ಪ್ರತಿಕಾರ ತೀರಿಸಿಕೊಳ್ಳುವುದೇ ಈ ಆಚರಣೆ ಹಿನ್ನೆಲೆ' ಎಂದು ಗ್ರಾಮದ ಸಿದ್ದಪ್ಪ ಬೆಳ್ಳುಂಡಗಿ, ಧರೆಪ್ಪ ಶಹಾಪೂರ ಹೇಳಿದರು.ಉಸಿರು ಬಿಡಬಾರದು: ಈ ದೇವರ ಮುಖವಾಡಕ್ಕೆ ಬಣ್ಣ ಬಳಿಯುವವರು ಹಾಗೂ ಜಾತ್ರೆಯ ಸಂದರ್ಭದಲ್ಲಿ ಆ ಮುಖವಾಡ ಧರಿಸುವ ವ್ಯಕ್ತಿಗಳು ಉಸಿರು ಬಿಗಿ ಹಿಡಿಯಬೇಕು ಎಂಬುದು ನಿಯಮ.`ವಿಜಾಪುರ ತಾಲ್ಲೂಕಿನ ತೊನಶಾಳ ಗ್ರಾಮದಲ್ಲಿ ಈ ಮುಖವಾಡಕ್ಕೆ ಬಣ್ಣ ಹಚ್ಚಿಸಲಾಗಿದೆ. ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿ, ಉಸಿರು ಬಿಗಿ ಹಿಡಿದು ಬಣ್ಣ ಹಚ್ಚಬೇಕು. ಉಸಿರು ಬಿಟ್ಟಾಗ ಬಣ್ಣ ಹಚ್ಚುವುದೂ ಬಿಡಬೇಕು. ಮತ್ತೆ ಮರುದಿನವೇ ಬಣ್ಣ ಹಚ್ಚಬೇಕು'.`ಜಾತ್ರೆಯಲ್ಲಿ ಮುಖವಾಡ ಧರಿಸುವ ವ್ಯಕ್ತಿ ಉಸಿರು ಬಿಗಿ ಹಿಡಿದು ಈ ಆಟ ಆಡಬೇಕು. ಒಮ್ಮೆ ಆತ ಉಸಿರು ಬಿಟ್ಟರೆ ಮುಖವಾಡ ಕಳಚಬೇಕು ಎಂಬುದು ಸಂಪ್ರದಾಯ. ಗಾಣಿಗ ಮತ್ತು ಮಾಲಗಾರ (ಮಾಳಿ) ಸಮಾಜದ ವಿವಾಹಿತ ಪುರುಷರು ದೇವರ ಮುಖವಾಡ ಧರಿಸುತ್ತಾರೆ' ಎಂದು ಗ್ರಾಮದ ಗಿರೆಪ್ಪ ಚಲವಾದಿ, ಕಾಸಪ್ಪ ಬಬಲಾದಿ, ಮಹಾದೇವ ಮಾದರ ತಿಳಿಸಿದರು.ಈ ಜಾತ್ರೆಯ ಖರ್ಚುವೆಚ್ಚ ಭರಿಸಲು ಭಕ್ತರು ಹರಕೆ ಹೊತ್ತಿರುತ್ತಾರೆ. ಗೋವಾದಲ್ಲಿ ನೆಲಿಸಿರುವ ಗ್ರಾಮದ ರೇವಣಸಿದ್ಧ ಬಬಲಾದಿ ಎಂಬ ಭಕ್ತ ಈ ಬಾರಿಯ ಜಾತ್ರೆಯ ವೆಚ್ಚ ಭರಿಸಿದರು ಎಂದರು ಸಾಹೇಬಗೌಡ ಪಾಟೀಲ, ಈಶ್ವರ ಮಾದರ ಮತ್ತಿತರರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.