ಭಾನುವಾರ, ನವೆಂಬರ್ 17, 2019
29 °C

ಕಪ್ಪು ಹಣದಿಂದ ಆರ್ಥಿಕ ವೃದ್ಧಿ

Published:
Updated:

ಪಣಜಿ (ಪಿಟಿಐ): ವಿದೇಶಗಳಲ್ಲಿ ತೆರಿಗೆ ವಂಚಿಸಿ ಇಟ್ಟಿರುವ ಅಪಾರ ಪ್ರಮಾಣದ ಕಪ್ಪು ಹಣವನ್ನು ದೇಶಕ್ಕೆ ವಾಪಸ್ ತಂದರೆ ಆ ಮೂಲಕ ಆರ್ಥಿಕ ವೃದ್ಧಿ ದರವನ್ನು (ಜಿಡಿಪಿ) ಹಿಂದಿನ ಗರಿಷ್ಠ ಮಟ್ಟಕ್ಕೆ ತರಬಹುದು ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ(ಫಿಕ್ಕಿ) ಭಾನುವಾರ ಅಭಿಪ್ರಾಯಪಟ್ಟಿದೆ.ದೇಶದ ಆರ್ಥಿಕ ಪ್ರಗತಿಗೆ 12 ಅಂಶಗಳ ಸೂತ್ರ ಸಿದ್ಧಪಡಿಸಿ ಹಣಕಾಸು ಸಚಿವಾಲಯಕ್ಕೆ ಸಲ್ಲಿಸಿದ್ದೇವೆ. ಇದರಲ್ಲಿ ಕಪ್ಪು ಹಣವನ್ನು ವಾಪಸ್ ತರುವ ಅಂಶವೂ ಸೇರಿದೆ ಎಂದು ಭಾನುವಾರ ಇಲ್ಲಿ ಗೋವಾ ವಾಣಿಜ್ಯೋದ್ಯಮ ಮಹಾಸಂಘದ(ಜಿಸಿಸಿಐ) ಸಭೆಯಲ್ಲಿ `ಫಿಕ್ಕಿ~ ಅಧ್ಯಕ್ಷ ಆರ್.ವಿ.ಕನೋರಿಯಾ ಅಭಿಪ್ರಾಯಪಟ್ಟರು.ಕಪ್ಪು ಹಣ ಹೊಂದಿರುವ ವ್ಯಕ್ತಿಗಳ ಹೆಸರು ಬಹಿರಂಗಪಡಿಸದೆ ಹಣವನ್ನು ವಾಪಸ್ ತರುವ ಮೂಲಕ ದೇಶದ ಆರ್ಥಿಕತೆಗೆ ಶಕ್ತಿ ತುಂಬಬಹುದು. ಇತ್ತೀಚೆಗೆ ಜರ್ಮನಿ ಕೂಡ ಕಪ್ಪು ಹಣ ವಾಪಸ್ ಪಡೆಯಲು ಸ್ವಿಟ್ಜರ್ಲೆಂಡ್ ಜತೆಗೆ ಈ ರೀತಿಯ ಒಪ್ಪಂದ ಮಾಡಿಕೊಂಡಿದೆ ಎಂದರು.ಕೇಂದ್ರದ ಆರ್ಥಿಕ ನೀತಿಗಳಲ್ಲಿನ ವೈಫಲ್ಯ, ಜಾಗತಿಕ ಆರ್ಥಿಕ ಅಸ್ಥಿರತೆ, ಹಣದುಬ್ಬರ ಇತ್ಯಾದಿ ಸಂಗತಿಗಳು ವೃದ್ಧಿ ದರ ಕುಸಿಯುವಂತೆ ಮಾಡಿವೆ. ಆದರೂ, ಸರಕು ಮತ್ತು ಸೇವೆ ತೆರಿಗೆ ಜಾರಿಯಿಂದ ಆರ್ಥಿಕ ಸುಧಾರಣೆ ನಿರೀಕ್ಷಿಸಬಹುದು ಜತೆಗೆ ಸರ್ಕಾರ ಮೂಲಸೌಕರ್ಯ ಮತ್ತು ವಿದೇಶಿ ಹೂಡಿಕೆಯತ್ತ ಗಮನ ಹರಿಸಬೇಕು ಎಂದರು.

ಪ್ರತಿಕ್ರಿಯಿಸಿ (+)