ಬುಧವಾರ, ಮೇ 25, 2022
31 °C

ಕಪ್ಪು ಹಣದ ಮಾಹಿತಿ ವಿನಿಮಯ: ಸ್ವಿಸ್ ಬ್ಯಾಂಕ್ ನಿಯಮ ಸಡಿಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):ವಿದೇಶಗಳಲ್ಲಿ ತೆರಿಗೆ ವಂಚಿಸಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿರುವವರ ಮಾಹಿತಿ ಹಂಚಿಕೊಳ್ಳುವ ವಿಚಾರದಲ್ಲಿ ಸ್ವಿಟ್ಜರ್ಲೆಂಡ್ ಸರ್ಕಾರ ನಿಯಮಗಳನ್ನು ಸಡಿಲಿಸಿದೆ. ಇದರಿಂದ ಕಪ್ಪು ಹಣದ ಬಗ್ಗೆ ತನಿಖೆಗೆ ಹೊರಟಿರುವ ಭಾರತಕ್ಕೆ ನೆರವಾಗುವ ಸಾಧ್ಯತೆ ಕಂಡುಬಂದಿದೆ.ಇಲ್ಲಿಯ ತನಕ ಕಪ್ಪು ಹಣ ಇಟ್ಟಿರುವವರ ಮಾಹಿತಿ ಪಡೆಯಬೇಕಿದ್ದರೆ ಖಾತೆದಾರನ ಹೆಸರು ಮತ್ತು ವಿಳಾಸವನ್ನು ನೀಡುವುದು ಕಡ್ಡಾಯವಾಗಿತ್ತು. ಇನ್ನು ಮುಂದೆ ‘ಇತರ ಗುರುತು’ಗಳನ್ನು ನೀಡಿದರೆ ಸಹ ಅದನ್ನು ಸ್ವೀಕರಿಸಿ ಮಾಹಿತಿ ವಿನಿಮಯಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಆದರೆ ಈ ‘ಇತರ ಗುರುತು’ಗಳು ಯಾವುದು ಎಂಬುದನ್ನು ಸ್ವಿಸ್ ಹಣಕಾಸು ಸಚಿವಾಲಯ ವಿವರಿಸಿಲ್ಲ. ಬ್ಯಾಂಕ್ ಖಾತೆ ಸಂಖ್ಯೆಯನ್ನು ನೀಡುವಂತಹ ಗುರುತು ಸಹ ಮಾನ್ಯವಾಗಲಿದೆ ಎಂದು ಹೇಳಲಾಗಿದೆ.

ಆದರೆ ಹೀಗೆ ಅಂದಾಜಿನಲ್ಲಿ ಬ್ಯಾಂಕ್ ಖಾತೆ ನೀಡಿ ‘ಮೀನು ಹಿಡಿಯುವ’ ಕ್ರಮಕ್ಕೆ ಅವಕಾಶ ನೀಡಲಾಗದು ಎಂದು ಸ್ಪಷ್ಟಪಡಿಸಿರುವ ಸ್ವಿಸ್ ಸರ್ಕಾರ, ಹಗರಣ ಬಯಲಿಗೆ ಬಂದೀತು ಎಂಬ ಕಾರಣಕ್ಕೆ ಸ್ವಿಸ್ ಬ್ಯಾಂಕ್ ಖಾತೆಗಳನ್ನು ಜಾಲಾಡುವುದಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.ಭಾರತದಲ್ಲಿ ತೆರಿಗೆ ವಂಚಿಸಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರಿ ಪ್ರಮಾಣದಲ್ಲಿ ಹಣ ಠೇವಣಿ ಇಟ್ಟಿರುವವರ ವಿವರ ಪಡೆಯುವ ಸಲುವಾಗಿ ಭಾರತ-ಸ್ವಿಟ್ಜರ್ಲೆಂಡ್  ನಡುವೆ ಒಪ್ಪಂದವೊಂದು ಏರ್ಪಡುವ ನಿಟ್ಟನಲ್ಲಿ ಸ್ವಿಸ್ ಸಂಸತ್ತು ಸದ್ಯ ಚರ್ಚೆ ನಡೆಸುತ್ತಿದೆ.ಸ್ವಿಟ್ಜರ್ಲೆಂಡ್‌ನಲ್ಲಿ ಸದ್ಯ ಇರುವ ವ್ಯವಸ್ಥೆಯಂತೆ ಮಾಹಿತಿ ವಿನಿಮಯ ಸೌಲಭ್ಯ ಒಪ್ಪಂದ ಮಾಡಿಕೊಂಡ ದೇಶವು ಮಾತ್ರ ಸ್ವಿಸ್ ಸರ್ಕಾರದಿಂದ ನೆರವು ಪಡೆಯಬಹುದು. ಆದರೆ ಖಾತೆದಾರರ ಹೆಸರು, ವಿಳಾಸ ಮತ್ತು ಸಂಬಂಧಪಟ್ಟ ಬ್ಯಾಂಕ್‌ಗಳ ಹೆಸರನ್ನು ನೀಡಬೇಕಾಗುತ್ತದೆ.ಸರ್ಕಾರ ಇದೀಗ ನಿಯಮಗಳನ್ನು ಸಡಿಲಿಸಿರುವುದರಿಂದ ಇಬ್ಬಗೆಯ ತೆರಿಗೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಆಡಳಿತಾತ್ಮಕ ಸಹಾಯ ಅವಕಾಶಗಳೂ ಉಭಯ ದೇಶಗಳ ನಡುವೆ ಪರಿಷ್ಕರಣೆಗೊಳ್ಳಬೇಕಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.