ಬುಧವಾರ, ಮೇ 25, 2022
23 °C

ಕಬಾಬ್ ರಾಜನೂ ನವಾಬ್ ತಾತನೂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಬಾಬ್ ರಾಜನೂ ನವಾಬ್ ತಾತನೂ

ಅರೆಮೋಡ, ಅರೆಬಿಸಿಲನ್ನು ಆಸ್ವಾದಿಸುತ್ತಾ ರಿಚ್ಮಂಡ್ ವೃತ್ತದ ಬಳಿಯ ಐಟಿಸಿ ಗಾರ್ಡೆನಿಯಾದ ಕಬಾಬ್ ಅಂಡ್ ಕರೀಸ್ ರೆಸ್ಟೋರೆಂಟ್ ಒಳಹೊಗುವಷ್ಟರಲ್ಲಿ ಒಂದಷ್ಟು ಮಂದಿ ಹೊಸ ಮೆನುವಿನ ನಿರೀಕ್ಷೆಯಲ್ಲಿ ಬಾಯಿ ಚಪ್ಪರಿಸಿಕೊಂಡು ಕುಳಿತಿದ್ದರು.ವಾತಾನುಕೂಲಿ ವ್ಯವಸ್ಥೆಯ ಚಳಿಗೆ ಮೈ ಜುಮ್ಮೆನ್ನುತ್ತಿದ್ದರೂ `ಚಿಲ್ಡ್ ವಾಟರ್ ಮೇಡಂ~ ಎಂದು ಗಾಜಿನ ಲೋಟ ತುಂಬಿಸಿದ ಶಿಸ್ತಿನ ಸರ್ವರ್.ಅರೆಕ್ಷಣದಲ್ಲಿ ಮತ್ತೆ ಬಂದವನು ತಿಳಿಗುಲಾಬಿ ಬಣ್ಣದ ಪೇಯ ತಂದು, `ಹಾಕಲೇ?~ ಎಂದ. ಮತ್ತೊಂದು ಗಾಜಿನ ಲೋಟದ ತುಂಬ ಗುಲಾಬಿ ರಂಗು. ಅದು ದಾಳಿಂಬೆಯ ಪಂಚತಾರಾ ಪೇಯ.ಪಕ್ಕದ ಪ್ಲೇಟ್‌ನಲ್ಲಿ ಮೂಲಂಗಿ, ಈರುಳ್ಳಿ ಮುಂತಾದುವುಗಳ ತೆಳು ವೃತ್ತಗಳ ಗುಡ್ಡೆಯನ್ನೂ ತಂದಿಟ್ಟ. ಹೀಗೆ, ಈ ಸ್ಟಾರ್ಟರ್‌ನೊಂದಿಗೆ ಕಬಾಬ್ ಅಂಡ್ ಕರೀಸ್‌ನ ಆ ಭೋಜನದ ಮೇಜು `ಕಬಾಬ್ ಫೆಸ್ಟ್~ನ ಸವಿ, ಸ್ವಾದ ನೋಡುವ ಮೋಜಿಗೆ ತೆರೆದುಕೊಂಡಿತು.

ಅಷ್ಟರಲ್ಲಿ ಕಪ್ಪು-ಬಿಳಿ ಬುಟ್ಟಾದ ನಿಲುವಂಗಿ ತೊಟ್ಟ ತಾತ ನಿಧಾನಕ್ಕೆ ಆಗಮಿಸಿದರು.

 

`ನಮಷ್ಕಾರ್ ಸಬ್‌ಕೋ~ ಎಂದು ಎಲ್ಲರಿಗೂ ಮುಖಾಮುಖಿಯಾಗಿ ಆಸೀನರಾದರು. ಕತ್ತಿನಲ್ಲಿ ಇಷ್ಟಗಲದ ಸರಪಳಿ. ಕೈಯಲ್ಲೂ ಅದೇ ವಿನ್ಯಾಸದ ಬ್ರೇಸ್‌ಲೆಟ್. ಗಡ್ಡ-ಮೀಸೆ ಹುರಿಮಾಡಿದ ರೀತಿ ಮಾತ್ರ ಬಾಲಿವುಡ್ ವಿಲನ್‌ಗಳಿಗೂ ಮಾದರಿಯಾಗುವಂತಿತ್ತು. ಅವರು ಗ್ರಾಂಡ್‌ಮಾಸ್ಟರ್ ಬಾಣಸಿಗ ಮೊಹಮ್ಮದ್ ಇಮ್ತಿಯಾಜ್ ಖುರೇಷಿ. 70 ದಾಟಿದರೂ ಪಂಚತಾರಾ ಹೋಟೆಲ್‌ಗಳ ಅಡುಗೆ ಮನೆ ಹೊಕ್ಕರೆ ಜವ್ವನಿಗ.ಕಬಾಬ್‌ಗಳ ರಾಜ!

`ನೋಡಿ ಇದು ಕಿಂಗ್ ಆಫ್ ಕಬಾಬ್ಸ್... ಮುರ್ಗ್ ಕಬಾಬ್/ಮುರ್ಗ್ ತಂದೂರಿ... ಅರೆ ಮಾತಾಡ್ತಾ ಕೂರೋದಲ್ಲ, ಶುರು ಮಾಡಿ. ಅದು ಆರಿಹೋದರೆ ರುಚಿಯೇ ಇರುವುದಿಲ್ಲ. ಯಾವಾಗ್ಲೂ ಬಿಸಿ ಬಿಸಿಯಾಗಿಯೇ ಊಟ ಮಾಡ್ಬೇಕು~ ಅಂತನ್ನುತ್ತಲೇ ತಾವೂ ಎಳೆ ಎಳೆಯಾಗಿ ಕಬಾಬ್ ಬಿಡಿಸುತ್ತಾ ಬಾಯಿಗಿಟ್ಟುಕೊಂಡು ಚಪ್ಪರಿಸಿಕೊಂಡೇ ಮಾತು ಮುಂದುವರಿಸಿದರು.`ಈ ರುಚಿ ಇನ್ನೆಲ್ಲೂ ಸಿಗಲು ಚಾನ್ಸೇ ಇಲ್ಲ ಗೊತ್ತಾ?~ ಅಂದರು. ಕಬಾಬ್ ಮೆಲ್ಲುತ್ತಿದ್ದವರು ನಸುನಗೆಯಲ್ಲೇ `ಹಾಂ.. ಜೀ~ ಅಂದರು. ಯೋಗರ್ಟ್, ವಿನೆಗರ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಲಿಂಬೂ ರಸ, ಹಳದಿ-ಕೆಂಪು ಮೆಣಸು, ಅರಸಿನ ಪುಡಿ, ಗರಂ ಮಸಾಲಾ ಬೆರೆಸಿ, ಮೆತ್ತಿ, ಅದರಲ್ಲದ್ದಿ ತಂದೂರಿಯಲ್ಲಿ ಬೇಯಿಸಿದ್ದು ಇದು.`ಸರ್ವ್ ಮಾಡೋಕೆ ಮೊದಲು ಕಬಾಬ್ ಪುಡಿ ಉದುರಿಸಿ ಕೊಡಬೇಕು ಅಷ್ಟೇ~ ಅಂದರು. ಬಾಣಸಿಗ ತಾತ ಪಾಕಿಸ್ತಾನಿ ಶೈಲಿಯ ಹಿಂದಿಯಲ್ಲಿ ವಿವರಿಸುತ್ತಿದ್ದರೆ, ಆ ಮೌನದ ವಾತಾವರಣದಲ್ಲಿ ಅವರ ಗಡಸು ಕಂಠದ್ದೇ ಮಾರ್ದನಿ. ಮೂಳೆರಹಿತ ಕೋಳಿಮಾಂಸದ ಖಾದ್ಯ-ಮುರ್ಗ್ ಖುಸ್ಕ್ ಪರ್ದಾ, ಕಾಕೋರಿ ಕಬಾಬ್‌ಗಳನ್ನು ಸ್ಟಾರ್ಟರ್ ಎಂದು ಸವಿದವರು ಮೇನ್ ಕೋರ್ಸ್‌ಗೆ ಕಾದರು.ಇಷ್ಟು ದೊಡ್ಡ ಜಂಬೊ ಸಿಗಡಿಯನ್ನು ದಾಳಿಂಬೆ, ಕಾಳುಮೆಣಸು, ದಾಲ್ಚಿನ್ನಿ ಬೆರೆಸಿಟ್ಟು, ಫಾಯಿಲ್ ಪೇಪರ್‌ನಲ್ಲಿ ಸುತ್ತಿ ಹಬೆಯಲ್ಲಿ ಬೇಯಿಸಿದ ಜಿಂಗಾ ದಮ್ ಅನಾರಿ, ಸುವಾಸನೆಯುಕ್ತ ಸಂಬಾರ ಪದಾರ್ಥಗಳೊಂದಿಗೆ ಬೇಯಿಸಿದ ಕೋಳಿ ಮಾಂಸ ಮತ್ತು ಗ್ರೇವಿಯ ಘಮಲು ಅಷ್ಟೊಂದು ರುಚಿಯೆನಿಸದಿದ್ದರೂ ಖುರೇಷಿ ತಾತನ ವಿವರಣೆಯೊಂದಿಗೆ ಬೆರೆತು ಹೊಟ್ಟೆ ಸೇರಿತು. ಅದರಂತೆ ಮುರ್ಗ್ ಹ್ಯಾಂಡಿ ಕುರ್ಮಾ, ಮಹಿ ಖಲಿಯ, ಕೊಹ್-ಇ- ಅವಧ್‌ನಂತಹ ನವಾಬಿ ಖಾದ್ಯಗಳು ದಕ್ಷಿಣ ಭಾರತದ ಭೋಜನಪ್ರಿಯರಿಗೆ ಹೊಸಸ್ವಾದವನ್ನು ಪರಿಚಯಿಸಿಕೊಳ್ಳಲು ಒಂದು ಅವಕಾಶವಾದೀತು.ಅಷ್ಟರಲ್ಲಿ ಹೊಸ ತಟ್ಟೆ ತಂದಿಟ್ಟರು. ಸಣ್ಣ ಸಣ್ಣ ಕಡಾಯಿಗಳ ಮುಚ್ಚಳಕ್ಕೆ ಮೆತ್ತಿದ್ದ ಮೈದಾ ಪೇಸ್ಟ್‌ನ ಲಾಕನ್ನು ಚಮಚಾದಿಂದ ತೆಗೆಯುವಲ್ಲಿ ವೃತ್ತಿನೈಪುಣ್ಯ ತೋರಲಾಗದ ಸರ್ವರನ್ನು ಖುರೇಷಿ ತಾತ ಗದರಿದರು. ಮುಖವನ್ನು ಇನ್ನಷ್ಟು ಕೆಂಪಗೆ ಮಾಡಿಕೊಂಡ ತರುಣ ತೆಳುನಗೆಯೊಂದಿಗೆ ಪೇಸ್ಟ್ ತೆಗೆದಿರಿಸಿ ದಮ್ ಬಿರಿಯಾನಿ ಬಡಿಸಿದ. ಕಡಾಯಿಯ ಕೆಳಭಾಗದಿಂದ ಎಳೆಕುರಿಯ ಕೆಂಪನೆಯ ಮಾಂಸದ ತುಂಡುಗಳನ್ನು ಚಮಚಾ ಮತ್ತು ಫೋರ್ಕ್ ಮಧ್ಯೆ ಹಿಡಿದು ತಟ್ಟೆಗೆ ಇಳಿಸಿದ.ನಂತರ ಬಾಸ್ಮತಿ ಅಕ್ಕಿಯ ಅನ್ನ. ಮೊಟ್ಟೆಯ ಬಿಳಿ, ಹಸಿಮೆಣಸು, ಕಡಲೆಬೀಜ ಮತ್ತು ತೆಂಗಿನಕಾಯಿ ತುರಿಯಿಂದ ಮಾಡಿದ ಗ್ರೇವಿಗೆ ಹುಣಸೆ ಹುಳಿ ಬೆರೆಸಿ ಕರಿಬೇವುಸೊಪ್ಪು ಮತ್ತು ಸಾಸಿವೆಯ ಒಗ್ಗರಣೆ ಹಾಕಿದ ಚಟ್ನಿಯಂತಹ ಕಾಂಬಿನೇಷನ್ ದಮ್ ಬಿರಿಯಾನಿಯನ್ನು ಇನ್ನಷ್ಟು ರುಚಿಕರವಾಗಿಸಿತ್ತು.ಅತ್ತ ಸಸ್ಯಾಹಾರಿಗಳು ಸ್ಟಾರ್ಟರ್‌ನಲ್ಲಿ ಚಪಾತಿ ತಂದೂರಿ ಆಲೂ, ಹರ ಕಬಾಬ್ ಅವಧ್ ಸವಿದು ಮುಖದ ತುಂಬಾ ನಗೆ ಹರಡಿ ಕೂತಿದ್ದರೆ, ಮೇನ್ ಕೋರ್ಸ್‌ನಲ್ಲಿ ಗುಚ್ಚಿ ದರಾ, ಸಬ್ಸಾಜರ್ ಕೋಫ್ತಿ, ಮೆಹೆರ್ ಪನೀರ್, ದಾಲ್ ಬುಖಾರ, ರಾಯತಾದೊಂದಿಗೆ ತರಕಾರಿ ಪುಲಾವ್‌ನ ಸವಿಗೆ ಮಾರುಹೋಗಿ ಗಪ್‌ಚುಪ್ ಅಂತ ಕುಳಿತಿದ್ದರು.ಇಷ್ಟನ್ನು ಅರೆಬರೆ ತಿಂದು ತೇಗಿ ಸಾಕಪ್ಪಾ ಸಾಕು ಎಂದು ಕೈತೊಳೆಯುತ್ತಿದ್ದಂತೆ, ಮೆನುವಿನಲ್ಲಿ ಸಿಹಿ ಕಣ್ಣಿಗೆ ಬಿತ್ತು `ಯಾಕುಟಿ~ ಸ್ಪೆಷಲ್ ಸಿಹಿ. ಬಾಸ್ಮತಿ ನುಚ್ಚು ಮತ್ತು ಮೊಳಕೆ ಹೆಸರುಕಾಳನ್ನು ಖೋಯದೊಂದಿಗೆ ಹದ ಉರಿಯಲ್ಲಿ ಬೇಯಿಸಿ ಕೇಸರಿ, ಪಿಸ್ತಾ ಬೆರೆಸಿದರೆ ಯಾಕುಟಿ ಸಿದ್ಧ. ಬಾಯಿಗಿಟ್ಟರೆ ನೀರು ಉಕ್ಕುಕ್ಕಿ ಬರುವಷ್ಟು ಸ್ವಾದ. ಹೊಟ್ಟೆಭಾರ ಅಂತ ಮೇಲುಸಿರು ಬಿಡುತ್ತಿದ್ದವರೂ ಅರೆಕ್ಷಣದಲ್ಲಿ ಅದನ್ನು ಖಾಲಿ ಮಾಡಿದರು!

ಖುರೇಷಿ ತಾತ ತಮ್ಮ ತಂಡಕ್ಕೆ ಒಂದು `ಶುಕ್ರಿಯಾ~ ಹೇಳಿದರು. ಕಿರಿಯ ಬಾಣಸಿಗರ ಮುಖ ಮೊರದಗಲವಾಯಿತು.ಅರೆ! ನಿಮ್ಮ ಬಾಯಲ್ಲೂ ನೀರೂರಿತೇ? ಹಾಗಿದ್ದರೆ, ಜೂನ್ 24ರ ಒಳಗೆ ಐಟಿಸಿ ಗಾರ್ಡೆನಿಯಾದ ಕಬಾಬ್ ಫೆಸ್ಟ್‌ಗೆ ಹೋಗಿಬನ್ನಿ.              

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.