ಬುಧವಾರ, ಮಾರ್ಚ್ 3, 2021
24 °C
ಕಬ್ಬು ಬೆಳೆಗಾರರ ಸಭೆ; ಗೊಬ್ಬರ ಮೇಲಿನ ವ್ಯಾಟ್‌ ಹಿಂಪಡೆಯಲು ಒತ್ತಾಯ

ಕಬ್ಬುಬೆಳೆ ರಜಾ ವರ್ಷಾಚರಣೆಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಬ್ಬುಬೆಳೆ ರಜಾ ವರ್ಷಾಚರಣೆಗೆ ನಿರ್ಧಾರ

ಜಮಖಂಡಿ:  ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ತಕ್ಕಪಾಠ ಕಲಿಸಬೇಕೆಂಬ ಉದ್ದೇಶದಿಂದ ರಾಜ್ಯ ಕಬ್ಬು ಬೆಳೆಗಾರರ ಸಂಘ ನೀಡಿದ್ದ ಕಬ್ಬುಬೆಳೆ ರಜಾ ವರ್ಷಾಚರಣೆಗೆ ಶೇ 40 ರಷ್ಟು ರೈತರು ಸ್ಪಂದಿಸಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರ್‌ ಶಾಂತಕುಮಾರ್‌ ಹೇಳಿದರು.



ಗುರುವಾರ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ ಅವರು ಮಾತನಾಡಿದರು. ಕಬ್ಬು ಬೆಳೆಗೆ ನ್ಯಾಯಯುತ ಬೆಲೆ ನೀಡುತ್ತಿಲ್ಲ. ಹಣ ಪಾವತಿಸುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಕಬ್ಬು ಬೆಳೆಗಾರರಿಗೆ ಕಿರುಕುಳ ನೀಡಲಾಗುತ್ತಿದೆ. ಇದಕ್ಕೆಲ್ಲ ಕಾರ್ಖಾನೆಗಳ ಮಾಲೀಕರಿಗೆ ಬಿಸಿ ಮುಟ್ಟಿಸುವ ಉದ್ದೇಶದಿಂದ ಕಬ್ಬು ರಜಾ ವರ್ಷ ಆಚರಿಸಲು ಮೈಸೂರಿನಲ್ಲಿ ನಡೆದ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.



2 ವರ್ಷಗಳ ಕಾಲ ಕಬ್ಬು ಬೆಳೆಯನ್ನು ಬೆಳೆಯದೆ ಅದಕ್ಕೆ ಪರ್ಯಾಯ ಬೆಳೆಗಳನ್ನು ಬೆಳೆಯಬೇಕು ಎಂದು ರೈತರಲ್ಲಿ ಮನವಿ ಮಾಡಲಾಗಿತ್ತು. ಇದನ್ನು ಅರಿತ ಕೆಲವು ಸಕ್ಕರೆ ಕಾರ್ಖಾನೆಗಳ ಮಾಲೀಕರು ಉಚಿತ ಕಬ್ಬು ಬೀಜ, ಗೊಬ್ಬರ, ಯೋಗ್ಯಬೆಲೆ ಹಾಗೂ ಸಾಲ ನೀಡುವ ಆಮಿಷ ಒಡ್ಡುತ್ತಿದ್ದಾರೆ.

ರೈತರು ಆಮಿಷಗಳಿಗೆ ಒಳಗಾಗಬಾರದು ಎಂದರು. 2015–16ನೇ ಸಾಲಿನಲ್ಲಿ ಕಾರ್ಖಾನೆಗಳಿಗೆ ಪೂರೈಸಲಾದ ಕಬ್ಬಿಗೆ ಎಸ್‌ಎಪಿ ಕಾಯ್ದೆ ಆಧಾರದ ಮೇಲೆ ರಾಜ್ಯ ಸರ್ಕಾರ ದರ ಘೋಷಣೆ ಮಾಡಿ ರೈತರಿಗೆ ಕೂಡಲೇ ಕಬ್ಬಿನ ಬಿಲ್ಲಿನ ಹಣ ಕೊಡಿಸಬೇಕು. ಸಕ್ಕರೆ ದರ ಈಗ ಹೆಚ್ಚಾಗಿದೆ. ಹಾಗಾಗಿ ಸಕ್ಕರೆ ಮತ್ತು ಇತರ ಉತ್ಪನ್ನಗಳ ಮಾರಾಟದಿಂದ ಕಾರ್ಖಾನೆಗಳಿಗೆ ಅಂದಾಜು ₹ 1 ಸಾವಿರ ಕೋಟಿ ಲಾಭವಾಗಿದೆ ಎಂದರು.



ಕಬ್ಬುಬೆಳೆ ಸಾಲದ ಹಣವನ್ನು ಮರುಪಾವತಿ ಮಾಡಲು ಒಂದು ವರ್ಷ ಕಾಲಾವಕಾಶ ನೀಡಲಾಗಿದೆ. ಆದರೆ, ಒಂದು ವರ್ಷದೊಳಗೆ ರೈತರಿಗೆ ಕಬ್ಬಿನ ಬಿಲ್ಲಿನ ಪಾವತಿಯಾಗುತ್ತಿಲ್ಲ.

ಹಾಗಾಗಿ ಸಾಲದ ಹಣವನ್ನು ಮರುಪಾವತಿ ಮಾಡಲಾಗುತ್ತಿಲ್ಲ. ಆದ್ದರಿಂದ ರಿಯಾಯಿತಿ ಬಡ್ಡಿದರದ ಲಾಭ ಸಿಗುತ್ತಿಲ್ಲ. ಕಾರಣ ಕಬ್ಬುಬೆಳೆ ರಿಯಾಯಿತಿ ಸಾಲ ಮರುಪಾವತಿ ಅವಧಿಯನ್ನು 18 ತಿಂಗಳಿಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

 

ಮಹಾದಾಯಿ ಯೋಜನೆಗಾಗಿ ಹೋರಾಟ ಮಾಡಿದ ನವಲಗುಂದ ತಾಲ್ಲೂಕಿನ ಯಮನೂರು ಗ್ರಾಮದ ಮುಗ್ದ ಮಹಿಳೆಯರು, ಅಮಾಯಕ ರೈತರ, ಗರ್ಭಿಣಿ ಮಹಿಳೆಯರ ಹಾಗೂ 80 ವರ್ಷ ವೃದ್ಧೆಯ ಮೇಲೆ ಪೊಲೀಸರು ಎಸಗಿದ ದೌರ್ಜನ್ಯ ಹಾಗೂ ರಾಕ್ಷಸಿ ವರ್ತನೆ ಖಂಡಿಸುವುದಾಗಿ ಹೇಳಿದರು.



ಯಮನೂರು ಘಟನೆ ಖಂಡಿಸಿ ಜನಪ್ರತಿನಿಧಿಗಳಿಗೆ ಸೆಗಣಿ ಎರಚಿ ಪ್ರತಿಭಟಿಸಬೇಕು. ರಾಜ್ಯ ಸರ್ಕಾರ ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕು.    ಉತ್ತರ ವಲಯ ಐಜಿಪಿ ರಾಮಚಂದ್ರರಾವ್‌ ಅವರನ್ನು ಸೇವೆಯಿಂದ ಅಮಾನತು ಮಾಡಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.



ರಸಗೊಬ್ಬರಕ್ಕೆ ಕೇಂದ್ರ ಸರ್ಕಾರ ಧನಸಹಾಯ ನೀಡುತ್ತಿದೆ. ಆದರೆ, ರಸಗೊಬ್ಬರ ಖರೀದಿಯ ಮೇಲೆ ರಾಜ್ಯ ಸರ್ಕಾರ ಶೇ 5.5 ರಷ್ಟು ವ್ಯಾಟ್‌ ತೆರಿಗೆ ವಿಧಿಸುತ್ತಿದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು ರಾಜ್ಯ ಸರ್ಕಾರ ರಸಗೊಬ್ಬರ ಮೇಲಿನ ವ್ಯಾಟ್‌ ತೆರಿಗೆಯನ್ನು ರದ್ದುಪಡಿಸಬೇಕು ಎಂದರು.



ಪ್ರಮುಖರಾದ ಎಸ್‌.ಎನ್‌. ಬನಪನವರ,  ಅತ್ತಹಳ್ಳಿ ದೇವರಾಜ್‌, ಕಲ್ಲಪ್ಪ ಬಿರಾದಾರ, ಸದಾಶಿವ ಕವಟಗಿ, ಶ್ರೀಶೈಲ ಭೂಮಾರ, ಬಸವರಾಜ ಪಾಟೀಲ, ಶಂಕರ ಬನಾಜಗೋಳ, ಗುಡೂಸಾಬ ಹೊನವಾಡ, ಮಾರುತಿ ಹೊರಡಿ, ಸಿದ್ದಪ್ಪ ಬನಜನವರ, ಹನಮಂತ ಮಾದರ, ಭೀಮಪ್ಪ ಮದಲಮಟ್ಟಿ,  ರಮೇಶ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.