ಸೋಮವಾರ, ಮೇ 10, 2021
25 °C

ಕಮ್ಮಾರಿಕೆ ವೃತ್ತಿ ನಿಧಾನವಾಗಿ ಕಣ್ಮರೆ

-ಟಿ.ನಂಜುಂಡಪ್ಪ Updated:

ಅಕ್ಷರ ಗಾತ್ರ : | |

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ ಮತ್ತು ಬೇಡಿಕೆಯಲ್ಲಿರುತ್ತಿದ್ದ ಕಮ್ಮಾರ (ಕುಲುಮಿ) ವೃತ್ತಿ ಇತ್ತೀಚಿನ ದಿನಗಳಲ್ಲಿ ನಿಧಾನವಾಗಿ ಕಣ್ಮರೆಯಾಗತೊಡಗಿದೆ. ಕಮ್ಮಾರ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದವರು ಈಗ ಆಧುನಿಕ ಜೀವನಶೈಲಿ ಮತ್ತು ತಂತ್ರಜ್ಞಾನದ ಪ್ರಭಾವದಿಂದ ಬೇರೆ ವೃತ್ತಿಗಳ ಮೊರೆ ಹೋಗುತ್ತಿದ್ದಾರೆ. ಕಮ್ಮಾರ ವೃತ್ತಿಯಲ್ಲಿರುವವರು ಕಾಣಿಸಿಕೊಂಡರೆ ಅಪರೂಪ ಎಂಬಂತಾಗಿದೆ.ಆದರೆ, ಕೆಲ ಗ್ರಾಮಗಳಲ್ಲಿ ಅದೆಷ್ಟೇ ತೊಂದರೆ ಅನುಭವಿಸಿದರೂ ಕೆಲವರು ಕಮ್ಮಾರ ವೃತ್ತಿಯಿಂದ ದೂರಗೊಂಡಿಲ್ಲ. ಅಂತಹ ಕೆಲವರಲ್ಲಿ ಗೌರಿಬಿದನೂರು ತಾಲ್ಲೂಕಿನ ಚಂದಣದೂರು ಗ್ರಾಮದ ಗೋವಿಂದಪ್ಪ ಕೂಡ ಒಬ್ಬರು. ಹಲವಾರು ವರ್ಷಗಳಿಂದ ಅವರು ಕಮ್ಮಾರ ವೃತ್ತಿಯಲ್ಲೇ ತೊಡಗಿಕೊಂಡು, ರೈತರಿಗೆ ತಮ್ಮದೇ ಆದ ರೀತಿಯಲ್ಲಿ ನೆರವಾಗುತ್ತಿದ್ದಾರೆ.ಕಿರಿಯ ವಯಸ್ಸಿನಿಂದ ಕಮ್ಮಾರಿಕೆಯಲ್ಲಿ ತೊಡಗಿಕೊಂಡಿರುವ ಗೋವಿಂದಪ್ಪ ವೃತ್ತಿಯಲ್ಲಿ ಪರಿಣತಿ ಗಳಿಸಿದ್ದಾರೆ. ಸಣ್ಣ ಯಂತ್ರದ ನೆರವಿನಿಂದ ಇದ್ದಿಲು ಬಳಸಿ ಬೆಂಕಿ ಕೆಂಡಗಳಲ್ಲಿ ಕಬ್ಬಿಣವನ್ನು ಚೆನ್ನಾಗಿ ಕಾಯಿಸಿ, ಹೊಸ ಹೊಸ ಸಲಕರಣೆಗಳನ್ನು ಯಾವ ಆಕಾರಕ್ಕೆ ಬೇಕು ಆಯಾ ಆಕಾರಕ್ಕೆ ತಯಾರಿಸಿ, ಹಳೆಯ ಸಲಕರಣೆಗಳನ್ನು ಚೂಪು ಕೂಡ ಮಾಡಿಕೊಡುತ್ತಾರೆ.`ಹೊಲಗದ್ದೆಗಳಲ್ಲಿ ನೇಗಿಲು ಮೂಲಕ ಉಳುಮೆ ಮಾಡಲು ರೈತರು ಗೋಡಲಿ, ಆರೆ, ಸನಿಕೆ, ಪಿಕಾಸಿ, ಕೊಡಲಿ ಮತ್ತಿತರ ಸಲಕರಣೆಗಳನ್ನು ತಯಾರಿಸಿಕೊಳ್ಳುತ್ತಿದ್ದರು. ಪ್ರತಿಯೊಬ್ಬರು ದನಗಳನ್ನು ಬಳಸಿ  ನೇಗಿಲಿನಿಂದ ಭೂಮಿಯನ್ನು ಹದವಾಗಿ ಉಳುಮೆ ಮಾಡುವಾಗ ಮರದ ನೇಗಿಲಿಗೆ ಕಬ್ಬಿಣದ ಕುಳವನ್ನು ತೊಡಗಿಸುತ್ತಿದ್ದರು. ಪ್ರತಿಯೊಬ್ಬ ರೈತ ಕಮ್ಮಾರನ ಬಳಿ ಹೋಗಿ ನೇಗಿಲ ಕುಳ ಮತ್ತು ಕೃಷಿಗೆ ಬೇಕಾದ ಸಲಕರಣೆಗಳನ್ನು ಪಡೆಯುತ್ತಿದ್ದರು. ಅಷ್ಟೇ ಅಲ್ಲ, ಕಮ್ಮಾರರಿಂದ ತಯಾರಿಸಿದ ಸಲಕರಣೆಗಳಿಂದ ಹೊಲಗಳಲ್ಲಿ ಕಳೆ ತೆಗೆಯುತ್ತಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ' ಎಂದು ಕಮ್ಮಾರ ಗೋವಿಂದಪ್ಪ `ಪ್ರಜಾವಾಣಿ'ಗೆ ತಿಳಿಸಿದರು.ಸಾಂಪ್ರದಾಯಿಕ ಕೃಷಿ ಪದ್ಧತಿಯೇ ಬದಲಾಗಿದೆ. ಹಳೆ ಮಾದರಿ ಸಲಕರಣೆಗಳ ಬದಲು ಈಗ ಟ್ರ್ಯಾಕ್ಟರ್, ಟಿಲ್ಲರ್, ಕಬ್ಬಿಣದ ನೇಗಿಲು ಮತ್ತಿತರ ಯಂತ್ರಗಳಿಂದ ಉಳುಮೆ ಮಾಡಲಾಗುತ್ತಿದೆ. ಕಳೆ ನಾಶಕ ಔಷಧಿ ಬಳಕೆ ಆಗುತ್ತಿರುವುದರಿಂದ ಕಮ್ಮಾರರು ತಯಾರಿಸುವ ವಸ್ತುಗಳಿಗೆ ಮತ್ತು ಕೃಷಿ ಕೂಲಿ ಕಾರ್ಮಿಕರಿಗೆ ಸಹಜವಾಗಿ ಬೇಡಿಕೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಪಸ್ವಲ್ಪ ಜಮೀನು ಹೊಂದಿರುವ ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರು ಪಟ್ಟಣದ ಕಡೆ ಉದ್ಯೋಗಕ್ಕಾಗಿ ವಲಸೆ ಹೋಗುತ್ತಿದ್ದಾರೆ ಎಂದು ಅವರು ಹೇಳಿದರು.ಈ ಅನಿರೀಕ್ಷಿತ ಬೆಳವಣಿಗೆಯಿಂದ ಕಮ್ಮಾರರ ವೃತ್ತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮೊದಲೆಲ್ಲ ವರ್ಷಪೂರ್ತಿ ರೈತರಿಗೆ ಬೇಕಾಗುತ್ತಿದ್ದ ಸಲಕರಣೆಗಳನ್ನು ತಯಾರಿಸುತ್ತಿದ್ದೆವು. ಪ್ರತಿಯೊಬ್ಬರ ಮನೆಗಳಲ್ಲೂ ಕೃಷಿಗೆ ಸಂಬಂಧಿಸಿದ ಎಲ್ಲಾ ರೀತಿಯ ಸಲಕರಣೆಗಳು ಇರುತ್ತಿದ್ದವು. ಆದರೆ ಈಗ ಉಪಕರಣಗಳು ಯಾರ ಮನೆಯಲ್ಲೂ ಕಾಣಿಸುತ್ತಿಲ್ಲ. ವರ್ಷದ ಮುಂಗಾರಿನಲ್ಲಿ ಎರಡು ತಿಂಗಳು ಮಾತ್ರ ಕಮ್ಮಾರಿಕೆ ಕೆಲಸ ಮಾಡುತ್ತೇವೆ. ಉಳಿದ ದಿನಗಳಲ್ಲಿ ಇತರೆ ಕೆಲಸಕ್ಕೆ ಹೋಗಬೇಕಾಗುತ್ತದೆ. ಇದನ್ನೇ ನಂಬಿ ಎಷ್ಟು ದಿನ ಜೀವನ ನಡೆಸುತ್ತೇವೋ ಗೊತ್ತಿಲ್ಲ ಎಂದು ಅವರು ನುಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.