ಸೋಮವಾರ, ಮಾರ್ಚ್ 1, 2021
20 °C

ಕರಡಕಲ್‌: ಆರ್ಸೆನಿಕ್‌ ನೀರೇ ಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಡಕಲ್‌: ಆರ್ಸೆನಿಕ್‌ ನೀರೇ ಗತಿ

ಕೆಂಭಾವಿ: ಪಟ್ಟಣ ಸೇರಿದಂತೆ ಸುತ್ತಲಿನ ಅನೇಕ ಗ್ರಾಮಗಳಲ್ಲಿ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವುದು ಒಂದೆಡೆಯಾದರೆ ಸಮೀಪದ ಕರಡ­ಕಲ್‌ ಗ್ರಾಮದ ಜನತೆ ಆರ್ಸೆನಿಕ್ ನೀರನ್ನೇ ಕುಡಿಯುತ್ತಿದ್ದಾರೆ.ಆರ್ಸೆನಿಕ್‌ ಯುಕ್ತ ನೀರನ್ನು ಬಳಸ­ದಂತೆ ಕರಡಕಲ್‌, ಪರಸನಹಳ್ಳಿ, ಹೆಗ್ಗ­ಣ­ದೊಡ್ಡಿ, ಮಾವಿನಮಟ್ಟಿ ಗ್ರಾಮಗಳ ಕೊಳವೆಬಾವಿಗಳಿಗೆ ಕೆಂಪುಬಣ್ಣ ಬಡಿದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಆದರೆ, ಗ್ರಾಮಸ್ಥರಿಗೆ ಪರ್ಯಾಯ ನೀರಿನ ವ್ಯವಸ್ಥೆ ಮಾಡದೇ ಜಿಲ್ಲಾಡಳಿತ ಇಂತಹ ನಿರ್ಧಾರ ತೆಗೆದುಕೊಂಡಿರುವು­ದರಿಂದ ಜನ ಅನಿವಾರ್ಯವಾಗಿ ರಾಸಾಯನಿಕ ಯುಕ್ತ ನೀರನ್ನೇ ಸೇವಿಸಬೇಕಾಗಿದೆ.ಸುರಪುರ ತಾಲ್ಲೂಕಿನ ಒಂಬತ್ತಕ್ಕೂ ಹೆಚ್ಚು ಗ್ರಾಮಗಳ ಕುಡಿಯುವ ನೀರಿ­ನಲ್ಲಿ ಅರ್ಸೆನಿಕ್ ಅಂಶ ಹೆಚ್ಚಾ­ಗಿದ್ದು, ಈ ಗ್ರಾಮಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸರ್ಕಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು. ಆರು ತಿಂಗಳು ಗತಿಸಿದರೂ ಜಿಲ್ಲಾ ಮಟ್ಟದ ಅಧಿಕಾರಿಗಳು ರಾಸಾಯನಿಕ ಅಂಶ ಹೆಚ್ಚಾಗಿರುವ ಕೊಳವೆಬಾವಿ ಹಾಗೂ ಬಾವಿಗಳಿಗೆ ಕೆಂಪು ಬಣ್ಣ ಬಳಿದದ್ದು ಬಿಟ್ಟರೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎನ್ನುತ್ತಾರೆ ಜೆಡಿಎಸ್‌ ಮುಖಂಡ ವಿರೂಪಾಕ್ಷಿ ಕರಡಕಲ್‌.ಕಿರದಳ್ಳಿ ತಾಂಡಾದಲ್ಲಿ ಆರ್ಸೆನಿಕ್‌ ನೀರು ಸೇವಿಸಿ ಅನೇಕರು ಚರ್ಮ ಕ್ಯಾನ್ಸರ್‌­ದಿಂದ ಬಳಲುತ್ತಿದ್ದಾರೆ ಎಂಬ ಹಿನ್ನೆಲೆ­ಯಲ್ಲಿ ಜೈನಾಪುರ ಹಾಗೂ ಕಿರದಳ್ಳಿ ತಾಂಡಾದಲ್ಲಿ ನೀರು ಶುದ್ಧೀಕರಣ ಘಟಕ ತೆರೆಯಲಾಗಿದೆ. ಇದನ್ನು ಹೊರ­ತುಪಡಿಸಿ ತಾಲ್ಲೂಕಿನ ಎಲ್ಲಿಯೂ ನೀರೂ ಶುದ್ಧೀಕರಣ ಘಟಕಗಳು ಪ್ರಾರಂಭಿಸಿಲ್ಲ. ಹೀಗಾಗಿ ಇಲ್ಲಿಯ ಜನತೆ ಇಂದಿಗೂ ವಿಷಯುಕ್ತ ನೀರನ್ನೆ ಸೇವಿಸುವಂತಾಗಿದೆ.ಗ್ರಾಮದಲ್ಲಿ ನೀರಿನ ಕೊರತೆ ಇಲ್ಲ ಆದರೆ, ನೀರಿನಲ್ಲಿ ಆರ್ಸೆನಿಕ್‌ ರಾಸಾ­ಯನಿಕ ವಸ್ತು ಹೆಚ್ಚಿನ ಪ್ರಮಾಣ­ದಲ್ಲಿದ್ದು, ಕೊಳವೆಬಾವಿಗಳಿಗೆ ಕೆಂಪು­ಬಣ್ಣ ಬಡಿದು ನೀರನ್ನು ಬಳಸದಂತೆ ಸೂಚಿಸಿದ್ದಾರೆ. ಅಲ್ಲದೇ ಆರು ತಿಂಗಳ ಹಿಂದೆ ಕೆಲ ದಿನಗಳ ಕಾಲ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿ­ದರೂ, ಅಲ್ಲಿಂದ ಇಲ್ಲಿಯವರೆಗೆ ಯಾವ ಅಧಿಕಾರಿಗಳೂ ಬಂದಿಲ್ಲ. ಹೀಗಾಗಿ ನಾವು ಅದೇ ಕೊಳವೆ ಬಾವಿಯ ನೀರನ್ನೇ ಸೇವಿಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಎಂಥಹ ರೋಗ ಬರುತ್ತದೆ ಎಂಬ ಆತಂಕ ಕಾಡುತ್ತಿದೆ. ಆದರೂ ಅನಿವಾರ್ಯ­ವಾಗಿದೆ. ನಮ್ಮ ಮಕ್ಕಳಿಗೆ ಈ ನೀರನ್ನು ಕುಡಿಸುವಾಗ ಮನ ಕುಲುಕುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.ನಮ್ಮ ಗ್ರಾಮದಲ್ಲಿ ನೀರು ಶುದ್ಧೀ­ಕರಣ ಘಟಕ ಸ್ಥಾಪಿಸಲಾಗಿದೆ. ಆದರೆ, ಅದು ಇದುವರೆಗೂ ಪ್ರಾರಂಭಿಸಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾವು ವಿಷಯುಕ್ತ ನೀರನ್ನೇ ಕುಡಿಯುತ್ತಿ­ದ್ದೇವೆ. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿ­ದರೂ ಹಾರಿಕೆ ಉತ್ತರ ನೀಡುತ್ತಿದ್ದಾರೆ. ವಿದ್ಯುತ್‌ ಇಲಾಖೆಯವರ ಮೇಲೆ ಹಾಕಿ ಜಾರಿಕೊಳ್ಳುತ್ತಿದ್ದಾರೆ, ಇದ­ರಿಂ­ದ ಅನಿವಾಯರ್ವಾಗಿ ಗ್ರಾಮದ ಜನತೆ ಅದೇ ನೀರನ್ನು ಕುಡಿಯುತ್ತಿ­ದ್ದೇವೆ ಎಂದು ಗ್ರಾಮ ಪಂಚಾಯತಿ ಸದಸ್ಯ ಭೀಮರಾವ ಕುಲಕರ್ಣಿ ಹೇಳುತ್ತಾರೆ.‘ನೀರಿನಲ್ಲಿ ಆರ್ಸೆನಿಕ್‌ ಅಂಶ ಇರುವ ಗ್ರಾಮಗಳಾದ ಕಿರದಳ್ಳಿ ತಾಂಡಾ, ಜೈನಾಪುರ, ಗೊಡ್ರಿಹಾಳ ಗ್ರಾಮಗಳಲ್ಲಿ ನೀರು ಶುದ್ಧೀಕರಣ ಘಟಕ ಪ್ರಾರಂಭಿಸ­ಲಾಗಿದೆ, ಪರಸನಹಳ್ಳಿ, ಹೆಗ್ಗಣಡೊಡ್ಡಿ ಗ್ರಾಮಗಲಲ್ಲಿ ಕಾಮಗಾರಿ ಪೂರ್ಣ­ಗೊಂಡಿದೆ ವಿದ್ಯುತ್‌ ಸಮಸ್ಯೆಯಿಂದ ಪ್ರಾರಂಭಿಸಿಲ್ಲ. ಕೆಲವೆಡೆ ಸ್ಥಳದ ಅಭಾ­ವದಿಂದಾಗಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಲು ಅಡಚಣೆಯಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ಕಾರ್ಯನಿರ್ವಾಹಕ ಅಧಿ­ಕಾರಿ ಬಸಯ್ಯ ಹಿರೇಮಠ ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.