ಶುಕ್ರವಾರ, ಮಾರ್ಚ್ 5, 2021
27 °C
ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಪ್ರೇಕ್ಷಕ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತ

ಕರಾಳ ಛಾಯೆ ಬಿಂಬಿಸಿದ ‘ಚಿಗುರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾಳ ಛಾಯೆ ಬಿಂಬಿಸಿದ ‘ಚಿಗುರು’

ಮೈಸೂರು: ಚಮ್ಮಾರ ವೃತ್ತಿ ಮಾಡುವ, ಗುಡಿಸಲಿನಲ್ಲಿ ವಾಸಿಸುವ ವ್ಯಕ್ತಿ ಸ್ವಂತ ಸೂರೊಂದನ್ನು ಹೊಂದಬಾರದೇ? ಆತನ ಮಗ ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗಕ್ಕೆ ಸೇರಬಾರದೇ? ಕೆಳವರ್ಗ ದವರು ಸರ್ಕಾರದ ಸೌಲಭ್ಯ ಪಡೆಯು ವುದಕ್ಕೂ ಮೆಲ್ವರ್ಗದವರ ಅಸಹನೆಯೇ? ಇನ್ನೂ ಎಷ್ಟು ದಿನ ಈ ಅಸ್ಪೃಶ್ಯತೆ?!– ಇಂಥ ಹತ್ತು ಹಲವು ಪ್ರಶ್ನೆಗಳನ್ನು ಕೇಳಿಕೊಳ್ಳುವುದಕ್ಕೆ ಕಾರಣವಾಗಿದ್ದು ‘ಚಿಗುರು’ ಸಿನಿಮಾ. ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ಅಂಗವಾಗಿ ಇಲ್ಲಿನ ಮಾಲ್‌ ಆಫ್‌ ಮೈಸೂರ್‌ನ ‘ಐನಾಕ್ಸ್’ ಚಿತ್ರಮಂದಿರದಲ್ಲಿ ಶುಕ್ರವಾರ ಪ್ರದರ್ಶನ ಗೊಂಡ ಈ ಸಿನಿಮಾ, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಅಸ್ಪೃಶ್ಯತೆಯ ಕರಾಳ ಛಾಯೆಯು ಹೇಗೆ ಸಂಕಷ್ಟಗಳನ್ನು ತಂದೊಡ್ಡುತ್ತಿದೆ ಎನ್ನುವುದನ್ನು ಪ್ರಸ್ತುತಪಡಿಸಿತು.ಸಮಾಜದಲ್ಲಿರುವ ಮೇಲು–ಕೀಳು, ಬಡವರ ಹೆಸರು ಬಳಸಿಕೊಂಡು ನಡೆ ಯುವ ಅವ್ಯವಹಾರಗಳು, ಸರ್ಕಾರದ ಸೌಲಭ್ಯಗಳನ್ನು ಯಾರೋ ‘ಗುಳುಂ’ ಮಾಡುವುದು, ಅರ್ಹ ಫಲಾನುಭವಿಯು ಬಡವರಾಗಿಯೇ ಉಳಿಯುವುದು... ಮೊದಲಾದ ಸಂಗತಿಗಳನ್ನು ‘ಚಿಗುರು’ ಚಿತ್ರವು ಹಲವು ಭಾವನಾತ್ಮಕ ದೃಶ್ಯಗಳ ಮೂಲಕ ಅನಾವರಣಗೊಳಿಸಿತು. ಇದೇ ವೇಳೆ, ತಪ್ಪಿತಸ್ಥ ಜನಪ್ರತಿನಿಧಿ ಒಂದಲ್ಲ  ಒಂದು ದಿನ ಕಾನೂನಿನ ಎದುರು ಮಂಡಿಯೂರಬೇಕಾಗುತ್ತದೆ ಎನ್ನುವ ಎಚ್ಚರಿಕೆಯ ಸಂದೇಶವನ್ನೂ ಸಾರಿತು.ಹಳ್ಳಿಯ ‘ಹೊರವಲಯ’ ದಲ್ಲೊಂದು ಗುಡಿಸಲು. ದಂಪತಿಗೆ ಒಬ್ಬನೇ ಮಗ. ತನ್ನ ಕುಲದೇವರು ದ್ಯಾಮವ್ವನನ್ನೇ ಬಲವಾಗಿ ನಂಬಿರುವ ಮುಗ್ದ ಮನಸ್ಸಿನ ಚನ್ನನದು ಚಮ್ಮಾರ ವೃತ್ತಿ. ಚಪ್ಪಲಿ ಹೊಲಿಯುವುದರಲ್ಲಿ ಸಿಗುವ ಚಿಕ್ಕಾಸೇ ದೊಡ್ಡ ಸಂಪಾದನೆ. ಮಗನನ್ನು ದೊಡ್ಡ ಅಧಿಕಾರಿ ಮಾಡಬೇಕು ಎಂಬ ಕನಸು.ಇದಕ್ಕಾಗಿ ಕಾಸು ಕೂಡಿಡುವ ಕಾಯಕ. ಇದಕ್ಕ ಒತ್ತಾಸೆಯಾಗಿ ನಿಲ್ಲುವ ಪತ್ನಿ. ಪೋಷಕರು ಹಾಗೂ ಮೇಲ್ವರ್ಗದ ಮಾರ್ಗದರ್ಶಿ ಶಿಕ್ಷಕರಿಂದ ಪ್ರೇರಣೆ ಪಡೆದು ಚೆನ್ನಾಗಿ ಓದುವ ಬಾಲಕ ರಂಗ. ಕೆಳವರ್ಗದ ಬಾಲಕನನ್ನು ‘ಮುಟ್ಟಿ’ ಮಾತನಾಡಿ ಸಿದ್ದನ್ನೇ ದೊಡ್ಡ ಸಂಗತಿಯನ್ನಾಗಿ ಪರಿಗಣಿಸಿ, ಶಿಕ್ಷಕನನ್ನು ಪದೇಪದೇ ಪ್ರಶ್ನಿಸುವ ಗ್ರಾಮ ಪಂಚಾಯಿತಿ ಚೇರ್‌ಮನ್‌ (ಪಟೇಲ) ಹಾಗೂ ಕಾರ್ಯದರ್ಶಿ. ಚೇರ್‌ಮನ್‌ ಮನೆಯ ಆಳು ಕೂಡ ‘ಮೇಲ್ವರ್ಗದ ವ್ಯವಸ್ಥೆಯ ಪ್ರತೀಕ’ದಂತಿದ್ದಾನೆ. ಚೇರ್‌ಮನ್‌ಗೆ ಕಿವಿ ಊದುತ್ತಾನೆ. ಹೀಗೆ ಸಾಗುತ್ತದೆ ಕತೆ.‘ಸೂರು ಭಾಗ್ಯ’ ಯೋಜನೆಯಲ್ಲಿ ಛೇರ್‌ಮನ್‌ ಮೊದಲಾದವರು ಆಯ್ಕೆ ಮಾಡಿದ ಪಟ್ಟಿ ಪಡೆದು, ಖುದ್ದು ಗ್ರಾಮಕ್ಕೆ ಭೇಟಿ ನೀಡುವ ಜಿಲ್ಲಾಧಿಕಾರಿಯ ಸಮಯಪ್ರಜ್ಞೆಯಿಂದ, ಅರ್ಹ ಫಲಾನುಭವಿಯು ಸರ್ಕಾರದ ಸೌಲಭ್ಯದಿಂದ ವಂಚಿತವಾಗುವುದು ತಪ್ಪುತ್ತದೆ. ಮನೆ ನಿರ್ಮಿಸಲು ಗುರುತಿಸಲಾದ ಜಾಗ ಪರಿಶೀಲನೆ ವೇಳೆ, ಜಿಲ್ಲಾಧಿಕಾರಿ ಚಪ್ಪಲಿ ಕಿತ್ತು ಹೋಗುತ್ತದೆ. ಇದನ್ನು ಹೊಲಿಸಲು ಅವರು ಚಮ್ಮಾರ ಚನ್ನನ ಬಳಿಗೆ ಬರುತ್ತಾರೆ. ₹ 5ರ ಬದಲಿಗೆ ₹ 100 ಕೊಟ್ಟರೂ ಬೇಡವೆನ್ನುವ ಚನ್ನನ ಧೋರಣೆ, ಕೆಳವರ್ಗದವರ ಮುಗ್ದತೆಗೆ ಕನ್ನಡಿ ಹಿಡಿಯುತ್ತದೆ. ‘ನಾವು ದುಡಿದಿದ್ದಷ್ಟೇ ನಮಗೆ, ಸುಲಭವಾಗಿ ಬರುವುದನ್ನು ಪಡೆಯುವುದಿಲ್ಲ’ ಎನ್ನುತ್ತಾನೆ. ಚೇರ್‌ಮನ್‌ ಮುಂದಿನ ವರ್ಷ ಸರ್ಕಾರದಿಂದ ಮನೆ ಕಟ್ಟಿಸಿಕೊಡುತ್ತೇವೆ ಎಂದಿದ್ದಾರೆ ಎಂದು ತಿಳಿಸುತ್ತಾನೆ.ಆದರೆ, ನಂತರ ಚೇರ್‌ಮನ್‌ ಜೊತೆ ನಡೆಯುವ ಮಾತುಕತೆ ವೇಳೆ ಚನ್ನನ ಹೆಸರು ಪಟ್ಟಿಯಲ್ಲಿದೆಯೇ ಎನ್ನುವ ಅನುಮಾನ ಮೂಡುತ್ತದೆ ಡಿಸಿಗೆ. ಈ ಬಗ್ಗೆ ಡಿಸಿ ತನಿಖೆಗೆ ಆದೇಶಿಸಿದಾಗ, ‘ಸೂರು ಭಾಗ್ಯ’ ಯೋಜನೆಗೆ ಗುರುತಿಸಿದ ಜಾಗ ಚಮ್ಮಾರ ಚನ್ನನ ತಂದೆಗೆ ಸೇರಿದ್ದು ಎನ್ನುವ ಅಂಶ ಬಯಲಾಗುತ್ತದೆ. ಚೇರ್‌ಮನ್‌ಗೆ ನ್ಯಾಯಾಲಯದಿಂದ ಸಮನ್ಸ್‌ ಬರುತ್ತದೆ.ನಿವೃತ್ತಿ ನಂತರ ಚೇರ್‌ಮನ್‌್ ಮೊದಲಾದವರ ಕಾಟದಿಂದ ಊರುಬಿಡುವ ಶಿಕ್ಷಕರು ಸಿಟಿಯಲ್ಲಿರುವ ಪುತ್ರನ ಮನೆಗೆ ಹೋಗುತ್ತಾರೆ. ವಿದ್ಯಾರ್ಥಿ ರಂಗನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಂತೆ ಅವರು ಜಿಲ್ಲಾಧಿಕಾರಿಗೆ ಬರೆದ ಪತ್ರ ಪುರಸ್ಕೃತವಾಗುತ್ತದೆ. ರಂಗನನ್ನು ಓದಿಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳುತ್ತದೆ. ಅತ್ತ, ಚೇರ್‌ಮನ್‌ ನ್ಯಾಯಾಲಯಕ್ಕೆ ತೆರಳುತ್ತಾನೆ. ಊರಿನವರು ಆತನಿಗೆ ಛೀಮಾರಿ ಹಾಕುತ್ತಾರೆ. ಅಲ್ಲಿಗೆ ಕತೆ ಮುಗಿಯುತ್ತದೆ. ಚನ್ನನಿಗೆ ನ್ಯಾಯ ದೊರೆಯುತ್ತದೆ ಹಾಗೂ ರಂಗನಿಗೆ ಓದಿನ ಸೌಲಭ್ಯದ ಉಡುಗೊರೆ ಸಿಗುತ್ತದೆ. ಚಿತ್ರದ ಕೆಲವು ಸನ್ನಿವೇಶಗಳಲ್ಲಿ ಪ್ರೇಕ್ಷಕರ ಕಣ್ಣುಗಳು ಒದ್ದೆಯಾದವು!100 ನಿಮಿಷಗಳ ಈ ಚಿತ್ರವನ್ನು ನಾಗನಾಥ ಮಾಧವರಾವ್‌ ಜೋಶಿ ನಿರ್ದೇಶಿಸಿದ್ದಾರೆ ಹಾಗು ಚನ್ನನ ಪಾತ್ರ ವನ್ನೂ ನಿರ್ವಹಿಸಿದ್ದಾರೆ. ಇವರೊಂದಿಗೆ ಪ್ರೇಮ್‌ಕುಮಾರ್‌ ಗದಾಧರ್‌, ಶಂಕರ್‌ ಭಟ್‌, ಎಂ.ಎನ್‌. ಸುರೇಶ್‌, ಮಾಸ್ಟರ್‌ ವರುಣ್‌, ಪ್ರಕಾಶ್‌ ಸಣ್ಣಕ್ಕಿ, ಕೃಷ್ಣ ಪಾತ್ರ ನಿರ್ವಹಿಸಿದ್ದಾರೆ. ಅರಸೀಕೆರೆ ದೀಪು ಛಾಯಾಗ್ರಹಣ, ಎಂ.ಎನ್‌. ಕೃಪಾಕರ್‌ ಸಂಗೀತ ನೀಡಿದ್ದಾರೆ. ಬಸವರಾಜು ಆಚಾರ್ಯ ಸಂಪಾದಕರು.ದೊರೆಯದ ಮಾಹಿತಿ ಪುಸ್ತಕ: ಆಕ್ರೋಶ

ಸಿನಿಮೋತ್ಸವಕ್ಕೆ ನೋಂದಣಿ ಮಾಡಿಕೊಂಡಿದ್ದ ಸಿನಿಮಾಸಕ್ತರು ಮಾಹಿತಿ ಪುಸ್ತಕ ಒದಗಿಸದ ಕಾರಣಕ್ಕೆ ಅಧಿಕಾರಿಗಳ ವಿರುದ್ಧ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

‘ಚಿಗುರು’ ಚಿತ್ರ ಪ್ರದರ್ಶನಕ್ಕೆ ಮುನ್ನ ಪ್ರೇಕ್ಷಕರು ಈ ಅಸಮಾಧಾನ ವ್ಯಕ್ತಪಡಿಸಿದರು. ‘ಮಾಹಿತಿ ಪುಸ್ತಕಗಳನ್ನು ಬೆಂಗಳೂರಿನಿಂದ ತರಿಸಲಾಗುತ್ತಿದೆ. ಮಧ್ಯಾಹ್ನದ ವೇಳೆಗೆ ಇಲ್ಲಿಗೆ ತಲುಪಲಿವೆ. ನಂತರ ಪಡೆಯಬಹುದು’ ಎಂದು ಆಯೋಜಕರು ಸಮಾಧಾನಪಡಿಸಿದರು. ಮಧ್ಯಾಹ್ನದ ವೇಳೆಗೆ, ಮಾಹಿತಿ ಪುಸ್ತಕಗಳನ್ನು ನೋಂದಾಯಿತರಿಗೆ ವಿತರಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.