ಭಾನುವಾರ, ಏಪ್ರಿಲ್ 11, 2021
33 °C

ಕರಾವಳಿಯಲ್ಲಿ ಮಳೆ ಬಿರುಸು: ಜನಜೀವನ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಆಟಿ ತಿಂಗಳ ಬಹುತೇಕ ದಿನ ಕರಾವಳಿಯಲ್ಲಿ ಕಣ್ಮರೆಯಾಗಿದ್ದ ಮಳೆ ತಿಂಗಳ ಕೊನೆಯಲ್ಲಿ ಬಿರುಸಿನಿಂದ ಸುರಿಯತೊಡಗಿದ್ದು, ಸೇತುವೆಗಳು ಮುಳುಗಿದ್ದರಿಂದ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಕರಾವಳಿಗಿಂತಲೂ ಘಟ್ಟದ ಮೇಲೆ ಸುರಿದ ಭಾರಿ ಮಳೆಯಿಂದ ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ನದಿಗಳೆಲ್ಲ ತುಂಬಿ ಹರಿಯುತ್ತಿವೆ.ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ತುಂಬಿ ಹರಿಯುತ್ತಿದ್ದು, ಸುಬ್ರಹ್ಮಣ್ಯ, ಬಂಟ್ವಾಳ ಸಹಿತ ದ.ಕ. ಜಿಲ್ಲೆಯ ಕೆಲವೆಡೆ ಮಂಗಳವಾರ ಶಾಲೆಗಳಿಗೆ ರಜೆ ಸಾರಲಾಯಿತು. ಸುಬ್ರಹ್ಮಣ್ಯಕ್ಕೆ ಬಂದ ಭಕ್ತರಿಗೆ ಬಹಳ ತೊಂದರೆ ಉಂಟಾಯಿತು.ಸುಬ್ರಹ್ಮಣ್ಯ ವರದಿ:
ಘಟ್ಟ ಪ್ರದೇಶದಲ್ಲಿ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಧಾರಾಕಾರ ಮಳೆಯಾದುದರಿಂದ ಕುಮಾರಧಾರಾ ನದಿಯು ತುಂಬಿ ಹರಿದು ಸುಬ್ರಹ್ಮಣ್ಯ ಸಂಪರ್ಕಿಸುವ ಕುಮಾರಧಾರಾ ಸೇತುವೆ ಮಂಗಳವಾರವೂ ಮುಳುಗಡೆಯಾಯಿತು.  ಕುಮಾರಧಾರಾ ಸೇತುವೆಯ ಮೇಲೆ ಸೋಮವಾರ ರಾತ್ರಿ ಬೃಹತ್ ಪ್ರಮಾಣದಲ್ಲಿ ಪ್ರವಾಹ ಬಂದುದರಿಂದ ನೀರಿನಲ್ಲಿ ಸುಮಾರು 40 ಅಡಿ ಉದ್ದದ  ಮರವೊಂದು ಸೇತುವೆಯ ಮೇಲೆ ಬಂದು ನಿಂತಿತು. ಇದರಿಂದಾಗಿ ಸೇತುವೆಯಿಂದ ನೀರು ಇಳಿದ ನಂತರವೂ ಸಂಚಾರಕ್ಕೆ ಅಡಚಣೆ ಉಂಟಾಯಿತು.  ಸೇತುವೆಯ ಮೇಲಿನ ಮರವನ್ನು ದೇವಳದ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯರು ಸೇರಿ 2 ಗಂಟೆಗಳಲ್ಲಿ ತೆರವುಗೊಳಿಸಿದರು. ಬಳಿಕ ರಸ್ತೆ ಸಂಚಾರ ಸುಸ್ಥಿತಿಗೆ ಬಂತು.ಸೋಮವಾರ ರಾತ್ರಿ ಸುಬ್ರಹ್ಮಣ್ಯ- ಪುತ್ತೂರು ಸಂಪರ್ಕಿಸುವ ರಸ್ತೆಯು ಬಂದ್ ಆಗಿತ್ತು. ಬೆಳಗ್ಗೆ 5 ಗಂಟೆಯವರೆಗೆ ಈ ರಸ್ತೆ ಜಲಾವೃತಗೊಂಡಿತ್ತು. ಪ್ರಯಾಣಿಕರು ಸುತ್ತು ಬಳಸಿ ಬಳ್ಪ- ಕಮಿಲ- ಗುತ್ತಿಗಾರು ಮೂಲಕ ತಲುಪಿದರು. ಕುಮಾರಧಾರಾ ನದಿ ತಟದಲ್ಲಿರುವ ಸ್ನಾನಘಟ್ಟ, ದೇವರ ಕಟ್ಟೆ, ಅಂಗಡಿಗಳು ಭಾಗಶಃ ಮುಳುಗಡೆಯಾಗಿದ್ದವು. ಸೇತುವೆಯ ಎರಡು ಬದಿಗಳಲ್ಲಿಯೂ ಪ್ರಯಾಣಿಕರು ಹಾಗೂ ವಾಹನಗಳು ನಿಂತಿದ್ದವು. ಕ್ಷೇತ್ರಕ್ಕೆ ಬರುವ ಭಕ್ತರು ತೀವ್ರ ತೊಂದರೆ ಪಡುವಂತಾಯಿತು. ಸ್ಥಳೀಯ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಮಧ್ಯಾಹ್ನ  ಸೇತುವೆ ಮೇಲಿನ ನೀರು ಕಡಿಮೆಯಾಗಿ ಸಂಚಾರ ಸುಗಮವಾಯಿತು.ಬಂಟ್ವಾಳ ವರದಿ: ಬಂಟ್ವಾಳ ತಾಲ್ಲೂಕಿನಾದ್ಯಂತ ಮಂಗಳವಾರ ಬೆಳಿಗ್ಗೆ ಮತ್ತು ಮಧ್ಯಾಹ್ನ ವೇಳೆಗೆ ಧಾರಾಕಾರ ಮಳೆಯಾಗಿದ್ದು, ಇಲ್ಲಿನ ನೇತ್ರಾವತಿ ನದಿಯಲ್ಲಿ ಈ ವರ್ಷದಲ್ಲಿ ಎರಡನೇ ಬಾರಿಗೆ ಗರಿಷ್ಠ ಪ್ರಮಾಣದಲ್ಲಿ ನೆರೆನೀರು ಉಕ್ಕಿ ಹರಿದಿದೆ. ತಾಲ್ಲೂಕಿನಲ್ಲಿ ಕೇವಲ 39.15 ಮಿ.ಮೀ. ಮಳೆಯಾಗ್ದ್ದಿದು, ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆನಿಂದಲೇ ಭಾರಿ ಪ್ರಮಾಣದಲ್ಲಿ ನೆರೆ ನೀರು ಕಾಣಿಸಿಕೊಂಡಿದೆ. ನೇತ್ರಾವತಿ ನದಿನೀರಿನ ಮಟ್ಟ 8.3ಮೀ. ತಲುಪಿದ್ದು, ಗರಿಷ್ಟ ಮಟ್ಟ 8.5 ತಲುಪಿದಲ್ಲಿ ಮುಳುಗಡೆ ಭೀತಿ ಎದುರಾಗಲಿದೆ.ಈಗಾಗಲೇ ಬಂಟ್ವಾಳ, ಪಾಣೆಮಂಗಳೂರು, ಆಲಡ್ಕ, ಬಸ್ತಿಪಡ್ಪು, ಕಂಚಿಕಾರಪೇಟೆ, ಜಕ್ರಿಬೆಟ್ಟು ಮತ್ತಿತರ ತಗ್ಗು ಪ್ರದೇಶಗಳಲ್ಲಿ ಹಲವಾರು ಮನೆ ಮತ್ತು ಅಂಗಡಿಗಳಿಗೆ ನೆರೆನೀರು ಪ್ರವೇಶಿಸಿದೆ. ಇದರಿಂದಾಗಿ ಬಂಟ್ವಾಳ, ಪಾಣೆಮಂಗಳೂರು ಮತ್ತಿತರ ಕಡೆಗಳಲ್ಲಿ ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು. ಪಾಣೆಮಂಗಳೂರಿನಲ್ಲಿ ಪದ್ಮಪ್ಪ ಎಂಬವರ ಮನೆಯ ಮೇಲೆ ಮರವೊಂದು ಬಿದ್ದ ಪರಿಣಾಮ ಹೆಂಚಿನ ಮನೆಗೆ ಅಪಾರ ಹಾನಿಯಾಗಿದೆ.ಉಳಿದಂತೆ ಅಳಿಕೆ ನಿವಾಸಿ ಮಹಮ್ಮದ್ ಅಬ್ದುಲ್ಲ, ಬಿ.ಮೂಡ ಗ್ರಾಮದ ಆಲಿ ಮಹಮ್ಮದ್, ಅಮ್ಟಾಡಿ ನಿವಾಸಿ ವಾರಿಜಾ ರಮೇಶ್, ಕೆದಿಲ ನಿವಾಸಿ ನಲಿಕೆ, ಬಿಳಿಯೂರು ನಿವಾಸಿ ಜಯಕೀರ್ತಿ ಮತ್ತು ಸಂಗಬೆಟ್ಟು ನಿವಾಸಿ ಕೂಸ ಕಿನ್ನಿಗ ಎಂಬವರ ಮನೆಗೆ ಮಳೆಯಿಂದಾಗಿ ಭಾಗಶಃ ಹಾನಿಯಾಗಿದೆ. ಇದರಿಂದಾಗಿ ತಾಲ್ಲೂಕಿನ ಒಟ್ಟು ಏಳು ಮನೆಗೆ ಹಾನಿಯಾಗಿದ್ದು, ಸುಮಾರು 67 ಸಾವಿರ ರೂಪಾಯಿ ಹಾನಿ ಸಂಭವಿಸಿದೆ.ಪಾಣೆಮಂಗಳೂರಿನಲ್ಲಿ ಮುಳುಗಡೆ ಭೀತಿ ಎದುರಿಸುತ್ತಿರುವ  ಮೂರು ಮನೆ ಮಂದಿಯನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದ್ದು, ಇನ್ನುಳಿದ ತಗ್ಗುಪ್ರದೇಶದ ಮನೆಗಳಿಗೆ ತೆರವುಗೊಳಿಸುವಂತೆ ಸೂಚಿಸಲಾಗಿದೆ. ಈಗಾಗಲೇ ನಾಡದೋಣಿ ಸಹಿತ ವಿವಿಧೆಡೆ ಮುನ್ನೆಚ್ಚರಿಕಾ ಕ್ರಮವಾಗಿ ಹೋಮ್‌ಗಾರ್ಡ್ ವ್ಯವಸ್ಥೆ ಒದಗಿಸಲಾಗಿದೆ ಎಂದು ತಹಶೀಲ್ದಾರ್ ಸಿ.ಎಚ್.ಆನಂದ ನಾಯ್ಕ ~ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ಮುಳುಗಡೆ ಭೀತಿ ಇರುವ ಕಾರಣ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಾಧಿಕಾರಿ ಆರ್.ವಿ.ಜತ್ತನ್ನ ಪ್ರತಿಕ್ರಿಯಿಸಿದ್ದಾರೆ.ತಾಲ್ಲೂಕಿನ ತುಂಬೆಯಲ್ಲಿ 13 ಅಡಿ ಎತ್ತರದ ಅಣೆಕಟ್ಟೆಯಲ್ಲಿ ಮಂಗಳವಾರ 26.5ಅಡಿ ಎತ್ತರಕ್ಕೆ ನೆರೆನೀರು ರಭಸದಿಂದ ಹರಿಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಗ್ರಾಮೀಣ ಪ್ರದೇಶದ ಬಹುತೇಕ ಕಡೆಗಳಲ್ಲಿ ವಿದ್ಯುತ್ ಪದೇ ಪದೇ ಕೈಕೊಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ.ಉಳ್ಳಾಲ ವರದಿ: ಮಂಗಳವಾರದಂದು ಸುರಿದ ಭಾರಿ ಮಳೆಗೆ ನೇತ್ರಾವತಿ ನದಿ ತೀರದ ತಗ್ಗುಪ್ರದೇಶಗಳಾದ  ಕಲ್ಲಾಪು ಪಟ್ಲ,  ಕಲ್ಲಾಪು, ಅಡಂಕುದ್ರು, ಅಂಬ್ಲಮೊಗರು ಪ್ರದೇಶಗಳು ಜಲಾವೃತಗೊಂಡವು.ಕಲ್ಲಾಪು ಪಟ್ಲ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಆವರಣ ನೆರೆಯಿಂದಾಗಿ ಜಲಾವೃತಗೊಂಡು ಶಾಲೆಗೆ ರಜೆ ಘೋಷಿಸಲಾಗಿದೆ. ಸ್ಥಳೀಯ ಊರಿನ ಜನರು  ದೋಣಿಯ ಮೂಲಕ ಹಾಗೂ ಜಲಾವೃತಗೊಂಡ ನೀರಿನಲ್ಲಿಯೇ ತೆರಳುವಂತಾಯಿತು. ಸ್ಥಳೀಯರು ನೆರೆ ನೀರಿನಿಂದಾಗಿ ಪರದಾಡುವಂತಾಗಿದೆ.ನದಿ  ತೀರದಲ್ಲಿರುವಂತಹ ನಿವಾಸಿಗಳು ನೆರೆ ಮತ್ತು ಕಡಲ್ಕೊರೆತಕ್ಕೆ ತುತ್ತಾಗುವ ಮುಂಚಿತವಾಗಿ ಹೋಂಗಾಡ್‌ರ್  ಮತ್ತು ಅಗ್ನಿ ಶಾಮಕ ದಳದ ಅಧಿಕಾರಿಗಳ ತುರ್ತು ಸಭೆ ಕರೆದು ಸದಾ ಸನ್ನದ್ಧರಾಗಿರುವಂತೆ ಸೂಚಿಸಬೇಕು ಎಂದು ಶಾಸಕ ಯು.ಟಿ.ಖಾದರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.ನಿರಂತರ ಮಳೆಯಿಂದಾಗಿ ಉಳ್ಳಾಲ ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ.ಬೆಳ್ತಂಗಡಿ ವರದಿ: ಚಾರ್ಮಾಡಿ ಘಾಟಿಯಲ್ಲಿ ಮಂಗಳವಾರ ಗುಡ್ಡ ಕುಸಿದಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ತಡೆಯಾಗಿತ್ತು. ಮಣ್ಣು ತೆರವುಗೊಳಿಸಿದ ಬಳಿಕ ಮತ್ತೆ ವಾಹನ ಸಂಚಾರ ಸುಗಮವಾಗಿದೆ.

ಬ್ರಹ್ಮಾವರ ವರದಿ: ಕಳೆದೆರಡು ದಿನಗಳಿಂದ ಮಲೆನಾಡು ಹಾಗೂ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಕಾರಣ ಬ್ರಹ್ಮಾವರ ಪರಿಸರದ ಮಡಿಸಾಲು ಮತ್ತು ಸೀತಾ ನದಿಗಳು ಉಕ್ಕಿಹರಿಯುತ್ತಿದೆ.ಕುಂಜಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರೂರಿನಲ್ಲಿ ಮಡಿಸಾಲು ಹೊಳೆಗೆ ನಿರ್ಮಿಸಲಾದ ಕುಸಿದ ಕಾಲು ಸೇತುವೆ ಮೇಲೆ ಪ್ರವಾಹದ ನೀರು ಹರಿಯುತ್ತಿದ್ದು ಆರೂರು ಬೆಳ್ಮಾರು ಸಂಪರ್ಕ ಕಡಿದುಕೊಂಡಿದೆ. ಬಾರ್ಕೂರು ಪರಿಸರದ ಹಂದಾಡಿಯ ನದೀ ತೀರದ ಪ್ರದೇಶಗಳು ಜಲಾವೃತಗೊಂಡಿವೆ. ಕಳೆದ ಒಂದು ವಾರದಿಂದ ಪರಿಸರದಲ್ಲಿ ಮಳೆ ಇಲ್ಲದೇ ಹೆಚ್ಚಿನ ಗದ್ದೆಗಳು ಒಣಗಿ ಹೋಗಿದ್ದು, ಇದೀಗ ಸ್ವಲ್ಪ ಮಳೆಯ ಕಾರಣ ಚೇತರಿಸಿಕೊಂಡಿದೆ. ಮಂಗಳವಾರ ಬೆಳಿಗ್ಗೆ ಪರಿಸರ ನದಿಗಳು ಉಕ್ಕಿ ಹರಿದಿದ್ದರೂ ಸಂಜೆ ಹೊತ್ತಿಗೆ ಪ್ರವಾಹದ ನೀರು ಕಡಿಮೆಗೊಂಡಿದೆ.ಬೈಂದೂರು ವರದಿ: ಭಾನುವಾರ ಮತ್ತು ಸೋಮವಾರ ಹಗಲು ಸುರಿದ ಮಳೆಯಿಂದ ಬೈಂದೂರು ವ್ಯಾಪ್ತಿಯ ಸುಮನಾ, ಎಡಮಾವಿನಹೊಳೆ ಮತ್ತು ಸೌಪರ್ಣಿಕಾ ನದಿಗಳಲ್ಲಿ ಪ್ರವಾಹ ಉಂಟಾಗಿದ್ದು, ಸೋಮವಾರ ರಾತ್ರಿ ಮತ್ತು ಮಂಗಳವಾರ ಹಗಲು ಮಳೆ ಇಳಿಮುಖವಾಗಿತ್ತು. ಮಂಗಳವಾರ ಹಗಲಿಡೀ ಮೋಡ ಕವಿದಿತ್ತಾದರೂ ಮಳೆ ಅಷ್ಟಾಗಿ ಬೀಳಲಿಲ್ಲ. ಆದರೆ ಎಲ್ಲ ನದಿಗಳಲ್ಲೂ ನೆರೆ ನೀರು ಸೋಮವಾರದ ಮಟ್ಟಕ್ಕಿಂತ ಎರಡು ಅಡಿ ಏರಿಕೆಯಾಯ್ತು.ಸೋಮವಾರ ನದಿಯಂಚಿನ ತಗ್ಗು ಪ್ರದೇಶಗಳು ಜಲಾವೃತವಾಗಿದ್ದರೆ, ಮಂಗಳವಾರ ಹೇರೂರು, ಬಡಾಕೆರೆ, ನಾವುಂದ, ಮರವಂತೆ, ನಾಡ, ಹಡವು, ಸೇನಾಪುರ, ಹಕ್ಲಾಡಿ ಗ್ರಾಮಗಳಲ್ಲಿ ನೆರೆ ನೀರು ಮುನ್ನುಗ್ಗಿದ ಪರಿಣಾಮವಾಗಿ ಬತ್ತದ ಗದ್ದೆಗಳು ನೀರಿನಲ್ಲಿ ಮುಳುಗಿದವು. ಅವುಗಳ ಮೂಲಕ ಹೆದ್ದಾರಿಯನ್ನು ಸಂಪರ್ಕಿಸುವ ಎಲ್ಲ ರಸ್ತೆಗಳ ಮೇಲೂ ಒಂದರಿಂದ ನಾಲ್ಕು ಅಡಿ ನೀರು ನಿಂತಿದೆ. ನದಿ ದಂಡೆಯ ಎಲ್ಲ ಮನೆಗಳು ಜಲಾವೃತವಾಗಿವೆ.ಅತ್ಯಂತ ತಗ್ಗು ಪ್ರದೇಶವಾದ ಹೇರೂರಿನ ಕೆಳಾಬೈಲು, ನಾವುಂದದ ಸಾಲ್ಬುಡ, ಹಡವಿನ ಅತ್ತಿಕೋಣೆ, ತ್ರಾಸಿಯ ಮೊವಾಡಿ, ನಾಡದ ಚಿಕ್ಕಳಿ, ಹಕ್ಲಾಡಿ ಗ್ರಾಮದ ತೊಪ್ಲು ಪ್ರದೇಶದ ನದಿಯಂಚಿನ ನಿವಾಸಿಗಳು ಸಂಪರ್ಕಕ್ಕೆ ದೋಣಿಯ ಆಶ್ರಯ ಪಡೆದಿದ್ದಾರೆ. ತೀರ ತಗ್ಗು ಪ್ರದೇಶದ ನಿವಾಸಿಗಳು ಮನೆಗಳನ್ನು ತ್ಯಜಿಸಿ, ತಮ್ಮ ಜಾನುವಾರುಗಳ ಸಹಿತ ಸುರಕ್ಷಿತ ಸ್ಥಳದಲ್ಲಿರುವ ಬಂಧುಗಳ ಮನೆಗೆ ತೆರಳಿದ್ದಾರೆ.ಸೋಮವಾರ ಕಂಡು ಬಂದಿದ್ದ ಸಮುದ್ರದ ಆರ್ಭಟ ಮಂಗಳವಾರವೂ ಮುಂದುವರಿದಿದೆ. ಪಡುವರಿ ಗ್ರಾಮದ ತಾರಾಪತಿಯಲ್ಲಿ ಒಂದೆಡೆ ಸಮುದ್ರ ದಂಡೆಯ ರಕ್ಷಣೆಗಾಗಿ ಹಾಕಿದ್ದ ಕಲ್ಲಿನ ರಾಶಿಯನ್ನು ಅಲೆಗಳು ಭೇದಿಸಿ, ಒಳನುಗ್ಗುತ್ತಿವೆ. ಮೀನುಗಾರರ ವಿಶ್ರಾಂತಿಗಾಗಿ ನಿರ್ಮಿಸಿಕೊಂಡಿರುವ ಒಂದು ಕಟ್ಟಡ ಕುಸಿಯುವ ಹಂತದಲ್ಲಿದೆ. ಸನಿಹದಲ್ಲೇ ಮೀನುಗಾರರ ವಸತಿಗಳಿದ್ದು, ಸಮುದ್ರ ಕೊರೆತ ಮುಂದುವರಿದರೆ ಅವುಗಳಿಗೆ ಹಾನಿ ಸಂಭವಿಸುವ ಸಾಧ್ಯತೆ ಇದೆ.

ರೈಲು ಸಂಚಾರ ರದ್ದು

ಮಂಗಳೂರು: ಸುಬ್ರಹ್ಮಣ್ಯ-ಸಕಲೇಶಪುರ ನಡುವಿನ ಘಟ್ಟ ಪ್ರದೇಶದ ಎಡಕುಮೇರಿ ಮತ್ತು ಶಿರಿಬಾಗಿಲುಗಳಲ್ಲಿ ಭೂಕುಸಿದ ಉಂಟಾಗಿದ್ದರಿಂದ ಮಂಗಳವಾರ ಯಶವಂತಪುರ-ಕಣ್ಣೂರು ರೈಲು ಮತ್ತು ಯಶವಂತಪುರ-ಕಾರವಾರ ರೈಲು ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಬುಧವಾರವೂ ರೈಲ್ವೇ ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಕೊಚ್ಚಿ ಹೋದ ಮೋರಿ: ಕಬ್ಬಿನಾಲೆ- ಮುನಿಯಾಲು ಸಂಚಾರ ಸ್ಥಗಿತ

ಹೆಬ್ರಿ:
ಸಮೀಪದ ಮುದ್ರಾಡಿ ಗ್ರಾಮದ ಕಬ್ಬಿನಾಲೆಯಲ್ಲಿ ಮೋರಿ ಮಂಗಳವಾರ ಸುರಿದ ಭಾರಿ ಮಳೆಗೆ ಸಂಪೂರ್ಣ ಕೊಚ್ಚಿ ಹೊಗಿದ್ದು, ಕಬ್ಬಿನಾಲೆ ಮುನಿಯಾಲಿಗೆ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.ಸ್ಥಳೀಯರು ಬೈಕ್‌ಗಳನ್ನು ಕಷ್ಟದಲ್ಲಿ ದಾಟಿಸಿ ಬಿಡುತ್ತಿದ್ದ ದೃಶ್ಯ ಕಂಡು ಬಂತು. ಸ್ಥಳಕ್ಕೆ ಮುದ್ರಾಡಿ ಗ್ರಾಮ ಪಂಚಾಯತಿ ಅದ್ಯಕ್ಷ ಕಬ್ಬಿನಾಲೆ ಚಂದ್ರಶೇಖರ ಬಾಯರಿ ಮತ್ತು ಜಿಲ್ಲಾ ಪಂಚಾಯತಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ ಭೇಟಿ ನೀಡಿದ್ದು, ತಾತ್ಕಾಲಿಕವಾಗಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿ ಬಳಿಕ  ಶೀಘ್ರ ರಸ್ತೆ ಮತ್ತು ಮೋರಿ ದುರಸ್ತಿ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.ಸೀತಾನದಿ: ವ್ಯಕ್ತಿ ನೀರು ಪಾಲು

ಹೆಬ್ರಿ: ಇಲ್ಲಿನ ನಂದಲ ಹೆಬ್ಬಾಗಿಲ ಮನೆ ನಿವಾಸಿ ಕೃಷಿ ಕೂಲಿ ಕಾರ್ಮಿಕರಾದ ಶಂಕರ ಶೆಟ್ಟಿ ಎಂಬವರು ಸೀತಾನದಿ ಬ್ರಹ್ಮಸ್ಥಾನದ ಸಮೀಪದ ಸೋಮವಾರ ಸುರಿದ ಭಾರಿ ಮಳೆಯಿಂದ ರಸ್ತೆಗೆ ನೀರು ಬಂದಿದ್ದು, ರಸ್ತೆ ದಾಟುವಾಗ ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ಮಂಗಳವಾರ ಸಂಭವಿಸಿದೆ.

ಬಡವರಾದ ಇವರು ಕೂಲಿ ಕೆಲಸ ಮಾಡುತ್ತಿದ್ದು ಸೋಮವಾರ ಸಂಜೆ ಕೆಲಸ ಮುಗಿಸಿ ಅಂಗಡಿಯತ್ತ ತೆರಳಿದ್ದರು.ರಾತ್ರಿ 8ಗಂಟೆ ಸುಮಾರಿಗೆ ಸೀತಾನದಿಯಲ್ಲಿ ನೀರು ತುಂಬಿ ರಸ್ತೆಗೆ ಬಂದಿತ್ತು. ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಮನೆಯವರೆಲ್ಲ ಅಂಗಡಿ-ನದಿಯ ಬಳಿ ಹುಡುಕಿದರೂ ಪತ್ತೆಯಾಗಲಿಲ್ಲ. ಮಂಗಳವಾರ ನದಿಯಲ್ಲಿ ಶಂಕರ ಶೆಟ್ಟಿಯವರ ಮೃತದೇಹ ಪತ್ತೆಯಾಗಿದೆ. ಪತ್ನಿ, ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳು ಇದ್ದಾರೆ.ಕಾರ್ಕಳ ತಹಶೀಲ್ದಾರ್ ಜಗನ್ನಾಥ ರಾವ್, ಕಂದಾಯ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ್ದಾರೆ. ಇದೇ ಜಾಗದಲ್ಲಿ ಟಿಪ್ಪರ್ ಮಗುಚಿ ಮೃತಪಟ್ಟದ್ದು ಬಿಟ್ಟರೆ ಇಂಹತ ಘಟನೆ ಇದೇ ಮೊದಲು ಎಂದು ಸ್ಥಳೀಯರಾದ ಸೀತಾನದಿ ವಿಜೇಂದ್ರ ಶೆಟ್ಟಿ ಪತ್ರಿಕೆಗೆ ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.