ಮಂಗಳವಾರ, ಜನವರಿ 21, 2020
28 °C

ಕರುಣೆ, ಪ್ರೀತಿ ಹಂಚುವ ಕ್ರಿಸ್‌ಮಸ್‌

ಪ್ರಜಾವಾಣಿ ವಾರ್ತೆ/ ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

ವಿಜಾಪುರ:  ‘ಹುಟ್ಯಾನ ಕ್ರಿಸ್ತ ಗೋದಲಿಯಾಗ

                 ಬಂಗಾರ ಯಾಕ ತಂದಿರೋ

                 ಇದ್ದಾನ ಕ್ರಿಸ್ತ ಹೃದಯದೊಳಗ

                ಚಿನ್ನ ಹಂಚಿರೋ...’

-ಹೀಗೆ ಹಾಡುತ್ತ ಆ ಮಕ್ಕಳು ಸಾಂತಾ ಕ್ಲಾಸ್‌ನೊಂದಿಗೆ ನರ್ತಿಸುತ್ತಿದ್ದರು. ಏಸುಕ್ರಿಸ್ತನ ಜನನ, ಕ್ರಿಸ್‌ಮಸ್‌ನ ತಿರುಳು, ಆತನ ಸಂದೇಶಗಳನ್ನು ಹಾಡಿನ ರೂಪದಲ್ಲಿ ಪ್ರಸ್ತುತ ಪಡಿಸಲಾಯಿತು.ವಿಜಾಪುರದ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅರ್ಧಗಂಟೆಗೂ ಹೆಚ್ಚುಕಾಲ ನಡೆದ ಈ ಕಾರ್ಯಕ್ರಮ ಸಂತಸದ ಹೊನಲನ್ನೇ ಹರಿಸಿತು. ಆ ಎಲ್ಲ ಮಕ್ಕಳ ಒಳಿತಿಗಾಗಿ ಫಾದರ್‌ ಡಾಯನ್‌ ವಾಸ್‌, ಫಾದರ್‌ ಸ್ಟಿವನ್‌ ಇತರರು ಪ್ರಾರ್ಥನೆ ಸಲ್ಲಿಸಿದರು. ಬೈಬಲ್‌ ಪಠಣದ ನಂತರ ಮಕ್ಕಳಿಗೆ ಉಡುಗೊರೆ ನೀಡಿ ಆ ಸಾಂತಾ ಕ್ಲಾಸ್‌ ಮುಂದಿನ ಮನೆಗೆ ಹೊರಟು ಹೋದ.ಹೌದು, ಕ್ರಿಸ್‌ಮಸ್‌ ಸಮೀಪಿಸುತ್ತಿದ್ದಂತೆ ವಿಜಾಪುರದ ಕ್ರೈಸ್ತ ಬಾಂಧವರ ಮನೆಯಲ್ಲಿ ಸಂಭ್ರಮ ಮನೆ ಮಾಡುತ್ತದೆ. ಸಾಂತಾಕ್ಲಾಸ್‌ ವೇಷಧಾರಿ ವ್ಯಕ್ತಿ ಗಾಯನ ತಂಡದೊಂದಿಗೆ ಪ್ರತಿ ಮನೆಗೂ ಭೇಟಿ ನೀಡಿ ಮನೆಯವರು–ಮಕ್ಕಳೊಂದಿಗೆ ಹಾಡಿ–ಕುಣಿಯುತ್ತಾನೆ. ಆ ಮನೆಯಲ್ಲಿ ಸಂಭ್ರಮ ಉಕ್ಕಿಸುತ್ತಾನೆ.ಈ ಬಾರಿ ವಿಟಸ್‌ ಜೋಸೆಫ್‌ ಸಾಂತಾ ಕ್ಲಾಸ್‌ ಪಾತ್ರ ನಿರ್ವಹಿಸಿದರು. ಸಂತ ಅನ್ನಮ್ಮ ದೇವಸ್ಥಾನದ ಗಾಯನ ಮಂಡಳಿಯ ಸಿಸ್ಟರ್‌ ಲೂಸಿ, ಆಶಾ ಪೀಟರ್‌, ಪಾಲ್‌ ದಾಸ್, ಪ್ರಫುಲ್ಲಾ ಮೇರಿ, ಸಿಸ್ಟರ್‌ ಅನಿತಾ, ಸಿಸ್ಟರ್‌ ಫಿಲೋಮಿನಾ, ನಿತಿನ್‌ ಸೇರಿದಂತೆ 20ಕ್ಕೂ ಹೆಚ್ಚು ಜನರು ಈ ತಂಡದಲ್ಲಿದ್ದರು. ಕ್ಯಾಥೋಲಿಕ್‌ ಪಂತದ 52 ಮನೆಗಳು ವಿಜಾಪುರದಲ್ಲಿದ್ದು, ಆ ಎಲ್ಲ ಮನೆಗಳಲ್ಲಿ ‘ಕ್ಯಾರೆಲ್‌ ಸಿಂಗಿಂಗ್‌’ ಪ್ರಾರ್ಥನೆ, ಬೈಬಲ್‌ ಪಠಣ ಮತ್ತಿತರ ಕಾರ್ಯಕ್ರಮಗಳು ಕ್ರಿಸ್‌ಮಸ್‌ ಮುನ್ನ ನಡೆದವು.‘ಈ ಸಾಂತಾ ಕ್ಲಾಸ್‌ ಎಂಬುದು ಸಂತ ನಿಕೋಲಾಸ್‌ ಎಂಬ ಪಾದ್ರಿಯ ಅಪಭ್ರಂಶ ಪದ. ಸಾಂತಾ ಕ್ಲಾಸ್‌ಗೂ ಕ್ರಿಸ್‌ಮಸ್‌ಗೂ ಸಂಬಂಧವೇ ಇಲ್ಲ. ಮಾರುಕಟ್ಟೆಯೇ ನಮ್ಮನ್ನು ಆಳುತ್ತಿರುವುದರಿಂದ ಕ್ರಿಸ್‌ಮಸ್‌ ಎಂದರೆ ಸಾಂತಾ ಕ್ಲಾಸ್‌ ಎಂದಾಗಿದೆ’ ಎಂದು ಫಾದರ್‌ ಖೇದ ವ್ಯಕ್ತಪಡಿಸಿದರು.ಕೊಟ್ಟಿಗೆ–ನಕ್ಷತ್ರ

ಏಸು ಕ್ರಿಸ್ತ ಹುಟ್ಟಿದ್ದು ಡಿಸೆಂಬರ್‌ 25ರಂದು. ಈಗ ಇಸ್ರೇಲ್‌ನಲ್ಲಿರುವ ಬೆತ್ಲಹೆಮ್‌ ಊರಿನ ದನದ ಕೊಟ್ಟಿಗೆಯಲ್ಲಿ. ಏಸುವಿನ ಜಯಂತಿಯೇ ಕ್ರಿಸ್‌ಮಸ್‌ ಹಬ್ಬ.  ದನದ ಕೊಟ್ಟಿಗೆ ಮತ್ತು ನಕ್ಷತ್ರ ಇವು ಕ್ರಿಸ್‌ಮಸ್‌ನ ಸಂಕೇತಗಳು.  ಕ್ರೈಸ್ತ ಸಮುದಾಯದ ಪ್ರತಿಯೊಬ್ಬರ ಮನೆ ಎದುರು, ಚರ್ಚ್‌, ಕ್ರೈಸ್ತ ಸಮುದಾಯದ ಸಂಸ್ಥೆಗಳ ಆವರಣದಲ್ಲಿ ಕೊಟ್ಟಿಗೆ (ಗೋದಲಿ) ನಿರ್ಮಿಸಲಾಗುತ್ತದೆ. ಕ್ರಿಸ್‌ಮಸ್‌ನ ಬಹುದೊಡ್ಡ ಆಕರ್ಷಣೆ ಇದು.‘ಗೋದಲಿಯಲ್ಲಿ ಮಗು ಏಸು, ಕೈ ಮಾಡಿ ಸ್ವಾಗತಿಸುವ ತಾಯಿ–ಮೇರಿ, ತಂದೆ–ಜೋಸೆಫ್‌, ಕುರುಬರು, ಜ್ಞಾನಿಗಳ ಮೂರ್ತಿಗಳಿರುತ್ತವೆ. ಇದು ಮುಗ್ದತೆ, ತೆರೆದ ಮನಸ್ಸು ಮತ್ತು ಸ್ವಾಗತಿಸುವ ಮನೋಭಾವದ ಸಂಕೇತ. ನಕ್ಷತ್ರ ಎಂಬುದು ಬೆಳಕು ನೀಡಿ ದಾರಿ ತೋರುವ ಸಂಕೇತ’ ಎಂಬುದು ಫಾದರ್‌ ಜಿರಾಲ್ಡ್‌ ಡಿಸೋಜಾ ಅವರ ವಿವರಣೆ.ಕ್ರಿಸ್‌ಮಸ್‌ಗೂ ಒಂದು ತಿಂಗಳ ಮುನ್ನವೇ ‘ಪ್ರಭು ಕ್ರಿಸ್ತರ ಆಗಮನದ ತಯಾರಿ’ ನಡೆಯುತ್ತದೆ. ಪ್ರಾರ್ಥನೆ, ತ್ಯಾಗ, ದಾನ ಮತ್ತು ಧರ್ಮಗಳು ಆ ತಯಾರಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.  ಈ ಅವಧಿಯಲ್ಲಿ ಸಮುದಾಯದವರೆಲ್ಲ ಒಟ್ಟಾಗಿ ಸೇರಿ ವಿಶೇಷ ಪ್ರಾರ್ಥನೆ, ಧ್ಯಾನ ಮಾಡುತ್ತಾರೆ. ಅದಕ್ಕಾಗಿ ಧ್ಯಾನಕೂಟಗಳೂ ಇವೆ.ಫಾದರ್‌;ಸಿಸ್ಟರ್‌...

‘ಫಾದರ್‌ ಮತ್ತು ಸಿಸ್ಟರ್‌’ ಇವು ಕ್ರೈಸ್ತ ಸಮುದಾಯದಲ್ಲಿ ಕೇಳಿ ಬರುತ್ತಿರುವ ಹೆಸರು. ಇವರಿಗೆ ಸಮಾಜದಲ್ಲಿ ವಿಶಿಷ್ಟ ಸ್ಥಾನಮಾನವೂ ಇದೆ. ಹಿಂದೂ ಧರ್ಮದಲ್ಲಿ ವೈಯಕ್ತಿಕ ಬದುಕು ತ್ಯಾಗ ಮಾಡಿ ಸನ್ಯಾಸ ದೀಕ್ಷೆ ಸ್ವೀಕರಿಸುವಂತೆ ಕ್ರಿಸ್ತ್‌ ಸಮುದಾಯದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸುವ ಪುರುಷರಿಗೆ ಫಾದರ್‌ ಮತ್ತು ಸ್ತ್ರೀಯರಿಗೆ ಸಿಸ್ಟರ್‌ ಎಂದು ಕರೆಯುತ್ತಾರೆ.ಫಾದರ್‌ಗಳಿಗೆ 14 ವರ್ಷಗಳ ತರಬೇತಿ ಇದೆ. ಆಧ್ಯಾತ್ಮಿಕ ತರಬೇತಿ, ತತ್ವಶಾಸ್ತ್ರದ ಅಧ್ಯಯನ. ಇಲ್ಲಿ ಹಿಂದೂ ಧರ್ಮ ಸೇರಿದಂತೆ ಎಲ್ಲ ಧರ್ಮಗಳ ಅಧ್ಯಯನ ನಡೆಸಲಾಗುತ್ತದೆ. ಈ ತರಬೇತಿಯೊಂದಿಗೆ ಅವರು ಶಿಕ್ಷಣವನ್ನೂ ಪಡೆಯುತ್ತಾರೆ. ಕ್ರೈಸ್ತ ಧರ್ಮದ ಬಗೆಗೆ ದೈವಶಾಸ್ತ್ರ, ಬೈಬಲ್‌ ಅಧ್ಯಯನ ನಡೆಸುತ್ತಾರೆ. ಅದಾದ ನಂತರ ಅವರಿಗೆ ‘ಗುರುದೀಕ್ಷೆ’ ದೊರೆಯುತ್ತದೆ.ಸಿಸ್ಟರ್‌ಗಳಿಗೆ ಐದು ವರ್ಷದ ತರಬೇತಿ ನೀಡಲಾಗುತ್ತದೆ. ಅವರೂ ತಮ್ಮ ಜೀವನವನ್ನು ದೇವರಿಗೆ ಸಮರ್ಪಿಸಿ ಬಿಟ್ಟಿರುತ್ತಾರೆ. ಬಡತನ, ಬ್ರಹ್ಮಚರ್ಯೆ, ವಿಧೇಯತೆಯ ವ್ರತವನ್ನು ಅವರು ಪಾಲಿಸಬೇಕು.ಫಾದರ್‌–ಸಿಸ್ಟರ್‌ಗಳಿಗೆ ವೇತನ, ವೈಯಕ್ತಿಕ ಆದಾಯ–ಬ್ಯಾಂಕ್‌ ಖಾತೆ ಎಂಬುದು ಇರುವುದಿಲ್ಲ. ಇದು ಬಡತನದ ವ್ರತ ಆಚರಣೆಯ ಪರಿ. ಅವರ ಸಮುದಾಯಕ್ಕಾಗಿ ಇರುವವರು; ಸಮುದಾಯವೇ ಅವರನ್ನು ಸಾಕುತ್ತದೆ. ಅವರು ವಿವಾಹ ಆಗುವುದಿಲ್ಲ. ತಮ್ಮ ಸಂಸ್ಥೆ ನಿಯೋಜಿಸುವ ಸ್ಥಳಕ್ಕೆ ಹೋಗಲೇಬೇಕು. ಆ ಮೂಲಕ ವಿಧೇಯತೆಯ ವ್ರತ ಪಾಲಿಸಬೇಕು. ಫಾದರ್‌ಗಳು ಬಿಳಿ ಸಫಾರಿ ಬಟ್ಟೆ ಧರಿಸಿದರೆ, ಸಿಸ್ಟರ್‌ಗಳು ಕಂದು, ಬಿಳಿ, ನೀಲಿ ಅಂಚಿರುವ ಬಿಳಿ ಸೀರೆಗಳನ್ನು ಸಮವಸ್ತ್ರವಾಗಿ ಧರಿಸುತ್ತಾರೆ.ವಿಜಾಪುರ ಜಿಲ್ಲೆಯಲ್ಲಿ ಕ್ಯಾಥೋಲಿಕ್‌ ಪಂತಕ್ಕೆ ಸೇರಿರುವ 8 ಜನ ಫಾದರ್‌ಗಳು, 50 ಜನ ಸಿಸ್ಟರ್‌ಗಳು ಇದ್ದಾರೆ. ಜಿಲ್ಲೆಯಲ್ಲಿರುವ ಕ್ರೈಸ್ತ್‌ ಸಂಸ್ಥೆಗಳ ಆಸ್ಪತ್ರೆ, ಸಮಾಜ ಸೇವಾ ಕೇಂದ್ರಗಳಲ್ಲಿ ಅವರೆಲ್ಲ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಈ ಸಮುದಾಯದ ವಿಜಾಪುರ ಪ್ರಾಂತದ ಮುಖ್ಯಸ್ಥ ಫಾದರ್‌ ಡಾಯನ್‌ ವಾಸ್‌ ಮಾಹಿತಿ ನೀಡಿದರು.ಚರ್ಚ್‌ಗಳಲ್ಲಿ ಸಂಭ್ರಮ

ಕ್ರೈಸ್ತರಲ್ಲಿ ಕ್ಯಾಥೋಲಿಕ್‌ ಮತ್ತು ಪ್ರೊಟೆಸ್ಟಂಟ್‌ ಎಂಬ ಎರಡು ಪಂಗಡಗಳಿವೆ. ಕ್ಯಾಥೋಲಿಕ್‌ ಪಂಗಡದವರು ಸಂತ ಅನ್ನಮ್ಮ ಚರ್ಚ್‌ನಲ್ಲಿ ಹಾಗೂ ಪ್ರೊಟೆಸ್ಟಂಟ್‌ ಪಂಗಡದವರು ಸಿಎಸ್ಐ ಚರ್ಚ್‌ನಲ್ಲಿ ಕ್ರಿಸ್‌ಮಸ್ ಕಾರ್ಯಕ್ರಮ ಆಚರಿಸುವರು. ಪಂಗಡ ಬೇರೆಯಾಗಿದ್ದರೂ ಕ್ರಿಸ್‌ಮಸ್‌ ಆಚರಣೆಯ ಬಗೆ ಒಂದೇ. ವಿಜಾಪುರದಲ್ಲಿ ಕ್ಯಾಥೋಲಿಕ್‌ನ 52 ಮನೆಗಳಿದ್ದರೆ, ಪ್ರೊಟೆಸ್ಟಂಟ್‌ನ 110 ಮನೆಗಳಿವೆ.ಪ್ರೀತಿ, ಸೇವೆ... ಸಂದೇಶ

ಪ್ರೀತಿ, ಸೇವೆ, ಕ್ಷಮೆ, ಅನುಕಂಪ ಇದು ಏಸುಕ್ರಿಸ್ತ ಜಯಂತಿಯ ಮುಖ್ಯ ಉದ್ದೇಶ. ಹಂಚುವ ಮನೋಭಾವ ಕ್ರೈಸ್ತರ ಬಹುದೊಡ್ಡ ಗುಣ.

–ಫಾದರ್ ಡಾಯನ್ ವಾಸ್, ಕ್ಯಾಥೋಲಿಕ್‌ ಪಂತದ ವಿಜಾಪುರ ಪ್ರಾಂತದ ಮುಖ್ಯಸ್ಥ.

ಪ್ರತಿಕ್ರಿಯಿಸಿ (+)