ಬುಧವಾರ, ಮೇ 12, 2021
17 °C
ಮೆಯೋಹಾಲ್ ಸಮೀಪ ಕಾರು ಅಪಘಾತ ಪ್ರಕರಣ

ಕರ್ತವ್ಯ ಲೋಪ: ಇನ್‌ಸ್ಪೆಕ್ಟರ್ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೆಯೋಹಾಲ್ ಸಮೀಪ ಕಾರು ಮತ್ತು ಆಟೊ ನಡುವೆ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ಬೇಗನೆ ಬಂಧಿಸದೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಅಶೋಕನಗರ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಬಿ.ಜಿ.ರತ್ನಾಕರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ.ಸಲೀಂ ಮಂಗಳವಾರ ಆದೇಶ ಹೊರಡಿಸಿದ್ದಾರೆ.`ಘಟನೆ ನಂತರ ರತ್ನಾಕರ್ ಅವರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೂಕ್ತ ಸೆಕ್ಷನ್‌ನಡಿ ಪ್ರಕರಣ ದಾಖಲಿಸಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಅಲ್ಲದೇ, ಪ್ರಕರಣದ ಗಂಭೀರತೆಯನ್ನು ಅರಿಯುವಲ್ಲಿ ಅವರು ವಿಫಲರಾಗಿದ್ದಾರೆ ಮತ್ತು ಹಲವು ಸುಳಿವುಗಳಿದ್ದರೂ ಆರೋಪಿಯನ್ನು ಕೂಡಲೇ ಬಂಧಿಸದೆ ನಿರ್ಲಕ್ಷ್ಯ ತೋರಿದ್ದಾರೆ. ತನಿಖಾ ಪ್ರಕ್ರಿಯೆಯಲ್ಲೂ ಲೋಪ ಎಸಗಿದ್ದಾರೆ. ಈ ಕಾರಣಗಳಿಗಾಗಿ ಅವರನ್ನು ಅಮಾನತು ಮಾಡಲಾಗಿದೆ' ಎಂದು ಸಲೀಂ `ಪ್ರಜಾವಾಣಿ'ಗೆ ತಿಳಿಸಿದರು.`ಘಟನೆಯ ಗಂಭೀರತೆ ಅರಿತು ಐಪಿಸಿ ಸೆಕ್ಷನ್ 304ರ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ರತ್ನಾಕರ್ ಅವರಿಗೆ ಆದೇಶಿಸಿದ್ದೆ. ಆದರೆ, ಅವರು ಐಪಿಸಿ ಸೆಕ್ಷನ್ 304ಎ ಅನ್ವಯ ಪ್ರಕರಣ ದಾಖಲಿಸಿದ್ದರು. ಆರೋಪಿ ರಾಜೇಶ್ ಎಲ್.ರೆಡ್ಡಿಯನ್ನು ಘಟನೆ ನಡೆದ ಕೆಲವೇ ತಾಸುಗಳಲ್ಲಿ ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರೆ ಆತ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಪಾನಮತ್ತನಾಗಿದ್ದನೇ ಅಥವಾ ಇಲ್ಲವೇ ಎಂಬ ಬಗ್ಗೆ ಖಚಿತ ಸುಳಿವು ಸಿಗುತ್ತಿತ್ತು.ಆದರೆ, ಘಟನೆ ನಡೆದು 36 ತಾಸು ಕಳೆದರೂ ರತ್ನಾಕರ್ ಅವರು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಿಲ್ಲ' ಎಂದು ಸಲೀಂ ಹೇಳಿದರು.ಆರೋಪಿಯು ಅಪಘಾತಕ್ಕೀಡಾದ ಕಾರಿನಲ್ಲಿ ತನ್ನ ಎರಡು ಮೊಬೈಲ್‌ಗಳನ್ನು ಬಿಟ್ಟು ಹೋಗಿದ್ದ. ಇನ್‌ಸ್ಪೆಕ್ಟರ್ ಆ ಮೊಬೈಲ್‌ಗಳ ಸುಳಿವು ಆಧರಿಸಿ ಆರೋಪಿಯನ್ನು ಬೇಗನೆ ಪತ್ತೆ ಹಚ್ಚಿ ಬಂಧಿಸಬಹುದಿತ್ತು. ಆದರೆ, ಹಾಗೆ ಮಾಡದ ಅವರು ಭಾನುವಾರ ಆರ್‌ಟಿಒ ಕಚೇರಿಗಳಿಗೆ ರಜೆ ಇರುವುದರಿಂದ ಅಪಘಾತಕ್ಕೀಡಾದ ಕಾರಿನ ಮಾಲೀಕರ ಬಗ್ಗೆ ಮಾಹಿತಿ ಸಿಗುವುದಿಲ್ಲವೆಂಬ ಕಾರಣ ನೀಡಿ ಆರೋಪಿಯನ್ನು ಬಂಧಿಸಲು ವಿಳಂಬ ಮಾಡಿದರು. ಈ ರೀತಿ ಇನ್‌ಸ್ಪೆಕ್ಟರ್ ಹಲವು ಹಂತಗಳಲ್ಲಿ ಕರ್ತವ್ಯ ಲೋಪ ಎಸಗಿದ ಕಾರಣಕ್ಕಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.ನ್ಯಾಯಾಂಗ ಬಂಧನ

ಆರೋಪಿ ರಾಜೇಶ್‌ನನ್ನು ಅಶೋಕನಗರ ಪೊಲೀಸರು ಮಂಗಳವಾರ ರಾತ್ರಿ ನಗರದ 11ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದರು.ಈ ವೇಳೆ ಆರೋಪಿ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಯನ್ನು ಬುಧವಾರದವರೆಗೆ (ಜೂ.5) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು.ಅಲ್ಲದೇ, ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು. ಬಳಿಕ ರಾಜೇಶ್‌ನನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.