ಭಾನುವಾರ, ಮಾರ್ಚ್ 7, 2021
18 °C

ಕರ್ನಾಟಕದಲ್ಲಿ ಒಲಿಂಪಿಕ್ಸ್‌ ಆಂದೋಲನದ ಮೊದಲ ಹೆಜ್ಜೆ ಗುರುತು...

ಪಿ.ಜಿ. ವಿಜು ಪೂಣಚ್ಚ Updated:

ಅಕ್ಷರ ಗಾತ್ರ : | |

ಕರ್ನಾಟಕದಲ್ಲಿ ಒಲಿಂಪಿಕ್ಸ್‌ ಆಂದೋಲನದ ಮೊದಲ ಹೆಜ್ಜೆ ಗುರುತು...

ಕರ್ನಾಟಕದಲ್ಲಿ ಅರ್ಧ ಶತಮಾನಕ್ಕೂ ಹಿಂದೆ ಒಲಿಂಪಿಕ್ಸ್‌ ಆಂದೋಲನ ಗರಿ ಬಿಚ್ಚಿತು. ‘ಪ್ರಜಾವಾಣಿ’ ಕಟ್ಟಡದಲ್ಲಿ ಹುಟ್ಟು ಪಡೆದ ರಾಜ್ಯ ಒಲಿಂಪಿಕ್ಸ್‌ ಸಂಸ್ಥೆ ಇವತ್ತು ಹೆಮ್ಮರವಾಗಿ ಬೆಳೆದು ನಿಂತಿದೆ.

ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳ ಬೆಳವಣಿಗೆಗೆ ಆ ದಿನಗಳಲ್ಲಿ ಕೆ.ಎ.ನೆಟ್ಟಕಲ್ಲಪ್ಪನವರು ನೀಡಿದ ಕೊಡುಗೆಯ ಕುರಿತು ಹಿರಿಯ ಕ್ರೀಡಾಳುಗಳೆಲ್ಲಾ ಇವತ್ತೂ ತುಂಬು ಹೃದಯದಿಂದ ಮಾತನಾಡುತ್ತಾರೆ. ಈ ಕುರಿತು ಪಿ.ಜಿ. ವಿಜು ಪೂಣಚ್ಚ  ಅವರು ಇಲ್ಲಿ ಬರೆದಿದ್ದಾರೆ.

ಒಲಿಂಪಿಕ್ಸ್‌ ಆಂದೋಲನ ಇವತ್ತು ಮನುಕುಲವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಶಕ್ತಿಯಾಗಿ ಬೆಳೆದು ನಿಂತಿದೆ. ಈ ಆಂದೋಲನಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿನ ಆರಂಭದ ಹೆಜ್ಜೆಗುರುತುಗಳೂ ಕುತೂಹಲಕಾರಿ.ಭಾರತದಲ್ಲಿ ಒಲಿಂಪಿಕ್ಸ್‌  ಆಂದೋಲನಕ್ಕೆ ಸುಮಾರು 90 ವರ್ಷಗಳ ಹಿಂದೆಯೇ ಚಾಲನೆ ಸಿಕ್ಕಿತ್ತು. ದೊರಾಬ್‌ಜೀ ಟಾಟಾ ಅವರ ಆರ್ಥಿಕ ನೆರವಿನಿಂದ ಭಾರತದ ಕೆಲವು ಕ್ರೀಡಾಪಟುಗಳು 1920 ಮತ್ತು 24ರಲ್ಲಿ ಕ್ರಮವಾಗಿ ಬೆಲ್ಜಿಯಂನ ಆಂಟ್ವರ್ಪ್‌ ಮತ್ತು ಫ್ರಾನ್ಸ್‌ನ ಪ್ಯಾರಿಸ್‌ ನಗರಗಳಲ್ಲಿ ನಡೆದ ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡಿದ್ದರು.  1927ರಲ್ಲಿ ಅಧಿಕೃತವಾಗಿ ಭಾರತ ಒಲಿಂಪಿಕ್‌ ಸಂಸ್ಥೆ ಹುಟ್ಟು ಪಡೆಯಿತು.ಅದಕ್ಕೆ ದೊರಾಬ್‌ಜಿ ಟಾಟಾ ಅಧ್ಯಕ್ಷರಾಗಿದ್ದರೆ, ವೈಎಂಸಿಎಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ನೊರೆನ್‌ ಮಹಾಕಾರ್ಯದರ್ಶಿ ಆಗಿದ್ದರು. 1928ರಲ್ಲಿ ಪಟಿಯಾಲದ ಮಹಾರಾಜ ಭೂಪಿಂದರ್‌ ಸಿಂಗ್‌ ಅಧ್ಯಕ್ಷರಾದರೆ, 1938 ರಿಂದ 60ರವರೆಗೆ ಮಹಾರಾಜ ಯದವೇಂದ್ರ ಸಿಂಗ್‌ ಅಧ್ಯಕ್ಷರಾಗಿದ್ದರು.ಸ್ವಾತಂತ್ರ್ಯಪೂರ್ವದ ಮೈಸೂರು ರಾಜ್ಯದಲ್ಲಿ 1944ರ ಸುಮಾರಿಗೇ ಶಿಕ್ಷಣ ಇಲಾಖೆಯ ವತಿಯಿಂದ ಕ್ರೀಡಾಕೂಟಗಳು ನಡೆಯುತ್ತಿದ್ದವು.  ದಿವಾನ್‌ ರಾಮಸ್ವಾಮಿ ಮೊದಲಿಯಾರ್‌ ಅವರ ಮಾರ್ಗದರ್ಶನದಲ್ಲಿ ಮೈಸೂರು ಒಲಿಂಪಿಕ್‌ ಕೌನ್ಸಿಲ್‌ ತನ್ನ ಚಟುವಟಿಕೆಗಳನ್ನು ನಡೆಸುತಿತ್ತು. ಆದರೆ ಈ ಕೌನ್ಸಿಲ್‌ಗೂ ಭಾರತ ಒಲಿಂಪಿಕ್‌ ಸಂಸ್ಥೆಗೂ ಯಾವುದೇ ಸಂಬಂಧ ಇರಲಿಲ್ಲ.

1952ರಲ್ಲಿ  ಮದ್ರಾಸಿನಲ್ಲಿ ನಡೆದ ಭಾರತ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಬೆಂಗಳೂರಿಗೆ ಬಂದ ಕೆಲವು ಕ್ರೀಡಾಪಟುಗಳು ಮತ್ತು ಕ್ರೀಡಾಡಳಿತಗಾರರು ಮೈಸೂರು ರಾಜ್ಯ ಒಲಿಂಪಿಕ್‌ ಸಂಸ್ಥೆಯನ್ನು ಹುಟ್ಟು ಹಾಕುವ ಯತ್ನ ನಡೆಸಿದರು.ಆಗ ಮದ್ರಾಸ್‌ನಲ್ಲಿ ನಡೆದ ಭಾರತ ಒಲಿಂಪಿಕ್‌ ಕೂಟದಲ್ಲಿ ಭಾಗವಹಿಸಿ ಪದಕ ಗೆದ್ದ ಲಿಂಗಪ್ಪನವರು ಹೇಳುವಂತೆ ‘ಬೆಂಗಳೂರಿನಲ್ಲಿ ಒಲಿಂಪಿಕ್‌ ಸಂಸ್ಥೆಯನ್ನು ಹುಟ್ಟು ಹಾಕುವುದಕ್ಕೆ ಸಂಬಂಧಿಸಿದಂತೆ ಹಲವು ಯುವಜನರು ಸೇರಿ ಚಿಂತನೆ ನಡೆಸಿದ್ದರು. ಅವರಲ್ಲಿ ಕೆ.ಎ.ನೆಟ್ಟಕಲ್ಲಪ್ಪ ಅವರೂ ಒಬ್ಬರು’.

ಆ ದಿನಗಳಲ್ಲಿ ಕ್ರೀಡಾ ಪ್ರೋತ್ಸಾಹಕರಾಗಿ ಅಪಾರ ಜನಮನ್ನಣೆ ಪಡೆದಿದ್ದ ನೆಟ್ಟಕಲ್ಲಪ್ಪ ಅವರನ್ನು ಭಾರತ ಒಲಿಂಪಿಕ್‌ ಸಂಸ್ಥೆಯ ಅಧ್ಯಕ್ಷ ಮಹಾರಾಜ ಯದವೇಂದ್ರ ಸಿಂಗ್‌ ಅವರು ಸಂಪರ್ಕಿಸಿ ಅಧಿಕೃತವಾಗಿ ಒಲಿಂಪಿಕ್ ಸಂಸ್ಥೆಯನ್ನು ಸ್ಥಾಪಿಸಲು ಸಲಹೆ ನೀಡಿದರು.ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ‘ಪ್ರಜಾವಾಣಿ’ ಕಟ್ಟಡದ ಕೊಠಡಿಯೊಂದರಲ್ಲಿ 1958ರ ಫೆಬ್ರುವರಿ 23ರಂದು ಸಭೆ ನಡೆಯಿತು. ಅದರಲ್ಲಿ ರಾಜ್ಯ ಫುಟ್‌ಬಾಲ್‌ ಸಂಸ್ಥೆಯ ಪಿ.ಐ.ಜೋಸೆಫ್‌, ವಾಲಿಬಾಲ್‌ ಸಂಸ್ಥೆಯ ಆರ್‌.ಕೃಷ್ಣಪ್ಪ, ಕೊಕ್ಕೊ ಸಂಸ್ಥೆಯ ಜಯರಾಮ ರೆಡ್ಡಿ, ಕಬಡ್ಡಿ ಸಂಸ್ಥೆಯ ಸಿ.ಎಂ.ರಾಮಕೃಷ್ಣ ರಾವ್‌, ವೇಟ್‌ಲಿಫ್ಟಿಂಗ್‌ ಸಂಸ್ಥೆಯ ಪಿ.ಎಂ.ನಾರಾಯಣ ಸ್ವಾಮಿ, ಅಥ್ಲೆಟಿಕ್‌ ಸಂಸ್ಥೆಯ ಎ.ಆರ್‌.ಚಿಕ್ಕಪಾಪಯ್ಯ, ಬ್ಯಾಸ್ಕೆಟ್‌ಬಾಲ್‌ ಸಂಸ್ಥೆಯ ಎನ್‌.ಗಂಗಯ್ಯ, ಕುಸ್ತಿ ಸಂಸ್ಥೆಯ ಎಂ.ವಿ.ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.

ಆ ಸಭೆಯಲ್ಲಿಯೇ ಮೈಸೂರು ರಾಜ್ಯ ಒಲಿಂಪಿಕ್‌ ಸಂಸ್ಥೆ ಹುಟ್ಟು ಪಡೆಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಆರ್‌. ಶ್ರೀನಿವಾಸನ್‌ ಅಧ್ಯಕ್ಷರಾಗಿಯೂ, ಮೇಯರ್‌ ಜೀನಾಬಾಯ್‌ ದೇವಿದಾಸ್‌ ಉಪಾಧ್ಯಕ್ಷರಾಗಿಯೂ, ಚಿಕ್ಕಪಾಪಯ್ಯ ಮಹಾ ಕಾರ್ಯದರ್ಶಿಯಾಗಿಯೂ, ವಿ.ಬೈರಪ್ಪ ಖಜಾಂಚಿಯಾಗಿಯೂ ನೇಮಕ ಗೊಂಡರು. ಮೈಸೂರು ಪ್ರಾಂತ್ರ್ಯದ ಕೊನೆಯ ಮಹಾರಾಜರೂ, ಆ ಕಾಲದಲ್ಲಿ ಮೈಸೂರು ರಾಜ್ಯದ ರಾಜ್ಯಪಾಲರೂ ಆಗಿದ್ದ ಜಯಚಾಮ ರಾಜೇಂದ್ರ ಒಡೆಯರ್‌ ಅವರು ಈ ಸಂಸ್ಥೆಗೆ ಮಹಾಪೋಷಕರಾಗಿರಲು ಒಪ್ಪಿಕೊಂಡರು.ಅದೇ ಸಂದರ್ಭದಲ್ಲಿ ರಾಜ್ಯ ಒಲಿಂಪಿಕ್‌ ಸಂಸ್ಥೆಯ ನೀತಿ ನಿಯಮಾವಳಿ ರಚನಾ ಸಮಿತಿಯಲ್ಲಿದ್ದ ನೆಟ್ಟಕಲ್ಲಪ್ಪ, ಪಿ.ಶಿವಶಂಕರ್‌, ಕ್ಯಾಪ್ಟನ್‌ ಎಂ.ಜಿ.ವಿಜಯಸಾರಥಿ ಮತ್ತು ಪಿ.ಐ.ಜೋಸೆಫ್‌ ರಾಜ್ಯದಲ್ಲಿ ಈ ಸಂಘಟನೆಗೆ ಭದ್ರ ಅಡಿಪಾಯ ಹಾಕಿದರು.ನೆಟ್ಟಕಲ್ಲಪ್ಪನವರು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಗುಂಪಿನ ನಿರ್ದೇಶಕರಾಗಿದ್ದುದರಿಂದ ‘ಪ್ರಜಾವಾಣಿ’ಯ ಕಟ್ಟಡದಲ್ಲೇ ನೂತನ ಒಲಿಂಪಿಕ್‌ ಸಂಸ್ಥೆಯ ಕಚೇರಿಗಾಗಿ ಒಂದು ಕೊಠಡಿಯನ್ನು ನೀಡಿದರು.

ರಾಜ್ಯ ಒಲಿಂಪಿಕ್‌ ಸಂಸ್ಥೆ ಬಹುಕಾಲ ‘ಪ್ರಜಾವಾಣಿ’ಯ ಕಟ್ಟಡದಲ್ಲೇ ತನ್ನ ಚಟುವಟಿಕೆಗಳನ್ನು ನಡೆಸಿತು. ನಂತರ ಅದರ ಕಚೇರಿ ಮೇಯೊಹಾಲ್‌ನಲ್ಲಿ, ಹಲಸೂರಿನಲ್ಲಿದ್ದ ಜೀನಾಬಾಯ್‌ ದೇವಿದಾಸ್‌ ಅವರ ಮಾಲೀಕತ್ವದ ಕಟ್ಟಡದಲ್ಲಿ ಕೆಲ ಕಾಲ ಇತ್ತು. ಸುಮಾರು ನಾಲ್ಕು ದಶಕಗಳಿಂದ ಕಂಠೀರವ ಕ್ರೀಡಾಂಗಣದಲ್ಲಿರುವ ಕ್ರೀಡಾ ಸಮುಚ್ಛಯದಲ್ಲಿ ಒಲಿಂಪಿಕ್‌ ಸಂಸ್ಥೆಯ ಕಚೇರಿ ಇದೆ.ಅನನ್ಯ ಕ್ರೀಡಾಡಳಿತಗಾರ

ನೆಟ್ಟಕಲ್ಲಪ್ಪನವರು ಕ್ರೀಡಾಡಳಿತಗಾರರಾಗಿ ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳ ಬೆಳವಣಿಗೆಗೆ ಬಲುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಪ್ರಸಕ್ತ ಕರ್ನಾಟಕ ರಾಜ್ಯ ಒಲಿಂಪಿಕ್‌ ಸಂಸ್ಥೆಯ ಮಹಾ ಕಾರ್ಯದರ್ಶಿಯಾಗಿರುವ ಅನಂತರಾಜು ಅವರು ಹೇಳುತ್ತಾರೆ.‘ನೆಟ್ಟಕಲ್ಲಪ್ಪ ಅವರು ರಾಜ್ಯ ಒಲಿಂಪಿಕ್‌ ಸಂಸ್ಥೆಯ ಮಹಾ ಕಾರ್ಯದರ್ಶಿ ಯಾಗಿದ್ದರಲ್ಲದೆ, ಭಾರತ ಒಲಿಂಪಿಕ್‌ ಸಂಸ್ಥೆಯ ಉಪಾಧ್ಯಕ್ಷರೂ ಆಗಿದ್ದರು. ರಾಜ್ಯ ವೇಟ್‌ಲಿಫ್ಟಿಂಗ್‌ ಸಂಸ್ಥೆ, ರಾಜ್ಯ ಷಟ್ಲ್ ಬ್ಯಾಡ್ಮಿಂಟನ್‌ ಸಂಸ್ಥೆ, ರಾಜ್ಯ ಮೌಂಟನೇರಿಂಗ್‌ ಸಂಸ್ಥೆಗಳಿಗೆ ಅಧ್ಯಕ್ಷರಾಗಿದ್ದರಲ್ಲದೆ, ರಾಜ್ಯ ಅಥ್ಲೆಟಿಕ್‌ ಸಂಸ್ಥೆಯ ಕಾರ್ಯದರ್ಶಿಯಾಗಿದ್ದರು. ಡೆಕ್ಕನ್‌ ಅಥ್ಲೆಟಿಕ್ ಕ್ಲಬ್‌ನ ಅಧ್ಯಕ್ಷರಾಗಿದ್ದ ಅವರು, ಸಿ.ಪ್ರಸನ್ನ ಕುಮಾರ್‌ ಮೆಮೋರಿಯಲ್‌ ಅಥ್ಲೆಟಿಕ್‌ ಕ್ಲಬ್‌ನ ಉಪಾಧ್ಯಕ್ಷರಾಗಿದ್ದರು. ಇದಲ್ಲದೆ ಹಣಕಾಸಿನ ತೊಂದರೆಯಲ್ಲಿ ಸಿಲುಕಿದ್ದ ಇತರ ಕ್ರೀಡಾ ಸಂಸ್ಥೆಗಳಿಗೂ ಅವರು ನೆರವಿನ ಹಸ್ತ ಚಾಚಿದ್ದಕ್ಕೆ ನೂರಾರು ನಿದರ್ಶನಗಳಿವೆ. ನನ್ನಂತಹ ಅನೇಕ ಮಂದಿ ಕ್ರೀಡಾಡಳಿತಗಾರರು ನೆಟ್ಟಕಲ್ಲಪನವರ ಮಾರ್ಗದರ್ಶನದಲ್ಲೇ ಈ ಕ್ಷೇತ್ರದಲ್ಲಿ ಕಾಲಿಟ್ಟಿದ್ದು’ ಎಂದು ಅವರು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.ಕ್ರೀಡಾ ಬರಹಕ್ಕೆ ಹೊಸ ಆಯಾಮ

ನೆಟ್ಟಕಲ್ಲಪ್ಪನವರು ಕ್ರೀಡಾಡಳಿತಗಾರರಷ್ಟೇ ಅಲ್ಲ, ಕನ್ನಡ ಪತ್ರಿಕೋದ್ಯಮದಲ್ಲಿ ಕ್ರೀಡಾ ವರದಿಗಾರಿಕೆಗೆ ಸಂಬಂಧಿಸಿದಂತೆ ಹೊಸ ಆಯಾಮ ನೀಡಿದ ಪತ್ರಿಕೋದ್ಯಮಿ ಕೂಡಾ. ರಾಜ್ಯದಲ್ಲಿ ನಡೆಯುವ ಪ್ರತಿ ಕ್ರೀಡಾಕೂಟಗಳೂ ಮಹತ್ವದ್ದಾಗಿದ್ದು, ಜನರಿಗೆ ಅವುಗಳ ಸಂಪೂರ್ಣ ಮಾಹಿತಿ ನೀಡಬೇಕೆಂಬ ಬಗ್ಗೆ ಐವತ್ತರ ದಶಕದಲ್ಲಿಯೇ ಯೋಚಿಸಿದ್ದರು.ನೆಟ್ಟಕಲ್ಲಪ್ಪನವರ ಆಸಕ್ತಿಯಿಂದಾಗಿಯೇ ‘ಪ್ರಜಾವಾಣಿ’ ಪತ್ರಿಕೆಯಲ್ಲಿ 60ರ ದಶಕದಲ್ಲಿಯೇ ಕೊನೆಯ ಪುಟವನ್ನು ಕ್ರೀಡಾ ಸುದ್ದಿಗಳಿಗಾಗಿಯೇ ಮೀಸಲಿಡಲಾಯಿತು. ಕನ್ನಡ ಪತ್ರಿಕೋದ್ಯಮದಲ್ಲಿ ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದಂತೆ ಅದು ಮೊದಲ ಪ್ರಯತ್ನವಾಗಿತ್ತು.

ಅವರು ವಿದೇಶಕ್ಕೆ ತೆರಳಿ ಕ್ರೀಡಾವರದಿಗಳನ್ನು ಬರೆದ ಕನ್ನಡದ ಮೊದಲ ವರದಿಗಾರರೂ ಹೌದು.ಅವರು 1960ರ ರೋಮ್‌ ಒಲಿಂಪಿಕ್ಸ್‌, 1964ರ ಟೋಕಿಯೊ ಒಲಿಂಪಿಕ್ಸ್‌, 1968ರ ಮೆಕ್ಸಿಕೊ ಒಲಿಂಪಿಕ್ಸ್‌ ಮತ್ತು 1972ರ ಮ್ಯೂನಿಕ್‌ ಒಲಿಂಪಿಕ್ಸ್‌ಗಳಿಗೆ ತೆರಳಿ ಪ್ರತಿನಿತ್ಯವೂ ವರದಿಗಳನ್ನು ಕಳುಹಿಸಿದ್ದರು.ಬೆಂಗಳೂರಿನ ಕೆನೆತ್‌ ಪೊವೆಲ್‌ ಭಾರತ ಕಂಡ ಶ್ರೇಷ್ಠ ವೇಗದ ಓಟಗಾರ. 60ರ ದಶಕದಲ್ಲಿ ಮಿಲ್ಖಾಸಿಂಗ್‌ ನಂತರ ಕೆನೆತ್‌ ಹೆಸರೇ ಉತ್ತುಂಗದಲ್ಲಿತ್ತು. ಅವರೊಡನೆ ಮಾತಿಗಿಳಿದಾಗ ‘ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಾನು ಪಾಲ್ಗೊಂಡಿದ್ದ ಪ್ರತಿಯೊಂದು ಸ್ವರ್ಧೆಯ ಸಂದರ್ಭದಲ್ಲಿಯೂ ನೆಟ್ಟಕಲ್ಲಪ್ಪ ಅವರು ಹಾಜರಿದ್ದು ಪೈಪೋಟಿಯನ್ನು ಗಮನವಿಟ್ಟು ನೋಡುತ್ತಿದ್ದುದು ನನಗಿನ್ನೂ ನೆನಪಿದೆ’ ಎಂದು ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.ಭಾರತ ಹಾಕಿ ತಂಡದ ನಾಯಕರಾಗಿದ್ದ ಎಂ.ಪಿ.ಗಣೇಶ್‌ ಅವರು ನಂತರ ಭಾರತ ತಂಡದ ಮುಖ್ಯ ಕೋಚ್‌ ಆಗಿದ್ದರು. ಭಾರತ ಕ್ರೀಡಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಇವರು 1972ರ ಮ್ಯೂನಿಕ್‌ ಒಲಿಂಪಿಕ್ಸ್‌ ದಿನಗಳನ್ನು ಮೆಲುಕು ಹಾಕುತ್ತಾ ‘ಆ ದಿನಗಳಲ್ಲಿ ನಾವು ಆಡಿದ ಪಂದ್ಯಗಳ ಸಂದರ್ಭದಲ್ಲಿ ನೆಟ್ಟಕಲ್ಲಪ್ಪನವರನ್ನು ಗ್ಯಾಲರಿಯಲ್ಲಿ ನಾನು ನೋಡಿದ್ದೇನೆ. ಪಂದ್ಯ ಮುಗಿದ ಮೇಲೆ ನಮ್ಮ ಬಳಿ ಬಂದು ಮಾತನಾಡುತ್ತಿದ್ದರು. ಆಗ ತಂಡದಲ್ಲಿ ನಾನು ಮತ್ತು ಗೋವಿಂದ ಇದ್ದೆವು. ನಾವಿಬ್ಬರೂ ಕನ್ನಡಿಗರು. ನೆಟ್ಟಕಲ್ಲಪ್ಪನವರು ಕನ್ನಡದಲ್ಲೇ ನಮ್ಮೊಡನೆ ಬಹಳ ಹೊತ್ತು ಹರಟೆ ಹೊಡೆಯುತ್ತಿದ್ದುದನ್ನು ನಾನು ಹೇಗೆ ತಾನೆ ಮರೆಯಲಿ. ಆ ದಿನಗಳಲ್ಲಿ ಅವರು ನಮ್ಮಿಬ್ಬರಿಗೆ ಕೆಲವು ಮೌಲ್ಯಯುತ ಸಲಹೆಗಳನ್ನೂ ನೀಡುತ್ತಿದ್ದರು’ ಎಂದೂ ನೆನಪಿಸಿಕೊಳ್ಳುತ್ತಾರೆ.ಆ ದಿನಗಳಲ್ಲಿ ಸಂಪರ್ಕ ಸಾಧನಗಳು ತೀರಾ ಪ್ರಾಥಮಿಕ ಹಂತ ದಲ್ಲೇ ಇದ್ದವು. ಅವರು ಅಷ್ಟೊಂದು ಚುರುಕಾಗಿ ವರದಿಗಳನ್ನು ಮತ್ತು ಫೋಟೊಗಳನ್ನು ಕಳುಹಿಸುತ್ತಿದ್ದುದು ಸೋಜಿಗ. ಈ ಕುರಿತು ಕರ್ನಾ ಟಕದ ಹಿರಿಯ ಫೋಟೊಗ್ರಾಫರ್‌ ಟಿ.ಎಸ್‌.ರಾಮಸ್ವಾಮಿ ಅವರೊಡನೆ ಮಾತನಾಡಿದಾಗ ‘1978ರ ಬ್ಯಾಂಕಾಕ್‌ ಏಷ್ಯನ್‌ ಗೇಮ್ಸ್‌ನಲ್ಲಿ ಛಾಯಾ ಚಿತ್ರಗಳನ್ನು ತೆಗೆಯಲು ನಾನು  ಹೋಗಿದ್ದೆ. ಆಗ ನಾನು ಫೋಟೊ ಗಳನ್ನು ಕ್ಲಿಕ್ಕಿಸಿದ ನಂತರ ಕೊಡಕ್‌ ಕಂಪೆನಿಯವರ ಲ್ಯಾಬ್‌ನಲ್ಲೇ ರೋಲನ್ನು ಪರಿಷ್ಕರಿಸಿ, ಪ್ರಿಂಟ್‌ಗಳನ್ನು ಪಡೆದು ಟಪಾಲಿಗೆ ಹಾಕುತ್ತಿದ್ದೆ. ಅದು ಮರುದಿನ ಮದ್ರಾಸಿಗೆ ಬಂದು ಅಲ್ಲಿಂದ ಬೆಂಗಳೂರಿಗೆ ವಾಹನದ ಮೂಲಕ ತಲುಪುತಿತ್ತು. ನನಗಿಂತಲೂ 20 ವರ್ಷಗಳಿಗೆ ಮೊದಲೇ ದೂರದ ರೋಮ್‌ನಿಂದ ನೆಟ್ಟಕಲ್ಲಪ್ಪನವರು ಫೋಟೊ ಗಳನ್ನು, ಸುದ್ದಿಗಳನ್ನು ಬೆಂಗಳೂರಿನ ‘ಪ್ರಜಾವಾಣಿ’ ಕಚೇರಿಗೆ ತಲುಪಿಸು ತ್ತಿದ್ದ ಸಾಹಸವನ್ನು ನೆನಪಿಸಿಕೊಂಡರೆ ಅಚ್ಚರಿ ಎನಿಸುತ್ತದೆ’ ಎನ್ನುತ್ತಾರೆ.ಲಿಂಗಪ್ಪನವರಿಗೆ ಈಗ 92ರ ಹರೆಯ.  70 ವರ್ಷಗಳ ಹಿಂದೆ ಇವರು ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆದ್ದಿದ್ದರು. 50ರ ದಶಕದ ನಂತರ ಬೆಂಗಳೂರಿನಲ್ಲಿ ನಿರಂತರವಾಗಿ ಸಾವಿರಾರು ಅಥ್ಲೀಟ್‌ಗಳಿಗೆ ತರಬೇತು ನೀಡಿದ್ದಾರೆ.ಭಾರತದ ಶ್ರೇಷ್ಠ ಕೋಚ್‌ಗಳಿಗೆ ನೀಡುವ ಅತ್ಯುನ್ನತ ದ್ರೋಣಾಚಾರ್ಯ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಇವರಿಗೆ ನೀಡಿದೆ. ನೆಟ್ಟಕಲ್ಲಪ್ಪನವರ ಕ್ರೀಡಾ ಬದುಕಿನ ಆರಂಭದ ದಿನಗಳಿಂದಲೂ ಅವರ ಬೆನ್ನ ಹಿಂದೆಯೇ ನಡೆದವರು ಲಿಂಗಪ್ಪ. ‘ನನಗೆ ನೆಟ್ಟಕಲ್ಲಪ್ಪನವರು ಪ್ರಾತಸ್ಮರಣೀಯರು. ಕರ್ನಾಟಕದಲ್ಲಿ ಒಲಿಂಪಿಕ್ಸ್‌ ಆಂದೋಲನಕ್ಕೆ ಅವರು ಅದ್ಭುತ ಕೊಡುಗೆ ನೀಡಿದ್ದಾರೆ.ನೇರ ಮತ್ತು ದಿಟ್ಟ ಸ್ವಭಾವದ ಅವರು 1976ರಲ್ಲೇ ಅಕಾಲ ಮರಣವನ್ನಪ್ಪಿದರು. ಅವರು ಇನ್ನಷ್ಟು ವರ್ಷ ಬದುಕಿದ್ದಿದ್ದರೆ ಕರ್ನಾಟಕದ ಕ್ರೀಡಾರಂಗಕ್ಕೆ ಬಹಳ ಲಾಭವಾಗುತಿತ್ತು’ ಎಂದೂ ಅವರು ನೆಟ್ಟಕಲ್ಲಪ್ಪನವರ ಮಾನವೀಯ ಗುಣಗಳ ನೂರಾರು ಘಟನೆಗಳ ನೆನಪನ್ನು ಬಿಚ್ಚಿಟ್ಟರು.ಕರ್ನಾಟಕದಲ್ಲಿ ಒಲಿಂಪಿಕ್‌ ಸಂಸ್ಥೆಯ ಚಟುವಟಿಕೆ ಈಗ ಹೊಸ ದಿಕ್ಕುಗಳನ್ನು ಕಂಡುಕೊಂಡಿದೆ. ಭಾರತ ಬ್ಯಾಸ್ಕೆಟ್‌ ಬಾಲ್‌ ಫಡೆರೇಷನ್‌ನ ಅಧ್ಯಕ್ಷರೂ ಆಗಿರುವ ಕೆ.ಗೋವಿಂದರಾಜ್‌ ನೇತೃತ್ವದಲ್ಲಿ ರಾಜ್ಯ ಒಲಿಂಪಿಕ್‌ ಸಂಸ್ಥೆ  ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಸುದ್ದಿಯಲ್ಲಿದೆ.‘ಅರ್ಧ ಶತಮಾನದ ಹಿಂದೆ ನೆಟ್ಟಕಲ್ಲಪ್ಪನವರು ರಚಿಸಿದ ಕ್ರೀಡಾ ನೀತಿಸಂಹಿತೆ ಇವತ್ತಿಗೂ ನಮಗೆ ಧರ್ಮಗ್ರಂಥದಂತಿದೆ’ ಎನ್ನುತ್ತಾರೆ ಕೆಒಎ ಮಹಾಕಾರ್ಯದರ್ಶಿ ಅನಂತರಾಜ್‌.ಐದು ದಶಕಗಳ ಹಿಂದೆ ರಾಜ್ಯದಲ್ಲಿ ಒಲಿಂಪಿಕ್ಸ್‌ ಆಂದೋಲನಕ್ಕೆ ಸಂಬಂಧಿಸಿದಂತೆ ನೆಟ್ಟಕಲ್ಲಪ್ಪನವರು ಇಟ್ಟ ದಾಪುಗಾಲಿನ ನೆನಪು  ಪ್ರತಿ ಒಲಿಂಪಿಕ್ಸ್‌ ಸಂದರ್ಭದಲ್ಲೂ ಕನ್ನಡಿಗರ ಮನದಲ್ಲಿ ಅಭಿಮಾನದ ಅಲೆ ಎಬ್ಬಿಸುತ್ತದೆ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.