ಬುಧವಾರ, ಏಪ್ರಿಲ್ 21, 2021
23 °C

ಕರ್ನಾಟಕದ ಕರುಣಾ, ವೇದಾಗೆ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ ವೇದಾ ಕೃಷ್ಣಮೂರ್ತಿ ಹಾಗೂ ಕರುಣಾ ಜೈನ್ ಅವರು ಮುಂದಿನ ವರ್ಷದ ಜನವರಿ 31ರಿಂದ ಫೆಬ್ರುವರಿ 17ರ ವರೆಗೆ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡದ ಸಂಭವನೀಯ ಆಟಗಾರ್ತಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

30 ಸದಸ್ಯರನ್ನೊಳಗೊಂಡ ಭಾರತ ತಂಡವನ್ನು ಭಾರತ ಕ್ರಿಕೆಟ್ ನಿಂತ್ರಯಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಶುಕ್ರವಾರ ಪ್ರಕಟಿಸಿತು. ಈ ಸಲದ ವಿಶ್ವಕಪ್‌ಗೆ ಭಾರತವೇ ಆತಿಥ್ಯ ವಹಿಸಿದೆ. ಇದು ಭಾರತಕ್ಕೆ ಸಿಕ್ಕ ಮೂರನೇ ಅವಕಾಶ. ಈ ಮೊದಲು 1978 ಮತ್ತು 1997ರಲ್ಲಿ ಭಾರತದ ನೆಲದಲ್ಲಿ ವಿಶ್ವಕಪ್ ನಡೆದಿತ್ತು.

ಅಂತಿಮ ತಂಡದಲ್ಲಿ ಸ್ಥಾನ ಪಡೆಯುವ ಆಸೆ: `ಒಂದು ವರ್ಷದಿಂದ ಉತ್ತಮ ಪ್ರದರ್ಶನ ನೀಡಿದ ಕಾರಣ ಸಂಭವನೀಯ ಪಟ್ಟಿಯಲ್ಲಿ ಸ್ಥಾನ ಲಭಿಸಿದೆ. ಆದರೆ, ಅಂತಿಮ ತಂಡದಲ್ಲಿ ಸ್ಥಾನ ಗಳಿಸಬೇಕು. ಈ ಒಂದು ವರ್ಷದ ಪ್ರದರ್ಶನ ಖುಷಿ ನೀಡಿದೆ' ಎಂದು ರೈಲ್ವೆಸ್ ತಂಡವನ್ನು ಪ್ರತಿನಿಧಿಸುವ ಕರ್ನಾಟಕದ ಆಟಗಾರ್ತಿ ವೇದಾ `ಪ್ರಜಾವಾಣಿ' ಜೊತೆ ಸಂತಸ ಹಂಚಿಕೊಂಡರು.

ಚಿಕ್ಕಮಗಳೂರು ಜಿಲ್ಲೆಯ ಕಡೂರಿನವರಾದ ವೇದಾ ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಆಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ಬಲಗೈ ಬ್ಯಾಟ್ಸ್‌ಮನ್ ಹತ್ತು ಏಕದಿನ ಪಂದ್ಯಗಳನ್ನಾಡಿದ್ದಾರೆ. ಇದೇ ವರ್ಷದ ಜುಲೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ವೇದಾ ಭಾರತ ತಂಡದಲ್ಲಿದ್ದರು.

`ದೇಶಿಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕಾರಣ ಸಂಭವನೀಯ ತಂಡದಲ್ಲಿ ಸ್ಥಾನ ಲಭಿಸಿದೆ. ಆದರೆ, ಅಂತಿಮ ತಂಡದಲ್ಲಿ ಸ್ಥಾನ ಪಡೆಯಬೇಕು. ಈಗ ದಕ್ಷಿಣ ವಲಯ ಟೂರ್ನಿಯಲ್ಲಿ ಆಡುತ್ತಿದ್ದೇನೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಅಂತಿಮ ತಂಡದಲ್ಲಿ ಸ್ಥಾನ ಲಭಿಸುವ ವಿಶ್ವಾಸವಿದೆ' ಎಂದು ಕರುಣಾ ಜೈನ್ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.