ಶನಿವಾರ, ಜೂನ್ 19, 2021
23 °C

ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆ: ಪದಾಧಿಕಾರಿಗಳಿಲ್ಲದೇ ಪರದಾಟ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಒಂದಲ್ಲ, ಎರಡಲ್ಲ ಬರೋಬ್ಬರಿ ಎಂಟು ವರ್ಷಗಳೇ ಕಳೆದು ಹೋಗಿವೆ. ಆದರೆ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆ (ಕೆಟಿಟಿಎ) ಚುನಾಯಿತ ಪದಾಧಿಕಾರಿಗಳು ಇಲ್ಲದೇ ಪರದಾಡುತ್ತಿದೆ.ಈ ಸಂಕಷ್ಟ ಕೇವಲ ಆಡಳಿತಗಾರರಿಗೆ ಅಷ್ಟೇ ಅಲ್ಲ. ರಾಜ್ಯದಲ್ಲಿ ಟಿಟಿ ಕ್ರೀಡೆಗೆ ಉತ್ತಮ ಬೆಂಬಲ ಸಿಗುತ್ತದೆ ಎನ್ನುವ ಭರವಸೆ ಹೊತ್ತು ಈ ಕ್ರೀಡೆಯತ್ತ ಮುಖ ಮಾಡಿರುವ ಕ್ರೀಡಾಪಟುಗಳಿಗೂ ಇದರ ಬಿಸಿ ತಟ್ಟಿದೆ. ಈ ಬಗ್ಗೆ ಕೆಲ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.2007ರಲ್ಲಿ  ಕೆಟಿಟಿಎ ಮಧ್ಯಂತರ ಸಮಿತಿ (ಅಡ್ ಹಾಕ್) ರಚಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಪದಾಧಿಕಾರಿಗಳ ಆಯ್ಕೆ ಆಗಿಲ್ಲ. ಐದು ವರ್ಷಗಳ ನಂತರ ಕಳೆದ ತಿಂಗಳು 19ರಂದು ಚುನಾವಣೆಗೆ ಕೆಟಿಟಿಎ ಮುಂದಾಗಿತ್ತು. ಆದರೆ, ಅಂದೂ ಚುನಾವಣೆ ಗೊಂದಲದ ಗೂಡಾಯಿತು. ಇದರಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ ಚಲಾಯಿಸಲು ಬಂದಿದ್ದ ಪದಾಧಿಕಾರಿಗಳು ನಿರಾಸೆಯೊಂದಿಗೆ ವಾಪಸ್ಸಾದರು.2002ರ ನವೆಂಬರ್‌ನಲ್ಲಿ ನಡೆದ ಕೆಟಿಟಿಎ ಸಾಮಾನ್ಯ ಸಭೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಜೆ. ಅಲೆಕ್ಸಾಂಡರ್ ಮೊದಲ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದರು. ಆಗ ಉಡುಪಿ, ದಕ್ಷಿಣ ಕನ್ನಡ ಮತ್ತು ದಾವಣಗೆರೆ ಜಿಲ್ಲೆಗಳ ಪ್ರತಿನಿಧಿಗಳು ಮತ ಚಲಾಯಿಸಿದ್ದರು ಹಾಗೂ ಮೂರು ಮಂದಿ ರಾಜ್ಯ ಸಂಸ್ಥೆ ಸಮಿತಿಯಲ್ಲಿದ್ದರು. ಅಲೆಕ್ಸಾಂಡರ್ ಅವರು ಈ ಮೂರೂ ಜಿಲ್ಲಾ ಸಂಸ್ಥೆಗಳ ಬೆಂಬಲದೊಂದಿಗೆ ಆಯ್ಕೆಯಾಗಿದ್ದರು.

 

ಈ ಬಾರಿ ಚುನಾವಣೆ ನಡೆಯದಿದ್ದರೂ ಅಧ್ಯಕ್ಷರಾಗಿ ಅಲೆಕ್ಸಾಂಡರ್ ಅವಿರೋಧವಾಗಿ ಆಯ್ಕೆಯಾದರು ಎಂದು ಪ್ರಕಟಿಸಲಾಯಿತು. ಆದರೆ, ಇನ್ನುಳಿದ ಉಪಾಧ್ಯಕ್ಷ (5 ಹುದ್ದೆಗಳು), ಕಾರ್ಯದರ್ಶಿ (1), ಜಂಟಿ ಕಾರ್ಯದರ್ಶಿ (2), ಖಜಾಂಚಿ (1) ಸ್ಥಾನಗಳಿಗೆ ಮಾತ್ರ ಪದಾಧಿಕಾರಿಗಳನ್ನು ಆಯ್ಕೆ ಮಾಡುವಲ್ಲಿ ಗೊಂದಲ ಉಂಟಾಯಿತು.`ಅಧ್ಯಕ್ಷರನ್ನು ಆಯ್ಕೆ ಮಾಡುವಾಗ ಯಾವುದೇ ಗೊಂದಲ ಆಗುವುದಿಲ್ಲ. ಆದರೆ ಇನ್ನುಳಿದ ಪದಾಧಿಕಾರಿಗಳನ್ನು ಆಯ್ಕೆ ಮಾಡುವಾಗ ಯಾಕಿಷ್ಟು ಸಮಸ್ಯೆಯಾಗುತ್ತದೆ ಎನ್ನುವುದು ಗೊತ್ತಾಗುತ್ತಿಲ್ಲ. ನಿಜವಾಗಿಯೂ ಕ್ರೀಡೆಯನ್ನು ಅಭಿವೃದ್ಧಿ ಮಾಡಬೇಕು. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎನ್ನುವ ಕಾಳಜಿ ರಾಜ್ಯ ಸಂಸ್ಥೆಗೆ ಇಲ್ಲ~ ಎಂದು ಹೆಸರು ಹೇಳಲು ಬಯಸದ ಜಿಲ್ಲೆಯ ಪದಾಧಿಕಾರಿಯೊಬ್ಬರು `ಪ್ರಜಾವಾಣಿ~ ಎದುರು ಆಕ್ರೋಶ ವ್ಯಕ್ತಪಡಿಸಿದರು.ಸಮಸ್ಯೆಗೆ ಕಾರಣವೇನು?

ರಾಜ್ಯದಲ್ಲಿ ಒಟ್ಟು 19 ಜಿಲ್ಲೆಗಳ ಟಿಟಿ ಸಂಸ್ಥೆಗಳ ಪದಾಧಿಕಾರಿಗಳು ಮತದಾನ ಮಾಡಲು ಅರ್ಹರು ಎಂದು ರಾಜ್ಯ ಟಿಟಿ ಸಂಸ್ಥೆ ಪಟ್ಟಿ ತಯಾರಿಸಿತ್ತು. ಆದರೆ, ಮತದಾನಕ್ಕೆ ಬಂದಾಗ ಉಡುಪಿ, ದಕ್ಷಿಣ ಕನ್ನಡ ಹಾಗೂ ದಾವಣಗೆರೆ ಜಿಲ್ಲೆಗಳ ಪದಾಧಿಕಾರಿಗಳಿಗೆ `ಶಾಕ್~ ಕಾದಿತ್ತು. ಈ ಜಿಲ್ಲೆಗಳ ಪದಾಧಿಕಾರಿಗಳಿಗೆ  ಮತ ಚಲಾಯಿಸಲು ಅವಕಾಶ ಇಲ್ಲ ಎಂದು ಒಂದು ಗುಂಪು ವಾದಿಸಿತು. ಇದು ಸಮಸ್ಯೆಗೆ ಕಾರಣವಾಗಿದೆ.ಮಧ್ಯಂತರ ಸಮಿತಿ ಅಸ್ತಿತ್ವದಲ್ಲಿದ್ದಾಗ ಈ ಮೂರು ಜಿಲ್ಲೆಗಳ ಟಿಟಿ ಸಂಸ್ಥೆಗಳಿಗೆ ಕೆಟಿಟಿಎಯಿಂದ ಮಾನ್ಯತೆ ಲಭಿಸಿದೆ. ಮಧ್ಯಂತರ ಸಮಿತಿ ಇದ್ದಾಗ ಯಾವುದೇ ಜಿಲ್ಲಾ ಸಂಸ್ಥೆಗಳಿಗೆ ಮಾನ್ಯತೆ ನೀಡಲು ಅವಕಾಶವಿಲ್ಲ ಎನ್ನುವುದು ಈ ಗುಂಪಿನವರ ವಾದ. ಆದ್ದರಿಂದ 16 ಜಿಲ್ಲೆಗಳ ಪದಾಧಿಕಾರಿಗಳು ಮಾತ್ರ ಮತ ಚಲಾಯಿಸಲು ಅರ್ಹರು ಎಂದು ಅವರು ವಾದಿಸಿದರು. ಈ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ಚುನಾವಣೆಯೇ ನಿಂತು ಹೋಯಿತು.“ಒಮ್ಮೆ ಆಯ್ಕೆಯಾದರೆ ಅವರ ಅಧಿಕಾರ ಅವಧಿ ಎರಡು ವರ್ಷವಾಗಿರುತ್ತದೆ. ಇದರ ಪ್ರಕಾರ 2009ರಲ್ಲಿಯೇ ಚುನಾವಣೆ ನಡೆಯಬೇಕಿತ್ತು. ಆಗಲೂ ಚುನಾವಣೆ ನಡೆಯಲಿಲ್ಲ. ಇದು ಕ್ರೀಡೆಯ ಬಗ್ಗೆ ಆಡಳಿತಗಾರರಿಗೆ ಇರುವ `ಕಾಳಜಿ~ ಎಂಥದು ಎನ್ನುವುದಕ್ಕೆ ಸಾಕ್ಷಿ” ಎಂದು ಜಿಲ್ಲೆಯ ಪದಾಧಿಕಾರಿಯೊಬ್ಬರು ಬೇಸರದಿಂದ ನುಡಿದರು.`ಮಧ್ಯಂತರ ಸಮಿತಿ (ಅಡ್ ಹಾಕ್) ರಚಿಸಿ ಆರು ತಿಂಗಳಲ್ಲಿ ಚುನಾವಣೆ ನಡೆಯಬೇಕು. ಆದರೆ ಈ ರೀತಿ ಆಗಿಲ್ಲ. ಹಾಗಾಗಿ ಕ್ರೀಡಾ ಹಿತದೃಷ್ಟಿಯಿಂದ ಬೇಗನೇ ಚುನಾವಣೆ ನಡೆಯಬೇಕು~ ಎಂದು ಅವರು ಹೇಳುತ್ತಾರೆ.`ಕಳೆದ ತಿಂಗಳು ಚುನಾವಣೆ ವೇಳೆ ಆದ ಗೊಂದಲದ ಬಗ್ಗೆ ವರದಿ ತಯಾರಿಸಿ ಭಾರತ ಟೇಬಲ್ ಟೆನಿಸ್ ಫೆಡರೇಷನ್‌ಗೆ ಕಳುಹಿಸಿಕೊಡಲಾಗುವುದು. ಫೆಡರೇಷನ್ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ~ ಎಂದು ಸಂಸ್ಥೆಯ ಹಿರಿಯ ಸದಸ್ಯರೊಬ್ಬರು ಸ್ಪಷ್ಟಪಡಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.