ಶನಿವಾರ, ಮಾರ್ಚ್ 6, 2021
32 °C
ನಗರ ಜಿಲ್ಲೆಯ ಕಲಾವಿದರ ಪ್ರತಿಭಾ ಪ್ರದರ್ಶನಕ್ಕಿಲ್ಲ ಸೂಕ್ತ ವೇದಿಕೆ

ಕಲಾಗ್ಯಾಲರಿ ಉದ್ಘಾಟನೆಗೆ ಮೀನಮೇಷ

ಹೀರಾನಾಯ್ಕ ಟಿ. Updated:

ಅಕ್ಷರ ಗಾತ್ರ : | |

ಕಲಾಗ್ಯಾಲರಿ ಉದ್ಘಾಟನೆಗೆ ಮೀನಮೇಷ

ದಾವಣಗೆರೆ: ‘ಕಲಾವಿದರ ತವರೂರು’ ಎಂದೇ ಖ್ಯಾತಿ ಪಡೆದಿದ್ದ ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಬಹುನಿರೀಕ್ಷೆಯ ಕಲಾಗ್ಯಾಲರಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಈ ಗ್ಯಾಲರಿಯ ಉದ್ಘಾಟನೆ ಮಾತ್ರ ಇನ್ನೂ ಆಗಿಲ್ಲ.ದಾವಣಗೆರೆಯಲ್ಲೇ ರಾಜ್ಯದ ಮೊದಲ ಕಲಾ (ಫೈನ್‌ ಆರ್ಟ್ಸ್‌) ಕಾಲೇಜು 1964ರಲ್ಲಿ ನಿರ್ಮಾಣ ವಾಗಿತ್ತು. ಕಳೆದ ವರ್ಷ ವಿದ್ಯಾನಗರದಲ್ಲಿರುವ ಈ ಕಾಲೇಜು ಸುವರ್ಣಮಹೋತ್ಸವ ಆಚರಿಸಿತ್ತು. ಇದೇ ಕಲಾ ಕಾಲೇಜು ಆವರಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಲಾ ಗ್ಯಾಲರಿ ನಿರ್ಮಾಣವಾಗಿದೆ. ಆದರೆ ಈ ಗ್ಯಾಲರಿಯ ಉದ್ಘಾಟನೆ ವಿಳಂಬವಾಗುತ್ತಿರುವುದು ಕಲಾವಿದರಲ್ಲಿ ನಿರಾಶೆ ಮೂಡಿಸಿದೆ.ರಾಜ್ಯದ ಬೆಂಗಳೂರು, ಮೈಸೂರು, ಧಾರವಾಡ, ಮಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕಲಾ ಪ್ರದರ್ಶನಕ್ಕೆ ಕಲಾ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ. ಇಲ್ಲೂ ಈಗ ಗ್ಯಾಲರಿ ನಿರ್ಮಾಣಕಾರ್ಯ ಬಹುತೇಕ ಪೂರ್ಣಗೊಂಡರೂ ಉದ್ಘಾ ಟನೆ ವಿಳಂಬದ ಹಿಂದಿನ ಕಾರಣಗಳು ಅರ್ಥವಾಗುತ್ತಿಲ್ಲ ಎನ್ನುವುದು ಕಲಾವಿದರ ಅಳಲು.ಕಲಾ ಗ್ಯಾಲರಿ ಈವರೆಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಈ ಗ್ಯಾಲರಿ ಉದ್ಘಾಟನೆ ಆದರೆ ಕಲಾಸಕ್ತಿರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಸಿಗಲಿದೆ ಎನ್ನುತ್ತಾರೆ ಲಲಿತಾ ಕಲಾ ಕಾಲೇಜಿನ ವಾಣಿಜ್ಯ ಕಲಾ ವಿಭಾಗದ ನಿವೃತ್ತ ವಿಭಾಗ ಮುಖ್ಯಸ್ಥರಾದ ಮಲ್ಲಿಕಾರ್ಜುನ್‌ ಜಾಧವ್‌.ಜಿಲ್ಲೆಯಲ್ಲಿ ಕಲಾ ಪ್ರದರ್ಶನ ಮಾಡಬೇಕಾದರೆ, ಕನ್ನಡ ಭವನ, ರಂಗ ಮಂದಿರ, ರೋಟರಿ ಭವನಗಳ ಆಶ್ರಯ ಪಡೆಯಬೇಕಾಗಿದೆ. ಆದರೆ ಈ ಉದ್ದೇಶಕ್ಕೆಂದೇ ಇರುವ ಗ್ಯಾಲರಿಗಳಿಲ್ಲದೇ ಕಲಾವಿದರು ತಮ್ಮ  ಕಲಾಕೃತಿಗಳನ್ನು ಪ್ರದರ್ಶಿಸಲಾಗದೇ ಪರದಾಡುವಂತಾಗಿದೆ.ನೆರೆ ಜಿಲ್ಲೆಗಳ ಆಶ್ರಯ: ರಾಜ್ಯ, ರಾಷ್ಟ್ರಮಟ್ಟದ ಕಲಾ ಪ್ರದರ್ಶನ ಸಮಾರಂಭ ಮಾಡಬೇಕಾದರೆ ನೆರೆ ಜಿಲ್ಲೆಯ ಆಶ್ರಯ ಪಡೆಯಬೇಕಿದೆ. ನಗರದಲ್ಲಿ  ಕಲಾ ಗ್ಯಾಲರಿ ಇಲ್ಲದೇ ಇರುವುದರಿಂದ ಮುಂದಿನ ತಿಂಗಳು ಫೆಬ್ರುವರಿ 17ರಿಂದ 19ರ ವರೆಗೆ ದಾವಣಗೆರೆಯಲ್ಲಿ ನಡೆಯಬೇಕಿದ್ದ 44ನೇ ರಾಜ್ಯ ಮಟ್ಟದ ಕಲಾ ಪ್ರದರ್ಶನ ಬಾಗಲಕೋಟೆಯಲ್ಲಿ ನಡೆಯುತ್ತಿದೆ.ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ನಡೆಯಬೇಕೆಂದರೆ ಸರ್ಕಾರಿ ಕಲಾ ಕಾಲೇಜಿನಲ್ಲಿ ನಿರ್ಮಾಣ ಆಗುತ್ತಿರುವ  ಕಲಾ ಗ್ಯಾಲರಿ ಶೀಘ್ರ ಉದ್ಘಾಟನೆಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಲಲಿತಾ ಕಲಾ ಅಕಾಡೆಮಿ ಸದಸ್ಯ ಎ.ಮಹಾಲಿಂಗಪ್ಪ.ರಾಜ್ಯದಲ್ಲಿ 75ಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ಕಲಾ ಕಾಲೇಜುಗಳಿದ್ದು, ಅಲ್ಲಿನ ಕಲಾಸಕ್ತರಿಗೆ ಕಲಾ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ. ಆದರೆ, ಇಲ್ಲಿನ ಕಲಾವಿದರು ಅದರಿಂದ ವಂಚಿತರಾಗಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.ಜಿಲ್ಲೆಯ ಕಲಾವಿದರನ್ನು ಬೆಳೆಸಬೇಕಾದರೆ ಕಲಾ ಗ್ಯಾಲರಿ ಅವಶ್ಯಕತೆ ಇದೆ. ದಾವಣಗೆರೆ ವಿಶ್ವವಿದ್ಯಾಲಯ ಸಿಂಡಿಕೇಟ್‌ ಹಾಗೂ ಅಕಾಡೆಮಿ ಸದಸ್ಯರು ಗ್ಯಾಲರಿ ಉದ್ಘಾಟಿಸುವ ವಿಷಯದಲ್ಲಿ ಮುತುವರ್ಜಿ ವಹಿಸಬೇಕು ಎನ್ನುವುದು ಅವರ ಒತ್ತಾಸೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.