ಬುಧವಾರ, ಜೂನ್ 23, 2021
30 °C

ಕಲಾಪ ಬಹಿಷ್ಕಾರ: ಮುಖ್ಯ ನ್ಯಾಯಮೂರ್ತಿ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಭಾವಿ ವ್ಯಕ್ತಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ವೇಳೆ ಅಹಿತಕರ ಘಟನೆಗಳು ಸಂಭವಿಸುವುದನ್ನು ತಡೆಯುವ ಉದ್ದೇಶದಿಂದ ಲೋಕಾಯುಕ್ತ ಮತ್ತು ಸಿಬಿಐ ವಿಶೇಷ ಕೋರ್ಟ್‌ಗಳನ್ನು ಸಿಟಿ ಸಿವಿಲ್ ನ್ಯಾಯಾಲಯದ ಆವರಣದಿಂದ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರನ್ನು ಕಳೆದ ಶುಕ್ರವಾರ ಸಿಬಿಐ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ವೇಳೆ ವಕೀಲರು ಮತ್ತು ಮಾಧ್ಯಮ ಪ್ರತಿನಿಧಿಗಳ ನಡುವೆ ಘರ್ಷಣೆ ಉಂಟಾಗಿತ್ತು. ಇದರಿಂದ ಒಂದು ಬಗೆಯ ದ್ವೇಷಮಯ ವಾತಾವರಣ ನಿರ್ಮಾಣವಾಗಿದೆ.ಅದನ್ನು ತಿಳಿಗೊಳಿಸುವ ಸಂಬಂಧ ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಮತ್ತು ಗೃಹ ಸಚಿವ ಆರ್.ಅಶೋಕ ಅವರು ಸೋಮವಾರ ಸಂಜೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.ಈ ಭೇಟಿ ಸಂದರ್ಭದಲ್ಲಿ ವಿಶೇಷ ಕೋರ್ಟ್‌ಗಳನ್ನು ನಗರದಿಂದ ಹೊರಭಾಗಕ್ಕೆ ಸ್ಥಳಾಂತರಿಸುವ ಕುರಿತು ಮುಖ್ಯ ನ್ಯಾಯಮೂರ್ತಿಯವರೇ ಸಲಹೆ ಮಾಡಿದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಪಕ್ಕಕ್ಕೆ ವಿಶೇಷ ಕೋರ್ಟ್‌ಗಳನ್ನು ಸ್ಥಳಾಂತರಿಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ಗೊತ್ತಾಗಿದೆ.ಸದ್ಯಕ್ಕೆ ಲೋಕಾಯುಕ್ತ ಕೋರ್ಟ್ ಮಾತ್ರ ಸ್ಥಳಾಂತರಿಸಲಾಗುವುದು. ನಂತರದ ದಿನಗಳಲ್ಲಿ ಸಿಬಿಐ ಕೋರ್ಟ್ ಸ್ಥಳಾಂತರದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಬೆಂಗಳೂರು ನಗರ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶ ನ್ಯಾ. ಶ್ರೀಧರ ರಾವ್ ಅವರ ಜತೆ ಮಂಗಳವಾರ ಚರ್ಚೆ ನಡೆಸಿದ ನಂತರ ಅಂತಿಮವಾಗಿ ಈ ಕುರಿತ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ.ಲೋಕಾಯುಕ್ತ ಕೋರ್ಟ್‌ನಲ್ಲಿ ಸುಮಾರು 400 ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಕಲಾಪ ನಡೆಯುವಾಗ ನೂಕುನುಗ್ಗಲು ಸಾಮಾನ್ಯವಾಗಿದೆ. ಹೀಗಾಗಿ ಅದನ್ನು ಸ್ಥಳಾಂತರಿಸಲು ಹೈಕೋರ್ಟ್ ನ್ಯಾಯಾಧೀಶರೇ ಸಲಹೆ ನೀಡಿದ್ದರು. ರಾಜ್ಯ ವಕೀಲರ ಪರಿಷತ್ ಕೂಡ ಸ್ಥಳಾಂತರಕ್ಕೆ ಆಗ್ರಹಿಸಿದೆ.ವೈದ್ಯಕೀಯ ನೆರವು: ಶುಕ್ರವಾರದ ಗಲಾಟೆ ಸಂದರ್ಭದಲ್ಲಿ ಗಾಯಗೊಂಡ ವಕೀಲರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಹಣ ಖರ್ಚು ಮಾಡಿದ್ದಕ್ಕೆ ಸಂಬಂಧಿಸಿದಂತೆ ರಸೀದಿಗಳನ್ನು ಕೊಟ್ಟು, ಹಣ ಪಡೆಯಬಹುದು. ಇದಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ಸಭೆಯಲ್ಲಿ ಭರವಸೆ ನೀಡಿದರು ಎಂದು ಗೊತ್ತಾಗಿದೆ.ವಕೀಲರ ಅನೇಕ ವಾಹನಗಳು ಜಖಂಗೊಂಡಿವೆ. ಅವುಗಳ ರಿಪೇರಿಗೆ ವಿಮಾ ಕಂಪೆನಿಗಳಿಂದ ಆದಷ್ಟು ಬೇಗ ಹಣ ಕೊಡಿಸುವುದಕ್ಕೂ ಸರ್ಕಾರ ಒಪ್ಪಿಗೆ ನೀಡಿದೆ. ಈ ಸಂಬಂಧ ಸದ್ಯದಲ್ಲೇ ವಿಮಾ ಕಂಪೆನಿಗಳ ಅಧಿಕಾರಿಗಳ ಸಭೆ ಕರೆಯುವ ಸಾಧ್ಯತೆಯೂ ಇದೆ.ಹೊಂದಾಣಿಕೆಗೆ ಸಲಹೆ: ವಕೀಲರು ಮತ್ತು ಮಾಧ್ಯಮದವರು ದ್ವೇಷ ಬಿಟ್ಟು ಹೊಂದಾಣಿಕೆಯಿಂದ ಅನುಸರಿಸಿಕೊಂಡು ಹೋಗಬೇಕು ಎನ್ನುವ ಸಲಹೆಯನ್ನು ನ್ಯಾ. ಸೇನ್ ನೀಡಿದ್ದಾರೆ. ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ಇದು ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧ ಎಂದೂ ಹೇಳಿದ್ದಾರೆ. ಕೋರ್ಟ್‌ಗೆ ಮಾಧ್ಯಮದವರು ಕೂಡ ಬರಬೇಕು. ಅವರಿಗೆ ಅಗತ್ಯ ಬಿದ್ದರೆ ಭದ್ರತೆ ನೀಡಬೇಕು ಎಂದೂ ಸರ್ಕಾರಕ್ಕೆ ಸೂಚಿಸಿದರು ಎನ್ನಲಾಗಿದೆ.ಸಂಧಾನ ಸಭೆ

ಈ ನಡುವೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಂಗಳವಾರ ಸಂಜೆ ವಕೀಲರು ಮತ್ತು ಮಾಧ್ಯಮದವರ ಸಂಧಾನ ಸಭೆಯನ್ನು `ಕೃಷ್ಣಾ~ದಲ್ಲಿ ಕರೆದಿದ್ದಾರೆ. ಈ ಸಭೆಯಲ್ಲಿ ಹಿಂದೆ ನಡೆದ ಘಟನೆ ಬಗ್ಗೆ ಚರ್ಚಿಸದೆ, ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಏನೆಲ್ಲ ಮುಂಜಾಗ್ರತೆ ವಹಿಸಬೇಕು ಎಂಬುದರ ಬಗ್ಗೆ ಚರ್ಚೆಯಾಗಲಿದೆ ಎಂದು ಗೊತ್ತಾಗಿದೆ.ಕೋರ್ಟ್ ಆವರಣದಲ್ಲಿ ಸಿಸಿ ಟಿವಿ ಅಳವಡಿಸುವುದು; ಎಲೆಕ್ಟ್ರಾನಿಕ್ ಮಾಧ್ಯಮದವರಿಗೆ ಸೂಕ್ತ ಸ್ಥಳ ನಿಗದಿ ಮಾಡುವುದು ಸೇರಿದಂತೆ ಇತರ ವಿಷಯಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.