ಬುಧವಾರ, ಜೂನ್ 23, 2021
24 °C

ಕಲ್ಪತರು ನಾಡಿನ ದ್ರೋಣಾಚಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಓದಲು ಕಾಲೇಜಿಗೆ ಸೇರಿದ ಯುವಕ ವ್ಯಾಸಂಗ ಮುಗಿಸಿ; ಹಲವು ಅವಕಾಶ ದೊರೆತರೂ ಹೋಗಲಿಲ್ಲ. ಅಲ್ಲೇ ಉದ್ಯೋಗ ಹಿಡಿದು ಕೊನೆ ಉಸಿರು ಇರುವ ತನಕ ಆ ವಿದ್ಯಾಸಂಸ್ಥೆಗೆ, ಆಯ್ದುಕೊಂಡ ಕ್ಷೇತ್ರಕ್ಕೆ ಅನನ್ಯ ಸೇವೆ ಸಲ್ಲಿಸಿ ಖ್ಯಾತರಾದವರ ಪಟ್ಟಿಯಲ್ಲಿ ತಿಪಟೂರು ಕಲ್ಪತರು ವಿದ್ಯಾಸಂಸ್ಥೆ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಬೆಟ್ಟೇಗೌಡರು (ಬಿ.ಜಿ) ಸೇರುತ್ತಾರೆ.ಹಲವು ಏಳು- ಬೀಳುಗಳ ನಡುವೆ ತುಮಕೂರು ಜಿಲ್ಲಾ ಕ್ರೀಡಾ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ ಕೀರ್ತಿ ಬೆಟ್ಟೇಗೌಡರದ್ದು. ಇವರ ಅವಿರತ ಶ್ರಮದಿಂದ ಜಿಲ್ಲೆಯ ಸಾಕಷ್ಟು ಪ್ರತಿಭೆಗಳು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡು ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಪ್ರಶಸ್ತಿ ಸರಮಾಲೆಗೆ ಭಾಜನರಾಗಿ, ಯಶಸ್ವಿ ಕ್ರೀಡಾಪಟುಗಳಾಗಿ ಮಿಂಚಿ ದ್ದಾರೆ. ಈಗ ನೆನಪು ಮಾತ್ರ ಉಳಿಸಿಹೋಗಿದ್ದಾರೆ.ಕೊಕ್ಕೊ ಆಟಗಾರರಾಗಿದ್ದ ಬೆಟ್ಟೇಗೌಡರು, ರಾಜ್ಯ, ರಾಷ್ಟ್ರವನ್ನು ಐದು ಬಾರಿ ಪ್ರತಿನಿಧಿಸಿ, ಮೂರು ಬಾರಿ ವಿಶ್ವವಿದ್ಯಾಲಯ (ಬೆಂಗಳೂರು- ಮೈಸೂರು ವಿ.ವಿ) ತಂಡ ಪ್ರತಿನಿಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಅಂಕಣದಲ್ಲಿ ಉತ್ತಮ `ಹಿಡಿತಗಾರ~ ಎಂದೇ ಗುರುತಿಸಿಕೊಂಡಿದ್ದರು. ಇದಕ್ಕಾಗಿ ಹಲವು ಬಾರಿ ವೈಯಕ್ತಿಕ ಪ್ರಶಸ್ತಿ ಪಡೆದಿದ್ದಾರೆ. ಜತೆಗೆ 800 ಮೀಟರ್ ಓಟದಲ್ಲಿ ದಸರಾ ಚಾಂಪಿಯನ್ ಆಗಿದ್ದರು.ಕೊಕ್ಕೊ ಆಟದಲ್ಲಿ ವಿಶೇಷ ಆಸಕ್ತಿ ಮೈಗೂಡಿಸಿ ಕೊಂಡಿದ್ದ ಬಿ.ಜಿ 1983-84ರಲ್ಲಿ ಬೆಂಗಳೂರು ವಿ.ವಿ. ಯಿಂದ ಎಂಪಿಇಡಿ ಸ್ನಾತಕೋತ್ತರ ಪದವಿ ಪಡೆದು; ಕೊಕ್ಕೊ ಬಗ್ಗೆ ವಿಶೇಷ ಅಧ್ಯಯನ ನಡೆಸಿ `ಕೊಕ್ಕೊ ತಜ್ಞ~ ಎನಿಸಿಕೊಂಡಿದ್ದರು. ಇವರ ಮಾರ್ಗದರ್ಶನದಲ್ಲಿ ಕೊಕ್ಕೊ, ಕಬಡ್ಡಿ, ಅಥ್ಲೆಟಿಕ್ಸ್‌ನಲ್ಲಿ ಹಲವು ಕ್ರೀಡಾಪಟುಗಳು ವಿಶ್ವವಿದ್ಯಾಲಯ, ರಾಜ್ಯ, ರಾಷ್ಟ್ರ ಮಟದಲ್ಲಿ ಹೆಸರು ಮಾಡಿದ್ದಾರೆ.1975ರಿಂದ 1983ರ ವರೆಗೆ ಸತತ ಒಂಬತ್ತು ವರ್ಷ `ಕಲ್ಪತರು ಕ್ರೀಡಾ ಸಂಸ್ಥೆ~ ರಾಜ್ಯ ಚಾಂಪಿ ಯನ್ ಪಟ್ಟ ಪಡೆದಿದೆ. ಗೌಡರು ಬೆಂಗಳೂರು ವಿಶ್ವವಿದ್ಯಾಲಯದ ಕೋಚ್ ಆಗಿದ್ದಾಗ ವಿ.ವಿ ತಂಡ ಅಖಿಲ ಭಾರತ ವಿ.ವಿ. ಪಂದ್ಯಾವಳಿಯಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿ ಗಳಿಸಿ ವಿಶೇಷ ಸಾಧನೆ ಮಾಡಿದ್ದಾರೆ.1954ರಲ್ಲಿ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಉಂಗರ ಗ್ರಾಮದ ಸಾರಮ್ಮ- ಸಬಗೇಗೌಡ ಪುತ್ರರಾಗಿ ಜನಿಸಿದರು. ಬಡತನವನ್ನೇ ಹಾಸಿ, ಹೊದ್ದು ಮಲಗಿದ್ದ ಕುಟುಂಬದಲ್ಲಿ ಜನಿಸಿದ ಗೌಡರ ಹಾದಿ ಕಲ್ಲು-ಮುಳ್ಳಿನದು. ಹುಟ್ಟಿ- ಬೆಳೆದಿದ್ದು ಬಿಟ್ಟರೇ; ಓದಿದ್ದು, ಕೆಲಸ ಮಾಡಿದ್ದು, ಹೆಸರು ಗಳಿಸಿದ್ದು, ಅಂತ್ಯ ಕಂಡಿದ್ದು ಎಲ್ಲವೂ ಕಲ್ಪತರು ನಾಡಿನಲ್ಲಿ.ತುಮಕೂರು ಜಿಲ್ಲೆಯ ಕ್ರೀಡಾಕ್ಷೇತ್ರದ `ದಾರಿ ದೀಪ~ ಎಂದು ಕರೆಸಿಕೊಳ್ಳುತ್ತಿದ್ದ ಪ್ರೊ.ಬೆಟ್ಟೇಗೌಡ ಕಳೆದ ಫೆಬ್ರುವರಿ 12ರಂದು ಇನ್ನಿಲ್ಲವಾದರು. ಕ್ರೀಡೆ ಹೊರತಾಗಿಯೂ ಗೌಡರದ್ದು ಬಹುಮುಖ ಪ್ರತಿಭೆ.ಆಯ್ಕೆ ಸಮಿತಿ ಸದಸ್ಯ: ಕೇವಲ ಮಾರ್ಗದರ್ಶನಕ್ಕೆ ಮೀಸಲಾಗದ ಬೆಟ್ಟೇಗೌಡರು ಬೆಂಗಳೂರು ವಿಶ್ವ ವಿದ್ಯಾಲಯದ ಕ್ರೀಡಾಪಟುಗಳ ಆಯ್ಕೆ ಸಮಿತಿ ಸದಸ್ಯರಾಗಿಯೂ ಹಲವು ವರ್ಷ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಕೊಕ್ಕೊ, ಥ್ರೋಬಾಲ್, ನೆಟ್‌ಬಾಲ್, ಹ್ಯಾಂಡ್‌ಬಾಲ್, ಅಥ್ಲೆಟಿಕ್ಸ್‌ಗೆ ಪ್ರತಿಭಾವಂತರನ್ನು ಆಯ್ಕೆ ಮಾಡಿ, ಕ್ರೀಡಾ ಭವಿಷ್ಯ ಉಜ್ವಲ ಗೊಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.