ಭಾನುವಾರ, ಜೂನ್ 13, 2021
21 °C

ಕಲ್ಲಂಗಡಿ: ರೈತರಿಗೆ ಕಷ್ಟ–ಮಾರಾಟಗಾರರಿಗೂ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಮಳೆ ಸುರಿಯುತ್ತಿರುವ ಪರಿಣಾಮ ಕಲ್ಲಂಗಡಿ ಬೆಳೆದಿರುವ ರೈತರು ಒಂದೆಡೆ ನಷ್ಟದ ಭೀತಿ ಎದುರಿಸುತ್ತಿದ್ದಾರೆ. ಮತ್ತೊಂದೆಡೆ ವ್ಯಾಪಾರ ಇಲ್ಲದೆ ಹಣ್ಣು ಮಾರಾಟಗಾರರು ತೊಂದರೆ ಅನುಭವಿಸುತ್ತಿದ್ದಾರೆ!ಜಿಲ್ಲಾ ಕೇಂದ್ರದ ರಸ್ತೆಬದಿಗಳಲ್ಲಿ ಕಲ್ಲಂಗಡಿ ಹಣ್ಣಿನ ಮಾರಾಟ ಮಳೆ ಬರುವುದಕ್ಕೂ ಮೊದಲು ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ, ಕಳೆದ ಮೂರ್ನಾಲ್ಕು ದಿನದಿಂದ ತುಂತುರು ಮಳೆ ಸುರಿದ ಪರಿಣಾಮ ವ್ಯಾಪಾರ ಇಳಿಮುಖವಾಗಿದೆ.ನಗರದ ವ್ಯಾಪ್ತಿಯ ಸತ್ತಿ ರಸ್ತೆ, ಬಿ. ರಾಚಯ್ಯ ಜೋಡಿರಸ್ತೆ ಸೇರಿದಂತೆ ತಳ್ಳುವಗಾಡಿಗಳಲ್ಲಿ ಕಲ್ಲಂಗಡಿ ಹಣ್ಣಿನ ವ್ಯಾಪಾರ ನಡೆಯುತ್ತಿದೆ. ಈ ಬಾರಿ ಜಿಲ್ಲಾ ಕೇಂದ್ರಕ್ಕೆ ತಮಿಳುನಾಡಿನಿಂದ ಕಲ್ಲಂಗಡಿ ಹಣ್ಣುಗಳು ಬಂದಿಲ್ಲ. ಅಲ್ಲಿನ ಹಣ್ಣುಗಳಿಗೆ ಟನ್‌ವೊಂದಕ್ಕೆ ₨ 10ರಿಂದ 12 ಸಾವಿರ ಧಾರಣೆಯಿದೆ. ದುಬಾರಿ ಸಾಗಾಣಿಕೆ ವೆಚ್ಚ ಭರಿಸಿ ಇಲ್ಲಿಗೆ ತಂದರೂ ಹಣ್ಣು ಸಿಹಿ ಇರುವುದಿಲ್ಲ.ಈ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದ ವ್ಯಾಪಾರಿಗಳು ಜಿಲ್ಲೆಯ ವಿವಿಧೆಡೆ ರೈತರು ಬೆಳೆದಿರುವ ಕಲ್ಲಂಗಡಿ ಹಣ್ಣಿನ ಹೊಲಗಳತ್ತ ಮುಖ ಮಾಡಿದ್ದಾರೆ.ಟನ್‌ವೊಂದಕ್ಕೆ ಗಾತ್ರದ ಅನುಸಾರ  ಅನುಗುಣವಾಗಿ ₨ 5 ಸಾವಿರದಿಂದ 7 ಸಾವಿರ ಕೊಟ್ಟು ಖರೀದಿಸಿ ತಂದು ಮಾರಾಟ ಮಾಡುತ್ತಿದ್ದಾರೆ.ವ್ಯಾಪಾರಿಗಳು ಮತ್ತು ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಕಲ್ಲಂಗಡಿ ಹಣ್ಣುಗಳು ಸಿಗುವುದಿಲ್ಲ. ನೀರಿನ ಕೊರತೆ ಪರಿಣಾಮ ಹಣ್ಣಿನ ಗಾತ್ರ ಕಡಿಮೆಯಾಗಿದೆ. ಪ್ರಸ್ತುತ ಕಲ್ಲಂಗಡಿ ಹಣ್ಣು ಕೆಜಿಗೆ ₨ 10ರಿಂದ 12 ಧಾರಣೆಯಿದೆ.ಬಹಳಷ್ಟು ರೈತರು ಈಗ ‘ಷುಗರ್‌ ಕ್ವೀನ್‌’ ಕಲ್ಲಂಗಡಿ ಹಣ್ಣಿನ ತಳಿ ಬೆಳೆಯಲು ಮುಂದಾಗಿದ್ದಾರೆ. ಈ ಹಣ್ಣಿಗೆ ಪ್ರತಿ ಕೆಜಿಗೆ ₨ 8 ಧಾರಣೆಯಿದೆ.ಈ ಹಣ್ಣು ಹೆಚ್ಚಾಗಿ ಕೇರಳಕ್ಕೆ ಪೂರೈಕೆಯಾಗುತ್ತದೆ. ಅಲ್ಲಿನ ವ್ಯಾಪಾರಿಗಳು ಜಿಲ್ಲೆಗೆ ಬಂದು ಈ ಹಣ್ಣು ಖರೀದಿ ಮಾಡಿ ತೆಗೆದುಕೊಂಡು ಹೋಗುತ್ತಾರೆ.‘ಈಗ ಮಳೆ ಸುರಿದಿದೆ. ಬಿಸಿಲಿನ ಝಳ ಕೊಂಚ ಕಡಿಮೆಯಾಗಿದೆ. ಇದು ಕಲ್ಲಂಗಡಿ ಹಣ್ಣಿನ ವ್ಯಾಪಾರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಬಿಸಿಲು ಹೆಚ್ಚಿದ್ದರೆ ಮಾತ್ರವೇ ವ್ಯಾಪಾರ ಹೆಚ್ಚಿರುತ್ತದೆ. ಇಲ್ಲವಾದರೆ ನಷ್ಟ ಕಟ್ಟಿಟ್ಟಬುತ್ತಿ’ ಎನ್ನುತ್ತಾರೆ ವ್ಯಾಪಾರಿ ಇಮ್ರಾನ್‌.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.