ಬುಧವಾರ, ಮೇ 18, 2022
21 °C

ಕಲ್ಲಿದ್ದಲು ನಿಕ್ಷೇಪ ಹರಾಜು ಶೀಘ್ರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲ್ಲಿದ್ದಲು ನಿಕ್ಷೇಪ ಹರಾಜು ಶೀಘ್ರ ಆರಂಭ

ರಾಂಚಿ (ಐಎಎನ್‌ಎಸ್): ಹೊಸ ಕಲ್ಲಿದ್ದಲು ನಿಕ್ಷೇಪಗಳ (ಬ್ಲಾಕ್‌ಗಳ) ಪತ್ತೆ ಕಾರ್ಯ ಮುಗಿದಿದ್ದು, ಮುಂದಿನ ಎರಡು ತಿಂಗಳೊಳಗೆ ಅವುಗಳ ಹರಾಜು ಪ್ರಕ್ರಿಯೆ ಆರಂಭವಾಗಲಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಶುಕ್ರವಾರ ತಿಳಿಸಿದ್ದಾರೆ.

ಗುರುತಿಸಲಾಗಿರುವ ಕಲ್ಲಿದ್ದಲು ನಿಕ್ಷೇಪಗಳನ್ನು ಸಾರ್ವಜನಿಕ ವಲಯದ ಉದ್ದಿಮೆ, ಖಾಸಗಿ ಉದ್ದಿಮೆ ಹಾಗೂ ಇತರ ಉದ್ದೇಶಗಳಿಗಾಗಿ ವರ್ಗೀಕರಿಸಲಾಗಿದೆ ಎಂದು ಪತ್ರಕರ್ತರಿಗೆ ತಿಳಿಸಿದರು.

ಇದೇ ವೇಳೆ ಕಲ್ಲಿದ್ದಲು ನಿಕ್ಷೇಪಗಳ ಮಂಜೂರಾತಿಯಲ್ಲಿ ಯಾವ ಅವ್ಯವಹಾರವೂ ನಡೆದಿಲ್ಲ ಎಂದು ಸಚಿವರು ಸಮರ್ಥಿಸಿಕೊಂಡರು. 1993ರಿಂದಲೂ ಉಷ್ಣ ವಿದ್ಯುತ್ ಸ್ಥಾವರದ ಬೇಡಿಕೆಗೆ ಅನುಗುಣವಾಗಿ ಕಲ್ಲಿದ್ದಲು ನಿಕ್ಷೇಪಗಳನ್ನು ಮಂಜೂರು ಮಾಡಲಾಗುತ್ತಿದೆ. ಉಷ್ಣ ವಿದ್ಯುತ್ ಸ್ಥಾವರಗಳಿಗೆ ಅಗತ್ಯವಿರುವಷ್ಟು ಕಲ್ಲಿದ್ದಲನ್ನು ಪೂರೈಸುವ ಸಾಮರ್ಥ್ಯ ಕೋಲ್ ಇಂಡಿಯಾ ಲಿಮಿಟೆಡ್‌ಗೆ ಇರಲಿಲ್ಲ. ಹೀಗಾಗಿ ಕಲ್ಲಿದ್ದಲು ಬ್ಲಾಕ್‌ಗಳನ್ನು ಮಂಜೂರು ಮಾಡಲಾಗಿತ್ತು  ಎಂದು ವಿವರಿಸಿದರು.

1993ರಿಂದ ಇಲ್ಲಿಯವರೆಗೆ 220 ಕಲ್ಲಿದ್ದಲು ನಿಕ್ಷೇಪಗಳನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ 27 ನಿಕ್ಷೇಪಗಳ ಮಂಜೂರಾತಿಯನ್ನು ರದ್ದುಪಡಿಸಲಾಗಿದೆ. ಉಳಿದ 193 ನಿಕ್ಷೇಪಗಳಲ್ಲಿ 100 ನಿಕ್ಷೇಪಗಳನ್ನು ಖಾಸಗಿಯವರಿಗೆ ಹಾಗೂ 93 ನಿಕ್ಷೇಪಗಳನ್ನು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಗೆ ಮಂಜೂರು ಮಾಡಲಾಗಿದೆ. ಮಂಜೂರಾಗಿರುವ 193 ನಿಕ್ಷೇಪಗಳ ಪೈಕಿ ಈಗ 29 ನಿಕ್ಷೇಪಗಳಲ್ಲಿ ಮಾತ್ರ ಕಲ್ಲಿದ್ದಲು ಉತ್ಪಾದನೆ ನಡೆಯುತ್ತಿದೆ ಎಂದರು.

ಎನ್‌ಡಿಎ ಅಧಿಕಾರಾವಧಿಯಲ್ಲಿ 35 ನಿಕ್ಷೇಪಗಳು ಮಂಜೂರಾಗಿವೆ ಎಂದು  ಜೈಸ್ವಾಲ್ ತಿಳಿಸಿದರು.

ಕಲ್ಲಿದ್ದಲು ನಿಕ್ಷೇಪಗಳ ಮಂಜೂರಾತಿಯಲ್ಲಿ ಪ್ರಧಾನಿ ಕಚೇರಿಯ ಕೈವಾಡ ಇರುವುದನ್ನು ಅವರು ನಿರಾಕರಿಸಿದರು.

ಕಲ್ಲಿದ್ದಲು ಮಾಫಿಯಾದಲ್ಲಿ ತೊಡಗಿರುವವರು ಹೊರಗುತ್ತಿಗೆ ಮೂಲಕ ಕಲ್ಲಿದ್ದಲು ಸಂಗ್ರಹಿಸುತ್ತಿದ್ದಾರೆ. ಈ ಅವ್ಯವಹಾರ ತಡೆಯುವುದು ರಾಜ್ಯ ಸರ್ಕಾರಗಳ ಕರ್ತವ್ಯ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.