ಬುಧವಾರ, ಜೂಲೈ 8, 2020
26 °C

ಕಳಪೆ ಪ್ಲಾಸ್ಟಿಕ್ ಕೈಚೀಲ: ಅಂಗಡಿಗಳಿಗೆ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಿಗದಿತ ಗಾತ್ರ(ಮೈಕ್ರಾನ್)ಕ್ಕಿಂತಲೂ ತೆಳುವಾದ ಪ್ಲಾಸ್ಟಿಕ್ ಕೈಚೀಲಗಳನ್ನು (ತೊಟ್ಟೆ) ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಮಹಾನಗರ ಪಾಲಿಕೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಗುರುವಾರ ನಗರದ ವಿವಿಧೆಡೆ ಜಂಟಿ ದಾಳಿ ನಡೆಸಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.ಕನಿಷ್ಠ 20 ಮೈಕ್ರಾನ್ ಅಥವಾ ಅದಕ್ಕೂ ಹೆಚ್ಚು ದಪ್ಪವಾದ ಪ್ಲಾಸ್ಟಿಕ್ ಕೈಚೀಲಗಳನ್ನೇ ಬಳಸಬೇಕು ಎಂಬ ಪರಿಸರ ಮಂಡಳಿ ಆದೇಶವಿದ್ದರೂ, ಉಲ್ಲಂಘಿಸಿ ಹಲವೆಡೆ ಕಳಪೆ ಗುಣಮಟ್ಟದ ಕೈಚೀಲ ಮಾರಾಟ ಮಾಡಲಾಗುತ್ತಿದೆ.ಈ ಕುರಿತು ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತ ಕೆ.ಎನ್.ವಿಜಯಪ್ರಕಾಶ್ ನೇತೃತ್ವದಲ್ಲಿ ಗುರುವಾರ ದಿಢೀರ್ ದಾಳಿ ನಡೆಸಲಾಯಿತು. ನಗರದ ಸೆಂಟ್ರಲ್ ಮಾರ್ಕೆಟ್, ಹಂಪನಕಟ್ಟೆ ಬಳಿಯ ಗೋಕುಲ್ ಮಾರ್ಕೆಟ್ ಸೇರಿದಂತೆ ವಿವಿಧೆಡೆ ದಾಳಿ ನಡೆಸಿದ ಅಧಿಕಾರಿಗಳು, ದಾಸ್ತಾನು ಮಾಡಿಟ್ಟಿದ್ದ ಪ್ಲಾಸ್ಟಿಕ್ ಕೈಚೀಲಗಳ ಗುಣಮಟ್ಟ ಪರಿಶೀಲಿಸಿದರು. ನಿಯಮ ಉಲ್ಲಂಘಿಸಿದ ಅಂಗಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಪರಿಸರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ವಿಜಯಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಕೈಚೀಲಗಳನ್ನು ಮಾರಾಟ ಮಾಡದಂತೆ ಈಗಾಗಲೇ ಪಾಲಿಕೆ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ, ಇವುಗಳ ಬಳಕೆ ನಿಂತಿಲ್ಲ.ಮುಂಬರುವ ದಿನಗಳಲ್ಲಿ ಇಂತಹ ಪ್ರವೃತ್ತಿ ಮತ್ತೆ ಕಂಡುಬಂದರೆ ಅಂಗಡಿಗಳ ಲೈಸನ್ಸ್ ರದ್ದು ಮಾಡಲು ಚಿಂತನೆ ನಡೆಸಲಾಗುವುದು ಎಂದರು. ಪಾಲಿಕೆ ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ, ಸದಸ್ಯೆ ಶಾಂತಾ, ಪರಿಸರ ಮಂಡಳಿ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.