ಗುರುವಾರ , ಮೇ 28, 2020
27 °C

ಕಳಸ: ಖಾತೆ ತೆರೆದ ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸ: ಹೋಬಳಿ ವ್ಯಾಪ್ತಿಯ ಎರಡು ಜಿ.ಪಂ. ಮತ್ತು ಮೂರು ತಾ.ಪಂ. ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸುವುದರೊಂದಿಗೆ ಹೋಬಳಿ ರಾಜಕೀಯ ಕ್ಷೇತ್ರದಲ್ಲಿ ತನ್ನ ಸಂಪೂರ್ಣ ಮೇಲುಗೈ ಸಾಧಿಸಿದೆ. ಮಂಗಳವಾರ ಬೆಳಿಗ್ಗೆ ಮೊದಲು ಮತ ಎಣಿಕೆ ನಡೆದ ಕಳಸ ತಾ.ಪಂ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾಗಿದ್ದ ಅನ್ನಪೂರ್ಣ 1870 ಮತ ಪಡೆದು ಕಾಂಗ್ರೆಸ್‌ನ ಮೀನಾಕ್ಷಿ (1504 ಮತ) ಅವರನ್ನು  366 ಮತಗಳ ಅಂತರದಿಂದ ಸೋಲಿಸಿ ಕಳಸ ಹೋಬಳಿಯಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿಯ ಖಾತೆ ತೆರೆದರು.

 

ಆನಂತರ ನಡೆದ ಮತ ಎಣಿಕೆಯಲ್ಲಿ ಕಳಸ ಜಿ.ಪಂ. ಕ್ಷೇತ್ರದಲ್ಲಿ ಬಿಜೆಪಿಯ ಕವಿತಾ ಚಂದ್ರು 3690 ಮತ ಗಳಿಸಿ ತಮ್ಮ ಸಮೀಪದ ಸ್ಪರ್ಧಿಯಾಗಿದ್ದ ಕಾಂಗ್ರೆಸ್‌ನ ರಾಜಮ್ಮ(2654 ಮತ) ಅವರನ್ನು 1036 ಮತಗಳ ಅಂತರದಿಂದ ಸೋಲಿಸಿದರು.  ಕೂವೆ ಜಿ.ಪಂ. ಕ್ಷೇತ್ರದಲ್ಲಿ 4283 ಮತ ಗಳಿಸಿದ ಅರೇಕೊಡಿಗೆ ಶಿವು ಜೆಡಿಎಸ್‌ನ ಬಿ.ಎಲ್. ಸಂದೀಪ್(3250 ಮತ) ಅವರನ್ನು 1033 ಮತಗಳಿಂದ ಸೋಲಿಸಿದರು. ಆನಂತರ ಎಣಿಕೆ ನಡೆದ ಸಂಸೆ ಮತ್ತು ಮರಸಣಿಗೆ ತಾ.ಪಂ ಕ್ಷೇತ್ರಗಳಲ್ಲೂ ಕ್ರಮವಾಗಿ ಎಂ.ಎ.ಶೇಷಗಿರಿ ಮತ್ತು ಹಿತ್ಲುಮಕ್ಕಿ ರಾಜೇಂದ್ರ ಜಯಗಳಿಸುವುದರೊಂದಿಗೆ ಕಳಸ ಹೋಬಳಿಯ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಪಾರಮ್ಯ ಸಾಧಿಸಿತು.2154 ಮತ ಪಡೆದ ಶೇಷಗಿರಿ ತಮ್ಮ ಎದುರಾಳಿ ಕಾಂಗ್ರೆಸ್‌ನ ದೇಜಪ್ಪ(1459 ಮತ) ಅವರಿಗಿಂತ 695 ಹೆಚ್ಚು ಮತ ಪಡೆದರೆ, 1891 ಮತ ಗಳಿಸಿದ ರಾಜೇಂದ್ರ ಕಾಂಗ್ರೆಸ್‌ನ ರತ್ನಾಕರ (1329 ಮತ) ಅವರಿಗಿಂತ 562 ಹೆಚ್ಚು ಮತ ಪಡೆದರು.   ಕಳೆದ ಬಾರಿಯ ಐದೂ ಸ್ಥಾನ ಕಳೆದುಕೊಂಡ ಜೆಡಿಎಸ್ ನಾಲ್ಕು ಕ್ಷೇತ್ರಗಳಲ್ಲಿ ಮೂರನೇ ಸ್ಥಾನ ಗಳಿಸಿ ಕಳಪೆ ಸಾಧನೆ ತೋರಿತು. ಮರಸಣಿಗೆ ಮತ್ತು ಸಂಸೆಯಲ್ಲಿ ತಾ.ಪಂ. ಸ್ಥಾನದ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕೂಡ ಯಾವುದೇ ಸ್ಥಾನ ಪಡೆಯದೆ ಸೋಲಿನ ಸರಮಾಲೆ ತೊಟ್ಟಿತು.ಕಳಸದಲ್ಲಿ ಮಂಗಳವಾರ ಸಂಜೆ ನಡೆದ ವಿಜಯೋತ್ಸವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಜಯಕಾರ ಹಾಕಿದರು. ಅಭ್ಯರ್ಥಿಗಳನ್ನು ಪಟ್ಟಣದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ದು ಸಂಭ್ರಮಿಸಿದರು. ಮುಖಂಡರಾದ ವೆಂಕಟಸುಬ್ಬಯ್ಯ, ಗಿರೀಶ್ ಹೆಮ್ಮಕ್ಕಿ, ಬಾಲಕೃಷ್ಣ ಕಾಮತ್, ಶಿವೇಗೌಡ, ಜಗದೀಶ್, ಉಷಾ, ರಂಗನಾಥ್ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.