ಗುರುವಾರ , ಫೆಬ್ರವರಿ 25, 2021
31 °C
ಪೊಲೀಸ್‌ ಇಲಾಖೆಗೆ ಬಲ ತುಂಬದ ಸರ್ಕಾರ: ನಗರಕ್ಕೆ ಒಂದೇ ‌ಠಾಣೆ, ಜನರಲ್ಲಿ ಆತಂಕ

ಕಳ್ಳರ ಕೈಚಳಕಕ್ಕೆ ನಡುಗಿದ ಯಾದಗಿರಿ

ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

ಕಳ್ಳರ ಕೈಚಳಕಕ್ಕೆ ನಡುಗಿದ ಯಾದಗಿರಿ

ಯಾದಗಿರಿ: ಜಿಲ್ಲಾ ಕೇಂದ್ರದಲ್ಲಿ ಕಳ್ಳತನದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಅದರಲ್ಲೂ ಸರಣಿ ಕಳ್ಳತನದ ಪ್ರಕರಣ ಇತ್ತೀಚೆಗೆ ಸಾಮಾನ್ಯ ಎನ್ನುವಂತಾಗಿದೆ. ಜಿಲ್ಲಾ ಕೇಂದ್ರದಲ್ಲಿ ವಾಸಿಸುತ್ತಿರುವ ಜನರು ಮನೆಗಳಿಗೆ ಬೀಗ ಹಾಕುವುದಕ್ಕೂ ಹಿಂದೇಟು ಹಾಕುವಂತಾಗಿದೆ.ಹೌದು, ನಗರದಲ್ಲಿ ಕಳ್ಳತನದ ಪ್ರಕರಣಗಳು ಎಗ್ಗಿಲ್ಲದೇ ನಡೆಯುತ್ತಿವೆ. ರಾತ್ರಿ ಮನೆಗೆ ಹಾಕಿರುವ ಬೀಗವನ್ನು ಒಡೆದು ಕಳವು ಮಾಡುತ್ತಿರುವ ಕಳ್ಳರು, ಚಿನ್ನಾಭರಣ, ನಗದನ್ನು ದೋಚುತ್ತಲೇ ಇದ್ದಾರೆ.ಕಳೆದ ಒಂದು ತಿಂಗಳಲ್ಲಿಯೇ ಮೂರು ಬಾರಿ ಸರಣಿ ಕಳ್ಳತನದ ಪ್ರಕರಣಗಳು ನಗರದಲ್ಲಿ ನಡೆದಿವೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣಗಳೂ ದಾಖಲಾಗಿವೆ. ಆದರೆ, ಆರೋಪಿಗಳ ಬಂಧನ ಮಾತ್ರ ಇದುವರೆಗೆ ಸಾಧ್ಯವಾಗಿಲ್ಲ.ನಗರದಲ್ಲಿ ಕಳ್ಳತನದ ಪ್ರಕರಣಗಳು ನಡೆಯುತ್ತಲೇ ಇವೆ. ಪ್ರಕರಣ ನಡೆದಾಗಲೊಮ್ಮೆ ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ, ತನಿಖೆ ಮಾಡುತ್ತಾರೆ. ಅಲ್ಲಿಗೆ ಪ್ರಕರಣದ ವಿಚಾರಣೆಯೂ ಮುಗಿದು ಹೋಗುತ್ತದೆ. ಕಳುವಾದ ವಸ್ತುಗಳೂ ಸಿಗುತ್ತಿಲ್ಲ. ಕಳ್ಳರೂ ಕೈಗೆ ಸಿಗುತ್ತಿಲ್ಲ ಎಂದು ನಗರದ ಜನರು ದೂರುತ್ತಿದ್ದಾರೆ.ಈಚೆಗೆ ಹುಣಸಗಿಯಲ್ಲಿ ಆಭರಣದ ಅಂಗಡಿ ದರೋಡೆಗೆ ಯತ್ನಿಸಿದ ಪ್ರಕರಣವನ್ನು ಕೆಲವೇ ದಿನಗಳಲ್ಲಿ ಅಲ್ಲಿನ ಪೊಲೀಸರು ಭೇದಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ್ದಾರೆ. ಅದೇ ರೀತಿಯ ಕಾರ್ಯಾಚರಣೆ ನಗರದಲ್ಲಿಯೂ ಆಗಬೇಕಾಗಿದೆ. ಇದಕ್ಕೆ ಪೊಲೀಸರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ ಎನ್ನುವುದು ನಾಗರಿಕರ ಒತ್ತಾಯ.ಸೌಲಭ್ಯವಿಲ್ಲದ ಪೊಲೀಸ್‌ ಇಲಾಖೆ: ಜಿಲ್ಲೆಯಾಗಿ ಐದು ವರ್ಷವಾದರೂ ಬಿಳಿ ಸಮವಸ್ತ್ರದ ಪೊಲೀಸರು ಇನ್ನೂ ಕಾಣುತ್ತಿಲ್ಲ. ಮಹಿಳೆಯರಿಗೆ ಸಂಬಂಧಿಸಿದ ದೂರು ನೀಡಲು ಠಾಣೆಯೂ ಆರಂಭವಾಗಿಲ್ಲ. ಇಡೀ ನಗರದ ಕಾನೂನು, ಸುವ್ಯವಸ್ಥೆ ಹಾಗೂ ಸಂಚಾರ ವ್ಯವಸ್ಥೆನಿಯಂತ್ರಿಸಲು ಇರುವುದೂ ಏಕೈಕ ಪೊಲೀಸ್‌ ಠಾಣೆ.ಸುಮಾರು 75 ಸಾವಿರದಷ್ಟು ಜನಸಂಖ್ಯೆ ಹೊಂದಿರುವ ನಗರದಲ್ಲಿ ಒಂದೇ ಒಂದು ಪೊಲೀಸ್‌ ಠಾಣೆ ಇದೆ. ನಗರದ ಗಾಂಧಿ ವೃತ್ತದಲ್ಲಿರುವ ನಗರ ಪೊಲೀಸ್‌ ಠಾಣೆಯ ಸಿಬ್ಬಂದಿಯೇ ಇಡೀ ನಗರದಲ್ಲಿ ಕೆಲಸ ಮಾಡಬೇಕಾಗಿದೆ.ಭೀಮಾ ನದಿ ಸೇತುವೆಯಿಂದ ಮುಂಡರಗಿ ರಸ್ತೆಯಲ್ಲಿರುವ ಕೈಗಾರಿಕಾ ಪ್ರದೇಶದವರೆಗೂ ನಗರ ಠಾಣೆಯ ವ್ಯಾಪ್ತಿ ವಿಸ್ತರಿಸಿದೆ. ಈ ವ್ಯಾಪ್ತಿಯಲ್ಲಿ ನಗರದ ಕೇಂದ್ರ ಬಸ್‌ ನಿಲ್ದಾಣ, ಬ್ಯಾಂಕ್‌ ಶಾಖೆಗಳು, ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯಿತಿ ಕಚೇರಿ, ಗಾಂಧಿ ವೃತ್ತದ ಮಾರುಕಟ್ಟೆ, ಚಕ್ರಕಟ್ಟ, ಕೃಷಿ ಉತ್ಪನ್ನ ಮಾರುಕಟ್ಟೆ ಹೀಗೆ ಕೈಗಾರಿಕಾ ಪ್ರದೇಶ ಹೀಗೆ ಅನೇಕ ಸರ್ಕಾರಿ ಕಚೇರಿಗಳು, ಸಾರ್ವಜನಿಕರ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.ಒಂದೆಡೆ ಕಳ್ಳತನ, ಕ್ರಿಮಿನಲ್‌ ಪ್ರಕರಣಗಳು ಸೇರಿದಂತೆ ಹಲವಾರು ಪ್ರಕರಣಗಳ ತನಿಖೆ ನಡೆಸಬೇಕಾಗಿದ್ದು, ಇನ್ನೊಂದೆಡೆ ರಸ್ತೆ ಅಪಘಾತ, ವಾಹನಗಳಿಗೆ ಸಂಬಂಧಿಸಿದ ಪ್ರಕರಣಗಳು, ಜೊತೆಗೆ ಮಹಿಳೆಯರಿಗೆ ಸಂಬಂಧಿಸಿದ ದೂರುಗಳ ಬಗ್ಗೆಯೂ ವಿಚಾರಣೆ ನಡೆಸುವ ಅನಿವಾರ್ಯತೆ. ಈ ಎಲ್ಲ ಪ್ರಕರಣಗಳನ್ನು ನಗರ ಠಾಣೆಯ ಪೊಲೀಸರೇ ತನಿಖೆ ಮಾಡಬೇಕಾಗಿದೆ. ಇದರಿಂದಾಗಿ ಇಲ್ಲಿನ ಸಿಬ್ಬಂದಿಗೂ ಹೆಚ್ಚಿನ ಹೊರೆ ಬೀಳುತ್ತಿದೆ ಎಂದು ಇಲಾಖೆಯ ಸಿಬ್ಬಂದಿಯೇ ಅಲವತ್ತುಕೊಳ್ಳುತ್ತಿದ್ದಾರೆ.ನಗರದ ಕಾನೂನು ಸುವ್ಯವಸ್ಥೆ, ಸಂಚಾರ ವ್ಯವಸ್ಥೆ, ಮಹಿಳೆಯರಿಗೆ ಸಂಬಂಧಿಸಿದ ದೂರುಗಳನ್ನು ನೋಡಿಕೊಳ್ಳುವ ನಗರ ಠಾಣೆಯ ಪೊಲೀಸರಿಗೆ, ಗಣ್ಯರು ಬಂದರಂತೂ ಬಿಡುವಿಲ್ಲದ ಕೆಲಸ ಶುರುವಾಗುತ್ತದೆ. ಗಣ್ಯ ವ್ಯಕ್ತಿಗಳಿಗೆ ಭದ್ರತೆ ಒದಗಿಸಬೇಕು. ಉನ್ನತ ಅಧಿಕಾರಿಗಳಿಗೂ ಭದ್ರತೆ ನೀಡಬೇಕು. ಕೋರ್ಟ್‌ ಕೆಲಸಗಳಿಗೂ ಹೋಗಬೇಕು. ಅಲ್ಲದೇ ವಿಚಾರಣೆಗೆ ಸಂಬಂಧಿಸಿದಂತೆ ಬೇರೆ ನಗರಗಳಿಗೆ ಓಡಾಡಬೇಕು. ಹೀಗಾಗಿ ನಗರದಲ್ಲಿನ ಪೊಲೀಸರಿಗೆ ಬಿಡುವೇ ಇಲ್ಲದಂತಾಗಿದೆ.‘ನಮಗೂ ಕೆಲಸ ಹೆಚ್ಚಾಗೈತಿ. ಏನ್‌ ಮಾಡೋದ್ರಿ, ಎಕ್ಸಿಡೆಂಟ್‌ ಆದ್ರೂ ನಾವು ಹೋಗಬೇಕು. ಕಳವಾದ್ರು ನಮಗ, ಇನ್ನ ಹೊಡದಾಡ್ರಿ ಕೇಸ್‌ ದಾಖಲ ಮಾಡಬೇಕು. ಮಿನಿಸ್ಟರು, ಆಫೀಸರ್‌ ಬಂದ್ರಂತೂ ಅವರಿಗೆ ಬಂದೋಬಸ್ತ್‌ ಮಾಡಬೇಕು. ಏನಂತ ಮಾಡೋಣ ಹೇಳ್ರಿ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಪೊಲೀಸ್‌ ಸಿಬ್ಬಂದಿಯೊಬ್ಬರು ಹೇಳುತ್ತಾರೆ.‘ಯಾದಗಿರಿ ನಗರದಲ್ಲಿ ಇನ್ನೂ ನಿಜಾಮನ ಕಾಲದಲ್ಲಿ ಇರುವಷ್ಟೇ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ಸಿಬ್ಬಂದಿಯೂ ಇಲ್ಲದಾಗಿದೆ. ನಗರಕ್ಕೆ ಇನ್ನೊಂದು ಪೊಲೀಸ್‌ ಠಾಣೆಯ ಅವಶ್ಯಕತೆಯೂ ಇದೆ. ಸರ್ಕಾರಕ್ಕೆ ಕಳೆದ ನಾಲ್ಕು ವರ್ಷಗಳಿಂದ ಮನವಿ ಸಲ್ಲಿಸುತ್ತಲೇ ಬರಲಾಗಿದೆ. ಆದರೆ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ’ ಎನ್ನುತ್ತಾರೆ ನಿವೃತ್ತ ಶಿಕ್ಷಕ ಅಯ್ಯಣ್ಣ ಹುಂಡೇಕಾರ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.