ಶುಕ್ರವಾರ, ಮೇ 7, 2021
22 °C

ಕಸಾಪ ಕುರಿತು ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಇಂದು ಸಾಹಿತ್ಯಕ್ಕಿಂತ ಹೆಚ್ಚಿನ ಆದ್ಯತೆಯನ್ನು ನಾಡಿನ ಜನಶಕ್ತಿಯ ಕ್ರೋಡೀಕರಣಕ್ಕೆ ನೀಡಬೇಕು. ಸಾಹಿತ್ಯ ಕುರಿತು ಆಳವಾದ ತಿಳಿವಳಿಕೆ ಇರುವವರೇ ಪರಿಷತ್ತಿನ ಅಧ್ಯಕ್ಷರಾಗಬೇಕು ಎಂದು ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಹೇಳಿದರು.ಕನ್ನಡ ವೇದಿಕೆ, ಶಾಸಕರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, `ಇಂದಿನ ಅನೇಕ ಸಾಹಿತಿಗಳು ಬೀದಿಗಿಳಿದು ಹೋರಾಟ ನಡೆಸಲು ಮುಂದಾಗುತ್ತಿಲ್ಲ. ಅಕಾಡೆಮಿಗಳ ಅಧ್ಯಕ್ಷ, ಸದಸ್ಯ ಸ್ಥಾನ ಹಾಗೂ ವಿಶ್ವವಿದ್ಯಾಲಯಗಳ ಕುಲಪತಿ ಸ್ಥಾನ ಕಳೆದುಕೊಳ್ಳಲು ಅವರು ಸಿದ್ಧರಿಲ್ಲ~ ಎಂದು ಲೇವಡಿ ಮಾಡಿದರು.ರಾಜ್ಯದಲ್ಲಿ ಇಲ್ಲಿಯವರೆಗೆ `ಕರ್ನಾಟಕ ಸರ್ಕಾರ~ ಆಡಳಿತ ನಡೆಸಿದೆಯೇ ವಿನಃ `ಕನ್ನಡದ ಸರ್ಕಾರ~ ಅಲ್ಲ. ಕನ್ನಡದ ಸರ್ಕಾರ ಆಡಳಿತಕ್ಕೆ ಬರುವವರೆಗೆ ರಾಜ್ಯಕ್ಕೆ ಒಳಿತಿಲ್ಲ. ರಾಷ್ಟ್ರೀಯ ಪಕ್ಷಗಳು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವತನಕ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ದೊರೆಯುವುದಿಲ್ಲ ಎಂದರು.`ಚಂಪಾ~ ಅವರನ್ನು ಸನ್ಮಾನಿಸಿ ಮಾತನಾಡಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್, `ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರಿಗೆ ಚಾಮರಾಜನಗರಕ್ಕೆ ಭೇಟಿ ನೀಡಲು ಸಾಧ್ಯವಾಗದಿದ್ದರೆ, ಆ ಜಿಲ್ಲೆಗೆ ಪ್ರತ್ಯೇಕ ರಾಜ್ಯದ ಸ್ಥಾನ ನೀಡಲಿ. ಚಾಮರಾಜನಗರಕ್ಕೆ ಭೇಟಿ ನೀಡಲು ಯಾವ ಮುಖ್ಯಮಂತ್ರಿಯೂ ಮನಸ್ಸು ಮಾಡಿಲ್ಲ. ಅಲ್ಲಿಗೆ ಭೇಟಿ ನೀಡುವಂತೆ ಸದಾನಂದ ಗೌಡರನ್ನು ಒಂದು ವಾರದಲ್ಲಿ ಕೋರಲಾಗುವುದು~ ಎಂದು ಹೇಳಿದರು.ನಾಡಿನ ಸಮಸ್ಯೆಗಳ ವಿರುದ್ಧ ತೀವ್ರ ಹೋರಾಟಕ್ಕೆ ಅಣಿಯಾಗಬೇಕಿದೆ. ಸಾಹಿತಿಗಳು, ಸಿನಿಮಾ ನಟ-ನಟಿಯರು ಬೀದಿಗಿಳಿದು ಹೋರಾಡಲು ಸಿದ್ಧರಾಗಬೇಕು. ಕನ್ನಡ ಚಳವಳಿ ದೊಡ್ಡ ಪ್ರಮಾಣದಲ್ಲಿ ನಡೆಯಬೇಕು ಎಂದು ಹೇಳಿದರು. ನಾಡಿನ ಚರ್ಚುಗಳಲ್ಲೂ ಕನ್ನಡದಲ್ಲಿ ಪೂಜೆ ಆರಂಭವಾಗಬೇಕು. ಈ ನಿಟ್ಟಿನಲ್ಲೂ ಹೋರಾಟ ಆರಂಭಿಸಲಾಗುವುದು ಎಂದರು. ಪಂಪ ಪ್ರಶಸ್ತಿಯ ಹಿನ್ನೆಲೆಯಲ್ಲಿ ಚಂಪಾ ಅವರಿಗೆ ಸನ್ಮಾನ ಆಯೋಜಿಸಲಾಗಿದೆ ಎಂದು ತಿಳಿಸಿದರು.ಸಾಹಿತಿ `ಪುಸ್ತಕಮನೆ~ ಹರಿಹರಪ್ರಿಯ ಮಾತನಾಡಿ, `ಕೆಲವು ಬುದ್ಧಿಜೀವಿಗಳು ಕನ್ನಡದ ಮಾನ ಹರಾಜಿಗಿಟ್ಟಿದ್ದಾರೆ. ಒಂದು ಬಾರಿ ಕಸಾಪ ಅಧ್ಯಕ್ಷರಾದವರು ಮತ್ತೊಮ್ಮೆ ಅದೇ ಸ್ಥಾನಕ್ಕೆ ಸ್ಪರ್ಧಿಸಬಾರದು ಎಂದು ಪ್ರೊ.ಜಿ. ವೆಂಕಟಸುಬ್ಬಯ್ಯ ಅವರು ಹೇಳಿರುವುದು ಸರಿಯಲ್ಲ~ ಎಂದು ವಾಗ್ದಾಳಿ ಆರಂಭಿಸಿದರು. ತಕ್ಷಣ ಮಧ್ಯಪ್ರವೇಶಿಸಿದ ವಾಟಾಳ್, `ಇಲ್ಲಿ ಚಂಪಾ ಅವರ ಕುರಿತು ಮಾತನಾಡೋಣ.ಹಿರಿಯರಾದ ವೆಂಕಟಸುಬ್ಬಯ್ಯ ಅವರನ್ನು ಇಲ್ಲಿ ವಾಗ್ದಾಳಿಗೆ ಈಡು ಮಾಡುವುದು ಬೇಡ~ ಎಂದು ಹರಿಹರಪ್ರಿಯ ಅವರ ಮಾತಿಗೆ ತಡೆ ಒಡ್ಡಿದರು.ನಂತರ ಮಾತು ಮುಂದುವರಿಸಿದ ಹರಿಹರಪ್ರಿಯ, `ಕಸಾಪದಲ್ಲಿ ಕೇವಲ ಮೇಲ್ವರ್ಗದವರೇ ಇದ್ದರು. ಅಲ್ಲಿ ಅಖಂಡ ಕರ್ನಾಟಕವನ್ನು ಪ್ರತಿನಿಧಿಸಿದವರು ಚಂಪಾ~ ಎಂದು ಹೇಳಿದರು. `ಅಹಿಂದ~ ಮುಖಂಡ ಪ್ರೊ. ನರಸಿಂಹಯ್ಯ, ಕನ್ನಡ ವೇದಿಕೆ ಅಧ್ಯಕ್ಷ ಕೆ. ಪ್ರಭಾಕರ ರೆಡ್ಡಿ, ಸಾಹಿತಿ ಕೆ.ಎಸ್.ಭಗವಾನ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.