ಮಂಗಳವಾರ, ಜೂನ್ 15, 2021
26 °C

ಕಾಂಗ್ರೆಸ್‌ನಿಂದ ಪಾದಯಾತ್ರೆ ಪ್ರಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲೂ ಒಂದು ವಾರದ ಅವಧಿಯ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಕಾಂಗ್ರೆಸ್‌ ಪಕ್ಷ ಭಾನುವಾರ­ದಿಂದಲೇ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಲಿದೆ.ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಠ ಒಂದು ವಾರದ ಅವಧಿಯ ಪಾದಯಾತ್ರೆ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಎಐಸಿಸಿ ವರಿಷ್ಠರು ಕೆಪಿಸಿಸಿ ಪ್ರಮುಖರಿಗೆ ನಿರ್ದೇಶನ ನೀಡಿದ್ದರು. ಅದರಂತೆ ಭಾನುವಾರದಿಂದಲೇ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತಿದೆ. ಪಾದಯಾತ್ರೆಯ ಮೂಲಕವೇ ಚುನಾವಣಾ ಪ್ರಚಾರ ಆರಂಭಿಸಲು ಕಾಂಗ್ರೆಸ್‌ ನಾಯಕರು ತೀರ್ಮಾನಿಸಿದ್ದಾರೆ.ಭಾನುವಾರದಿಂದ ಆರಂಭವಾಗುವ ಪಾದಯಾತ್ರೆ ಕಾರ್ಯಕ್ರಮ ಮುಂದಿನ ಭಾನುವಾರ (ಮಾರ್ಚ್‌ 16) ಅಂತ್ಯಗೊಳ್ಳಲಿದೆ. ಈ ಅವಧಿಯಲ್ಲಿ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಂದು ದಿನದ ಪಾದಯಾತ್ರೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು, ಕಳೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಅಭ್ಯರ್ಥಿಗಳು, ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಈ ಪಾದಯಾತ್ರೆಗಳಲ್ಲಿ ಭಾಗವಹಿಸುವರು.ಪ್ರತಿ ವಿಧಾನಸಭಾ  ಕ್ಷೇತ್ರದಲ್ಲೂ 10ರಿಂದ 15 ಕಿ.ಮೀ. ಉದ್ದದ ಪಾದಯಾತ್ರೆ ನಡೆಯಲಿದ್ದು, ಮಾರ್ಗ ಮಧ್ಯದಲ್ಲಿನ ಪ್ರಮುಖ ಸ್ಥಳಗಳಲ್ಲಿ ಬಹಿರಂಗ ಸಭೆಗಳನ್ನು ನಡೆಸಿ, ಪಕ್ಷದ ಪರ ಪ್ರಚಾರ ನಡೆಸಲು ಕಾಂಗ್ರೆಸ್‌ ಮುಖಂಡರು ಯೋಚಿಸಿದ್ದಾರೆ. ಕೇಂದ್ರದ ಯುಪಿಎ ಸರ್ಕಾರದ ಸಾಧನೆಗಳು ಮತ್ತು ರಾಜ್ಯದ ಕಾಂಗ್ರೆಸ್‌ ಸರ್ಕಾರದ ಜನಪರ ಯೋಜನೆಗಳನ್ನು ಬಳಸಿಕೊಂಡು ಪ್ರಚಾರ ನಡೆಸಲು ಕೆಪಿಸಿಸಿ ಸಿದ್ಧತೆ ನಡೆಸಿದೆ.ಪರಮೇಶ್ವರ್‌ ಭಾಗಿ: ನಗರದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್‌ ಗುಂಡೂರಾವ್‌, ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಜಿ.ಎ.ಬಾವಾ ಮತ್ತಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವು ಪ್ರಮುಖ ಲೋಕಸಭಾ ಕ್ಷೇತ್ರಗಳಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಪಾದಯಾತ್ರೆಯಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಎಲ್ಲ ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ ಕೆಪಿಸಿಸಿ ಅಧ್ಯಕ್ಷರು ಸೂಚನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.