ಶುಕ್ರವಾರ, ಜೂನ್ 18, 2021
22 °C

ಕಾಂಗ್ರೆಸ್‌ ಸೇರಲು ಯೋಗೇಶ್ವರ್‌ ಸಜ್ಜು

ಎಸ್‌. ಸಂಪತ್‌ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಸಮಾಜ­ವಾದಿ ಪಕ್ಷದ ಶಾಸಕ ಸಿ.ಪಿ.­ಯೋಗೇಶ್ವರ್‌ ಶೀಘ್ರವೇ ಕಾಂಗ್ರೆಸ್‌ ಸೇರುವುದು ಸ್ಪಷ್ಟವಾಗಿದೆ.‘ಚುನಾವಣೆಯಲ್ಲಿ ಯಾರಿಗಾದರೂ ಬಹಿ­ರಂಗ ಬೆಂಬಲ ನೀಡು­­ವುದಕ್ಕಿಂತ ನೆಚ್ಚಿನ ಅಭ್ಯರ್ಥಿಯ ಜೊತೆಯಲ್ಲಿ ಇದ್ದು, ಅವರ ಗೆಲುವಿಗೆ ಸಹಕಾರಿ­ಯಾ­ಗು­ವುದು ಉತ್ತಮ. ಈ ನಿಟ್ಟಿ­ನಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಜತೆ ಚರ್ಚೆ ನಡೆಯುತ್ತಿದೆ’ ಎಂದು ಯೋಗೇಶ್ವರ್‌ ಭಾನು­ವಾರ ‘ಪ್ರಜಾವಾಣಿ’ಗೆ ತಿಳಿಸಿದರು.‘ಕಾಂಗ್ರೆಸ್‌ ಸೇರುವಂತೆ ಆ ಪಕ್ಷದ ಹಲವಾರು ಮುಖಂಡರು ನನ್ನನ್ನು ಕೋರಿ­ದ್ದಾರೆ. ಸಚಿವ ಡಿ.ಕೆ.­ಶಿವ­ಕುಮಾರ್‌, ಸಂಸದ ಡಿ.ಕೆ.­ಸುರೇಶ್‌ ಅವರೂ ನನ್ನನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಮುಖ್ಯ­­ಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.­ಪರ­ಮೇಶ್ವರ್‌ ಈ ವಿಷಯವಾಗಿ ಸಕಾರಾತ್ಮಕವಾಗಿ ಸ್ಪಂದಿಸಿ­ದ್ದಾರೆ.ಪಕ್ಷದ ರಾಷ್ಟ್ರೀಯ ಉಸ್ತುವಾರಿ ವಹಿಸಿರುವ ದಿಗ್ವಿಜಯ್‌ಸಿಂಗ್‌ ಅವ­ರೊಡನೆ ಮಾತುಕತೆ ನಡೆದಿದ್ದು, ಮಂಗ­-ಳ­­ವಾರ ಇನ್ನೊಂದು ಸುತ್ತಿನ ಮಾತುಕತೆ ನಡೆಯಲಿದೆ. ಒಂದು ವಾರ­ದಲ್ಲಿ ಸ್ಪಷ್ಟ ಚಿತ್ರಣ ಹೊರಹೊ­ಮ್ಮಲಿದೆ’ ಎಂದು ಅವರು ಪ್ರತಿಕ್ರಿಯಿಸಿದರು.‘ಗೆದ್ದ ಎತ್ತಿನ ಬಾಲ ಅನಿವಾರ್ಯ’: ‘ಒಂದೊಂದು ಚುನಾ­ವಣೆ­ಯಲ್ಲಿ ಒಂದೊಂದು ಪಕ್ಷ ಬದಲಿಸುತ್ತಿದ್ದೇನೆ ಎಂಬ ಆರೋಪ ನನ್ನ ಮೇಲಿರುವುದು ನಿಜ. ಆದರೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕಾಳಜಿ ಇರುವ ನನಗೆ ಗೆದ್ದ ಎತ್ತಿನ ಬಾಲ ಹಿಡಿಯುವುದು ಅನಿವಾರ್ಯ­ವಾಗಿದೆ.  ವೈಯಕ್ತಿಕ ಲಾಭಕ್ಕಿಂತ ಕ್ಷೇತ್ರದ ಅಭಿ­ವೃದ್ಧಿ ದೃಷ್ಟಿಯಿಂದ ನಾನು ಈ ನಿರ್ಧಾರ ತೆಗೆದುಕೊಳ್ಳು­ತ್ತಿ­ದ್ದೇನೆ. ಕಾಂಗ್ರೆಸ್‌ ನನ್ನ ಮಾತೃ ಪಕ್ಷವಾಗಿದ್ದು, ಕಳೆದ ವಿಧಾನ­ಸಭಾ ಚುನಾವಣೆಯಲ್ಲಿಯೇ ಕಾಂಗ್ರೆಸ್‌ ಸೇರಲು ಮುಂದಾಗಿದ್ದೆ. ಆದರೆ, ಕೆಲವರ ಪಿತೂರಿಯಿಂದ ಆಗ ನನಗೆ ಕಾಂಗ್ರೆಸ್‌ ಟಿಕೆಟ್‌ ಸಿಗಲಿಲ್ಲ. ಈ ಭಾಗದಲ್ಲಿ ರಾಜಕೀಯವಾಗಿ ಎಚ್‌.ಡಿ.­ಕುಮಾರಸ್ವಾಮಿ ಕುಟುಂಬವನ್ನು ಎದುರಿಸಿ, ನನ್ನ ಅಸ್ತಿತ್ವ ಉಳಿಸಿಕೊಳ್ಳಲೇ ಬೇಕಿತ್ತು. ಹೀಗಾಗಿ ರಾಷ್ಟ್ರೀಯ ಪಕ್ಷ ಎನಿಸಿದ ಸಮಾಜವಾದಿ ಪಕ್ಷದಿಂದ ಟಿಕೆಟ್‌ ಪಡೆದು ಸ್ಪರ್ಧಿಸಿದೆ. ಜನರು ನನ್ನ ನಿರ್ಧಾರ ಬೆಂಬಲಿಸಿ, ಚುನಾವಣೆಯಲ್ಲಿ ಗೆಲ್ಲಿಸಿದರು’ ಎಂದು ಅವರು ಉತ್ತರಿಸಿದರು.ಡಿಕೆಶಿ ಆಗಲೇ ಹೇಳಿದ್ದರು: ‘ಸಿ.ಪಿ.­ಯೋಗೇಶ್ವರ್‌ ಮೂಲತಃ ಕಾಂಗ್ರೆಸ್ಸಿಗ. ಅವರ ರಕ್ತದಲ್ಲಿಯೇ ಕಾಂಗ್ರೆಸ್ ಇದೆ. ಕಳೆದ ಉಪ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ ಬೆಂಬಲಿಸಿದ್ದರು. ಈಗಲೂ ಅಭಿವೃದ್ಧಿ ಕೆಲಸ ಮಾಡುವ ಪಕ್ಷವನ್ನು ಬೆಂಬಲಿ­ಸುವುದಾಗಿ ಹೇಳಿದ್ದಾರೆ.ಕಾಂಗ್ರೆಸ್ ಅವರ ಎಲ್ಲ ಅಭಿವೃದ್ಧಿ ಕೆಲಸಕ್ಕೂ ಸಹಕಾರ ನೀಡುತ್ತಿದ್ದು, ಚುನಾವಣೆ­ಯಲ್ಲಿ ಅವರ ಸಹಕಾರ ಅಪೇಕ್ಷಿಸಿದೆ. ಅವರು ಪಕ್ಷ ಸೇರ್ಪಡೆಯಾದರೆ ಅಭ್ಯಂತರವಿಲ್ಲ’ ಎಂದು ಇಂದನ ಸಚಿವ ಡಿ.ಕೆ.­ಶಿವಕುಮಾರ್‌ ಇತ್ತೀಚೆಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.ಯೋಗೇಶ್ವರ್‌ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ 2013ರ ಆಗಸ್ಟ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ತೆರೆಯ ಮರೆಯಲ್ಲೇ ಬೆಂಬಲಿಸಿದ್ದರು.ಪಕ್ಷದಿಂದ ಪಕ್ಷಕ್ಕೆ...

ನಟನಾಗಿದ್ದ ಸಿ.ಪಿ.ಯೋಗೇಶ್ವರ್‌ ಮೂಲತಃ ಕಾಂಗ್ರೆಸ್‌­ನಲ್ಲಿದ್ದರು. ಚನ್ನಪಟ್ಟಣದಲ್ಲಿ 1999ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದ ಕಾರಣ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ ಅಭ್ಯರ್ಥಿ ಸಾದತ್‌ ಅಲಿಖಾನ್‌ ಮತ್ತು ಜನತಾ­ದಳದ ವರದೇಗೌಡ ಅವರನ್ನು ಸೋಲಿಸಿದ್ದರು.2004ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದ ಅವರು ಶಾಸಕರಾದರು. 2008ರಲ್ಲಿಯೂ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. ಆದರೆ ವರ್ಷದೊಳಗೆ ಅವರು ‘ಆಪರೇ­ಷನ್‌ ಕಮಲ’ಕ್ಕೆ ಒಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು.

2009ರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ­ಯಾಗಿ ಸ್ಪರ್ಧಿಸಿ ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ಎದುರು ಸೋತಿ­ದ್ದರು. 2009ರಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆ­ಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯೋಗೇಶ್ವರ್‌ ಜೆಡಿಎಸ್‌ನ ಎಂ.ಸಿ.­ಅಶ್ವತ್ಥ್‌ ವಿರುದ್ಧ ಸೋಲುಂಡರು. ಎಂ.ಸಿ.ಅಶ್ವತ್ಥ ಅವರು ‘ಆಪರೇಷನ್‌ ಕಮಲ’ಕ್ಕೆ ತುತ್ತಾಗಿ ಬಿಜೆಪಿ ಸೇರಿದ್ದರಿಂದ 2010ರಲ್ಲಿ ಚನ್ನಪಟ್ಟಣ ಕ್ಷೇತ್ರಕ್ಕೆ ಮತ್ತೊಂದು ಉಪ ಚುನಾವಣೆ ಎದುರಾಯಿತು.ಆಗಲೂ ಯೋಗೇಶ್ವರ್‌ ಬಿಜೆಪಿಯಿಂದ ಸ್ಪರ್ಧಿಸಿ ಜಯಸಾಧಿಸಿದರು.

ಬಿಜೆಪಿಯಲ್ಲಿ ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸಿದ ಅವರು, ಅವಧಿ ಪೂರ್ಣ­ಗೊಳ್ಳುವ ಮೊದಲೇ ಸಚಿವ ಸ್ಥಾನ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಹೊರ ನಡೆದರು. 2013ರ ವಿಧಾನ­ಸಭಾ ಚುನಾ­ವಣೆ­ಯಲ್ಲಿ ಕಾಂಗ್ರೆಸ್ ಟಿಕೆಟ್‌ ಪಡೆಯುವಲ್ಲಿ ವಿಫಲರಾದರು.ನಾಮಪತ್ರ ಸಲ್ಲಿಸುವ ಕೊನೆ­ಗಳಿಗೆಯಲ್ಲಿ ಸಮಾಜವಾದಿ ಪಕ್ಷದಿಂದ ‘ಬಿ–ಫಾರಂ’ ತಂದು ಉಮೇದುವಾರಿಕೆ ಸಲ್ಲಿಸಿದರು. ಚುನಾವಣೆಯಲ್ಲಿ ಜಯವನ್ನೂ ಸಾಧಿಸಿದರು. ಅವರೀಗ ಮರಳಿ ಮಾತೃ ಪಕ್ಷವಾದ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.