ಸೋಮವಾರ, ಜನವರಿ 27, 2020
25 °C

ಕಾಂಗ್ರೆಸ್ ಪ್ರತಿಸ್ಪರ್ಧಿ: ಶ್ರೀನಿವಾಸಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ತಾಲ್ಲೂಕಿನ ವೇಮಗಲ್ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಉಪಚುನಾವಣೆ ಸಂಬಂಧ ಪ್ರಚಾರದ ಸಲುವಾಗಿ ಕ್ಷೇತ್ರ ವ್ಯಾಪ್ತಿಯ ಕ್ಯಾಲನೂರಿನಲ್ಲಿ ಶನಿವಾರ ಬಹಿರಂಗ ಸಭೆ ಏರ್ಪಡಿಸಲಾಗಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್. ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ತಿಳಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರಾದ ಜಮೀರ್ ಅಹ್ಮದ್ ಖಾನ್, ವಿಧಾನ ಪರಿಷತ್ ಸದಸ್ಯ ಚಿಕ್ಕಮಾದು ಕೂಡ ಪಾಲ್ಗೊಳ್ಳಲಿದ್ದು, ಪಕ್ಷದ ಅಭ್ಯರ್ಥಿ ಎಲ್.ಆಶಾ ಪರವಾಗಿ ಪ್ರಚಾರ ಭಾಷಣ ಮಾಡಲಿದ್ದಾರೆ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ, ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಉಪಸ್ಥಿತರಿರುತ್ತಾರೆ. ಬೆಳಿಗ್ಗೆ 11.30ಕ್ಕೆ ಸಭೆ ಪ್ರಾರಂಭವಾಗಲಿದೆ ಎಂದರು.ಕಾಂಗ್ರೆಸ್ ಪ್ರತಿಸ್ಪರ್ಧಿ: ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪಕ್ಷೇತರರ ಪ್ರಾಬಲ್ಯ ಹೆಚ್ಚಿತ್ತು. ಈ ಬಾರಿ ಅಲ್ಲಿ ಜೆಡಿಎಸ್ ಪ್ರಬಲವಾಗಿದೆ. ಕ್ಷೇತ್ರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಮತದಾರರು ಕೂಡ ಸಚಿವ ವರ್ತೂರು ಪ್ರಕಾಶ್ ವಿರುದ್ಧ ಗಟ್ಟಿ ಅಭಿಪ್ರಾಯ ತಾಳಿ ರೊಚ್ಚಿಗೆದ್ದಿದ್ದಾರೆ. ಅದರಿಂದ ಪಕ್ಷಕ್ಕೆ ಒಳ್ಳೆಯದೇ ಆಗಲಿದೆ.

 

ಪ್ರಸ್ತುತ ಪಕ್ಷಕ್ಕೆ ಕಾಂಗ್ರೆಸ್ ಪ್ರತಿಸ್ಪರ್ಧಿಯಾಗಿದೆ. ಆದರೂ ನಮ್ಮ ಅಭ್ಯರ್ಥಿಯೇ ಗೆಲ್ಲಲಿದ್ದಾರೆ ಎಂದು ಹೇಳಿದರು.

ಆ ವ್ಯಕ್ತಿ (ವರ್ತೂರು ಪ್ರಕಾಶ) ಶಾಸಕರಾಗಿ ಮೂರು ಮುಕ್ಕಾಲು ವರ್ಷವಾಯಿತು. ಆದರೆ ಮೂಲಸೌಕರ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ.ಚುನಾವಣೆ ಕಾರಣದಿಂದ ಕ್ಷೇತ್ರದಲ್ಲಿ ಕೊಳವೆಬಾವಿ ಕೊರೆಸಲು ಶುರು ಮಾಡಿದ್ದಾರೆ. ಈ ಅವಕಾಶವಾದಿ ನಿಲವನ್ನು ಅರಿಯದಷ್ಟು ಮತದಾರರು ದಡ್ಡರಲ್ಲ. ಕಳೆದ ಬಾರಿ ಎಪಿಎಂಸಿ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ದೊರಕಿಸಿಕೊಟ್ಟ ರೀತಿಯಲ್ಲೆ ಈ ಚುನಾವಣೆಯಲ್ಲೂ ಗೆಲುವು ತಂದುಕೊಡುವ ಭರವಸೆ ಇದೆ ಎಂದರು. ಜಿ.ಪಂ. ಅಧ್ಯಕ್ಷ ಸ್ಥಾನವೂ ಹಿಂದುಳಿದ ಅ ವರ್ಗದ ಮಹಿಳೆಗೇ ಮೀಸಲಾಗಿದೆ. ಅಧ್ಯಕ್ಷ ಸ್ಥಾನವನ್ನು ಪಡೆಯುವ ನಿಟ್ಟಿನಲ್ಲಿ ಫಲಿತಾಂಶದ ಬಳಿಕ ಕಾಂಗ್ರೆಸ್ ಬೆಂಬಲ ಕೋರಲಾಗುವುದು ಎಂದು ಅವರು ತಿಳಿಸಿದರು. ಹಣದ ಪ್ರಭಾವ ಹಿಂದೆಂದಿಗಿಂತಲೂ ಕ್ಷೇತ್ರದಲ್ಲಿ ಹೆಚ್ಚಾಗಿದೆ. ರಾಜಕಾರಣ ಕೆಳಮಟ್ಟಕ್ಕೆ ಇಳಿದಿರುವುದು ದುಃಖದ ಸಂಗತಿ ಎಂದರು.ಕ್ಷೇತ್ರದ ಮುಖಂಡರಾದ ನಾಗನಾಳ ಸೋಮಣ್ಣ, ಗೋಪಾಲಕೃಷ್ಣ, ಎಸ್. ರಾಮೇಗೌಡ, ಸಿದ್ದನಂಜಪ್ಪ, ಮುನಿಯಪ್ಪ, ರಾಜಣ್ಣ, ಬಾಬಾ ಸಾಹೇಬ್, ಸಿದ್ದರಾಜ, ಪಾಪಣ್ಣ, ಗೋಪಾಲಪ್ಪ, ವಿಜಯಕುಮಾರ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)