ಬುಧವಾರ, ಜೂಲೈ 8, 2020
26 °C

ಕಾಂಗ್ರೆಸ್ ಮಾನ ಉಳಿಸಿದ ಮಧುಗಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಧುಗಿರಿ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ ಶಾಸಕಿ ಅನಿತಾಕುಮಾರಸ್ವಾಮಿ ಅವರಿಗೆ ಮುಖಭಂಗ ಉಂಟು ಮಾಡಿದ್ದರೇ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಪ್ರತಿಷ್ಠೆಯ ಮುಡಿಗೆ ಮತ್ತೊಂದು ಗರಿ ಸಿಕ್ಕಿಸಿದಂತಾಗಿದೆ.  ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದ್ದರೂ; ಜೆಡಿಎಸ್ ನೆಲೆಯೂರಿದ್ದ ಕ್ಷೇತ್ರದಲ್ಲಿ ಮಣ್ಣು ಮುಕ್ಕಿಸಿರುವ ಕಾಂಗ್ರೆಸ್, ಉತ್ತಮ ಫಲಿತಾಂಶದಿಂದ ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಚೇತರಿಸಿಕೊಂಡು ಉತ್ಸಾಹದ ನಗೆ ಬೀರಿದ್ದಾರೆ. ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಎಡವಿದ ಜೆಡಿಎಸ್ ಮೊದಲ ಸಾಲಿನ ಮುಖಂಡರನ್ನು ಕಳೆದುಕೊಂಡು ಹೀನಾಯ ಸೋಲಿಗೂ ಕಾರಣವಾಯಿತು ಎನ್ನಲಾಗಿದೆ.ಕೊನೆ ಗಳಿಗೆಯಲ್ಲಿ ಪಕ್ಷಕ್ಕೆ ಮರಳಿದ ಮಾಜಿ ಶಾಸಕ ಗೌರಿಶಂಕರ್ ಮೇಲೆ ಜೆಡಿಎಸ್ ವರಿಷ್ಠರು ಪೂರ್ಣ ಭರವಸೆ ಇಟ್ಟು ಬಿ ಫಾರಂಗಳನ್ನು ಅವರ ಮೂಲಕ ಕೊಡುವಂತೆ ಮಾಡಿದ್ದು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ತುಂಗೋಟಿ ರಾಮಣ್ಣ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಡಿ.ಕೃಷ್ಣಪ್ಪ ಅವರನ್ನು ಕೆರಳಿಸಿ ಪಕ್ಷ ತೊರೆಯುವಂತೆ ಮಾಡಿದ್ದು, ಜೆಡಿಎಸ್‌ಗೆ ಒಂದು ರೀತಿಯಲ್ಲಿ ಹಾನಿಯಾದರೆ, ಇದರ ಅವಕಾಶ ಉಪಯೋಗಿಸಿಕೊಂಡ ಕೆ.ಎನ್.ರಾಜಣ್ಣ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಕಾಂಗ್ರೆಸ್‌ಗೆ ಲಾಭ ಮಾಡಿಕೊಟ್ಟರು.ಬಿ.ಫಾರಂ ನೀಡಿಕೆಯಲ್ಲಿ ಗೌರಿಶಂಕರ್ ಪಾತ್ರ, ಸ್ಥಳೀಯರನ್ನು ಕಡೆಗಣಿಸಿ, ಹೊರಗಿನವರಿಗೆ ಮಣೆ ಹಾಕಿದ್ದು, ಶಾಸಕರ ನಿಷ್ಕ್ರಿಯತೆ ಈ ಎಲ್ಲ ಅಂಶಗಳು ಪಕ್ಷದ ಸೋಲಿಗೆ ಕಾರಣ ಎಂದು ಜೆಡಿಎಸ್ ವಲಯದಲ್ಲಿ ಕೇಳಿಬರುತ್ತಿದೆ.  6 ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ 4 ಮತ್ತು 24 ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ 18 ರಲ್ಲಿ ಕಾಂಗ್ರೆಸ್‌ಗೆ ಗೆಲುವು ತಂದುಕೊಟ್ಟಿರುವ ಕ್ಷೇತ್ರದ ಮತದಾರರು, ಕ್ಷೇತ್ರ ಮರೆತ ಶಾಸಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ ಎಂಬುದು ಪ್ರಬುದ್ಧ ಮತದಾರರ ಅನಿಸಿಕೆ. ಅಧಿಕಾರ ತ್ಯಾಗ ಮಾಡಿ ಎರಡು ವರ್ಷ ಬಿಜೆಪಿಯಲ್ಲಿದ್ದ ಗೌರಿಶಂಕರ್ ತಾಲ್ಲೂಕಿನಲ್ಲಿ ಬಿಜೆಪಿಗೆ ನೆಲೆಕಾಣಿಸಲು ವಿಫಲರಾಗಿ ಮತ್ತೆ ಜೆಡಿಎಸ್‌ಗೆ ಮರಳಿದ್ದು, ನೆಲೆ ಊರಿದ್ದ ಆ ಪಕ್ಷವೂ ತಾಲ್ಲೂಕಿನಲ್ಲಿ ನೆಲಕಚ್ಚಿದ್ದರಿಂದ ನಿರಾಶರಾಗಿದ್ದಾರೆ.ಪುರವರ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ಜಾತಿಯ ಅಭ್ಯರ್ಥಿಗೆ ಬಿ ಫಾರಂ ನೀಡಿದ್ದರಿಂದ ಆ ಜನಾಂಗದ ಮತಗಳು ಹಂಚಿಹೋದ ಪರಿಣಾಮ ಹಾಗೂ ಕೌಟುಂಬಿಕ ವರ್ಚಸ್ಸಿನ ಲಾಭ ಪಡೆದು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಯಲ್ಲಿ ಬಿಜೆಪಿ ತಲಾ ಒಂದು ಸ್ಥಾನ ಪಡೆದು ತಾಲ್ಲೂಕಿನಲ್ಲಿ ಖಾತೆ ತೆರೆಯುವಂತಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.