ಮಂಗಳವಾರ, ಮೇ 17, 2022
27 °C

ಕಾಂಗ್ರೆಸ್ ವಿರುದ್ಧ ಅಣ್ಣಾ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಳೇಗಣ ಸಿದ್ಧಿ,(ಪಿಟಿಐ): ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಜನ ಲೋಕಪಾಲ್ ಮಸೂದೆಯನ್ನು ಮಂಡಿಸದಿದ್ದಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕಾಂಗ್ರೆಸ್ ವಿರುದ್ಧ ಅಭಿಯಾನ ನಡೆಸಲಾಗುವುದು ಎಂದು ಗಾಂಧೀವಾದಿ ಅಣ್ಣಾ ಹಜಾರೆ ಅವರು ಮಂಗಳವಾರ ಇಂದಿಲ್ಲಿ ಎಚ್ಚರಿಕೆ ನೀಡಿದರು.ಜನ ಲೋಕಪಾಲ್ ಮಸೂದೆ ಜಾರಿಗೆ ತರದಿದ್ದಲ್ಲಿ ಅಕ್ಟೋಬರ್ 13ರಂದು ಹರಿಯಾಣದ ಹಿಸ್ಸಾರ್ ಲೋಕಸಭಾ ಕ್ಷೇತ್ರ ಮತ್ತು ಮುಂದಿನ ವರ್ಷ ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಜನ ಕಾಂಗ್ರೆಸ್‌ಗೆ ಮತ ಹಾಕಬಾರದು ಎಂದು ಕೋರಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.ವಿಧಾನಸಭಾ ಚುನಾವಣೆ ಜರುಗಲಿರುವ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಅಕ್ಟೋಬರ್ 13ರಿಂದ 15ರವರೆಗೆ ಪ್ರವಾಸ ಕೈಗೊಳ್ಳುವುದಾಗಿ ಅವರು ತಿಳಿಸಿದರು.ಪ್ರಬಲ ಜನ ಲೋಕಪಾಲ್ ಮಸೂದೆ ಜಾರಿಗೊಳಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ ನಂತರ ರಾಮಲೀಲಾ ಮೈದಾನದಲ್ಲಿ ನಡೆಸುತ್ತಿದ್ದ 12 ದಿನಗಳ ಉಪವಾಸ ಸತ್ಯಾಗ್ರಹವನ್ನು  ಅಣ್ಣಾ ಹಜಾರೆ ಅವರು ಅಂತ್ಯಗೊಳಿಸಿದ್ದರು.`ಮಸೂದೆ ಜಾರಿಗೆ ತರದಿದ್ದಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣೆ ಘೋಷಿಸುವ ಮೂರು ದಿನಗಳ ಮೊದಲು ಉಪವಾಸ ಕೂರುತ್ತೇನೆ ಎಂದರು.ಜನ ಲೋಕಪಾಲ್ ಮಸೂದೆ ಕರಡನ್ನು ಬೆಂಬಲಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಸೇರಿದಂತೆ ಮತ್ತಿತರರು ಪತ್ರ ಬರೆದಿದ್ದಾರೆ. ಆದರೆ, ಕಾಂಗ್ರೆಸ್‌ನಿಂದ ಇದುವರೆಗೆ ಯಾರೊಬ್ಬರು ಬೆಂಬಲ ಸೂಚಿಸಿಲ್ಲ. ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಲ್ಲಿ ಆ ಪಕ್ಷದ ವಿರುದ್ಧ ಅಭಿಯಾನ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಬೆಜೆಪಿ ಬೆಂಬಲಿಗ ಎಂದು ನಿಮ್ಮನ್ನು ಗುರಿ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಈ ರೀತಿಯ ಆರೋಪ ಮಾಡುತ್ತಿರುವವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದರು.ಸಿಂಗ್ ಅಗ್ನಿ ಪರೀಕ್ಷೆ ಎದುರಿಸಲಿ: `2ಜಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಯಾವುದೇ ತಪ್ಪು ಮಾಡದಿದ್ದಲ್ಲಿ ಅಗ್ನಿ ಪರೀಕ್ಷೆ ಎದುರಿಸಲಿ~ ಎಂದು ಹಜಾರೆ ಅವರು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಹೀಗೆ ಉತ್ತರಿಸಿದರು.`ಹಗರಣದಲ್ಲಿ ಪ್ರಧಾನಿಯವರ ಹೆಸರು ಕೇಳಿ ಬಂದಿದೆ. ಹೀಗಾಗಿ ಅವರು ಅಗ್ನಿಪರೀಕ್ಷೆಗೆ ಒಳಗಾಗಿ ಶುದ್ಧ ಚಾರಿತ್ರ್ಯದವರು ಎಂದು ಸಾಬೀತುಪಡಿಸಬೇಕು. ಇದಕ್ಕೆ ಏಕೆ ಹೆದರಬೇಕು. ಪ್ರಧಾನಿಯವರು ತಪ್ಪಿತಸ್ಥ ಎಂದು ನಾನೆಲ್ಲಿಯೂ ಹೇಳಿಲ್ಲ~ ಎಂದು ಸ್ಪಷ್ಟಪಡಿಸಿದರು.ರಾಹುಲ್ ಟೀಕೆ

 ನವದೆಹಲಿ (ಪಿಟಿಐ):
ಭ್ರಷ್ಟಾಚಾರದ ಹೆಸರಿನಲ್ಲಿ ಕಾಂಗ್ರೆಸ್ ಮೇಲೆ ಸಮರ ಸಾರಿರುವ ಅಣ್ಣಾ ಹಜಾರೆಯವರನ್ನು ಪರೋಕ್ಷ ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, `ಭ್ರಷ್ಟಾಚಾರದ ವಿರುದ್ಧ ರಾಜಕೀಯ ವ್ಯವಸ್ಥೆಯ ಮೂಲಕ ಮಾತ್ರ ಹೋರಾಡಬಹುದು~ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.“ಜನರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನೀವು ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಾದರೆ, ಅದು ರಾಜಕೀಯ ವ್ಯವಸ್ಥೆ ಮತ್ತು ಪ್ರಜಾಸತ್ತಾತ್ಮಕ ಮಾರ್ಗಗಳ ಮೂಲಕ ಮಾತ್ರ ಸಾಧ್ಯ” ಎಂದು ಮಂಗಳವಾರ ಇಲ್ಲಿ ನಡೆದ ಸಭೆಯೊಂದರಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ ಅವರು ನುಡಿದರು.`ಮುಂದಿನ ಅಧಿವೇಶನದಲ್ಲಿ ಮಸೂದೆ ~


ನವದೆಹಲಿ (ಪಿಟಿಐ): ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಲೋಕಪಾಲ್ ಮಸೂದೆ ಜಾರಿಗೆ ತರಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರು ಮಂಗಳವಾರ ತಿಳಿಸಿದರು. ಜನ ಲೋಕಪಾಲ್ ಮಸೂದೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಅಭಿಯಾನ ನಡೆಸುವುದಾಗಿ ಅಣ್ಣಾ ಹಜಾರೆ ಅವರು ಬೆದರಿಕೆ ಹಾಕಿದ ಕೆಲವೇ ನಿಮಿಷಗಳಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.ವಿಧಾನಸಭಾ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಅಣ್ಣಾ ಹಜಾರೆ ಅವರು ಕಾಂಗ್ರೆಸ್ ವಿರುದ್ಧ ಅಭಿಯಾನ ನಡೆಸಲು ಯೋಜನೆ ರೂಪಿಸಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಬೇರೆಯವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ ಎಂದರು.`ಇದು ಅವರ ತೀರ್ಮಾನ. ಪ್ರತಿಯೊಬ್ಬ ನಾಗರಿಕ ಯಾರಿಗೆ ಬೇಕಾದರೂ ಮತ ಚಲಾಯಿಸಬಹುದು~ ಎಂದರು.

`ಮುಂದಿನ ಅಧಿವೇಶನದಲ್ಲಿ ಲೋಕಪಾಲ್ ಸೇರಿದಂತೆ ಹಲವು ಮಸೂದೆಗಳನ್ನು ಜಾರಿಗೆ ತರಲಾಗುವುದು ಎಂದು ನಾವು ಈಗಾಗಲೇ ತಿಳಿಸಿದ್ದೇವೆ. ಈ ಕುರಿತು ಜನರೇ ತೀರ್ಮಾನಿಸಲಿ~ ಎಂದು ತಿಳಿಸಿದರು.ದುರದೃಷ್ಟಕರ: ರಶೀದ್

ಪ್ರಬಲ ಮತ್ತು ಪರಿಣಾಮಕಾರಿ ಲೋಕಪಾಲ್ ಮಸೂದೆ ಜಾರಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಆದರೆ, ಅಣ್ಣಾ ಹಜಾರೆ ಅವರು ಹಿಸ್ಸಾರ್ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಅಭಿಯಾನ ನಡೆಸುವುದಾಗಿ ಹೇಳಿರುವುದು ದುರದೃಷ್ಟಕರ ಎಂದು ಪಕ್ಷದ ವಕ್ತಾರ ರಶೀದ್ ಅಲ್ವಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.