ಸೋಮವಾರ, ಜುಲೈ 26, 2021
25 °C

ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

ಪ್ರಜಾವಾಣಿ ವಾರ್ತೆ / ಬಾಲಕೃಷ್ಣ ಪುತ್ತಿಗೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಯಾವುದೇ ರಾಜಕೀಯ ಘೋಷಣೆ ಮಾಡಲು ಹೋಗಲಿಲ್ಲ. ಆದರೆ ತಮ್ಮ ‘ಉಗ್ರ’ ಭಾಷಣದ ಮೂಲಕ ಪ್ರತಿಪಕ್ಷ ಕಾಂಗ್ರೆಸ್ಸನ್ನು ಸದೆಬಡಿದರು. ಕೇಂದ್ರದ ಯುಪಿಎ ಸರ್ಕಾರ ಮತ್ತು ಕಾಂಗ್ರೆಸ್ ‘ಗುಜರಾತ್ ವಿರೋಧಿ’ ಎಂದು ನಿಂದಿಸಿದರು.ಇಲ್ಲಿನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಸುವರ್ಣ ಗುಜರಾತ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕಿಕ್ಕಿರಿದು ಸೇರಿದ್ದ ಜನಸಮೂಹವನ್ನು ಉದ್ದೇಶಿಸಿ ಅವರು ಗುಜರಾತಿ ಬದಲು ಹಿಂದಿಯಲ್ಲೇ ಮಾತನಾಡಿದರು. ‘ಜೈ ಜೈ ಗರ್ವಿ ಗುಜರಾತ್, ಜೈ ಜೈ ಸ್ವರ್ಣಿಮ್ ಗುಜರಾತ್’ ಎಂಬ ಕೊನೆಯ ಎರಡು ಸಾಲುಗಳ ಮೂಲಕ ಮಾತ್ರ ರಾಜ್ಯ ಭಾಷೆಗೆ ಮನ್ನಣೆ ನೀಡಿದರು.ಅವರ ಉದ್ದೇಶವೂ ಸ್ಪಷ್ಟವಾಗಿತ್ತು. ದೇಶದ ವಿವಿಧ ಭಾಗಗಳ ಮಾಧ್ಯಮ ಪ್ರತಿನಿಧಿಗಳೂ ಸಮಾರಂಭದಲ್ಲಿ ಉಪಸ್ಥಿತರಿದ್ದರು! ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡು ಅವರು ಮಾಡಿದ ಭಾಷಣ ಮಾತ್ರ ಕ್ರೀಡಾಂಗಣದಲ್ಲಿ ಮಿಂಚಿನ ಸಂಚಾರ ಸೃಷ್ಟಿಸಿತು. ಜನರ ಅಭಿಮಾನದ ಹೊಳೆಯೂ ಹರಿಯಿತು. ಅವರು ಹುಚ್ಚೆದ್ದು ಶಿಳ್ಳೆ ಹಾಕಿದರು. ಮುಖ್ಯಮಂತ್ರಿ ಮತ್ತು ರಾಜ್ಯಪಾಲೆ ಡಾ. ಕಮಲಾ ಅವರು ಮಾತ್ರವೇ ಮಾತನಾಡಿದರು. ಬಿಜೆಪಿ ನಾಯಕ ಅರುಣ್ ಜೇಟ್ಲಿ ಸಹಿತ ಇನ್ಯಾರಿಗೂ ಅಲ್ಲಿ ಮಾತಿಗೆ ಅವಕಾಶವೇ ಇರಲಿಲ್ಲ.ಜನಶಕ್ತಿಯ ಸಾಕ್ಷಾತ್ಕಾರ: ‘ಸ್ವರ್ಣಿಮ್ ಗುಜರಾತ್ ಜನಶಕ್ತಿಯ ಸಾಕ್ಷಾತ್ಕಾರ. ಬೇರೆ ಯಾವುದೇ ರಾಜ್ಯ ಸರ್ಕಾರಗಳಿಗೂ ಇದು ಅಸೂಯೆ ತರುವಂಥದ್ದು’ ಎನ್ನುತ್ತಲೇ ಮೋದಿ ಅವರು ರಾಜ್ಯದ ಐದು ಲಕ್ಷ ಸರ್ಕಾರಿ ನೌಕರರನ್ನೂ ಮುಕ್ತಕಂಠದಿಂದ ಹೊಗಳಿದರು. ಈ ಕಾರ್ಯಕ್ರಮದ ಹಿಂದಿನ ಅವರ ಶ್ರಮವನ್ನು ಕೊಂಡಾಡಿದರು. ಗುಜರಾತಿನ ಸುವರ್ಣ ವರ್ಷ ಸಮಾರೋಪಗೊಂಡಿದೆ. ಆದರೆ ಸುವರ್ಣ ಯುಗದ ಆರಂಭ ಆಗಿದೆ ಎಂದು ಹರ್ಷೋದ್ಗಾರಗಳ ನಡುವೆ ಘೋಷಿಸಿದರು.ಸುವರ್ಣ ಗುಜರಾತ್ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಪ್ರತಿಪಕ್ಷ ಕಾಂಗ್ರೆಸ್ಸಿನತ್ತ ಬಾಣ ಬಿಟ್ಟ ಅವರು, ‘ನನ್ನ ವಿರುದ್ಧ ದೇಶದಾದ್ಯಂತ ಸಾಂವಿಧಾನಿಕ ಏಜೆನ್ಸಿಗಳನ್ನು ಛೂ ಬಿಡಲಾಗಿದೆ. ಹೇಗಾದರೂ ಮಾಡಿ ಮಟ್ಟ ಹಾಕಬೇಕೆಂದು ಕಾಂಗ್ರೆಸ್ ಹೊರಟಿದೆ. ಅದಕ್ಕೆಲ್ಲ ಬಗ್ಗುವವನು ನಾನಲ್ಲ’ ಎಂದು ಗುಡುಗಿದರು. ‘ಮೋದಿಯನ್ನು ವಿರೋಧಿಸಲು, ತೊಂದರೆ ಕೊಡಲು ಸಾವಿರ ವಿಧಾನಗಳು ಇರಬಹುದು. ಆದರೆ ರಾಜ್ಯದ ಸುವರ್ಣ ವರ್ಷಾಚರಣೆಯನ್ನು ವಿರೋಧಿಸಿದವರು ಗುಜರಾತಿನ ವಿರೋಧಿಗಳು. ಅವರನ್ನು ಕ್ಷಮಿಸಬೇಡಿ’ ಎನ್ನುತ್ತ ಕಾಂಗ್ರೆಸ್ಸಿನತ್ತ ಉಗ್ರ ಟೀಕಾಪ್ರಹಾರ ಮಾಡಿದರು.ಇದಾದ ಬಳಿಕ ರಾಜ್ಯಪಾಲರ ಮಾತಿನ ಸರದಿ. ಅವರ ಲಿಖಿತ ಭಾಷಣ ಆರಂಭವಾದ ಸ್ವಲ್ಪ ಹೊತ್ತಿನಲ್ಲೇ ಜನರು ಮಾತು ನಿಲ್ಲಿಸಲು ಹೋ.. ಎನ್ನತೊಡಗಿದರು. ಡಾ. ಕಮಲಾ ಅವರು ಅಭಿವೃದ್ಧಿ ಪಥದಲ್ಲಿ ಗುಜರಾತ್ ನಡೆದು ಬಂದ ದಾರಿಯನ್ನು ಸ್ಮರಿಸಿದರು. ಮಹಾತ್ಮ ಗಾಂಧಿಯವರಿಂದ ಹಿಡಿದು ಸ್ವಾಮಿ ದಯಾನಂದರ ವರೆಗೆ ಎಲ್ಲರನ್ನೂ ನೆನಪಿಸಿದರು.ಸುವರ್ಣ ಗುಜರಾತಿಗೆ ಸಂಭ್ರಮದ ತೆರೆ: ವರ್ಷ ಉದ್ದಕ್ಕೂ ಮುಂದುವರಿದ ಸುವರ್ಣ ಗುಜರಾತ್ ಕಾರ್ಯಕ್ರಮಗಳಿಗೆ ಸೋಮವಾರ ರಾತ್ರಿ ಇಲ್ಲಿನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಸಂಭ್ರಮದ ತೆರೆ ಬಿತ್ತು. ಗುಜರಾತಿನ ಚರಿತ್ರೆ ಮತ್ತು ಪರಂಪರೆಯ ಅಧ್ಯಾಯಗಳಲ್ಲಿ ‘ಸ್ವರ್ಣಿಮ್ ಗುಜರಾತ್’ ಹೊಸ ಪುಟಗಳನ್ನು ತೆರೆಯಿತು. ಅದ್ಭುತ ಸಾಂಸ್ಕೃತಿಕ ಲೋಕವೇ ಕ್ರೀಡಾಂಗಣದಲ್ಲಿ ಅನಾವರಣಗೊಂಡಿತು.ಎ.ಆರ್. ರೆಹಮಾನ್ ಸ್ವರ ಸಂಯೋಜಿಸಿ ದೇಶದ ಹಲವಾರು ಪ್ರಸಿದ್ಧ ಗಾಯಕರು ಹಾಡಿದ ‘ಜೈ ಜೈ ಗರ್ವಿ ಗುಜರಾತ್’ ಹಾಡಿಗೆ ಸಾವಿರಾರು ಕಲಾವಿದರು ಕುಣಿದರು. ರಾಜ್ಯದ ಕೊಳೆಗೇರಿಗಳ 4800 ಮಂದಿ ಮಕ್ಕಳೂ ಭಾಗಿಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.