ಭಾನುವಾರ, ಮೇ 16, 2021
26 °C

ಕಾಂಗ್ರೆಸ್ ಸರ್ಕಾರದ `ಪುಣ್ಯ'...!

ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಿದ ಕೂಡಲೇ ಕೆಎಸ್‌ಆರ್‌ಟಿಸಿ ಬಸ್ ದರವನ್ನು 10.5% ರಷ್ಟು ಏರಿಸಿ ಮೊದಲನೆಯ ಬಳುವಳಿಯನ್ನು ನೀಡಿದೆ. ಆಡಳಿತದ ಚುಕ್ಕಾಣಿ ಹಿಡಿದವರಿಗೆ ಬಸ್ ಪ್ರಯಾಣ ಮಾಡಿ ಅನುಭವ ಇರುವುದಿಲ್ಲ. Updated:

ಅಕ್ಷರ ಗಾತ್ರ : | |

ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಿದ ಕೂಡಲೇ ಕೆಎಸ್‌ಆರ್‌ಟಿಸಿ ಬಸ್ ದರವನ್ನು 10.5% ರಷ್ಟು ಏರಿಸಿ ಮೊದಲನೆಯ ಬಳುವಳಿಯನ್ನು ನೀಡಿದೆ.  ಆಡಳಿತದ ಚುಕ್ಕಾಣಿ ಹಿಡಿದವರಿಗೆ ಬಸ್ ಪ್ರಯಾಣ ಮಾಡಿ ಅನುಭವ ಇರುವುದಿಲ್ಲ.

 

ಸರ್ಕಾರಿ ವಾಹನಗಳನ್ನು ಯಥೇಚ್ಛವಾಗಿ ಬಳಸಿಕೊಳ್ಳುವ ರಾಜಕಾರಣಿಗಳಿಗಾಗಲಿ, ಅಧಿಕಾರಿಗಳಿಗಾಗಲಿ ಜನಸಾಮಾನ್ಯರ ಕಷ್ಟ ಎಂದೂ ಗೊತ್ತಾಗುವುದಿಲ್ಲ.ಬಸ್ ಪ್ರಯಾಣ ದರ, ವಿದ್ಯುತ್ ಶುಲ್ಕ, ನೀರಿನ ತೆರಿಗೆ, ಹಾಲಿನ ದರ ಮತ್ತು ಅಗತ್ಯ ವಸ್ತುಗಳ ದರ ಏರಿಕೆಯಾದಾಗಲೆಲ್ಲಾ ವಿರೋಧ ಪಕ್ಷಗಳು ಪ್ರತಿಭಟಿಸುವ ನಾಟಕವನ್ನಾದರೂ ಆಡುತ್ತಿದ್ದವು.   ಸರ್ಕಾರ ಪ್ರತಿಭಟನೆಗೆ ಮಣಿದಂತೆ ನಾಟಕವಾಡಿ ಅಲ್ಪಸ್ವಲ್ಪ ದರವನ್ನು ಕಡಿಮೆ ಮಾಡಿದಂತೆ ಮಾಡಿ  ಪ್ರತಿಪಕ್ಷದವರ ಮತ್ತು ಸಾಮಾನ್ಯ ಜನರ ಕಣ್ಣೊರೆಸುವ ಕೆಲಸ ಮಾಡುತ್ತಿತ್ತು.ಸಾರ್ವಜನಿಕರಂತೂ ಪ್ರತಿಭಟನೆ ಮಾಡಿದರೂ ಪ್ರಯೋಜನವಿಲ್ಲವೆಂದು ಹತಾಶರಾಗಿ ಸಂಪೂರ್ಣವಾಗಿ ಕೈ ಕಟ್ಟಿಕೊಂಡು ಕುಳಿತಿದ್ದು, ಮೌನವಾಗಿ ಬಂದ ಕಷ್ಟವನ್ನು ನುಂಗಿಕೊಂಡಿದ್ದಾರೆ.ವರ್ಷಕ್ಕೊಮ್ಮೆ ದರ ಏರಿಕೆಯಾದರೂ ಪ್ರತಿಭಟನೆ ತೀವ್ರ ಸ್ವರೂಪದಲ್ಲಿಯೇ ನಡೆಯುತ್ತಿದ್ದ ಕಾಲವೊಂದಿತ್ತು. ಈಗ ತಿಂಗಳಿಗೊಮ್ಮೆ ಸರಕು ಮತ್ತು ಸೇವೆಗಳ ಬೆಲೆ ತುಟ್ಟಿಯಾದರೂ ಕೇಳುವವರಿಲ್ಲ. ಬಂದ ಕಷ್ಟವನ್ನು ಮೌನವಾಗಿ ನುಂಗಿಕೊಂಡು ಹೋಗುತ್ತಿರುವ ಜನರನ್ನು ಪಡೆಯಲು ಸರ್ಕಾರವು ಪುಣ್ಯ ಮಾಡಿದೆ.

ಡೀಸೆಲ್ ದರವನ್ನು 6 ತಿಂಗಳಲ್ಲಿ 5 ಬಾರಿ  ಕೇಂದ್ರ ಸರ್ಕಾರ ಏರಿಸಿದೆ.  ಹೆಚ್ಚು ಕಡಿಮೆ ತಿಂಗಳಿಗೊಮ್ಮೆ ಏರಿಸಿದಂತಾಗಿದೆ.ವರ್ಷಕ್ಕೊಮ್ಮೆ ಆಯವ್ಯಯ ಪತ್ರ ಮಂಡಿಸುವಾಗ ಏರಿಕೆಯಾಗುತ್ತಿದ್ದ ಸರಕು ಸಾಗಣೆ ದರ ಈಗ ತಿಂಗಳಿಗೊಮ್ಮೆ ಆಗಿರುವುದನ್ನು ಗಮನಿಸಿದಲ್ಲಿ,ವಾರಕ್ಕೊಮ್ಮೆ ಮತ್ತು ದಿನಕ್ಕೊಮ್ಮೆ ದರ ಪರಿಷ್ಕರಣೆಯ ಕಾಲವೂ ದೂರವಿಲ್ಲವೆಂದೆನಿಸುತ್ತದೆ.  ಪದೇಪದೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ, ಹಣದುಬ್ಬರವು ನಾಗಾಲೋಟದಲ್ಲಿ ಓಡುತ್ತಿದೆ. ಹಣದುಬ್ಬರಕ್ಕೆ ಸರ್ಕಾರವೇ ನೇರ ಹೊಣೆಯಾಗಿರುವುದರಿಂದ, ಅದರ ನಿಯಂತ್ರಣಕ್ಕೆ ಆರ್ಥಿಕ ತಜ್ಞರು ಕೊಡುವ ಸಲಹೆಗಳಾವುವೂ ಪ್ರಯೋಜನಕ್ಕೆ ಬಾರದಂತಾಗಿದೆ.

-ಕೆ.ವಿ. ಸೀತಾರಾಮಯ್ಯಹಾಸನ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.