ಬುಧವಾರ, ಏಪ್ರಿಲ್ 21, 2021
25 °C

ಕಾಂಡಕೊರಕಕಾಫಿಗೆ ಮಾರಕ

ಬಿ.ಸಿ.ಅರವಿಂದ್, ಭೂತನಕಾಡು Updated:

ಅಕ್ಷರ ಗಾತ್ರ : | |

ಕಾಂಡಕೊರಕಕಾಫಿಗೆ ಮಾರಕ

ನಮ್ಮಲ್ಲಿ ಅರೇಬಿಕಾ ಕಾಫಿಗೆ ಭಾರೀ ಹಾನಿ ಮಾಡುವ ಬಹು ಮುಖ್ಯ ಕೀಟವೇ ಕಾಂಡಕೊರಕ (ಸ್ಟೆಮ್ ಬೋರರ್). ಇದರ ಪ್ರೌಢ ಕೀಟಗಳು ವರ್ಷದ ನಿರ್ದಿಷ್ಟ ಅವಧಿಯಲ್ಲಿ ಹೊರಬರುತ್ತವೆ. ಹೆಣ್ಣು ದುಂಬಿಗಳು ಮುಖ್ಯ ಕಾಂಡದ ತೊಗಟೆಯ ಮೇಲ್ಮೈ ಸಂದುಗಳಲ್ಲಿ ಮೊಟ್ಟೆ ಇಡುತ್ತವೆ. ಅದರಿಂದ ಹೊರಬಂದ ಮರಿಹುಳು ಕಾಂಡದ ಒಳಭಾಗವನ್ನು ಕೊರೆದು ತಿನ್ನುತ್ತಾ ಬೆಳೆಯುತ್ತದೆ.ಈ ರೀತಿ ಮುಖ್ಯ ಕಾಂಡ ಮತ್ತು ಬೇರಿನ ಭಾಗ ಕೀಟಬಾಧೆಗೆ ಒಳಗಾಗುವುದರಿಂದ 7 ರಿಂದ 8 ವರ್ಷದ ಗಿಡಗಳು ಕೂಡ ಬೇಗನೆ ಸಾಯುತ್ತವೆ. ಹಳೆಯ ಗಿಡಗಳು ಕೆಲವು ವರ್ಷ ಬದುಕಿದರೂ ನಿಷ್ಪ್ರಯೋಜಕವಾಗುತ್ತವೆ. ಆದ್ದರಿಂದ ಈ ಕೀಟದ ಸಮಗ್ರ ನಿಯಂತ್ರಣ ಅತ್ಯಂತ ಮುಖ್ಯ. ಇದು ಸಾಂಪ್ರದಾಯಿಕ, ಯಾಂತ್ರಿಕ, ಜೈವಿಕ ಮತ್ತು ರಾಸಾಯನಿಕ ಕ್ರಮಗಳನ್ನು ಒಳಗೊಂಡಿದೆ.ಅವು ಯಾವುದೆಂದರೆ

* ಹಿತವಾದ ನೆರಳನ್ನು ಬೆಳೆಸುವುದು.* ಸಕಾಲದಲ್ಲಿ ಕೀಟಬಾಧೆಯ ಗಿಡಗಳನ್ನು ಹುಡುಕಿ ಕಿತ್ತು ನಾಶಪಡಿಸುವುದು, ಕೀಟಗಳು ಮೊಟ್ಟೆಯಿಡುವುದನ್ನು ತಪ್ಪಿಸಲು ಮುಖ್ಯ ಕಾಂಡ ಮತ್ತು ದಪ್ಪ ರೆಂಬೆಯ ತೊಗಟೆಯನ್ನು ನಯಗೊಳಿಸುವುದು.* ಲಿಂಗಾಕರ್ಷಕ ಬಲೆ (ಫೆರಾಮೊನ್ ಟ್ರಾಪ್) ಬಳಸುವುದು.* ಕಟ್ಟಕಡೆಯದಾಗಿ ರಾಸಾಯನಿಕದ ಬಳಕೆ.ವಿವಿಧ ವಸ್ತುಗಳನ್ನು ಬಳಸಿ ಮುಖ್ಯಕಾಂಡ ಮತ್ತು ರೆಂಬೆಗಳ ಸುತ್ತಲೂ ಮುಚ್ಚಿ ಕೀಟಗಳು ಮೊಟ್ಟೆಯಿಡುವುದನ್ನು ತಪ್ಪಿಸಲು ಪ್ರಯೋಗಾತ್ಮಕ ಪ್ರಯತ್ನಗಳನ್ನು ಮಾಡಲಾಗಿದೆ.ಅವುಗಳಲ್ಲಿ ಮುಖ್ಯವಾಗಿ ಪ್ಲಾಸ್ಟಿಕ್ (ಪಾಲಿಥಿನ್) ಹಾಳೆಗಳ ಪಟ್ಟಿ, ಕಾಗದದ ಹಾಳೆ, ಕತ್ತಾಳೆ ಎಲೆ ಮತ್ತು ಗೋಣಿಚೀಲದ ತುಂಡುಗಳು ಬಳಸಿ ಕಾಂಡ ಮತ್ತು ದಪ್ಪ ರೆಂಬೆಯನ್ನು ಮುಚ್ಚುವಂತೆ ಸುತ್ತಲಾಗಿತ್ತು. ಈ ರೀತಿ ಸುತ್ತುವ ಮೊದಲು ಎಲ್ಲಾ ಕೀಟಪೀಡಿತ ಗಿಡಗಳನ್ನು ಕಿತ್ತುಹಾಕಲಾಗಿತ್ತು. ಸುಮಾರು ಮೂರು ವರ್ಷಗಳ ಕಾಲ ಹೀಗೆ ಸುತ್ತಿದ ಗಿಡಗಳಲ್ಲಿ ಬೋರರ್ ಹಾವಳಿ ಕಾಣಿಸಿಕೊಂಡಿಲ್ಲ.2008ರ ನವೆಂಬರ್ ತಿಂಗಳಲ್ಲಿ ಸುಮಾರು 17 ಬೇರೆ ಬೇರೆ ತೋಟಗಳಲ್ಲಿ ಪಾಲಿಥಿನ್ ಹಾಳೆ ಮತ್ತು ಖಾಲಿ ಗೊಬ್ಬರ ಚೀಲಗಳಿಂದ ಮಾಡಿದ ಪಟ್ಟಿಗಳಿಂದ ಅರೇಬಿಕಾ ಕಾಫಿ ಗಿಡಗಳ ಕಾಂಡವನ್ನು ಪ್ರಯೋಗಾತ್ಮಕವಾಗಿ ಸುತ್ತಲಾಗಿತ್ತು. ಈ ಪ್ರಯತ್ನದಿಂದ ಕಂಡುಬಂದ ಫಲಿತಾಂಶವೆಂದರೆ, ಖಾಲಿ ಗೊಬ್ಬರ ಚೀಲಗಳ ಪಟ್ಟಿಯನ್ನು ಬಳಸಿದರೆ ಉತ್ತಮ ಮತ್ತು ಮಿತವ್ಯಯಕಾರಿ. ಕೆಲವೊಮ್ಮೆ ಪಾಲಿಥಿನ್ ಪಟ್ಟಿಗಳಿಂದ ಸುತ್ತಿದ ಗಿಡಗಳಲ್ಲಿ ಪಟ್ಟಿಯ ಒಳಭಾಗ ಮತ್ತು ತೊಗಟೆಯ ಮಧ್ಯದಲ್ಲಿ ತೇವಾಂಶ ಸಂಗ್ರಹಗೊಂಡು, ಕ್ಯಾಂಕರ್‌ನಂತಹ ರೋಗ ಬರುವ ಸಾಧ್ಯತೆಯಿದೆ.ಈ ಎಲ್ಲಾ ಪ್ರಯೋಗಗಳನ್ನು ನೋಡಿದರೆ ಗೊಬ್ಬರದ ಖಾಲಿ ಚೀಲಗಳಿಂದ ಮಾಡಿದ ಪಟ್ಟಿಗಳಿಂದ ಅರೇಬಿಕಾ ಕಾಫಿ ಗಿಡದ ಮುಖ್ಯಕಾಂಡ ಮತ್ತು ದಪ್ಪ ರೆಂಬೆಗಳನ್ನು ಸುತ್ತುವುದು ಒಳ್ಳೆಯದು. ಇದರಿಂದ ಕಾಂಡಕೊರಕದ ದುಂಬಿಗಳು ಮೊಟ್ಟೆ ಇಡುವುದನ್ನು ತಡೆಗಟ್ಟಬಹುದು.ಸುತ್ತುವ ವಿಧಾನ: ಖಾಲಿ ಗೊಬ್ಬರದ ಚೀಲವನ್ನು ಸಂಗ್ರಹಿಸಿ (ತೋಟಗಳಲ್ಲಿಯೇ ಖಾಲಿ ಗೊಬ್ಬರದ ಚೀಲಗಳಿದ್ದರೆ ಉತ್ತಮ) ಅವುಗಳನ್ನು 10 ರಿಂದ 12 ಸೆಂ.ಮೀ. (4 ರಿಂದ 5 ಇಂಚು) ಅಗಲದ ಪಟ್ಟಿಯಂತೆ ಕತ್ತರಿಸಬೇಕು. ಆಗ ಪಟ್ಟಿ ಉದ್ದವಾಗಿ ಬರುವಂತೆ ನೋಡಬೇಕು.ಪಟ್ಟಿಯಿಂದ ಸುತ್ತುವ ಮೊದಲು ಬೋರರ್ ಬಂದಂತಹ ಗಿಡಗಳಿದ್ದರೆ ಹುಡುಕಿ ಕಿತ್ತುಹಾಕಬೇಕು. ಏಕೆಂದರೆ ಅಂತಹ ಗಿಡಗಳಿಗೆ ಪಟ್ಟಿಯನ್ನು ಸುತ್ತಿದರೂ ಯಾವುದೇ ಪ್ರಯೋಜನವಿಲ್ಲ.ಆರೋಗ್ಯಪೂರ್ಣ ಗಿಡಗಳಲ್ಲಿರುವ ಕಂಬ ಚಿಗುರುಗಳು, ಒಣಕಡ್ಡಿಗಳನ್ನು ತೆಗೆದು ಗಿಡದ ಬುಡ ಸ್ವಚ್ಛಗೊಳಿಸಬೇಕು. ನಂತರ ಈ ಪಟ್ಟಿಯನ್ನು ಬುಡದಿಂದ ನೆಲಕ್ಕೆ ತಾಗಿಸಿ ಸುತ್ತಬೇಕು.

ಎಲ್ಲಾದರೂ ಗಿಡದ ಬುಡದಲ್ಲಿ ಸುತ್ತದೇ ಬಿಟ್ಟಿದ್ದರೆ, ಆ ಜಾಗದಲ್ಲಿ ಬೋರರ್ ದುಂಬಿಗಳು ಮೊಟ್ಟೆ ಇಡಬಹುದು. ಆದ್ದರಿಂದ ಪಟ್ಟಿಯಿಂದ ಕಾಂಡದಲ್ಲಿ ಎಲ್ಲೂ ಜಾಗ ಬಿಡದಂತೆ ಸುರುಳಿಯಾಗಿ ಸುತ್ತಬೇಕು. ಹಾಗೆಯೇ ದಪ್ಪ ರೆಂಬೆಗಳಿಗೂ ಸುತ್ತಬೇಕು. ಇಲ್ಲದಿದ್ದರೆ ಅಲ್ಲಿ ಈ ಕೀಟಗಳು ಮೊಟ್ಟೆಯಿಡಬಹುದು.ಖಾಲಿ ಗೊಬ್ಬರ ಚೀಲದ ಬೆಲೆ ಸುಮಾರು 4 ರೂ. ಒಂದು ಚೀಲದಿಂದ 6 ಪಟ್ಟಿಗಳನ್ನು ಮಾಡಬಹುದು. ಸುಮಾರು 25ರಿಂದ 30 ವರ್ಷದ ಗಿಡಗಳಿಗೆ ಸುತ್ತಲು ಸಾಮಾನ್ಯವಾಗಿ 15 ರಿಂದ 20 ನಿಮಿಷಗಳು ಬೇಕು. ಒಂದು ದಿನದಲ್ಲಿ ಒಬ್ಬ ನುರಿತ ಕೆಲಸಗಾರ ಸರಿಸುಮಾರು 40 ಗಿಡಗಳಿಗೆ ಪಟ್ಟಿ ಸುತ್ತಬಹುದು.ಕಾಂಡಕ್ಕೆ ಸುತ್ತುವುದನ್ನು ಕಾಫಿ ಫಸಲು ಕೊಯ್ದು ನಂತರ ಮಳೆಗಾಲವನ್ನು ಹೊರತುಪಡಿಸಿ ವರ್ಷದ ಯಾವುದೇ ತಿಂಗಳಲ್ಲೂ ಮಾಡಬಹುದು. ಗೊಬ್ಬರದ ಚೀಲದ ಪಟ್ಟಿಯಿಂದ ಸುತ್ತಲು ಒಂದು ಗಿಡಕ್ಕೆ ಸುಮಾರು 10ರಿಂದ 12 ರೂಪಾಯಿ ವೆಚ್ಚವಾಗುತ್ತದೆ.ಈ ಕಾರ್ಯ ಪ್ರಾರಂಭಿಕ ಹಂತದಲ್ಲಿ ದುಬಾರಿ ಅನಿಸಬಹುದು. ಆದರೆ ಇಲ್ಲಿ ಮೂರು ವರ್ಷ ಬೋರರ್ ಹತೋಟಿ ಕ್ರಮ, ಬೋರರ್ ಪೀಡಿತ ಗಿಡಗಳನ್ನು ಹುಡುಕಿ ನಾಶ ಮಾಡುವುದು, ತೊಗಟೆ ಉಜ್ಜುವುದು, ರಾಸಾಯನಿಕ ಸಿಂಪರಣೆ, ಸುಣ್ಣದ ಸಿಂಪರಣೆ, ಲಿಂಗಾಕರ್ಷಕ ಬಲೆ (ಫೆರಾಮೊನ್ ಟ್ರಾಪ್) ಬಳಕೆ ಬೇಕಿಲ್ಲ. ಹೀಗಾಗಿ ಇದು ಲಾಭದಾಯಕ. ಹೆಚ್ಚಿನ ಮಾಹಿತಿಗೆ ಸಸ್ಯ ಸಂರಕ್ಷಣಾ ತಜ್ಞ ಉಮಾಶಂಕರ್ ಅವರ ಸಂಪರ್ಕ ಸಂಖ್ಯೆ 08263 228198.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.