ಮಂಗಳವಾರ, ಮೇ 18, 2021
22 °C

ಕಾಡುವ ನಾದ, ಆಕರ್ಷಕ ನೃತ್ಯ

ಪ್ರೊ. ಮೈಸೂರು ವಿ.ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ನರಸಿಂಹರಾಜ ಕಾಲೊನಿಯ ಶ್ರೀರಾಮ ಮಂದಿರ ಟ್ರಸ್ಟ್‌ನಲ್ಲಿ ನಡೆದ 16 ದಿನಗಳ ರಾಮೋತ್ಸವದಲ್ಲಿ ಸಂಗೀತವಲ್ಲದೆ (ಗಾಯನ, ಹಾರ್ಮೋನಿಯಂ, ವೀಣೆ, ವಾದ್ಯ ವೈವಿಧ್ಯ, ಸ್ಯಾಕ್ಸೋಫೋನ್), ನೃತ್ಯ, ಯಕ್ಷಗಾನ, ಹರಿಕಥೆ, ಮುಖವೇಣು, ಉಪನ್ಯಾಸ ಮೊದಲಾದವುಗಳಿಂದ 74ನೇ ವರ್ಷದ ರಾಮೋತ್ಸವವನ್ನು ಭಕ್ತಿ, ಶ್ರದ್ಧೆಗಳಿಂದ ಆಚರಿಸಿದರು.ಮೊನ್ನೆ ಭಾನುವಾರ ಇಲ್ಲಿ ನಡೆದ ಗಾನ-ಜ್ಞಾನ-ಸುಧಾ ಕಾರ್ಯಕ್ರಮಕ್ಕೆ ಅಭಿಮಾನಿಗಳ ದೊಡ್ಡ ಸಂದಣೆಯೇ ಸೇರಿತ್ತು. ಕರ್ನಾಟಕ ಸಂಗೀತದ ವಾಗ್ಗೇಯಕಾರರು, ಕೃತಿಗಳ ಹಿನ್ನೆಲೆಗಳನ್ನು ಕೆ.ಎನ್.ವೆಂಕಟನಾರಾಯಣ ಅವರು ಹಿತಮಿತವಾಗಿ ವ್ಯಾಖ್ಯಾನಿಸಿದರು.ಉದಯೋನ್ಮುಖ ಕಲಾವಿದ ಹಾಗೂ ಆರ್.ಕೆ. ಪದ್ಮನಾಭ ಅವರ ಶಿಷ್ಯ ಕೆ.ವಿ.ಕೃಷ್ಣಪ್ರಸಾದ್ ಆಯ್ದ ಕೃತಿಗಳನ್ನು ಸ್ವಾರಸ್ಯಕರವಾಗಿ ಹಾಡಿದರು. ಸರಸ್ವತಿ ಮೇಲಿನ `ನಮಸ್ತೆ ಶಾರದಾ ದೇವಿ ಶೃಂಗೇರಿ ಪುರವಾಸಿನಿ~ಯಿಂದ ಪ್ರಾರಂಭಿಸಿ, ಮುತ್ತಯ್ಯ ಭಾಗವತರ `ಭುವನೇಶ್ವರಿಯ ನೆನೆ ಮಾನಸವೆ~ ಕೃತಿಗೆ ಕಿರು ಸ್ವರವನ್ನೂ ಸೇರಿಸಿದರು. ಶಿವರಂಜಿನಿ ರಾಗವನ್ನು ಕಿರಿದಾಗಿ ಆಲಾಪಿಸಿ, ಒಂದು ಅರ್ಥಪೂರ್ಣ ದೇವರನಾಮ `ಮನಶುದ್ಧಿ ಇಲ್ಲದವಗೆ ಮಂತ್ರದ ಫಲವೇನು~ ಹಾಡಿದರು.ದೀಕ್ಷಿತರ ಅನ್ನಪೂರ್ಣೆ ವಿಶಾಲಾಕ್ಷಿ  ಇನ್ನೊಂದು ಭಾವಪೂರ್ಣ ಕೃತಿ. ತಾಗರಾಜರ ಸುಪರಿಚಿತ ಕೀರ್ತನೆ ಮಾಕೇಲರಾ ವಿಚಾರಮು ತೆಗೆದುಕೊಂಡು, ಚರಣದಿಂದ ದ್ರುತ ಕಾಲದಲ್ಲಿ ಹಾಡುತ್ತಾ ರಂಜಿಸಿದರು. ಸಿಂಹೇಂದ್ರಮಧಮ ರಾಗವನ್ನು ವಿಸ್ತಾರವಾಗಿ ಆಲಾಪಿಸಿ ತಾನಕ್ಕೆ ಸರಿದರು.

 

ಅಶ್ವ, ಘಂಟಾ, ಶಂಖ, ಭೃಂಗತಾನ ಮೊದಲಾದ ವೈವಿಧ್ಯಮಯ ತಾನಗಳನ್ನು ಲಯವಾದ್ಯಗಳ ಹಿನ್ನೆಲೆಯೊಂದಿಗೆ ಹಾಡಿದರು. ನಿನ್ನೆ ನಮ್ಮಿತಿನಯ್ಯ ಕೃತಿಯನ್ನು ನೆರವಲ್‌ನೊಂದಿಗೆ ವಿಸ್ತರಿಸಿ, ಸ್ವರಪ್ರಸ್ತಾರದೊಂದಿಗೆ ಪೂರ್ಣತ್ವ ನೀಡಿದರು. ಹೆಚ್ಚಿನ ವೇದಿಕೆ ಅನುಭವದಿಂದ ಕೃಷ್ಣಪ್ರಸಾದರ ಸಂಗೀತ ಭವಿಷ್ಯ ಆಶಾದಾಯಕ.

 

ಪಿಟೀಲಿನಲ್ಲಿ ಟಿ.ಎಸ್. ಕೃಷ್ಣಮೂರ್ತಿ, ಮೃದಂಗದಲ್ಲಿ ಎಸ್.ವಿ.ಬಾಲಕೃಷ್ಣ ಹಾಗೂ ಖಂಜರಿಯಲ್ಲಿ ವಾಸ ವಿಠಲ - ಹೊಂದಾಣಿಕೆಯಿಂದ ಪಕ್ಕವಾದ್ಯಗಳನ್ನು ನುಡಿಸಿದರು. ವೇದ, ಪುರಾಣ ಹಾಗೂ ಕಾವ್ಯಗಳಿಂದ ಉದ್ದಕ್ಕೂ ಉದಾಹರಿಸುತ್ತಾ, ಸ್ವಾರಸ್ಯಕರವಾಗಿ ವ್ಯಾಖ್ಯಾನಿಸುತ್ತಾ ಕೆ.ಎನ್.ವೆಂಕಟನಾರಾಯಣ ಗಾನ-ಜ್ಞಾನ-ಸುಧಾ  ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.ಯುಗಳ ವೇಣುಶ್ರೀ ಶೇಷಾದ್ರಿಪುರಂ ರಾಮಸೇವಾ ಸಮಿತಿಯವರು ಏರ್ಪಡಿಸಿರುವ 64ನೇ ವರ್ಷದ ರಾಮನವಮಿ ಸಂಗೀತೋತ್ಸವದಲ್ಲಿ ಸೋಮವಾರ ತಂದೆ-ಮಗನ ಜೋಡಿ ಬಿ.ಕೆ.ಅನಂತರಾಂ ಮತ್ತು ಅಮಿತ್ ಎ.ನಾಡಿಗ್ ಯುಗಳ ವೇಣುವಾದನ ಮಾಡಿದರು.ಸಿದ್ಧಿವಿನಾಯಕಂ ಕೃತಿಯ ಮೂಲಕ ಗಣೇಶನಿಗೆ ವಂದಿಸುತ್ತಾ ಸ್ವರ ಪ್ರಸ್ತಾರವನ್ನೂ ಮಾಡಿದರು. ಆ ಸ್ವರ ಪುಂಜಗಳು ಲವಲವಿಕೆಯಿಂದ ಗಮನ ಸೆಳೆದವು. ಮುಂದೆ ಸಂತ ತ್ಯಾಗರಾಜರ ಎರಡು ರಸಪೂರ್ಣ ಕೃತಿಗಳ ವಿನಿಕೆ.ದರಿನೀ ತೆಲುಸು ಭಕ್ತಿಭಾವಪೂರ್ಣವಾದರೆ, ನೀವಲ್ಲ ಗುಣದೋಷಮೇಮಿ ರಾಗಭಾವ ಗಾಢವಾಗಿ ಸೂಸುವ ಕೃತಿ. ಪ್ರಧಾನವಾಗಿ ಶಂಕರಾಭರಣ ರಾಗ ಕೃತಿಯನ್ನು ಇಬ್ಬರೂ ಹಂಚಿಕೊಂಡು ವಿಸ್ತರಿಸಿದರು. ಮಧುರ ನಾದ, ಚೇತೋಹಾರಿ ನಿರೂಪಣೆಗಳಿಂದ ಸಭೆಯ ಗೌರವಕ್ಕೆ ಅನಂತರಾಂ ಮತ್ತು ಅಮಿತ್ ಪಾತ್ರರಾದರು. ಎನ್. ಎನ್. ಗಣೇಶ್‌ಕುಮಾರ್, ಬಿ.ಆರ್. ಶ್ರೀನಿವಾಸ್ ಹಾಗೂ ಗುರುಪ್ರಸನ್ನ ಪಕ್ಕವಾದಗಳಲ್ಲಿ ಇಂಬು ತುಂಬಿದರು.ಪ್ರೌಢತೆಯತ್ತ ಸಾಗಿದ ನೃತ್ಯಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್‌ನ ಹೊರೈಸಾನ್ ಮಾಲೆಯಲ್ಲಿ ನರ್ತಿಸಿದ ಶಮಾ ಕೃಷ್ಣ ಕಲಾಭಿಮಾನಿಗಳಿಗೆ ಸುಪರಿಚಿತರೇ. ಅವರನ್ನು ನರ್ತಕಿ, ನಟಿ ಹಾಗೂ ಬೋಧಕಿಯಾಗಿ ಜನ ಬಲ್ಲರು. ವಿದುಷಿ ವೀಣಾ ಮೂರ್ತಿ ಅವರ ಶಿಷ್ಯೆಯಾಗಿ ಅನೇಕ ವರ್ಷಗಳ ಶಿಕ್ಷಣ ಹಾಗೂ ವೇದಿಕೆಯ ಅನುಭವ ಅವರ ಬೆನ್ನ ಹಿಂದೆ .

 

ಈ ಅನುಭವ ಕಾರ್ಯಕ್ರಮದ ಉದ್ದಕ್ಕೂ ಸಗೋಚರವಾಗುತ್ತಿತ್ತು. ಪ್ರಾರಂಭದ ಶಿವಾಷ್ಟಕದಲ್ಲೇ ಶಿವನ ಅನೇಕ ಭಂಗಿಗಳನ್ನು ಸುಂದರವಾಗಿ ತೋರುತ್ತಾ, ಸಭಿಕರ ಮನವನ್ನು ಸೆರೆ ಹಿಡಿದರು ಹಾಗೂ ಕೊನೆಯವರೆಗೂ ಸಭಿಕರ ತದೇಕಚಿತ್ತವನ್ನು ಹಿಡಿದಿಟ್ಟುಕೊಂಡರು.ಸಹಜವಾಗೇ ಕೂಚುಪುಡಿಯ ಎರಡು ಪ್ರಸಿದ್ಧ ರಚನೆಗಳನ್ನು ಆಯ್ದರು. ತಟ್ಟೆಯ ಮೇಲೆ ನಿಂತು, ತಲೆಯ ಮೇಲೆ ಚೊಂಬನ್ನು ಇಟ್ಟುಕೊಂಡು ವಿವಿಧ ಜತಿಪುಂಜಗಳಿಗೆ ಲಯಬದ್ಧವಾಗಿ ನರ್ತಿಸಿದರು. ಆದರೆ ಜತಿಗಳು ಮೊಟಕಾಗಿ ಮಿತವಾಗಿತ್ತು!ಕೂಚುಪುಡಿ ನೃತ್ಯದಲ್ಲಿ ಭಾಮಾಕಲಾಪಕ್ಕೆ ವಿಶಿಷ್ಟ ಸ್ಥಾನ ಇದೆ. ಡಾ. ಗಣೇಶ್ ಅವಧಾನಿ ಅವರು ಅದನ್ನು ಛಂದೋಬದ್ಧವಾಗಿ, ರಸಪೂರ್ಣವಾಗಿ ಕನ್ನಡಕ್ಕೆ ತಂದಿದ್ದಾರೆ. ಕನ್ನಡ ರೂಪವನ್ನು ಮೊದಲ ಬಾರಿಗೆ ಕ್ಷಮಾ ವೇದಿಕೆಗೆ ತಂದರು. ಚುರುಕಾದ ಸಂಭಾಷಣೆ, ಮಿತ ಹಾಸಗಳೊಂದಿಗೆ ಸ್ವಾರಸ್ಯಕರವಾಗಿ ಸಾಗಿದ ಕಲಾಪದಲ್ಲಿ ಮಾಧವಿ ಪಾತ್ರವೂ ಸೇರಿತು. ಆದರೆ ಮಾಧವಿ ಪಾತ್ರಧಾರಿ ಪ್ರಸಾದನ, ವೇಷಗಳನ್ನೂ ಅಳವಡಿಸಿಕೊಂಡಿದ್ದರೆ ಚೆನ್ನಿತ್ತು.

 

ಅಭಿನಯ ಶಮಾಳ ಪ್ರಮುಖ ಅಂಶ. ಸುಲಲಿತವಾಗಿ, ಪರಿಣಾಮಕಾರಿಯಾಗಿ ಅನುಭವಿಸಿ, ಅಭಿನಯಿಸುವ ಕಲೆಗಾರಿಕೆ ಅವರಿಗೆ ಕರಗತ. ಆದರೆ ನಾಟಕೀಯ ಅಂಶಗಳಲ್ಲಿ ಇನ್ನೂ ಸ್ವಲ್ಪ ಸಂಯಮ ವಹಿಸಿದರೆ ಮೇಲು.ಒಟ್ಟಿನಲ್ಲಿ ಇಷ್ಟು ವರ್ಷ ಉದಯೋನ್ಮುಖ ಕಲಾವಿದೆಯಾಗಿ ಕಾಣುತ್ತಿದ್ದ ಶಮಾ ಪ್ರೌಢತೆಯತ್ತ ಸಾಗುತ್ತಿರುವುದು ಅಭಿನಂದನೀಯ. ಬಾಲಮುರಳಿ ಕೃಷ್ಣ ಅವರ ತಿಲ್ಲಾನ ಹಾಗೂ ವಂದನಾರ್ಪಣೆಯ ನಂತರ ಕಾರ್ಯಕ್ರಮ ಮುಕ್ತಾಯವಾಗಲಿಲ್ಲ. ಆ ಹಂತದಲ್ಲಿ ಪ್ರೌಢವೂ-ಗಾಢವೂ ಆದ ಸಿಂಹನಂದನವನ್ನು ತೆಗೆದುಕೊಂಡರು. 108 ಅಕ್ಷರ ತಾಳದ ದೇವಿ ಸ್ತುತಿಯನ್ನು ನರ್ತಿಸುತ್ತಾ ಹಾಸಿದ ರಂಗೋಲಿಯ ಮೇಲೆ ಕಾಲಲ್ಲಿ ಸಿಂಹದ ಚಿತ್ರ ಬಿಡಿಸಿದರು.ಗಾಯನದಲ್ಲಿ ದೀಪ್ತಿ, ನಟುವಾಂಗದಲ್ಲಿ ಸೂರ್ಯರಾವ್, ಮೃದಂಗದಲ್ಲಿ ಲಿಂಗರಾಜ್, ಕೊಳಲಿನಲ್ಲಿ ಮಹೇಶ್‌ಸ್ವಾಮಿ, ಖಂಜರಿಯಲ್ಲಿ ಕಾರ್ತಿಕ್ ದಾತಾರ್ - ಪೂರ್ತಿದಾಯಕ ಬೆಂಬಲ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.