ಕಾಡು ಹಕ್ಕಿಗಳ ಗೆಲುವಿನ ಪಯಣ..

7

ಕಾಡು ಹಕ್ಕಿಗಳ ಗೆಲುವಿನ ಪಯಣ..

Published:
Updated:

ಗೋಣಿಕೊಪ್ಪಲು: ಕಾಡಿನಲ್ಲಿಯೇ ಜೀವಿಸುತ್ತಾ ಬದುಕಿನ ಮೂಲ ಸೌಕರ್ಯಗಳಿಗಾಗಿ ನಿರಂತರ ಹೋರಾಟ ನಡೆಸುತ್ತಾ ಬರುತ್ತಿರುವ ಜೆ.ಕೆ. ಮುತ್ತಮ್ಮ ಹಾಗೂ ಪಿ.ಆರ್. ಪಂಕಜ ತಾ.ಪಂ.ಗೆ ಮರು ಆಯ್ಕೆಗೊಂಡಿದ್ದಾರೆ. ಕಳೆದ ಬಾರಿಯೂ ಸದಸ್ಯರಾಗಿದ್ದ ಈ ಇಬ್ಬರು ಕಾಡಿನ ಹಕ್ಕಿಗಳು, ಮತ್ತೆ ಅದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಮತ್ತೆ ಜನತೆಯ ಬೆಂಬಲ ಪಡೆದಿದ್ದಾರೆ. ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾದ ಕುಟ್ಟ ಕ್ಷೇತ್ರದಿಂದ ಮುತ್ತಮ್ಮ ಆಯ್ಕೆಗೊಂಡರೆ, ತಿತಿಮತಿ ಕ್ಷೇತ್ರದಿಂದ ಪಿ.ಆರ್. ಪಂಕಜ ಆಯ್ಕೆ ಹೊಂದಿದ್ದಾರೆ.ಮುತ್ತಮ್ಮ ಉತ್ತಮ ನಾಯಕತ್ವದ ಗುಣ ಹೊಂದಿರುವ ಮಹಿಳೆ. 10ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದು, ಶಿಕ್ಷಣದ ತಿಳಿವಳಿಕೆಯೂ ಅವರಿಗಿದೆ. ಗಿರಿಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಲು ಚಿಕ್ಕಂದಿನಿಂದಲೇ ಹೋರಾಟಕ್ಕಿಳಿದವರು. ಅವರಿಗೆ ಧರಣಿ, ಮುಷ್ಕರ, ಪ್ರತಿಭಟನೆ ನೀರು ಕುಡಿದಷ್ಟೇ ಸಹಜವಾದುದು. ಇದರಿಂದ ಅವರು ನಿಜವಾದ ಗಿರಿಜನರ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ಹೀಗಾಗಿ, ಅವರು ಕೈಯಲ್ಲಿ ಕಾಸಿಲ್ಲದಿದ್ದರೂ ಚುನಾವಣೆಯಲ್ಲಿ ಜಯಭೇರಿ ಹೊಡೆದು ಮತ್ತೆ ತಾ.ಪಂ. ಪ್ರವೇಶಿಸಿದ್ದಾರೆ.ಅರಣ್ಯ ಹಕ್ಕು ಮಸೂದೆ ಅನುಷ್ಠಾನದಲ್ಲಿ ಮುತ್ತಮ್ಮನವರ ಹೋರಾಟ ಪ್ರಧಾನವಾದುದು. ತಾ.ಪಂ. ಸದಸ್ಯರಾಗಿ, ವಿವಿಧ ಗಿರಿಜನ ಸಂಘಟನೆಗಳ ನಾಯಕಿಯಾಗಿ ಕಳೆದ ಹತ್ತಾರು ವರ್ಷಗಳಿಂದ ನಡೆಸಿಕೊಂಡು ಬಂದ ಹೋರಾಟದ ಫಲವಾಗಿ ಇಂದು ತಾ.ಪಂ.ನಲ್ಲಿ ಗಿರಿಜನರನ್ನು ಪ್ರತಿನಿಧಿಸುವ ನಾಯಕಿಯಾಗಿ ಬೆಳೆದಿದ್ದಾರೆ. ಎಲ್ಲಿ ಗಿರಿಜನರ ಪ್ರತಿಭಟನೆ ಇರುತ್ತದೆಯೋ ಅಲ್ಲಿ ಮುತ್ತಮ್ಮ ಇರುತ್ತಾರೆ. ಅವರ ನೋವು- ನಲಿವುಗಳಲ್ಲಿ ಭಾಗಿಯಾಗುತ್ತಾರೆ. ಉತ್ತಮ ಮಾತುಗಾರಿಕೆಯಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಸಾಮರ್ಥ್ಯ ಹೊಂದಿದ್ದಾರೆ.ಕಳೆದ ವರ್ಷ ತೀವ್ರ ಅನಾರೋಗಕ್ಕೆ ತುತ್ತಾಗಿದ್ದ ಇವರು ತಾ.ಪಂ. ಸದಸ್ಯೆಯಾಗಿದ್ದರೂ ಆಸ್ಪತ್ರೆಯ ಖರ್ಚಿಗೆ ಕಾಸಿಲ್ಲದೆ ತುಂಬಾ ನೋವು ಅನುಭವಿಸಿದರು. ತಮ್ಮ ಜನಾಂಗದ ಬಗ್ಗೆ ಹೊಂದಿರುವ ಕಳಕಳಿಯೇ ಸತತ ಗೆಲುವಿನ ರಹದಾರಿ. ಇತ್ತ, ಪಿ.ಆರ್. ಪಂಕಜ ಕೂಡ ಗಿರಿಜನ ಮಹಿಳೆ. 10ನೇ ತರಗತಿವರೆಗೆ ವ್ಯಾಸಂಗ ಮಾಡಿರುವ ಇವರು, ಸೌಮ್ಯ ಸ್ವಭಾವದ ಗುಣವುಳ್ಳವರು. ಕಳೆದ ಬಾರಿ ತಾ.ಪಂ. ಸದಸ್ಯೆಯಾಗಿ ತಮ್ಮ ಜನಾಂಗದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರ ಫಲವೇ ಮರು ಆಯ್ಕೆಗೆ ಸಹಕಾರಿಯಾಯಿತು.ಇವರ ಜತೆಗೆ ಮತ್ತೊಬ್ಬ ಗಿರಿಜನ ಪ್ರತಿನಿಧಿ ಜೆ.ಕೆ.ರಾಮು ಬಾಳೆಲೆ ಕ್ಷೇತ್ರದಿಂದ ತಾ.ಪಂ.ಗೆ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ತಾ.ಪಂ. ಪ್ರವೇಶಿಸುವಲ್ಲಿ ವಿಫರಾಗಿದ್ದ ರಾಮು, ಈ ಬಾರಿ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಯಶಸ್ಸು ಗಳಿಸಿದ್ದಾರೆ. ಈ ಮೂವರಲ್ಲಿ ಇಬ್ಬರು ಮರು ಪ್ರವೇಶ ಮಾಡಿದ್ದರೆ, ಒಬ್ಬರು ಪ್ರಥಮ ಬಾರಿಗೆ ತಾ.ಪಂ. ಪ್ರವೇಶಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry