ಕಾಮಗಾರಿಗೆ ಕೊನೆಗೂ ಚಾಲನೆ
ಔರಾದ್: ಕಳೆದ ಒಂದೂವರೆ ವರ್ಷದಿಂದ ನೆನೆಗುದಿಗೆ ಬಿದ್ದಿರುವ ಪಟ್ಟಣದ ಬಸ್ ನಿಲ್ದಾಣ ಎದುರಿನ ಸೇತುವೆ ಕಾಮಗಾರಿಗೆ ಮಂಗಳವಾರ ಚಾಲನೆ ಸಿಕ್ಕಿದೆ.ಹಿಂದಿನ ಜಿಲ್ಲಾಧಿಕಾರಿ ಹರ್ಷಗುಪ್ತಾ ಅವರು ಪಟ್ಟಣದ ಬಸ್ ನಿಲ್ದಾಣ ಎದುರಿನಿಂದ ಉದಗೀರ್ ರಸ್ತೆಗೆ ಸಂಪರ್ಕ ಕಲ್ಪಿಸಲು ಸುಮಾರು 75 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಲು ಮಂಜೂರಾತಿ ನೀಡಿದ್ದರು. ಅದರಂತೆ ರಸ್ತೆ ಕಾಮಗಾರಿಯೂ ಮೂರು ತಿಂಗಳಲ್ಲಿ ಪೂರ್ಣಗೊಂಡಿತು.
ಆದರೆ ರಸ್ತೆಗೆ ಅಡ್ಡಲಾಗಿರುವ ನಾಲೆವೊಂದರ ಮೇಲಿನ ಸೇತುವೆ ಕಾಮಗಾರಿ ನೆನೆಗುದಿಗೆ ಬಿದ್ದು ಹೊಸ ರಸ್ತೆ ಸಾರ್ವಜನಿಕರ ಉಪಯೋಗಕ್ಕೆ ಬರಲಿಲ್ಲ. ಈ ಬಗ್ಗೆ ‘ಪ್ರಜಾವಾಣಿ’ ಸಾಕಷ್ಟು ಸಲ ವರದಿ ಮಾಡಿ ಅಧಿಕಾರಿಗಳ ಗಮನ ಸೆಳೆದಿತು. ಪತ್ರಿಕೆ ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಶಮೀರ್ ಶುಕ್ಲ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ಸೇತುವೆ ಕಾಮಗಾರಿ ನಿರ್ಮಿಸಲು ಆದೇಶಿಸಿದರು. 50 ಲಕ್ಷ ರೂಪಾಯಿ ವೆಚ್ಚದ ಈ ಸೇತುವೆ ಕಾಮಗಾರಿಗೆ ಶಾಸಕ ಪ್ರಭು ಚವ್ಹಾಣ ಮಂಗಳವಾರ ಚಾಲನೆ ನೀಡಿದರು.
ಔರಾದ್ ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ರಸ್ತೆ, ಚರಂಡಿ, ಕುಡಿಯುವ ನೀರಿನ ಕಾಮಗಾರಿಗಳು ಪ್ರಗತಿಯಲ್ಲಿವೆ. ಪಟ್ಟಣದ ಗಣೇಶ ಮಾರ್ಕೆಟ್ನಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲು 1 ಕೋಟಿ ರೂಪಾಯಿ ಮಂಜೂರಾಗಿದೆ ಎಂದು ಶಾಸಕರು ತಿಳಿಸಿದರು.ಸೇತುವೆ ಕಾಮಗಾರಿ ಆದಷ್ಟು ಬೇಗ ಮುಗಿಸಲಾಗುವುದು ಎಂದು ಗುತ್ತೇದಾರ ಗುರುನಾಥ ಕೊಳ್ಳೂರ್ ಹೇಳಿದರು. ಪಪಂ. ಅಧ್ಯಕ್ಷ ಧೊಂಡಿಬಾ ನರೋಟೆ, ಉಪಾಧ್ಯಕ್ಷ ಸ್ವಾಮಿದಾಸ, ಮುಖ್ಯಾಧಿಕಾರಿ ಗುದಗೆನೋರ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.