ಭಾನುವಾರ, ಮಾರ್ಚ್ 26, 2023
31 °C

ಕಾಮಗಾರಿ ಅಕ್ರಮ: ಗ್ರಾ.ಪಂ. ಎದುರು ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಮಗಾರಿ ಅಕ್ರಮ: ಗ್ರಾ.ಪಂ. ಎದುರು ಧರಣಿ

ಶ್ರೀನಿವಾಸಪುರ: ಅಭಿವೃದ್ಧಿ ಕಾಮಗಾರಿಗಳಲ್ಲಿ ಅಕ್ರಮ ನಡೆಸಿರುವ ಅಧಿಕಾರಿಗಳ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲ್ಲೂಕಿನ ದಳಸನೂರು ಗ್ರಾ.ಪಂ. ಕಚೇರಿ ಎದುರು ಸುತ್ತಮುತ್ತಲಿನ ಗ್ರಾಮಗಳ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಧರಣಿ ನಡೆಸಿದರು.



ಕೆಪಿಸಿಸಿ ಮಾಜಿ ಸದಸ್ಯ ಹಾಗೂ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಎಲ್.ಗೋಪಾಲಕೃಷ್ಣ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿ, ಮುಗಿದಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಬಿಲ್ ಮಾಡುವಲ್ಲಿ ಅಧಿಕಾರಿಗಳು ಪಕ್ಷಪಾತ ಮಾಡುತ್ತಿದ್ದಾರೆ. ಎರಡು ವರ್ಷ ಕಳೆದರೂ ಎನ್‌ಆರ್‌ಇಜಿ ಕೂಲಿ ಕಾರ್ಮಿಕರಿಗೆ ಹಣ ಸಂದಾಯವಾಗಿಲ್ಲ ಎಂದು ಆಪಾದಿಸಿದರು.



ಗ್ರಾಮ ಸಭೆಗಳನ್ನು ಕರೆಯದೆ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಶೌಚಾಲಯ ನಿರ್ಮಾಣಕ್ಕೆ ಮೀಸಲಾಗಿರುವ ಹಣ ಪೂರ್ಣ ಪ್ರಮಾಣದಲ್ಲಿ ಸದುಪಯೋಗ ಆಗಿಲ್ಲ. ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿಲ್ಲ. ಸರ್ಕಾರಿ ಯೋಜನೆಗಳ ಲಾಭವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸದ ಅಧಿಕಾರಿಗಳ ವಿರುದ್ಧ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಪಡಿಸಿದರು.



ತಾಲ್ಲೂಕಿನ ಪ್ರತಿ ಗ್ರಾ.ಪಂ. ಕೇಂದ್ರ ದಲ್ಲೂ ನಾಗರಿಕರನ್ನು ಸಂಘಟಿಸಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲಾಗುವುದು. ಸ್ಥಳೀಯ ಸಮಸ್ಯೆ ಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆಯ ಲಾಗುವುದು ಎಂದು ಹೇಳಿದರು.



ಜಿಲ್ಲಾ ಯೋಜನಾಧಿಕಾರಿ ವೆಂಕಟರವಣಪ್ಪ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಡಾ.ಜಯರಾಮ್ ಸ್ಥಳಕ್ಕೆ ಭೇಟಿ ನೀಡಿ ಯಾವುದೇ ಅಧಿಕಾರಿ ಅಕ್ರಮ ನಡೆಸಿದ್ದರೆ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಧರಣಿಯನ್ನು ಹಿಂದಕ್ಕೆ ಪಡೆಯಲಾಯಿತು.



ಕಾಂಗ್ರೆಸ್ ಮುಖಂಡರಾದ ಶಶಿಕುಮಾರ್, ಸುರೇಶ್ ಬಾಬು, ಮುನಿವೆಂಕಟೇಗೌಡ, ಗ್ರಾ.ಪಂ ಸದಸ್ಯ ವೀರಭದ್ರಸ್ವಾಮಿ ಇತರರು ಧರಣಿಯ ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.