ಶುಕ್ರವಾರ, ಮೇ 7, 2021
20 °C

ಕಾಮಗಾರಿ ಶುರುಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಮಗಾರಿ ಶುರುಮಾಡಿ

ಕನ್ನಡಿಗರ ಕಣ್ಮಣಿ ಕರ್ನಾಟಕರತ್ನ ಡಾ. ರಾಜ್‌ಕುಮಾರ್ ಅಗಲಿ ಆರು ವರ್ಷಗಳಾಗಿರುವ ಸಂದರ್ಭದಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋ ಅಣ್ಣಾವ್ರ ಸಮಾಧಿ ಆರು ವರ್ಷಗಳ ನಂತರ ಸುಂದರ ಸ್ಮಾರಕವಾಗಿ ಕಂಗೊಳಿಸುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಡಾ. ರಾಜ್ ಸ್ಮಾರಕ ನಗರದ ಜನಪ್ರಿಯ ಪ್ರವಾಸಿ ಕೇಂದ್ರವಾಗುವಂತೆ ಸರ್ಕಾರ ಉದ್ಯಮ, ಬಿಬಿಎಂಪಿ, ಡಾ. ರಾಜ್ ಪ್ರತಿಷ್ಠಾನ, ಸೂಕ್ತ ಕ್ರಮಗಳನ್ನು ಕೈಗೊಳ್ಳಲಿ. ಧ್ಯಾನಮಂದಿರ, ವಸ್ತುಸಂಗ್ರಹಾಲಯ, ಸಭಾಂಗಣ ಕಾಮಗಾರಿಗಳು ಶೀಘ್ರವೇ ಆರಂಭವಾಗುವಂತೆ ಕ್ರಮ ಕೈಗೊಳ್ಳಲಿ.ಹಾಗೆಯೇ ಇಂದು (ಏಪ್ರಿಲ್ 24)   ಡಾ. ರಾಜ್‌ರವರ 84ನೇ ಜಯಂತಿಯನ್ನು ಉದ್ಯಮ, ಡಾ. ರಾಜ್ ಕುಟುಂಬವರ್ಗ, ಬಿಬಿಎಂಪಿ, ಡಾ. ರಾಜ್ ಪ್ರತಿಷ್ಠಾನ ಸರಕಾರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಶಿಷ್ಟವಾಗಿ ಅರ್ಥಪೂರ್ಣವಾಗಿ ಆಚರಿಸುವ ಕ್ರಮ ಕೈಗೊಳ್ಳಲಿ ಬಿಬಿಎಂಪಿ ನಿರ್ಮಿಸಿರುವ ಡಾ. ರಾಜ್ ಕಸ್ತೂರಿ ನಿವಾಸದ ಕಂಚಿನ ಪ್ರತಿಮೆ ಲಾಲ್‌ಬಾಗ್ ಒಳಗೆ ಅಥವಾ ಮೈಸೂರಿನ ಕೆ.ಆರ್. ಎಸ್‌ಉದ್ಯಾನವನದಲ್ಲಿ ಸ್ಥಾಪನೆಯಾಗಲಿ.

-ಕಾಡನೂರು ರಾಮಶೇಷ, ಹುಲಿಮಂಗಲ.

ಡಾಂಬರೀಕರಣಕ್ಕೆ ಒತ್ತಾಯ

ರಾಜಾಜಿನಗರದ 2ನೇ ಬ್ಲಾಕ್‌ನ ಬಹುತೇಕ ಮುಖ್ಯ ರಸ್ತೆ ಮತ್ತು ಅಡ್ಡ ರಸ್ತೆಗಳನ್ನು ನೀರಿನ ಹಾಗೂ ಒಳಚರಂಡಿ ಪೈಪುಗಳನ್ನು ಅಳವಡಿಸಲು ಅಗೆದುಹಾಕಿದ್ದಾರೆ. ಆರೇಳು ತಿಂಗಳುಗಳೇ ಕಳೆದಿದ್ದರೂ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಇದರಿಂದ ಸುತ್ತಲಿನ ಪ್ರದೇಶವು ದೂಳಿನಿಂದ ಕೂಡಿದೆ. ಇಡೀ ಪ್ರದೇಶದ ಪರಿಸರ ಹದಗೆಟ್ಟಿದೆ. ಅಲ್ಲದೆ ಈ ಪ್ರದೇಶದಲ್ಲಿ ಅನೇಕ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜು, ವಸತಿ ಗೃಹಗಳಿದ್ದು, ಪ್ರತಿದಿನ ಜನರು ಓಡಾಡಲು ಕಷ್ಟವಾಗಿದೆ. ಆದುದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗ ರಸ್ತೆ ದುರಸ್ತಿಗೊಳಿಸಿ, ಟಾರ್ ಹಾಕಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ.

-ಎಂ.ಟಿ. ಸ್ವಾಮಿ

ತಾರೀಖು ನಮೂದಿಸದ ನಂದಿನಿ ಹಾಲು

ನಗರದಲ್ಲಿ ಸರಬರಾಜು ಆಗುತ್ತಿರುವ ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಅಂದಿನ ತಾರೀಖು ಅಸ್ಪಷ್ಟವಾಗಿ ನಮೂದಿಸಲಾಗಿರುತ್ತದೆ.  ಮಧ್ಯಾಹ್ನದ ಹೊತ್ತಿನಲ್ಲಿ ಸರಬರಾಜು ಆಗುತ್ತಿರುವ ಹಾಲಿನ ಪ್ಯಾಕೆಟ್ ಮೇಲೆ ಅಂದಿನ ತಾರೀಖು ಮುದ್ರಿತವಾಗಿರುವುದಿಲ್ಲ. ನೆರೆ ರಾಜ್ಯಗಳಿಂದ ಇಲ್ಲಿ ಸರಬರಾಜು ಆಗುತ್ತಿರುವ ಅವರ ಹಾಲಿನ ಪ್ಯಾಕೆಟ್ ಮೇಲೆ ಅಂದಿನ ತಾರೀಖು ಮುದ್ರಣ ಶಾಯಿಯಲ್ಲಿ ಕಂಪ್ಯೂಟರ್ ಅಕ್ಷರಗಳಿಂದ ಮುದ್ರಿತವಾಗಿರುತ್ತವೆ. ಹೀಗಾಗಿ ಇಲ್ಲಿ ಸರಬರಾಜಾಗುತ್ತಿರುವ ನಂದಿನಿ ಹಾಲಿನ ಪ್ಯಾಕೆಟ್ ತಾಜಾ ಆಗಿದೆಯೇ? ಎಷ್ಟು ಹಳತು ಎಂಬುದು  ಬಳಕೆದಾರರ ಗಮನಕ್ಕೆ ಬರುತ್ತಿಲ್ಲ.  ಇದರೊಂದಿಗೆ ನಂದಿನಿ ಹಾಲಿನ ಉತ್ಪನ್ನಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರತ್ತ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿ-ಜೆ.ಡಿ. ಈಶ್ವರರಾವ್ಬಗೆಹರಿಯದ ಅಡುಗೆ ಅನಿಲ ಸಮಸ್ಯೆ


ಬೆಂಗಳೂರು ನಗರದಲ್ಲಿ ಅಡುಗೆ ಅನಿಲ ಸಿಲಿಂಡರ್ ಮೂರು-ನಾಲ್ಕು ದಿನದ ಬದಲಿಗೆ ಈಗ ಒಂದು ತಿಂಗಳಿಗೆ ವಿತರಣೆಯ ಅವಧಿ ವಿಸ್ತರಣೆಯಾಗಿದೆ. ಮೊದಲು ಕಾದಿರಿಸಿದ ದಿನ ಲೆಕ್ಕಕ್ಕೆ ತೆಗೆದುಕೊಂಡಿದ್ದರೆ, ಈಗ ವಿತರಕರು ಗ್ರಾಹಕರಿಗೆ ಸಿಲೆಂಡರ್ ವಿತರಿಸಿದ ದಿನದಿಂದ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಎರಡು ಸಿಲಿಂಡರ್ ಇದ್ದರೂ ಅನಿಲ ಮುಗಿದು ಉಪವಾಸವಿರುವ ದುಸ್ಥಿತಿ  ನಿರ್ಮಾಣವಾಗಿದೆ.ಮೂರು-ನಾಲ್ಕು ತಿಂಗಳಿಂದ ಈ ಸಮಸ್ಯೆ ಮುಂದುವರಿದಿದ್ದ ರೂ ದಿನದಿಂದ ದಿನಕ್ಕೆ ವಿತರಣಾ ಅವಧಿ ಮುಂದುವರಿಕೆ ಆಗುತ್ತಿದೆಯೇ ಹೊರತು ಬಗೆಹರಿಯುತ್ತಿಲ್ಲ. ಜೊತೆಗೆ ವಿತರಕರಿಂದ ಇನ್ನಷ್ಟು ದಿನ ಮುಂದೂಡುವ ಕೃತಕ ಅಭಾವವೂ ಸೃಷ್ಟಿಯಾಗುತ್ತಿದೆ. ಅನಿಲ ಕಂಪೆನಿಗಳು ಗ್ರಾಹಕರಿಗೆ ಈ ಬಗ್ಗೆ ಕಾರಣ ನೀಡಿ, ಸಮಸ್ಯೆ ಬಗೆಹರಿಸುವಂತೆ  ವಿನಂತಿ.

-ಸಾಲ್ಯಾನ್ ಪಡುಬಿದ್ರಿಪೀಠೋಪಕರಣಗಳ ದುರಸ್ತಿಯಾಗಲಿ


ಬೆಂಗಳೂರು ನಗರದಲ್ಲಿ ಅನೇಕ ಭಾಗಗಳಲ್ಲಿ ನಗರ ಕೇಂದ್ರ ಗ್ರಂಥಾಲಯ ಮತ್ತು ಬಿಬಿಎಂಪಿ ಸಹಯೋಗದಲ್ಲಿ ಸಾರ್ವಜನಿಕರಿಗಾಗಿ ಗ್ರಂಥಾಲಯಗಳನ್ನು ಆರಂಭಿಸಿರುತ್ತಾರೆ. ಆದರೆ, ಬಹಳಷ್ಟು ಭಾಗಗಳಲ್ಲಿ ಇದರ ನಿರ್ವಹಣೆ ಸರಿಯಾಗಿರುವುದಿಲ್ಲ ವಿಶೇಷವಾಗಿ ಇಲ್ಲಿನ ಕುರ್ಚಿಗಳು ಮುರಿದಿರುತ್ತವೆ, ಟೇಬಲ್‌ಗಳು ಹಾಳಾಗಿರುತ್ತವೆ. ಸಾರ್ವಜನಿಕರಿಗೆ ಕುಳಿತು ಓದಲು ಸರಿಯಾದ ವ್ಯವಸ್ಥೆ ಇರುವುದಿಲ್ಲ. ಎನ್.ಆರ್. ಕಾಲೋನಿಯ ಬಿಬಿಎಂಪಿ ಕಾಂಪ್ಲೆಕ್ಸ್‌ನಲ್ಲಿರುವ ಸಾರ್ವಜನಿಕ ಗ್ರಂಥಾಲಯದ ಕುರ್ಚಿಗಳು ಹಳೆಯ ಕಾಲದವು. ಕಾಲು ಮುರಿದ, ಬೆನ್ನು ಮುರಿದ ಕುರ್ಚಿಗಳು ಇಲ್ಲಿವೆ.  ಕೆಲವು ಕುರ್ಚಿಗಳು ಮುರಿದಿರುತ್ತವೆ. ಮತ್ತು ಕೆಲವು ಕುರ್ಚಿ ಮೇಲೆ ರಾಶಿ ರಾಶಿ ಧೂಳು ತುಂಬಿರುತ್ತದೆ. ಈ ಪರಿಸ್ಥಿತಿಯಲ್ಲಿ ಸರಿಯಾಗಿ ಓದುವುದಕ್ಕೂ ಆಗುವುದಿಲ್ಲ. ಆದುದರಿಂದ ಸಂಬಂಧಪಟ್ಟಂತಹ ಅಧಿಕಾರಿಗಳು ಬೆಂಗಳೂರು ನಗರದಲ್ಲಿರುವ ಎಲ್ಲಾ ಗ್ರಂಥಾಲಯಗಳಿಗೆ ಭೇಟಿಕೊಟ್ಟು ಅಲ್ಲಿನ ಪೀಠೋಪಕರಣಗಳ ಸ್ಥಿತಿಗತಿಗಳ ಬಗ್ಗೆ ಗಮನಹರಿಸಿ ಓದುವ ಮನಸ್ಸಿಗೆ ಅನುಕೂಲ ಮಾಡಿಕೊಡಬೇಕೆಂದು ಕೋರುತ್ತೇನೆ.

-ಕೆ.ಎಸ್. ನಾಗರಾಜುಡಾಂಬರು ಕಾಣದ ರಸ್ತೆ

ಯಶವಂತಪುರ ವಿಧಾನಸಭಾ ಕ್ಷೇತ್ರ, ರಾಜರಾಜೇಶ್ವರಿನಗರ ವಲಯ, ವಾರ್ಡ್ ನಂ 40ಕ್ಕೆ ಸೇರಿರುವ ಬಿಬಿಎಂಪಿ ವ್ಯಾಪ್ತಿಯ ಕರಿವೋಬನಹಳ್ಳಿಯ (ಆಂದ್ರಹಳ್ಳಿ-ತಿಗಳರಪಾಳ್ಯ ಮುಖ್ಯರಸ್ತೆ ಮಧ್ಯೆ ಇರುವ) ಬೈಲಾಂಜನೇಯ ಸ್ವಾಮಿ ದೇವಸ್ಥಾನದ ಎದುರಿಗೆ ಇರುವ (ಸಹನ ಎಂಜಿನಿಯರಿಂಗ್ ಕಾರ್ಖಾನೆಯ) ಪಕ್ಕದ ರಸ್ತೆಯು ಕಲ್ಲು ಮುಳ್ಳುಗಳಿಂದ ಕೂಡಿದೆ. ಈ ಚಿಕ್ಕ ರಸ್ತೆಯ ಮುಂಭಾಗದಲ್ಲಿ ಚರಂಡಿ ನೀರು ಹರಿಯಲು ಕಾಲುವೆ ತೋಡಲಾಗಿದೆ. ಈ ಕಾಲುವೆಗೆ ಅಡ್ಡಲಾಗಿ ಒಂದು ಚಪ್ಪಡಿ ಕಲ್ಲನ್ನು ಹಾಕಲಾಗಿದೆ. ಈ ರಸ್ತೆಯ ನಿವಾಸಿಗಳು ಈ ಚಪ್ಪಡಿ ಕಲ್ಲಿನ ಮೇಲೆಯೇ ಹಾದು ಹೋಗುತ್ತಿದ್ದು, ಇದರಿಂದ ವೃದ್ಧರು ಹಾಗೂ ಸಣ್ಣ ಮಕ್ಕಳಿಗೆ ತುಂಬಾ ತೊಂದರೆಯಾಗಿದೆ. ಈ ರಸ್ತೆಗೆ ಡಾಂಬರು ಇಲ್ಲದೆ ಇಲ್ಲಿನ ನಿವಾಸಿಗಳಿಗೆ ಓಡಾಡಲು ಹಿಂಸೆಯಾಗಿದೆ. ಇದೊಂದೇ ರಸ್ತೆಗೆ ಡಾಂಬರೀಕರಣ ಆಗಿಲ್ಲ. 

ಈ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳಿಗೆ ಬಿಬಿಎಂಪಿಯ ಅಧಿಕಾರಿಗಳಿಗೆ ಈಗಾಗಲೇ ಎರಡು ಸಲ ಮನವಿ ಸಲ್ಲಿಸಲಾಗಿದೆ. ಈ ವರೆಗೂ ಸ್ಪಂದಿಸಿಲ್ಲ. 

-ನೊಂದ ನಿವಾಸಿಗಳುರಸ್ತೆಯನ್ನು ವಿಸ್ತರಿಸಿ


ರಾಜರಾಜೇಶ್ವರಿನಗರ ಮತ್ತು ದಾಸರಹಳ್ಳಿ ವಲಯಕ್ಕೆ ಸೇರಿರುವ ಲಗ್ಗೆರೆಗೆ ಹೋಗುವ ರಸ್ತೆ ಅತಿ ಕಿರಿದಾಗಿದೆ.ಈಚೆಗೆ ನಿರ್ಮಾಣವಾದ ಚೌಡೇಶ್ವರಿನಗರ, ರಾಜೀವ್‌ಗಾಂಧಿನಗರ, ಕೆಂಪೇಗೌಡ ಬಡಾವಣೆಗಳು ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಂಡಿವೆ. ಆದರೆ, ಲಗ್ಗೆರೆಗೆ ಮಾತ್ರ ಸಮರ್ಪಕ ಮಾರ್ಗವೇ ಇಲ್ಲದಂತಾಗಿದೆ.  ಬಿಎಂಟಿಸಿಯ 3-4 ಮಾರ್ಗಗಳ ಬಸ್ಸುಗಳು ಲಗ್ಗೆರೆಯ ಹೊರವಲಯದ ಬಸ್ಸು ನಿಲ್ದಾಣಕ್ಕೆ ಮಾತ್ರ ಬಂದು ಹೋಗುತ್ತವೆ. ಇದರಿಂದ ಲಗ್ಗೆರೆಯ ಹೊಸ ಬಡಾವಣೆ ನಿವಾಸಿಗಳು ಪ್ರತಿ ದಿನ 2-3 ಕಿ.ಮೀ. ದೂರ ನಡೆದು ಬಂದು ಬಸ್ಸಿನಲ್ಲಿ ಪ್ರಯಾಣ ಮಾಡಬೇಕಾಗಿದೆ. ಈ ಬಗ್ಗೆ ಹಲವು ಸಲ ಮನವಿಗಳನ್ನು ಸಲ್ಲಿಸಿದ್ದರೂ ಈತನಕ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ. ಕಾವೇರಿ 4ನೇ ಹಂತದ ನೀರಿನ ಪೈಪುಗಳನ್ನು ಈ ಮುಖ್ಯ ರಸ್ತೆಯಲ್ಲಿ ಹಾಕುವ ಕಾಮಗಾರಿ ಆರಂಭವಾಗಿದ್ದು ಈಗ ಕಿರಿದಾದ ಮುಖ್ಯ ರಸ್ತೆಯನ್ನು ವಿಸ್ತರಿಸಲು ಒಳ್ಳೆಯ ಸಮಯವಾಗಿದೆ. ಈಗಲಾದರೂ ಬಿಬಿಎಂಪಿ ಆಯುಕ್ತರಾಗಲೀ ಮತ್ತು ಮೇಯರು ಆಗಲಿ ಈ ಬಗ್ಗೆ ಗಮನಹರಿಸಿ. ಬಿಎಂಟಿಸಿಯ ಬಸ್ಸುಗಳು ಮುಂದಿನ ಹೊಸ ಬಡಾವಣೆಗಳಿಗೆ ಸುಲಭವಾಗಿ ಬಂದು ಹೋಗುವಂತೆ ಕ್ರಮ ಕೈಗೊಳ್ಳಲು ಮನವಿ.

- ಜಿ. ಸಿದ್ದಗಂಗಯ್ಯಹೊಸ ತಂಗುದಾಣ ನಿರ್ಮಿಸಿ


ಬನಶಂಕರಿ 2ನೇ ಹಂತದ 27ನೇ ಕ್ರಾಸಿನಲ್ಲಿ ಬಿ.ಎಂ.ಟಿ.ಸಿ.ಯ  ತಂಗುದಾಣ  ಶಿಥಿಲಗೊಂಡಿದೆ. ಈ ನಿಲ್ದಾಣದಲ್ಲಿ ಅತಿ ಹೆಚ್ಚಿನ ಬಸ್ಸುಗಳು ನಿಲ್ಲುವುದರಿಂದ ಪ್ರಯಾಣಿಕರ ಸಂಖ್ಯೆಯು ಹೆಚ್ಚಾಗಿರುತ್ತದೆ. ಆದುದರಿಂದ ಬಿ.ಎಂ.ಟಿ.ಸಿ.ಯವರು ಈ ತಂಗುದಾಣವನ್ನು ಹೊಸದಾಗಿ, ವಿಶಾಲವಾಗಿ ನಿರ್ಮಿಸಿದರೆ ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲವನ್ನು ಕಲ್ಪಿಸಿದಂತಾಗುತ್ತದೆ. ಮಳೆಗಾಲ ಆರಂಭವಾಗುವ ಮುನ್ನ ಈ ಕೆಲಸ ಮುಗಿಸಲು ಕೋರಲಾಗಿದೆ

- ರವಿರಸ್ತೆ ಸೌಲಭ್ಯ ಕಲ್ಪಿಸಿ


ಮೈಸೂರು ಸರ್ಕಲ್ ನಳಂದಾ ಟಾಕೀಸ್‌ನಿಂದ ರಾಜರಾಜೇಶ್ವರಿ ಆರ್ಚ್ (ಗೋಪಾಲನ್ ಮಾಲ್) ವರೆಗೆ,  ಸ್ಕೂಟರ್‌ನಲ್ಲೂ ಓಡಾಡದಂತಹ ಪರಿಸ್ಥಿತಿ. ಬಿ.ಬಿ.ಎಂ.ಪಿ.ಯಿಂದ ಯಾವುದೇ ರೀತಿಯಿಂದಲೂ ಪ್ರಯೋಜನಕಾರಿಯಾಗಿಲ್ಲ. ಈಗಲಾದರೂ ಬಿ.ಬಿ.ಎಂ.ಪಿ. ಗಮನ ಹರಿಸಬೇಕಾಗಿ ವಿನಂತಿ.

 - ಟಿ. ಆರ್. ರಾಜಗೋಪಾಲ್

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.