ಮಂಗಳವಾರ, ಮೇ 24, 2022
27 °C

ಕಾರಿಥಾಸ್‌ನಿಂದ ಬಡವರ ಸಾರ್ಥಕ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರಿಥಾಸ್‌ನಿಂದ ಬಡವರ ಸಾರ್ಥಕ ಸೇವೆ

ಮೈಸೂರು: `ಕಾರಿಥಾಸ್ ಇಂಡಿಯಾ ಸಂಸ್ಥೆಯು ಸತತವಾಗಿ 50 ವರ್ಷಗಳಿಂದ ಸಮುದಾಯದ ಬಡ ಜನರ ಸರ್ವತೋಮುಖ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಾ ಬಂದಿದೆ~ ಎಂದು ಕಾರಿಥಾಸ್ ಇಂಡಿಯಾದ ಕರ್ನಾಟಕ ಪ್ರಾಂತ್ಯದ ವ್ಯವಸ್ಥಾಪಕ ಜಿಮ್ಮಿ ಮ್ಯಾಥ್ಯೂ ಸೋಮವಾರ ತಿಳಿಸಿದರು.ನಗರದ ಸೆಂಟ್ ಫಿಲೋಮಿನಾ ಚರ್ಚ್‌ನ ಆವರಣದಲ್ಲಿರುವ ಸಮುದಾಯ ಭವನದಲ್ಲಿ ಓಡಿಪಿಯು ಆಯೋಜಿಸಿದ್ದ ಕಾರಿಥಾಸ್ ಇಂಡಿಯಾ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು.`ಕಾರಿಥಾಸ್ ಇಂಡಿಯಾ ಸಂಸ್ಥೆಯು ಭಾರತ ದೇಶದ ಎಲ್ಲ ಧರ್ಮ, ಪ್ರಾಂತ್ಯಗಳ ಮೂಲಕ ಸಮಾಜ ಸೇವಾ ಕಾರ್ಯವನ್ನು ಹಮ್ಮಿಕೊಂಡಿದ್ದು, ವಿಶೇಷವಾಗಿ ಮೈಸೂರಿನ ಓಡಿಪಿ ಸಂಸ್ಥೆಯ ಮುಖಾಂತರ ಮಾನವನ ಸಶಕ್ತತೆ ಹಾಗೂ ಬಡತನ ನಿರ್ಮೂಲನೆಗಾಗಿ ವಿವಿಧ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಯನ್ನು ತರುವಲ್ಲಿ ಯಶಸ್ವಿಯಾಗಿದೆ~ ಎಂದು ಹೇಳಿದರು.`50 ವರ್ಷಗಳು ವ್ಯಕ್ತಿ ಇಲ್ಲವೆ ಸಂಸ್ಥೆಯ ದೃಷ್ಟಿಯಿಂದ ಸುದೀರ್ಘ ಪ್ರಯಾಣವೇ ಸರಿ. ವ್ಯಕ್ತಿಗೆ 50 ವರ್ಷಗಳಾದರೆ ಮುದುಕ ಆಗುತ್ತಾನೆ. ಆತ ಹೆಚ್ಚು ಕೆಲಸ ಮಾಡಲು ಶಕ್ತಿ ಇರುವುದಿಲ್ಲ. ಆದರೆ ಸಂಸ್ಥೆಯ ದೃಷ್ಟಿಯಿಂದ ಇದು ಮತ್ತೊಂದು ಆರಂಭವಾಗಿರುತ್ತದೆ. ವರ್ಷಗಳು ಉರುಳಿದಂತೆ ಸಂಸ್ಥೆ ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತದೆ. ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಹಿಂದಿನ ಕೆಲಸ ಕಾರ್ಯಗಳ ಮೌಲ್ಯಮಾಪನ ಮಾಡಬೇಕು.

ಲೋಪಗಳನ್ನು ಸರಿಪಡಿಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.`ಕಾರಿಥಾಸ್ ಇಂಡಿಯಾ ಸಂಸ್ಥೆಯು ಭಾರತ ದೇಶದಲ್ಲಿ ಭೂಕಂಪ, ಪ್ರವಾಹ, ಸುನಾಮಿಗಳಂತಹ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ನಿರಾಶ್ರಿತರು, ಸಂಕಷ್ಟಕ್ಕೆ ಒಳಗಾದವರಿಗೆ ಸಹಾಯ ಹಸ್ತ ಚಾಚಿದೆ. ಎರಡು ವರ್ಷಗಳ ಹಿಂದೆ ಉತ್ತರ ಕರ್ನಾಟಕ ಪ್ರವಾಹದಲ್ಲಿ ಸಾವಿ ರಾರು ಕುಟುಂಬ ಮನೆ ಕಳೆದು ಕೊಂಡವು. ಅವರ ನೆರವಿಗೂ ಸಂಸ್ಥೆ ನೆರವು ನೀಡಿತು~ ಎಂದು ಹೇಳಿದರು.ಮೈಸೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಥಾಮಸ್ ಆಂತೋಣಿ ವಾಳಪಿಳೈ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಗುರು ಡೆನ್ನಿಸ್ ನೊರೊನ್ಹ, ಓಡಿಪಿ ಆಡಳಿತ ಮಂಡಳಿ ಸದಸ್ಯೆ ಲೊರೆಟಾ ಪಿಂಟೊ, ಮರಿಯಾ ಜೋಸೆಫ್ ಇದ್ದರು. ಓಡಿಪಿ ನಿರ್ದೇಶಕ ಜೆ.ಬಿ.ಕ್ಷೇವಿಯರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕಿ ಸುನಿತಾ ವಂದಿಸಿದರು.ಸಮಾರಂಭದಲ್ಲಿ ಓಡಿಪಿ ಸಂಸ್ಥೆಯ ಕಾರ್ಯ ತಂಡ, ಮಹಿಳೋದಯ ಮತ್ತು ಜಿವಿಎಸ್‌ಎಸ್‌ಎಂಓ ಒಕ್ಕೂಟ ಗಳ ಪದಾಧಿಕಾರಿಗಳು, ಸದಸ್ಯರು ಸೇರಿ ಒಟ್ಟು 250 ಮಂದಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸ್ವ ಸಹಾಯ ಸಂಘಗಳ ಸದಸ್ಯರು ಉತ್ಪಾದಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.