ಕಾರ್ಖಾನೆ ನಿಂತರೂ ಸಮಯ ನಿಲ್ಲಲ್ಲ

ತುಮಕೂರು: ‘ಇದ್ನ ಸ್ವಲ್ಪ ರಿಪೇರಿ ಮಾಡಿಕೊಡಪ್ಪ. ನಿನ್ನೆಯಿಂದ ಯಾಕೋ ನಿಂತು ಹೋಗದೆ...’
–ಜಗನ್ನಾಥಪುರದಿಂದ ಬಂದಿದ್ದ ಖಾಕಿ ಚಡ್ಡಿ– ಬಿಳಿ ಅಂಗಿ– ವಿಭೂತಿ ಭೂಷಿತರಾದ ಮುದ್ದಯ್ಯನವರು ವಿನೀತರಾಗಿ ಎಡಗೈಲಿ ಕಟ್ಟಿದ್ದ ವಾಚ್ನ ಕೊಂಡಿ ಕಳಚಿದರು.
ಕೈಗೆ ಸಿಕ್ಕ ವಾಚ್ನ ಪ್ಲೇಟ್ ಕಳಚಿದ ಮೆಕಾನಿಕ್ ಮಂಜುನಾಥ್ ಬ್ಲ್ಯೋಯರ್ನಿಂದ ಗಾಳಿ ಹೊಡೆದು ದೂಳು ತೆಗೆದರು. ಸೆಲ್ ತೆಗೆದು ಪವರ್ ಚೆಕ್ ಮಾಡಿದರು. ಕಣ್ಣಿಗೆ ಭೂತಕನ್ನಡಿ ತಗುಲಿಸಿಕೊಂಡು ಒಮ್ಮೆ ಇಡಿಯಾಗಿ ಗಡಿಯಾರದ ಮೇಲೆ ಕಣ್ಣಾಡಿಸಿದರು.
‘ವಾಚ್ ಚೆನ್ನಾಗಿಯೇ ಇದೆ, ಬ್ಯಾಟರಿ ಖಾಲಿ ಆಗಿದೆ. ಸೆಲ್ ಬದಲಿಸಿದರೆ ಸಾಕು. 60 ರೂಪಾಯಿ ಆಗುತ್ತೆ’ ಎಂದು ನಿರ್ಣಯ ಹೇಳಿಬಿಟ್ಟರು. ಎರಡೇ ನಿಮಿಷದಲ್ಲಿ ವಾಚ್ಗೆ ಮತ್ತೆ ಜೀವ ಸಂಚಾರ. ದೂರದಿಂದ ಬಂದಿದ್ದ ಹಿರಿಯರಿಗೆ ಖುಷಿ.
ನಗರದ ಎಸ್ಐಟಿ ಮುಖ್ಯರಸ್ತೆಯ ಶೆಟ್ಟಿಹಳ್ಳಿ ರೈಲ್ವೆ ಗೇಟ್ ಸಮೀಪ ನಡೆದ ಈ ಪ್ರಕರಣ ಪರ್ವಕಾಲದ ಕೊಂಡಿಯಂತೆ ಭಾಸವಾಗುತ್ತದೆ. ಒಂದೆಡೆ ‘ದೇಶದ ಸಮಯಪಾಲಕ’ ಎಚ್ಎಂಟಿ ಈಚೆಗಷ್ಟೇ ಸ್ಥಗಿತಗೊಂಡಿದೆ. ಮೊಬೈಲ್ ಬಂದ ಮೇಲೆ ವಾಚ್ ಕಟ್ಟುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಅಭಿಪ್ರಾಯ ಜನಜನಿತವಾಗಿದೆ.
ಕಳೆದ 15 ವರ್ಷದಿಂದ ವಾಚ್ ರಿಪೇರಿ ಕಾಯಕ ಮಾಡುತ್ತಿರುವ ಮಂಜುನಾಥ್ ಮಾತ್ರ ಈ ಮಾತು ಒಪ್ಪುವುದಿಲ್ಲ. ‘ವಾಚ್ ಕಟ್ಟೋರು ಎಲ್ಲ ಕಾಲದಲ್ಲೂ ಇದ್ದೇ ಇರ್ತಾರೆ. ಮೊಬೈಲ್ ಇತ್ಯಾದಿ ಟ್ರೆಂಡ್ಗಳೆಲ್ಲಾ ತಾತ್ಕಾಲಿಕ. ಮನುಷ್ಯನಿಗೆ ಬಟ್ಟೆಯಷ್ಟೇ ವಾಚ್ ಸಹ ಅನಿವಾರ್ಯ’ ಎನ್ನುವುದು ಅವರ ಅಭಿಪ್ರಾಯ.
ಆಗ ಅದೇ ಟ್ರೆಂಡ್: ಪಿಯುಸಿಗೆ ಪರ್ಯಾಯವಾಗಿ ಸರ್ಕಾರ ರೂಪಿಸಿದ್ದ ಜೆಒಸಿಯಲ್ಲಿ (ಜಾಬ್ ಓರಿಯಂಟೆಡ್ ಕೋರ್ಸ್) ವಾಚ್ ರಿಪೇರಿ ಸಹ ಸೇರಿತ್ತು. ವಾಚ್ ರಿಪೇರಿ ಕಲಿತು ಗೂಡಂಗಡಿ ಹಾಕಿಕೊಂಡರೆ ಬದುಕು ನಡೆಯುತ್ತದೆ ಎಂಬ ಭರವಸೆಯೂ ಇತ್ತು. ವರೋಪಚಾರದ ವಸ್ತುಗಳಲ್ಲಿ ವಾಚ್ಗೂ ಜಾಗವಿತ್ತು.
‘ಈಗ್ಲೂ ವಾಚ್ ಕಟ್ಟೋರು ಇದ್ದಾರೆ. ಆದರೆ ಮೆಕಾನಿಕಲ್ ವಾಚ್ಗಳಿಲ್ಲ. ಎಲ್ಲರೂ ಕ್ವಾಡ್ಜ್ಸ್(quartz) ಅಥವಾ ಆಟೊಮೆಟಿಕ್ ವಾಚ್ ಕಟ್ಟಿಕೊಳ್ತಾರೆ’ ಎನ್ನುವುದು ಮಂಜುನಾಥ್ ಅವರ ಗಮನಿಕೆ.
‘ತುಸು ತೂಕ ಎನಿಸಿದರೂ ಕೀಲಿ ಕೊಡುವ ಮೆಕಾನಿಕಲ್ ವಾಚ್ಗಳಿಗೆ ಎಕ್ಸ್ಪೈರಿ ಡೇಟ್ ಅನ್ನೋದೆ ಇರ್ತಿರ್ಲಿಲ್ಲಾ. ತಾತನ ಮದುವೆಗೆ ಕೊಟ್ಟಿದ್ದ ವಾಚ್ ಕಂಡ ಮೊಮ್ಮಕ್ಕಳು ಎಷ್ಟೋ ಜನ ಇದ್ದರು. ನಿಯಮಿತವಾಗಿ ಸರ್ವೀಸ್ ಮಾಡಿಸಿಕೊಂಡರೆ ಧಾರಾಳವಾಗಿ ಮೂರು ತಲೆಮಾರು ಬಾಳಿಕೆ ಬರುತ್ತಿತ್ತು. ಆದರೆ ಇದೇ ಮಾತನ್ನು ಇತರ ವಾಚ್ಗಳ ಬಗ್ಗೆ ಹೇಳಲು ಸಾಧ್ಯವಿಲ್ಲ’ ಎನ್ನುತ್ತಾರೆ.
ಈಚೆಗೆ ಬಿಡಿಭಾಗ ಬದಲಿಸುವುದೇ ರಿಪೇರಿ ಎನಿಸಿಕೊಳ್ಳುತ್ತಿದೆ. ಅದನ್ನು ಏನು ದೊಡ್ಡಸ್ತಿಕೆ ಇದೆ? ಎನ್ನುವುದು ಅವರಿಗೇ ಉತ್ತರ ಸಿಗದ ಪ್ರಶ್ನೆ.
‘ಹೊಸ ವಾಚ್ಗಳಲ್ಲಿ ಬಿಡಿಭಾಗಗಳು ಬಂದೋಬಸ್ತ್ ಆಗಿ ಇರೋಲ್ಲ. ವಾಲ್ಕ್ಲಾಕ್ಗಳ ಕಥೆಯೂ ಇಷ್ಟೆ. ಜನರು ಮುಂದೆ ಬಂದು ಮಾಡಿಸಿಕೊಂಡರೆ ನಮ್ಮ ಅದೃಷ್ಟ. ಕೆಟ್ಟು ಹೋಯಿತು ಎಂದ ತಕ್ಷಣ, ಮೂಲೆಗೆಸೆದು ಹೊಸದು ಕೊಳ್ಳುವ ಮನಸ್ಥಿತಿಯೇ ಎಲ್ಲೆಡೆ ಕಾಣಿಸುತ್ತಿದೆ’ ಎಂದು ತಮ್ಮ ನೋವು ಹೊರಗಿಟ್ಟರು.
ಒಂದು ವಿದ್ಯೆ ಸತ್ತು ಹೋಯಿತು: ತುಮಕೂರಿನಲ್ಲಿ ಬಹುತೇಕ ಎಲ್ಲ ಮನೆಗಳಲ್ಲಿ ಈ ಹಿಂದೆ ಕೀಲಿ ಕೊಡಬೇಕಿದ್ದ ‘ಪೆಂಡುಲಮ್ ಕ್ಲಾಕ್’ಗಳು ರಾರಾಜಿಸುತ್ತಿದ್ದವು. ಕಳೆದ 20 ವರ್ಷದಿಂದ ಈಚೆಗೆ ಅಂಥವುಗಳ ಬಳಕೆ ನಿಂತೇ ಹೋಗಿದೆ. ಅವನ್ನು ರಿಪೇರಿ ಮಾಡುವ ಮೆಕಾನಿಕ್ಗಳೂ ಕಣ್ಮರೆಯಾಗಿದ್ದಾರೆ.
ಈಗ ಬರಿ ಬ್ಯಾಟರಿ ವಾಲ್ ಕ್ಲಾಕ್ಗಳು ಬಳಕೆಯಾಗುತ್ತಿವೆ. ಅಲ್ಲೊಬ್ಬರು– ಇಲ್ಲೊಬ್ಬರು ರಿಪೇರಿಗೆ ಅಂತ ಪೆಂಡುಲಮ್ ಕ್ಲಾಕ್ ತರುತ್ತಾರೆ. ಅಂಥದರ ಮೆಕ್ಯಾನಿಸ್ ನನಗೆ ಗೊತ್ತಿಲ್ಲ. ಇಡೀ ತುಮಕೂರಿನಲ್ಲಿ ಇವತ್ತು ಪೆಂಡುಲಮ್ ಕ್ಲಾಕ್ ರಿಪೇರಿ ಮಾಡೋರು ಯಾರೂ ಇಲ್ಲ ಎಂದು ಒಂದು ಕಾಲದಲ್ಲಿ ಹತ್ತಾರು ಜನರಿಗೆ ಅನ್ನ ಕೊಟ್ಟಿದ್ದ ವಿದ್ಯೆಯೊಂದು ಕಣ್ಮರೆಯಾದ ಸಂಗತಿಯನ್ನು ವಿವರಿಸಿದರು. ಮೆಕಾನಿಕಲ್ ವಾಚ್ ರಿಪೇರಿ ಮಾಡುವವರ ಸಂಖ್ಯೆ ನನ್ನನ್ನೂ ಸೇರಿದಂತೆ ಮೂರು ಮತ್ತೊಂದಕ್ಕೆ ಇಳಿದಿದೆ. ವಾಚ್ ರಿಪೇರಿ ಮಾಡುವುದನ್ನು ಕಲಿಯಲು ಹೊಸ ಹುಡುಗರೂ ಆಸಕ್ತಿ ತೋರುತ್ತಿಲ್ಲ. ಮುಂದೊಂದು ದಿನ ಬಿಡಿಭಾಗ ಬದಲಾಯಿಸುವವರು ಸಿಗುತ್ತಾರೆಯೇ ವಿನಃ, ರಿಪೇರಿ ಮಾಡೋರು ಸಿಗೋದಿಲ್ಲ ಎನ್ನುತ್ತಾ ಸಂಭಾಷಣೆಗೆ ನಿಟ್ಟುಸಿರಿನ ತೆರೆ ಎಳೆದರು.
ಸರಾಸರಿ ವಯಸ್ಸು 40 ವರ್ಷ
ತುಮಕೂರಿನ ಹಾದಿಬೀದಿಗಳಲ್ಲಿ ಮೊಬೈಲ್ ರಿಪೇರಿ ಅಂಗಡಿಗಳು ಕಾಣಿಸುತ್ತವೆ. ಆದರೆ ವಾಚ್ ರಿಪೇರಿ ಅಂಗಡಿಗಳು ಬಾಗಿಲು ಹಾಕುತ್ತಿವೆ. ಈಗ ವಾಚ್ ಕಟ್ಟುವವರ ಸರಾಸರಿ ವಯಸ್ಸು 40 ವರ್ಷ.
ಮೆಕಾನಿಕಲ್ ತಂತ್ರಜ್ಞಾನದ ಕೀಲಿ ಕೊಡುವ ಎಚ್ಎಂಟಿ ವಾಚ್ಗಳು ಇಂದಿಗೂ ಓಡುವ ಕುದುರೆಗಳು. ಅದು ಬಿಟ್ಟರೆ ಟೈಟಾನ್, ಸೋನಾಟ, ಎಚ್ಎಂಟಿ ಆಟೋಮೆಟಿಕ್, ಫಾಸ್ಟ್ಟ್ರ್ಯಾಕ್, ಟೈಮೆಕ್ಸ್ ವಾಚ್ ಬಳಸುವವರು ಕಾಣಸಿಗುತ್ತಾರೆ.
ಮೊಬೈಲ್ ಇದ್ಯಲ್ಲಾ...
ನಮ್ಮ ಮನೆಯಲ್ಲಿ ಯಾರ ಹತ್ತಿರವೂ ರಿಸ್ಟ್ ವಾಚ್ ಇಲ್ಲ. ನಿಂತು ಹೋಗಿ ತಿಂಗಳಾಗಿದ್ದರೂ ವಾಲ್ ಕ್ಲಾಕ್ಗೆ ಸೆಲ್ ಹಾಕಿಸಿಲ್ಲ. ಮೊಬೈಲ್ನಲ್ಲೇ ಟೈಂ ನೋಡಿಕೊಳ್ತೀವಿ. ಅದರಲ್ಲೇ ಅಲಾರಾಂ ಇಟ್ಟುಕೊಳ್ತೀವಿ. ನಾನು ಹುಟ್ಟಿದಾಗ ಸೋದರ ಮಾವ ಗಿಫ್ಟ್ ಕೊಟ್ಟಿದ್ದು ಅಂತ ಅಮ್ಮ ಒಂದು ಡಕೋಟಾ ಅಲಾರಾಂ ಇಟ್ಟುಕೊಂಡಿದ್ದಾರೆ. ಮುಂದೆ ಆಂಟಿಕ್ ವ್ಯಾಲ್ಯೂ ಬರಬಹುದು ಅಂತ ಬೀರೂನಲ್ಲಿ ಎತ್ತಿಟ್ಟಿದ್ದೇವೆ.
–ಸುನೀತಾ, ಕ್ಯಾತ್ಸಂದ್ರ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.