ಮಂಗಳವಾರ, ಜೂನ್ 15, 2021
25 °C

ದೇವರಾಜ ಅರಸು ಜನ್ಮದಿನ | ಕಾಲವನ್ನು ಮೀರಿ ಯೋಚಿಸಿದ್ದ ದಾರ್ಶನಿಕ

ದಿನೇಶ್ ಅಮಿನ್ ಮಟ್ಟು Updated:

ಅಕ್ಷರ ಗಾತ್ರ : | |

`ಕಾಲದ ಜತೆ ಹೆಜ್ಜೆ ಹಾಕುವಾಗ ಒಂದಷ್ಟು ಹೆಜ್ಜೆ ಮುಂದೆ ಹೋಗಿಬಿಟ್ಟೆನೇನೋ ಎಂದು ಅನಿಸುತ್ತಿದೆ~ ಎಂದು ಖ್ಯಾತ ರಾಜಕೀಯ ಚಿಂತಕ ರಾಮಮನೋಹರ ಲೋಹಿಯಾ ಹೇಳಿದ್ದರು. ತನ್ನನ್ನು ಸಮಾಜವಾದಿ ಎಂದು ಘೋಷಿಸಿಕೊಳ್ಳದೆ  ಲೋಹಿಯಾ ಅವರ ಬಹಳಷ್ಟು ವಿಚಾರಗಳನ್ನು ಕಾರ್ಯರೂಪಕ್ಕೆ ತಂದಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಬದುಕನ್ನು ನೋಡಿದಾಗಲೂ ಹೀಗೆಯೇ ಅನಿಸುತ್ತಿದೆ. ಪ್ರಾದೇಶಿಕ ಪಕ್ಷಗಳು ದೇಶದ ರಾಜಕಾರಣದ ದಿಕ್ಕು-ದೆಸೆಯನ್ನು ನಿರ್ಧರಿಸುವಷ್ಟು ನಿರ್ಣಾಯಕ ಪಾತ್ರ ವಹಿಸುತ್ತಿರುವ ಈ ಸಂದರ್ಭದಲ್ಲಿ ದೇವರಾಜ ಅರಸು ಪ್ರಾದೇಶಿಕ ರಾಜಕಾರಣದ ಮೂಲಕ ರಾಷ್ಟ್ರರಾಜಕಾರಣ ಪ್ರವೇಶಿಸಿದ್ದರೆ ಅವರ ಬದುಕು ದುರಂತದಲ್ಲಿ ಕೊನೆಗೊಳ್ಳುತ್ತಿರಲಿಲ್ಲವೇನೋ?

ಇದಕ್ಕಾಗಿ ಅರಸು ಅವರು 10-15ವರ್ಷಗಳ ನಂತರ ಹುಟ್ಟಬೇಕಿತ್ತು. ಅವರು ದೆಹಲಿ ಕಡೆ ಕತ್ತುಚಾಚಿದ್ದಾಗ ದೇಶದಲ್ಲಿ ಅದಕ್ಕೆ ಪೂರಕವಾದ ರಾಜಕೀಯ ವಾತಾವರಣ ಇರಲಿಲ್ಲ. ತುರ್ತುಪರಿಸ್ಥಿತಿಯ ನಂತರದ ಜನತಾ ಪ್ರಯೋಗದ ಕೇಂದ್ರ ಸ್ಥಾನದಲ್ಲಿದ್ದ ಕಾಂಗ್ರೆಸ್ ವಿರೋಧಿ ಗುಂಪಲ್ಲಿ ದೆಹಲಿ ಕೇಂದ್ರಿತ ನಾಯಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

ಅವರ‌್ಯಾರೂ ಪ್ರಾದೇಶಿಕ ರಾಜಕಾರಣದ ಉತ್ಪನ್ನಗಳಾಗಿರಲಿಲ್ಲ. ಆದ್ದರಿಂದ ಪ್ರಾದೇಶಿಕ ನಾಯಕನಾಗಿ ರಾಷ್ಟ್ರರಾಜಕಾರಣದಲ್ಲಿ ಕಾಣಿಸಿಕೊಳ್ಳುವ ಅವರ ಮಹತ್ವಾಕಾಂಕ್ಷೆ ಆ ಕಾಲವನ್ನು ಮೀರಿದ ಹೆಜ್ಜೆಯಾಗಿತ್ತು. ಇದು ಅರಸು ಅವರಿಗೂ ಗೊತ್ತಿತ್ತು. ಅವರ ಕೊನೆಯ ದೆಹಲಿ ಭೇಟಿಯ ಸಂದರ್ಭದಲ್ಲಿ (1982 ಮೇ, 25) ಆಗ ದೆಹಲಿಯ ವರದಿಗಾರರಾಗಿದ್ದ ಪ್ರಜಾವಾಣಿಯ ಡಿ.ವಿ.ರಾಜಶೇಖರ್ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಕೆ.ವಿ.ರಮೇಶ್ ಅವರಿಗೆ ನೀಡಿದ್ದ ಸಂದರ್ಶನದಲ್ಲಿ ಅರಸು ಇದನ್ನು ಒಪ್ಪಿಕೊಂಡಿದ್ದರು. `ವೈಯಕ್ತಿಕವಾಗಿ ಹೇಳುವುದಾದರೆ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯ ಸೊನ್ನೆ~ ಎಂದು ಪ್ರಶ್ನೆಯೊಂದಕ್ಕೆ ಅರಸು ಉತ್ತರಿಸಿದ್ದರು.

ದೇಶದಲ್ಲಿ ಪ್ರಾದೇಶಿಕ ರಾಜಕಾರಣವನ್ನು ಕೇಂದ್ರವಾಗಿಟ್ಟುಕೊಂಡ ಮೈತ್ರಿ ರಾಜಕಾರಣ ಪ್ರಾರಂಭವಾಗಿದ್ದು 1989ರ ನಂತರದ ದಿನಗಳಲ್ಲಿ. ಅದು ಪೂರ್ಣಪ್ರಮಾಣದಲ್ಲಿ ಬೆಳೆದದ್ದು 1996ರ ನಂತರ. ಅದರ ಫಲವಾಗಿಯೇ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಲು ಸಾಧ್ಯವಾಗಿದ್ದು. ಇದಕ್ಕೆ ನಿಧಾನವಾಗಿ ದುರ್ಬಲಗೊಳ್ಳುತ್ತಾ ಬಂದ ಕಾಂಗ್ರೆಸ್ ಪಕ್ಷ, ಆ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಾ ಬಂದ ಪ್ರಾದೇಶಿಕ ಪಕ್ಷಗಳು, ಮಂಡಲ ವರದಿಯ ಜಾರಿಯ ನಂತರ ಹಿಂದುಳಿದ ಜಾತಿಗಳಲ್ಲಿ ಮೂಡಿದ ರಾಜಕೀಯ ಜಾಗೃತಿ-ಇವೆಲ್ಲ ಕಾರಣ. ದೇವರಾಜ ಅರಸು ಬದುಕಿದ್ದರೆ ಈ ಎಲ್ಲ ಬೆಳವಣಿಗೆಗಳು ಅವರ ರಾಜಕೀಯಕ್ಕೆ ಸಹಕಾರಿಯಾಗುತ್ತಿತ್ತು. ಆದರೆ ಆ ಅವಕಾಶವನ್ನು ಬಳಸಿಕೊಳ್ಳಲು ಅರಸು ಬದುಕುಳಿಯಲಿಲ್ಲ ಎನ್ನುವುದು ವಿಷಾದನೀಯ.

ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಇಲ್ಲದೆ ಸೊರಗಿದ್ದ ಹಿಂದುಳಿದ ಜಾತಿಗಳಿಗೆ ಸಾಮಾಜಿಕ ಮತ್ತು ರಾಜಕೀಯ ನ್ಯಾಯವನ್ನು ತಂದು ಕೊಡುವ ಅವರ ಯೋಚನೆ ಕೂಡಾ ಆ ಕಾಲವನ್ನು ಮೀರಿದ್ದಾಗಿತ್ತು. ಮಂಡಲ್ ವರದಿ ಅನುಷ್ಠಾನದ ಮೂಲಕ ಪ್ರಧಾನಿ ವಿ.ಪಿ.ಸಿಂಗ್ ರಾಷ್ಟ್ರಮಟ್ಟದಲ್ಲಿ ಆ ಯೋಚನೆ ಮಾಡಿದ್ದು ಹಾವನೂರು ವರದಿ ಜಾರಿಯಾದ ಹದಿನೈದು ವರ್ಷಗಳ ನಂತರ ಎನ್ನುವುದನ್ನು ಮರೆಯಬಾರದು. ಅರಸು ಕೇವಲ ಶಕ್ತಿರಾಜಕಾರಣವನ್ನು ಉದ್ದೇಶವಾಗಿಟ್ಟುಕೊಂಡ ಒಬ್ಬ ನಾಯಕರಾಗಿರಲಿಲ್ಲ ಅವರಲ್ಲೊಬ್ಬ ದಾರ್ಶನಿಕ ಇದ್ದ. ಅವರಿಗೆ ನಿಖರವಾದ ರಾಜಕೀಯ ಮತ್ತು ಸಾಮಾಜಿಕ ಮುನ್ನೋಟಗಳಿದ್ದವು. ರಾಜಕೀಯ ಅಧಿಕಾರ ಯಾಕೆ ಬೇಕು ಮತ್ತು ಅದರ ಮೂಲಕ ತಾವು ಮಾಡಬೇಕಾಗಿರುವುದು ಏನು ಎಂಬ ಬಗ್ಗೆ ಅವರಿಗೆ ಸ್ಪಷ್ಟ ಕಲ್ಪನೆ ಇತ್ತು.

1972ರ ವಿಧಾನಸಭಾ ಚುನಾವಣೆಗೆ ಪೂರ್ವದಲ್ಲಿಯೇ ಅದಕ್ಕೊಂದು ಭೂಮಿಕೆಯ ಸಿದ್ಧತೆಯಲ್ಲಿ ಅವರು ತೊಡಗಿದ್ದರು. ರಾಜ್ಯದಲ್ಲಿದ್ದ ಜಾತಿ ಸಮೀಕರಣವನ್ನು ಬದಲಾಯಿಸದೆ ಇದ್ದರೆ ತಾವು ಬಯಸಿರುವ ಪರಿವರ್ತನೆಯನ್ನು ಸಮಾಜದಲ್ಲಿ ತರಲು ಸಾಧ್ಯ ಇಲ್ಲ ಎನ್ನುವುದು ಅವರಿಗೆ ತಿಳಿದಿತ್ತು. ಇದಕ್ಕಾಗಿ ಅಲ್ಲಿಯವರೆಗೆ ನಿರ್ಲಕ್ಷಿತರಾಗಿ ಮೂಲೆ ಸೇರಿದ್ದ ಕೆಳಜಾತಿಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂಬ ನಿರ್ಧಾರಕ್ಕೆ ಬಂದಿದ್ದರು. ಆದರೆ ಇವೆಲ್ಲವನ್ನೂ ಸರಿಯಾದ ತಯಾರಿಯೊಂದಿಗೆ ಮಾಡಿ ಸಮರ್ಥರನ್ನು ಹುಡುಕಾಡುವಷ್ಟು ಸಮಯ ಅವರಿಗೆ ಇರಲಿಲ್ಲ. ಆದ್ದರಿಂದ ಕಣ್ಣಿಗೆ ಬಿದ್ದ ಹಿಂದುಳಿದ ಜಾತಿಗಳ ನಾಯಕರನ್ನು ಹುಡುಕಾಡಿ ತೆಗೆದು ಟಿಕೆಟ್ ಕೊಟ್ಟು ಜತೆಗೆ ದುಡ್ಡು ಕೊಟ್ಟು ಗೆಲ್ಲಿಸಿದರು. ಅಭ್ಯರ್ಥಿಗಳನ್ನು ಆರಿಸುವಾಗ ಈ ನಾಯಕರಿಗೆ ಇರುವ ಅರ್ಹತೆಯನ್ನು ಪರೀಕ್ಷೆಗೊಳಪಡಿಸುವಷ್ಟು ಪುರುಸೊತ್ತು ಅವರಿಗೆ ಇರಲಿಲ್ಲ. 

ಹಠಾತ್ತನೆ ಶಾಸಕರಾದವರಿಗೆ ಅರಸು ಅವರಿಗಿದ್ದ ರಾಜಕೀಯ ಚಿಂತನೆ, ಸಾಮಾಜಿಕ ಕಳಕಳಿ ಇಲ್ಲವೇ ದೂರದೃಷ್ಟಿ ಯಾವುದೂ ಇರಲಿಲ್ಲ. ಅವರಲ್ಲಿ ಬಹಳಷ್ಟು ಮಂದಿ ಮೂಲತಃ ಜಾತಿವಾದಿಗಳು, ಆಳದಲ್ಲಿ ಸ್ವಾರ್ಥಿಗಳು ಮತ್ತು ದುರ್ಬಲ ಮನಸ್ಸಿನವರಾಗಿದ್ದರು. ಅವರಲ್ಲಿ ಯಾರೂ ಹೋರಾಟದ ಮೂಲಕ ನಾಯಕರಾಗಿ ರೂಪುಗೊಂಡವರಲ್ಲ.

ಈ ಕಾರಣದಿಂದಾಗಿಯೇ ಮುಂದಿನ ದಿನಗಳಲ್ಲಿ ಅವರಲ್ಲಿ ಹೆಚ್ಚಿನವರು ಅವಕಾಶವಾದಿಗಳಾಗಿ, ಪಕ್ಷಾಂತರಿಗಳಾಗಿ ಬೆಳೆದರೇ ಹೊರತು ಅರಸು ಅವರಂತೆ ಪರಿವರ್ತನೆಯ ಹರಿಕಾರರಾಗಲಿಲ್ಲ. ಅರಸು ಅವರ ಈ `ಅವಸರದ ಕ್ರಾಂತಿ~ವಿಫಲಗೊಳ್ಳಲು ಇದು ಮುಖ್ಯ ಕಾರಣ. ಕೊನೆಗಾಲದಲ್ಲಿ ಅರಸು ಅವರು ಇಂದಿರಾ ಕಾಂಗ್ರೆಸ್‌ನಿಂದ ದೂರವಾಗಿ ರಾಜಕೀಯವಾಗಿ ಏಕಾಂಗಿಯಾದಾಗ ಅವರು ಬೆಳೆಸಿದವರಲ್ಲಿ ಯಾರೂ ಅವರ ಬೆಂಬಲಕ್ಕೆ ನಿಲ್ಲಲೇ ಇಲ್ಲ. ಅದಕ್ಕಿಂತಲೂ ಮುಖ್ಯವಾಗಿ ಮೀಸಲಾತಿ, ಭೂಸುಧಾರಣೆ ಮೊದಲಾದ ಅರಸು ಅವರ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ನಂತರದ ಸರ್ಕಾರಗಳು ತಿರುಚಿ ಸಾಯಿಸಿದಾಗ ಈ ನಾಯಕರಲ್ಲಿ ಯಾರೂ ಅದರ ವಿರುದ್ದ ದನಿ ಎತ್ತಲಿಲ್ಲ.

1995ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಎಚ್.ಡಿ.ದೇವೇಗೌಡರು ಕೈಗಾರಿಕೆಗಳಿಗೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಅವಕಾಶ ನೀಡುವಂತೆ ಭೂ ಸುಧಾರಣೆಗೆ ಮೊದಲ ತಿದ್ದುಪಡಿಯನ್ನು ತಂದರು. ಈ ತಿದ್ದುಪಡಿ ಮೊದಲು ಕೃಷಿ ಆಧರಿತ ಕೈಗಾರಿಕೆಗಳಿಗಾಗಿ ನಡೆಯುವ ಭೂಸ್ವಾಧೀನಕ್ಕೆ ಸೀಮಿತವಾಗಿದ್ದರೂ ನಂತರದ ದಿನಗಳಲ್ಲಿ ಅದನ್ನು ಇನ್ನಷ್ಟು ಸಡಿಲಗೊಳಿಸಲಾಯಿತು.

ಕೃಷಿ ಭೂಮಿ ಪಡೆಯಲು ನಿಗದಿಗೊಳಿಸಲಾಗಿದ್ದ ಆದಾಯದ ಮಿತಿ ಮತ್ತು ಒಬ್ಬ ವ್ಯಕ್ತಿ ಹೊಂದಿರಬಹುದಾದ ಜಮೀನಿನ ಗರಿಷ್ಠಮಿತಿಗಳೆರಡನ್ನೂ ತಿದ್ದುಪಡಿ ಮೂಲಕ ಹೆಚ್ಚಿಸಲಾಯಿತು. ಇದರಿಂದಾಗಿ ಅರಸು ಅವರ ಕಲ್ಪನೆಯ ಭೂಸುಧಾರಣೆಯ ಅಸ್ಥಿಪಂಜರವಷ್ಟೇ ಈಗ ಉಳಿದಿದೆ. ಹೀಗೆ ಅರಸು ನಂತರ ಬಂದ ಸರ್ಕಾರಗಳು ಭೂಸುಧಾರಣೆ ಕಾಯಿದೆಗೆ ತಿದ್ದುಪಡಿ ಮೇಲೆ ತಿದ್ದುಪಡಿಗಳನ್ನು ತಂದು ಕೆಡಿಸಿದಾಗ ಅರಸು ಅವರ ಅನುಯಾಯಿಗಳಲ್ಲಿ ಕೆಲವರು ಆಡಳಿತ ಪಕ್ಷದಲ್ಲಿ, ಇನ್ನು ಕೆಲವರು ವಿರೋಧಪಕ್ಷದಲ್ಲಿದ್ದರು.

ಯಾರಿಂದಲೂ ಒಂದು ಸಂಘಟಿತ ಪ್ರತಿರೋಧ ವ್ಯಕ್ತವಾಗಲಿಲ್ಲ. ರಾಜ್ಯದಲ್ಲಿರುವ ಶಾಶ್ವತ ಹಿಂದುಳಿದ ಜಾತಿಗಳ ಆಯೋಗವನ್ನು ಕೂಡಾ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು ಕಾಟಾಚಾರಕ್ಕಷ್ಟೆ ಉಳಿಸಿಕೊಂಡು ಹೋಗಿವೆ. ವಕೀಲ ಸಿ.ಎಸ್.ದ್ವಾರಕನಾಥ್ ಆಯೋಗದ ಅಧ್ಯಕ್ಷರಾಗಿದ್ದಾಗ ಈಗಿನ ಬಿಜೆಪಿ ಸರ್ಕಾರ ಅವರಿಗೆ ನಿರಂತರವಾಗಿ ಕಿರುಕುಳ ಕೊಟ್ಟಿತು. ಅವರು ತಯಾರಿಸಿದ್ದ ವರದಿಯ ಅನುಷ್ಠಾನ ಬಿಡಿ, ಯಾರಾದರೂ ಅದರ ಪುಟ ತಿರುವಿ ನೋಡಿದ್ದಾರೆಂದು ಅನಿಸುವುದಿಲ್ಲ. ಪ್ರೊ.ರವಿವರ್ಮಕುಮಾರ್ ಸಲ್ಲಿಸಿದ್ದ ವರದಿಗೂ ಇದೇ ಗತಿ ಆಗಿದೆ. ಅರಸು ಗರಡಿಯಲ್ಲಿ ಪಳಗಿದವರು, ತಮ್ಮನ್ನು `ಅಹಿಂದ~ ನಾಯಕನೆಂದು ಬಿಂಬಿಸಿಕೊಳ್ಳುವ ನೂರಾರು ನಾಯಕರು ನಮ್ಮಲ್ಲಿ ಇದ್ದಾರೆ. ಯಾರಾದರೂ ಪ್ರತಿಭಟನೆಯ ಸೊಲ್ಲು ಎತ್ತಿದ್ದಾರೆಯೇ?

ಅನುಯಾಯಿಗಳನ್ನು ಬಿಟ್ಟುಬಿಡಿ, ಯಾರಿಗಾಗಿ ಅವರು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದ್ದರೋ ಆ ಫಲಾನುಭವಿಗಳು ಕೂಡಾ ಅರಸು ಅವರ ಪರವಾಗಿ ನಿಲ್ಲಲಿಲ್ಲ. ಇದಕ್ಕೆ ಕೂಡಾ ಅರಸು ಅವರ ಕಾಲವನ್ನು ಮೀರಿದ ಚಿಂತನೆ ಕಾರಣ. ಅರಸು ಕ್ರಾಂತಿಯ ಫಲಾನುಭವಿಗಳ ಪಾಲಿಗೆ ಬಯಸಿದ್ದು ಮಾತ್ರವಲ್ಲ ಬಯಸದೆ ಇದ್ದದ್ದು ಕೂಡಾ ನಿರಾಯಾಸವಾಗಿ ಬಂತು. ಕಾಗೋಡು ಸತ್ಯಾಗ್ರಹವೊಂದನ್ನು ಹೊರತುಪಡಿಸಿ ಭೂ ಒಡೆತನಕ್ಕಾಗಿ ರಾಜ್ಯದಲ್ಲಿ ಎಲ್ಲಿಯೂ ದೊಡ್ಡಮಟ್ಟದ ಹೋರಾಟಗಳೇ ನಡೆದಿಲ್ಲ.

ಕೇಂದ್ರ ಸರ್ಕಾರ ಮಂಡಲ ವರದಿ ಅನುಷ್ಠಾನಕ್ಕೆ ತಂದಾಗ ಪರ-ವಿರೋಧವಾಗಿ ನಡೆದ ಚಳವಳಿಗಳೇನೂ ಹಾವನೂರು ಆಯೋಗದ ವರದಿ ಅನುಷ್ಠಾನದ ಹಿಂದೆಮುಂದೆ ನಡೆದಿರಲಿಲ್ಲ. ಆದ್ದರಿಂದ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿನ ಮೀಸಲಾತಿ ಇರಬಹುದು.

ಗೇಣಿದಾರರಿಗೆ ಸಿಕ್ಕ ಭೂ ಒಡೆತನ ಇರಬಹುದು, ಮಲಹೊರುವ ಪದ್ದತಿಯ ನಿಷೇಧ, ಜೀತ ನಿರ್ಮೂಲನೆ, ಋಣ ಪರಿಹಾರದ ಕಾರ್ಯಕ್ರಮಗಳಿರಬಹುದು. ಇವೆಲ್ಲವೂ ಬೆವರು-ಕಣ್ಣೀರು ಸುರಿಸದೆ ಸುಲಭದಲ್ಲಿ ಲಾಟರಿ ಹೊಡೆದಂತೆ ಸಿಕ್ಕಿಬಿಟ್ಟವು. ಈ ರೀತಿ ಸುಲಭದಲ್ಲಿ, ಪುಕ್ಕಟೆಯಾಗಿ ಸಿಕ್ಕರೆ ಅದರ ಮಹತ್ವ ಗೊತ್ತಾಗುವುದಿಲ್ಲ. ಪುಕ್ಕಟೆಯಾಗಿ ಪಡೆದದ್ದನ್ನು ಕಳೆದುಕೊಂಡರೂ ಯಾರಿಗೂ ಏನೂ ಅನಿಸುವುದಿಲ್ಲ, ಆದರೆ ದುಡಿದು ಗಳಿಸಿದ್ದನ್ನು ಕಳೆದುಕೊಂಡರೆ ಹೊಟ್ಟೆ ಉರಿಯುತ್ತದೆ ಅಲ್ಲವೇ ಹಾಗೆ.

ಅರಸು ಅವತಾರಪುರುಷನಂತೆ ಕಾಣಿಸಿಕೊಂಡು ಕೇಳಿದ್ದು-ಕೇಳದಿರುವುದು ಎಲ್ಲವನ್ನೂ ಕೊಟ್ಟು ಮಿಂಚಿ ಮರೆಯಾಗಿ ಹೋದ ಕಾರಣ ಅವರಿಂದ ಲಾಭಪಡೆದವರಿಗೂ ಅವರನ್ನು ಅರ್ಥಮಾಡಿಕೊಳ್ಳಲಾಗಲಿಲ್ಲ. ಬಹಳ ಮಂದಿಗೆ ಅದು ಬೇಕಾಗಿಯೂ ಇಲ್ಲ. ಇದು ನಿಜವಾದ ದುರಂತ.

ಇತ್ತೀಚೆಗೆ ನಾನು ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ನಡೆಸಿದ್ದ ವಿಚಾರಸಂಕಿರಣಕ್ಕೆ ಹೋಗಿದ್ದೆ. ನಾನು ಮಾತನಾಡಿದ ನಂತರ ಸಭೆಯಲ್ಲಿದ್ದ ಹಿರಿಯ ಪತ್ರಕರ್ತರೊಬ್ಬರು ಪ್ರತಿಕ್ರಿಯಿಸಿ `ಕೆಲವು ದಿನಗಳ ಹಿಂದೆ ಹಿಂದುಳಿದ ಜಾತಿಗೆ ಸೇರಿರುವ ಬಳ್ಳಾರಿಯ ಶಾಸಕರೊಬ್ಬರು ನಡುರಾತ್ರಿಯಲ್ಲಿ ಫೋನ್ ಮಾಡಿ ನನ್ನನ್ನು ಎಬ್ಬಿಸಿ ದೇವರಾಜ ಅರಸು ಬಗ್ಗೆ ಸ್ಪಲ್ಪ ಹೇಳಿ ಎಂದರು.

ಮರುದಿನ ಅರಸು ಕುರಿತ ಕಾರ್ಯಕ್ರಮವೊಂದರಲ್ಲಿ ಅವರು ಭಾಷಣ ಮಾಡಬೇಕಿತ್ತಂತೆ. ಹಿಂದುಳಿದ ಜಾತಿಗಳ ನಾಯಕರಿಗೆ ಏನು ಗತಿ ಬಂತು ನೋಡಿ~ ಎಂದು ನಕ್ಕರು, ಸಭೆಯಲ್ಲಿದ್ದವರೆಲ್ಲರೂ ಕೂಡಿ ನಕ್ಕರು. ಆ ಶಾಸಕನ ಹೆಸರು ಶ್ರಿರಾಮುಲು. ಇವರು ಹಿಂದುಳಿದ ಜಾತಿಗಳ ಲೇಟೆಸ್ಟ್ ನಾಯಕ. ಅರಸು ಅವರ ಆತ್ಮ ತಣ್ಣಗಿರಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು