ಭಾನುವಾರ, ಮೇ 9, 2021
20 °C

ಕಾಳ್ಗಿಚ್ಚು ಕಟ್ಟುಕತೆ: ಅರಣ್ಯಾಧಿಕಾರಿಗಳಿಗೆ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಳ್ಗಿಚ್ಚಿಗೆ ಸಂಬಂಧಿಸಿದಂತೆ ಸತ್ಯ ಮುಚ್ಚಿಟ್ಟಿರುವ ಮತ್ತು ಕಟ್ಟುಕತೆ ಹೆಣೆದಿರುವ ಆರೋಪದ ಮೇಲೆ ಬಂಡೀಪುರ ಹಾಗೂ ನಾಗರಹೊಳೆ ಹುಲಿ ಅಭಯಾರಣ್ಯಗಳ ಹಲವು ಅರಣ್ಯಾಧಿಕಾರಿಗಳಿಗೆ ಅರಣ್ಯ ಇಲಾಖೆ ಶೋಕಾಸ್ ನೋಟಿಸ್ ಜಾರಿಮಾಡಿದೆ. ಎರಡು ವಾರಗಳೊಳಗೆ ನೋಟಿಸ್‌ಗೆ ಉತ್ತರಿಸುವಂತೆ ಸೂಚಿಸಲಾಗಿದೆ.ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸದಸ್ಯ ಡಾ.ಕೆ.ಉಲ್ಲಾಸ ಕಾರಂತ ಅವರು ಕಾಳ್ಗಿಚ್ಚಿನಿಂದ ನಾಗರಹೊಳೆಯಲ್ಲಿ 3,500 ಹೆಕ್ಟೇರ್ ಮತ್ತು ಬಂಡೀಪುರದಲ್ಲಿ 2,000 ಹೆಕ್ಟೇರ್ ಅರಣ್ಯ ನಾಶವಾಗಿದೆ ಎಂದು ಇತ್ತೀಚೆಗೆ ವರದಿ ಸಲ್ಲಿಸಿದ್ದರು. ಉಲ್ಲಾಸ ಕಾರಂತರ ವರದಿ ಮತ್ತು ಅರಣ್ಯಾಧಿಕಾರಿಗಳು ನೀಡಿರುವ ವರದಿಯ ನಡುವೆ ಭಾರಿ ವ್ಯತ್ಯಾಸ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್- ವನ್ಯಜೀವಿ) ಅವರು ಕಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇತ್ತೀಚೆಗೆ ಕಾಡಿಗೆ ಬೆಂಕಿ ತಗುಲಿದ ಹಲವು ಪ್ರಕರಣಗಳಲ್ಲಿ ಉಂಟಾದ ಹಾನಿಯ ಬಗ್ಗೆ ಸತ್ಯಾಂಶ ಮುಚ್ಚಿಟ್ಟಿರುವ ಬಗ್ಗೆ ಪತ್ರದಲ್ಲಿ ಸಂದೇಹ ವ್ಯಕ್ತಪಡಿಸಿದ್ದಾರೆ.ಹೆಡಿಯಾಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮತ್ತು ಮೊಳೆಯೂರು ವಲಯ ಅರಣ್ಯಾಧಿಕಾರಿಗೆ (ಆರ್‌ಎಫ್‌ಒ) ಮಾರ್ಚ್ 28ರಂದು ಪಿಸಿಸಿಎಫ್ ಪತ್ರ ಬರೆದಿದ್ದಾರೆ. ಸ್ಥಳೀಯ ಅರಣ್ಯಾಧಿಕಾರಿಗಳ ವರದಿ ಪ್ರಕಾರ ಬೆಂಕಿಯಿಂದ ಅಲ್ಲಿ 15 ಹೆಕ್ಟೇರ್ ಅರಣ್ಯ ಮಾತ್ರ ಹಾನಿಗೊಳಗಾಗಿದೆ. ಕಾರಂತರ ವರದಿ ಮತ್ತು ಮಾ. 26ರಂದು ತೆಗೆದ `ಗ್ಲೋಬಲ್ ಪೊಜಿಷನಿಂಗ್ ಸಿಸ್ಟಂ~ (ಜಿಪಿಎಸ್) ವರದಿ ಪ್ರಕಾರ 152 ಹೆಕ್ಟೇರ್ ಅರಣ್ಯ ನಾಶವಾಗಿದೆ. ಈ ವ್ಯತ್ಯಾಸ ಏಕೆ ಎಂದು ಪ್ರಶ್ನಿಸಿದ್ದಾರೆ.ಈ ಅಧಿಕಾರಿಗಳ ವರದಿ ಪ್ರಕಾರ ಆ ಪ್ರದೇಶದಲ್ಲಿ 134 ಹೆಕ್ಟೇರ್ ಅರಣ್ಯ ಮಾತ್ರ ನಾಶವಾಗಿತ್ತು. ಆದರೆ, ಕಾರಂತರ ವರದಿ ಪ್ರಕಾರ 980 ಹೆಕ್ಟೇರ್ ಅರಣ್ಯಕ್ಕೆ ಹಾನಿಯಾಗಿದೆ. ಎರಡೂ ವರದಿಗಳಲ್ಲಿನ ವ್ಯತ್ಯಾಸದ ಹಿನ್ನೆಲೆಯಲ್ಲಿ ಅಂತರಸಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮೇಟಿಕುಪ್ಪೆ ವಲಯ ಅರಣ್ಯಾಧಿಕಾರಿಗೂ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಆನೆಚೌಕೂರಿನಲ್ಲಿ 13 ಹೆಕ್ಟೇರ್ ಅರಣ್ಯ ಮಾತ್ರ ಹಾನಿಗೊಳಗಾಗಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದರು. ಆದರೆ, ವಾಸ್ತವಿಕವಾಗಿ 330 ಹೆಕ್ಟೇರ್ ಅರಣ್ಯಕ್ಕೆ ಹಾನಿಯಾಗಿದೆ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ. ವೀರನಹೊಸಹಳ್ಳಿ ವಲಯದಲ್ಲಿ ಕೇವಲ 11.4 ಹೆಕ್ಟೇರ್ ಮಾತ್ರ ಹಾನಿಗೊಳಗಾಗಿದೆ ಎಂದು ಅಧಿಕಾರಿಗಳ ವರದಿ ಹೇಳಿದ್ದರೆ, ಕಾರಂತರ ವರದಿ ಪ್ರಕಾರ 110 ಹೆಕ್ಟೇರ್‌ಗೆ ಹಾನಿಯಾಗಿದೆ. ಈ ರೀತಿಯ ವ್ಯತ್ಯಾಸ ಕಂಡುಬಂದ ಕಾರಣದಿಂದ ಹುಣಸೂರು ಎಸಿಎಫ್, ಆನೆಚೌಕೂರು ಮತ್ತು ವೀರನಹೊಸಹಳ್ಳಿ ಆರ್‌ಎಫ್‌ಒಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ.`ಅಧ್ಯಯನ ವರದಿ ಪ್ರಕಾರ 623 ಹೆಕ್ಟೇರ್ ಅರಣ್ಯಕ್ಕೆ ಹಾನಿಯಾಗಿದೆ. ಆದರೆ, ಕೇವಲ 5.5 ಹೆಕ್ಟೇರ್‌ಗೆ ಹಾನಿಯಾಗಿದೆ ಎಂಬ ವರದಿ ನೀಡಿದ್ದು ಏಕೆ ಎಂದು ಉತ್ತರಿಸಬೇಕು~ ಎಂಬುದಾಗಿ ಬಂಡೀಪುರ ಎಸಿಎಫ್ ಮತ್ತು ಮೂಲೆಹೊಳೆ ಆರ್‌ಎಫ್‌ಒಗೆ ತಾಕೀತು ಮಾಡಲಾಗಿದೆ ಎಂದು ಗೊತ್ತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.