ಭಾನುವಾರ, ಜೂನ್ 20, 2021
25 °C

ಕಾವೇರಿ: ಕಾನೂನು ಹೋರಾಟ ಕುರಿತು ಅಧಿಕಾರಿಗಳ ಜೊತೆ ಸಿಎಂ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಕಾವೇರಿ ಕಣಿವೆಯ ರೈತರ ಹಿತವನ್ನು ಬಲಿಕೊಟ್ಟು ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ. ತಮಿಳುನಾಡು ಸರ್ಕಾರದ ತಗಾದೆಯನ್ನು ಕಾನೂನು ಚೌಕಟ್ಟಿನಲ್ಲಿಯೇ ಎದುರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.ಕರ್ನಾಟಕದ ಕಾವೇರಿ ಕಣಿವೆಯಲ್ಲಿ ಬೇಸಿಗೆ ಬೆಳೆಗೆ ತಡೆಯೊಡ್ಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಶನಿವಾರ ಮುಖ್ಯಮಂತ್ರಿಯವರ ಗೃಹ ಕಚೇರಿ `ಕೃಷ್ಣಾ~ದಲ್ಲಿ ರಾಜ್ಯದ ಅಡ್ವೊಕೇಟ್ ಜನರಲ್ ಮತ್ತು ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, ಕಾನೂನು ಹೋರಾಟದ ಮೂಲಕವೇ ತಮಿಳುನಾಡು ಸರ್ಕಾರದ ವಾದವನ್ನು ಎದುರಿಸಲಾಗುವುದು ಎಂದರು.`ಕಾವೇರಿ ನದಿ ನೀರು ಬಳಕೆ ವಿಷಯದಲ್ಲಿ ರಾಜ್ಯ ಸರ್ಕಾರದಿಂದ ಯಾವುದೇ ಲೋಪ ಆಗಿಲ್ಲ. ತಮಿಳುನಾಡಿನಲ್ಲಿ ಆಂತರಿಕ ಸಮಸ್ಯೆ ಉದ್ಭವ ಆದ ಎಲ್ಲ ಸಂದರ್ಭಗಳಲ್ಲಿ ಅಲ್ಲಿನ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಕಾವೇರಿ ನದಿ ನೀರಿನ ವಿಷಯದಲ್ಲಿ ತಗಾದೆ ತೆಗೆಯುತ್ತಾರೆ. ಇಂತಹ ತಕರಾರುಗಳಿಗೆ ನಾವು ಸೊಪ್ಪು ಹಾಕುವುದಿಲ್ಲ. ಮಣಿಯುವುದೂ ಇಲ್ಲ~ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.ನ್ಯಾಯಮಂಡಳಿ ಆದೇಶ ಪಾಲಿಸಲು ಸರ್ಕಾರ ಬದ್ಧವಾಗಿದೆ. ಈವರೆಗೂ ನ್ಯಾಯಮಂಡಳಿ ಆದೇಶವನ್ನು ಉಲ್ಲಂಘಿಸಿಲ್ಲ. ತಮಿಳುನಾಡು ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಂಭೀರವಾಗಿಯೇ ಎದುರಿಸುತ್ತದೆ. ಅಡ್ವೊಕೇಟ್ ಜನರಲ್ ಮತ್ತು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ರಾಜ್ಯದ ರೈತರ ಹಿತರಕ್ಷಣೆಗಾಗಿ ಕಾನೂನು ಹೋರಾಟಕ್ಕೆ ಸರ್ಕಾರ ಸಿದ್ಧವಾಗಿದೆ ಎಂದರು.ನಿರೀಕ್ಷೆ ಹೆಚ್ಚಾಗಿದೆ: ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಬೇಡಿಕೆ ಹೆಚ್ಚಿದೆ. ನೀರು ಪೂರೈಕೆಯಲ್ಲಿ ಸರ್ಕಾರ ಹಿಂದೆ ಬಿದ್ದಿಲ್ಲ. ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.`ನೀರು ಪೂರೈಕೆ ಮತ್ತು ಬರ ಪರಿಹಾರ ಕಾಮಗಾರಿ ವಿಷಯದಲ್ಲಿ ಜನತೆಯ ನಿರೀಕ್ಷೆ ಜಾಸ್ತಿ ಇದೆ. ಅವರ ನಿರೀಕ್ಷೆಯ ಮಟ್ಟ ತಲುಪದಿರಬಹುದು. ಆದರೆ, ಸಮಾಧಾನಕರ ಕ್ರಮ ಕೈಗೊಳ್ಳಲಾಗಿದೆ. ನೀರು ಪೂರೈಕೆಗೆ ಅಗತ್ಯವಿರುವ ಹಣ ಬಿಡುಗಡೆ ಮಾಡಲಾಗಿದೆ.ಬೆಳಗಾವಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತುಸು ಜಾಸ್ತಿ ಇದೆ. ಅಲ್ಲಿ ಈವರೆಗೆ 291 ಕೊಳವೆ ಬಾವಿ ಕೊರೆಯಲಾಗಿದೆ. 30 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ. ಶನಿವಾರ ಕೂಡ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದು, ಲೋಪ ಆಗದಂತೆ ಎಚ್ಚರಿಕೆ ವಹಿಸಲು ಸದಾನಂದ ಗೌಡ ತಿಳಿಸಿದರು.ಅಧಿವೇಶನದ ಬಳಿಕ ಕ್ರಮ: ನೂತನ ಲೋಕಾಯುಕ್ತರ ನೇಮಕಾತಿ ಕುರಿತು ಪ್ರಶ್ನಿಸಿದಾಗ, `ಲೋಕಾಯುಕ್ತ ಹುದ್ದೆಗೆ ಸೂಕ್ತ ವ್ಯಕ್ತಿಗಳ ಹೆಸರು ಸೂಚಿಸುವಂತೆ ಮನವಿ ಮಾಡಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ಮತ್ತು ವಿಧಾನಮಂಡಲದ ಎರಡೂ ಸದನಗಳ ವಿರೋಧ ಪಕ್ಷದ ನಾಯಕರಿಗೆ ಈಗಾಗಲೇ ಪತ್ರ ಬರೆದಿದ್ದೇನೆ. ವಿಧಾನಮಂಡಲದ ಅಧಿವೇಶನ ಮುಗಿದ ತಕ್ಷಣ ಲೋಕಾಯುಕ್ತರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು~ ಎಂದರು.ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಿರುವ ತಂಡ ಈಗಾಗಲೇ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. 2,600 ಕೋಟಿ ರೂಪಾಯಿ ನೆರವು ನೀಡುವಂತೆ ಮನವಿ ಮಾಡಲಾಗಿದೆ. ಅಧಿವೇಶನ ಮುಗಿದ ತಕ್ಷಣ ತಾವು ದೆಹಲಿಗೆ ತೆರಳಲಿದ್ದು, ಬರ, ವಿದ್ಯುತ್ ಕೊರತೆ, ಕಲ್ಲಿದ್ದಲು ಪೂರೈಕೆಯಲ್ಲಿನ ಅಡ್ಡಿ, ಕಾವೇರಿ ನೀರಿನ ವಿವಾದ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.ಅಡ್ವೊಕೇಟ್ ಜನರಲ್ ಎಸ್.ವಿಜಯಶಂಕರ್, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಡಿ.ಸತ್ಯಮೂರ್ತಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.ಸರ್ವಪಕ್ಷ ಸಭೆ ಕರೆಯಲು ಒತ್ತಾಯಬೆಂಗಳೂರು: ಕಾವೇರಿ ನದಿ ಕಣಿವೆಯಲ್ಲಿ ಬೇಸಿಗೆ ಬೆಳೆಗೆ ಕಡಿವಾಣ ಹಾಕುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ಸಾಧಕ-ಬಾಧಕ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಕರೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರನ್ನು ಒತ್ತಾಯಿಸಿದರು.ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿರುವ ರೆಹಮಾನ್ ಖಾನ್ ಅವರಿಗೆ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಅಭಿನಂದನೆ ಸಲ್ಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇರುವಾಗ ತಮಿಳುನಾಡಿಗೆ ಸರ್ಕಾರ ಒಂದು ಹನಿ ಕೂಡ ನೀರು ಬಿಡಬಾರದು. ಒಂದು ವೇಳೆ ನೀರು ಬಿಟ್ಟರೆ, ಕಾಂಗ್ರೆಸ್ ಬೀದಿಗಿಳಿದು ಹೋರಾಟ ನಡೆಸಲಿದೆ~ ಎಂದು ಎಚ್ಚರಿಸಿದರು.ರಾಜ್ಯದ ರೈತರ ಹಿತ ಕಾಯಲು ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳಬೇಕು. ಕರ್ನಾಟಕದ ರೈತರು ಸಂಕಷ್ಟ ಎದುರಿಸುತ್ತಿರುವ ಇಂಥ ಸಂದರ್ಭದಲ್ಲಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದು ಸರಿಯಲ್ಲ ಎಂದರು.ಹೋರಾಟಕ್ಕೆ ಸಿದ್ಧ: ತಮಿಳುನಾಡಿನ ಬೇಡಿಕೆಗೆ ಸರ್ಕಾರ ಮಣಿದರೆ ಸಾಹಿತಿಗಳು, ಹೋರಾಟಗಾರರು ಮತ್ತು ಜನರನ್ನು ಸಂಘಟಿಸಿ ಬೃಹತ್ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.