ಶನಿವಾರ, ಏಪ್ರಿಲ್ 10, 2021
32 °C

ಕಾವೇರಿ ನಾಲ್ಕನೇ ಹಂತ 2ನೇ ಘಟ್ಟದ ಯೋಜನೆ ಪ್ರಗತಿಯಲ್ಲಿ- ಆರ್.ಅಶೋಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪುರ: ಕಾವೇರಿ ನಾಲ್ಕನೇ ಹಂತ 2ನೇ ಘಟ್ಟದ ಯೋಜನೆ ಪ್ರಗತಿಯಲ್ಲಿದ್ದು ನೀರು ಪೂರೈಕೆಗೆ ಎಲ್ಲ ಸಿದ್ಧತೆಗಳೂ ನಡೆದಿದೆ. ಕೆ.ಆರ್.ಪುರ ವ್ಯಾಪ್ತಿಯ ನಾಗರಿಕರಿಗೆ ಇನ್ನೆರಡು ತಿಂಗಳೊಳಗೆ ಕಾವೇರಿ ಕುಡಿಯುವ ನೀರು ಪೂರೈಸಲು ಪ್ರಯತ್ನ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಆರ್.ಅಶೋಕ ಭಾನುವಾರ ಭರವಸೆ ನೀಡಿದರು.ಸ್ಥಳೀಯ ಸರ್ಕಾರಿ ಕಾಲೇಜು ಆವರಣದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಮಾತನಾಡಿದ ಅವರು, `ಪಕ್ಷದಲ್ಲಿ ಎಷ್ಟೇ ಗೊಂದಲಗಳಿದ್ದರೂ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕುಂಠಿತವಾಗಿಲ್ಲ.ಇದನ್ನು ಜನತೆ ಗಮನಿಸಬೇಕಾಗಿದೆ. ನಾಡಪ್ರಭು ಕೆಂಪೇಗೌಡರು ಕಂಡ ಕೆರೆಗಳ ಅಭಿವೃದ್ಧಿ ಕನಸನ್ನು ನನಸಾಗಿಸಲು ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದೆ. ವಿಶೇಷ ಅನುದಾನದಡಿ ನಗರದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಜನರ ಸಮಸ್ಯೆಗಳು ಬಗೆಹರಿಯಲಿವೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಬಡವರು, ಕೆಳ ಮತ್ತು ಮಧ್ಯಮ ವರ್ಗದವರಿಗೆ ಮನೆ ನಿರ್ಮಾಣಕ್ಕೆ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಿದೆ. ಮನೆ ಕಟ್ಟಲು ನೀಡುವ ಸಹಾಯಧನವನ್ನು 50ರಿಂದ 75 ಸಾವಿರ ರೂಪಾಯಿವರೆಗೆ ಏರಿಸಲಾಗಿದೆ. ಮುಂದಿನ ದಿನಗಳಲ್ಲಿ ಒಂದು ಲಕ್ಷಕ್ಕೇರಿಸುವ ಪ್ರಸ್ತಾವ ಸರ್ಕಾರದ ಮುಂದಿದೆ ಎಂದರು. ಕರ್ನಾಟಕವನ್ನು ಗುಡಿಸಲುರಹಿತ ರಾಜ್ಯವನ್ನಾಗಿ ಮಾಡಲು ಎಲ್ಲ ಪ್ರಯತ್ನಗಳೂ ನಡೆಯುತ್ತಿವೆ. ಮೂರ‌್ನಾಲ್ಕು ತಿಂಗಳಲ್ಲಿ ಕೊಳೆಗೇರಿ ನಿವಾಸಿಗಳಿಗೆ (ಅರಣ್ಯ ಮತ್ತು ಕೆರೆ ಪ್ರದೇಶ ಬಿಟ್ಟು) ಹಕ್ಕು ಪತ್ರ ನೀಡಲಾಗುವುದು ಎಂದರು ಅವರು ಹೇಳಿದರು.ಶಾಸಕ ಎನ್.ಎಸ್.ನಂದೀಶರೆಡ್ಡಿ, ಎರಡು ದಶಕಗಳಿಂದ ಕ್ಷೇತ್ರದಲ್ಲಿ ನೆನೆಗುದಿಯಲ್ಲಿದ್ದ ಸಮಸ್ಯೆಗಳನ್ನು ಬಹುಮಟ್ಟಿಗೆ ಬಗೆಹರಿಸಲಾಗಿದೆ. 148 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಒಳಚರಂಡಿ ಕಾಮಗಾರಿ ಶೇ. 65ರಷ್ಟು ಮುಗಿದಿದೆ. ಈಗ 48.5 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಬಡಾವಣೆಗಳ ರಸ್ತೆ ಅಭಿವೃದ್ಧಿ ಹಾಗೂ ಇತರೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ವಿವರಿಸಿದರು.ಕ್ಷೇತ್ರದ ಜನತೆ ತೀವ್ರ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು, ಇನ್ನೆರಡು ತಿಂಗಳಲ್ಲಿ ಸಮಸ್ಯೆ ಬಗೆಹರಿಯಲಿದೆ. ಕಾಲೇಜು ಆಟದ ಮೈದಾನಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಲು ಸಚಿವರು ಹಾಗೂ ಸಂಸದರು ಕ್ರಮ ಕೈಗೊಳ್ಳಬೇಕು ಎಂದರು.ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಚಿವ ಅರವಿಂದ ಲಿಂಬಾವಳಿ ಮತ್ತು ಸಂಸದ ಡಿ.ಬಿ.ಚಂದ್ರೇಗೌಡ ಮಾತನಾಡಿದರು. ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಹಕ್ಕು ಪತ್ರ, ದ್ವಿಚಕ್ರ ವಾಹನ, ಅಂಗನವಾಡಿ ಕೇಂದ್ರಗಳಿಗೆ ಆಟಿಕೆ ಮತ್ತು ಪೀಠೋಪಕರಣ ವಿತರಿಸಲಾಯಿತು.ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಪಾಲಿಕೆ ಸದಸ್ಯ ಎನ್.ವೀರಣ್ಣ, ತೇಜಸ್ವಿನಿ ರಾಜು, ಸುಕುಮಾರ್, ಮಂಜುಳಾದೇವಿ, ತೇಜಸ್ವಿನಿರಾಜು, ಸಿದ್ದಲಿಂಗಯ್ಯ, ಶ್ರೀನಿವಾಸ್, ಕೊಳಚೆ ನಿರ್ಮೂಲನಾ ಮಂಡಳಿ ಸದಸ್ಯ ಬಾಲಕೃಷ್ಣ ಸೇರಿದಂತೆ ವಾರ್ಡ್ ಅಧ್ಯಕ್ಷರು, ಕ್ಷೇತ್ರ ಘಟಕದ ಪ್ರಧಾನ ಕಾರ್ಯದರ್ಶಿಗಳು, ಯುವ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ರಮೇಶ್ ಸ್ವಾಗತಿಸಿದರು.ವೈದ್ಯರ ಪ್ರತಿಭಟನೆ, ರಾಜೀನಾಮೆ ದುರದೃಷ್ಟಕರ

ವೈದ್ಯರ ಪ್ರತಿಭಟನೆ ಮತ್ತು ಸಾಮೂಹಿಕ ರಾಜೀನಾಮೆ ದುರದೃಷ್ಟಕರ. ಈಗಾಗಲೇ ಅವರ ಬಹಳಷ್ಟು ಬೇಡಿಕೆಗಳನ್ನು ಈಡೇರಿಸಲಾಗಿದೆ. ವೇತನವನ್ನೂ ಹೆಚ್ಚಿಸಲಾಗಿದೆ. ಹೀಗಿದ್ದರೂ ಹಳ್ಳಿಗಾಡಿಗೆ ಹೋಗಿ ಸೇವೆ ಸಲ್ಲಿಸಲು ಇಷ್ಟಪಡುವುದಿಲ್ಲ. ಒಟ್ಟಾರೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಆರ್. ಅಶೋಕ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.