ಭಾನುವಾರ, ಏಪ್ರಿಲ್ 11, 2021
32 °C

ಕಾವ್ಯದ ಬೀಜವನ್ನು ಬೆಳೆಸುವ ಕೆಲಸವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: `ಕವಿಗಳು ಕಾವ್ಯದ ಮೂಲಕ ಬೆಳಕಿನ ಬೀಜವನ್ನು ಬಿತ್ತಿದ್ದಾರೆ, ಅದನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ~ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕ ಮತ್ತು ಜಿಲ್ಲಾ ಘಟಕದ ಸಹಯೋಗದೊಂದಿಗೆ ತೆಂಕ ನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಗುರುವಾರ ನಡೆದ  `ಪ್ರಾಚೀನ ಕವಿ- ಕಾವ್ಯ ಚಿಂತನಾ ಮಾಲೆ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಲಕ್ಷ್ಮೀಶ ಉತ್ತಮ ಕವಿ, ಕಥೆಗಾರ ಮತ್ತು ತತ್ವಜ್ಞಾನಿ. ಆಧ್ಯಾತ್ಮದ ಬಗ್ಗೆ ಹೇಳಬಲ್ಲ ಲೋಕಜ್ಞಾನಿಯಾಗಿದ್ದ.  ಕರಾವಳಿ ಜಿಲ್ಲೆಯ ಯಕ್ಷಗಾನ ಪ್ರಸಂಗಕ್ಕೆ ಲಕ್ಷ್ಮೀಶ ಪ್ರೇರಣೆ ಎಂದು ಅವರು ಹೇಳಿದರು.ನಾಡು- ನುಡಿ, ಭಾಷೆ, ಸಾಹಿತ್ಯ, ಸಂಸ್ಕೃತಿಯ ಪ್ರಚಾರ ಮತ್ತು ಪ್ರಸಾರ ಕನ್ನಡ ಸಾಹಿತ್ಯ ಪರಿಷತ್ತಿನ ಉದ್ದೇಶವಾಗಿದೆ. ಐದು ತಿಂಗಳಿನಲ್ಲಿ ಈಗಾಗಲೇ 175 ಕಾರ್ಯಕ್ರಮಗಳನ್ನು ಮಾಡಲಾಗಿದೆ. ಕಾವ್ಯ ಪರಂಪರೆಯ ಬಗ್ಗೆ ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ. ಅದು ಯಶಸ್ಸಾದರೆ ಜಿಲ್ಲಾ ಮಟ್ಟದಲ್ಲಿ ಸಹ ಕಾವ್ಯ ಪರಂಪರೆ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಏಕೆಂದರೆ ಕಾವ್ಯ ಪರಂಪರೆ ಸಾಹಿತ್ಯದ ಜೀವ ಎಂದು ಅವರು ಹೇಳಿದರು.`ಲಕ್ಷ್ಮೀಶನ ಜೈಮಿನಿ ಭಾರತವನ್ನು ಜನರು ಮತ್ತೆ ಮತ್ತೆ ಕೇಳುತ್ತಾರೆ. ಶ್ರೀಕೃಷ್ಣ ಸಂಧಾನ ಯಕ್ಷಗಾನ ಪ್ರಸಂಗ ಹಲವು ಬಾರಿ ನೋಡಿದ್ದರೂ ಸಂಧಾನ ಆಗುವುದಿಲ್ಲ, ಸಂಗ್ರಾಮವೇ ಆಗುತ್ತದೆ ಎಂದು ಗೊತ್ತಿದ್ದರೂ ಆ ಪ್ರಸಂಗವನ್ನು ಜನರು ಹಲವು ಬಾರಿ ನೋಡುತ್ತಾರೆ. ಏಕೆಂದರೆ ಅದರ ಅರ್ಥ ನೆಲೆ- ಕಾಲಕ್ಕೆ ತಕ್ಕಂತೆ ಭಿನ್ನವಾಗುತ್ತದೆ~ ಎಂದು ತುಮಕೂರು ವಿಶ್ವವಿದ್ಯಾಲಯದ ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ರೀಡರ್ ಡಾ. ನಿತ್ಯಾನಂದ ಶೆಟ್ಟಿ ಹೇಳಿದರು.ಕಾವ್ಯವೊಂದು ರಚನೆಯಾದ ಕಾಲದಲ್ಲಿ ಹೇಗೆ ಓದಿ ಅರ್ಥ ಮಾಡಿಕೊಳ್ಳುತ್ತಿದ್ದರೋ, ಈಗಲೂ ಅದೇ ರೀತಿ ಓದುತ್ತೇವೆ, ಆದರೆ ನಿರ್ವಚನ ಮತ್ತು ವ್ಯಾಖ್ಯೆ ಬದಲಾಗುತ್ತದೆ. ಆದರೆ ಕಾವ್ಯ ಬದಲಾಗುವುದಿಲ್ಲ. ಲಕ್ಷ್ಮೀಶ ಸಂಸ್ಕೃತದಿಂದ ಅನುವಾದ ಮಾಡಿರುವುದು ನಿಜ, ಆದರೆ ಅನುವಾದವೂ ಒಂದು ಸೃಜನಶೀಲ ಪ್ರಕ್ರಿಯೆ.ಯಾವುದೇ ಕವಿಯನ್ನು ನಿರ್ದಿಷ್ಟ ಕಾರಣಕ್ಕೆ ವರ್ಗೀಕರಣಕ್ಕೆ ಒಳಪಡಿಸಬಾರದು. ಕವಿ ರವೀಂದ್ರನಾಥ್ ಟ್ಯಾಗೂರ್ ಅವರನ್ನು ಎರಡನೇ ದರ್ಜೆಯ ನಾಟಕಕಾರ ಎಂದು ಸಾಹಿತಿ ಗಿರೀಶ್ ಕಾರ್ನಾಡ್ ಹೇಳಿದ್ದಾರೆ. ಇದು ಅವರ ವಸಾಹತುಶಾಹಿ ಜ್ಞಾನ ಸಂರಚನೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಆಕಾಶವಾಣಿ ಗಾಯಕ ಎಚ್. ಚಂದ್ರಶೇಖರ ಕೆದ್ಲಾಯ ಜೈಮಿನಿ ಭಾರತದ ಗಮಕ ವಾಚನ ಮಾಡಿದರು.

 

ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಪಾದೇಕಲ್ಲು ವಿಷ್ಣು ಭಟ್ ಅವರು ವ್ಯಾಖ್ಯಾನ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಜಿ.ಯೋಗಾನಂದ ವಹಿಸಿದ್ದರು. ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಸೂರಾಲು ನಾರಾಯಣ ಮಡಿ, ಗೌರವ ಕೋಶಾಧಿಕಾರಿ ಕೆ.ಎಸ್. ಸುಬ್ರಹ್ಮಣ್ಯ ಬಾಸ್ರಿ, ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಗಣನಾಥ ಎಕ್ಕಾರು ಉಪಸ್ಥಿತರಿದ್ದರು. ಡಾ. ನಿಕೇತನ ಕಾರ್ಯಕ್ರಮ ನಿರೂಪಣೆ ಮಾಡಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.