ಭಾನುವಾರ, ಮೇ 16, 2021
28 °C

ಕಾಶಿ ವಿಶ್ವೇಶ್ವರಸ್ವಾಮಿ ಬ್ರಹ್ಮರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರದಲ್ಲಿ ಐತಿಹಾಸಿಕ ಕಾಶಿ ವಿಶ್ವೇಶ್ವರಸ್ವಾಮಿಯ ಬ್ರಹ್ಮ ರಥೋತ್ಸವ ಶುಕ್ರವಾರ ಸಡಗರ, ಸಂಭ್ರಮದಿಂದ ನಡೆಯಿತು.  ಕಾವೇರಿ ನದಿ ದಡದಲ್ಲಿರುವ ದೇಗುಲದ ಪ್ರಾಂಗಣದಲ್ಲಿ ಮಧ್ಯಾಹ್ನ 12.45ಕ್ಕೆ ಸರಿಯಾಗಿ ಬ್ರಹ್ಮ ರಥೋತ್ಸವಕ್ಕೆ ತಹಶೀಲ್ದಾರ್ ಅರುಳ್‌ಕುಮಾರ್ ಚಾಲನೆ ನೀಡಿದರು. ಕಾವೇರಿ ನದಿಯಿಂದ ಕಾಶಿ ವಿಶ್ವನಾಥನ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ ದೇಗುಲದ ಸುತ್ತಲಿನ ರಥ ಬೀದಿಯಲ್ಲಿ ಭಕ್ತರು ಉತ್ಸಾಹದಿಂದ ರಥವನ್ನು ಎಳೆದರು. ರಥವನ್ನು ಎಳೆಯುವಾಗ `ಉಘೇ.. ಉಘೇ.. ಕಾಶಿ ವಿಶ್ವನಾಥ~ ಘೋಷಣೆಗಳು ಮೊಳಗಿದವು. ಸುಮಾರು 70 ಅಡಿ ಎತ್ತರದ ರಥವನ್ನು ಬಗೆ ಬಗೆಯ ಹೂ ಮತ್ತು ಬಣ್ಣ ಬಣ್ಣದ ವಸ್ತ್ರಗಳಿಂದ ಸಿಂಗರಿಸಲಾಗಿತ್ತು. ನೆರೆದಿದ್ದವರು ಸರ್ವಾಲಂಕೃತ ರಥಕ್ಕೆ ಹಣ್ಣು, ದವನ ಎಸೆದರು. ಧೂಪ, ದೀಪ ಬೆಳಗಿದರು.  ಬ್ರಹ್ಮ ರಥೋತ್ಸವದ ಅಂಗವಾಗಿ ದೇವಾಲದಲ್ಲಿ ವಿಶೇಷ ಪೂಜೆಗಳು ನಡೆದವು. ಪುಣ್ಯಾಹ, ಗಣಪತಿ ಪೂಜೆ, ಅಂಕುರಾರ್ಪಣೆ, ಗಿರಿಜಾ ಕಲ್ಯಾಣೋತ್ಸವ ಜರುಗಿದವು. ಶನಿವಾರ ಅಶ್ವಾರೋಹಣೋತ್ಸವ ಮತ್ತು ಶಯನೋತ್ಸವಗಳು ನಡೆಯಲಿವೆ. ಭಾನುವಾರ ಅವಭೃತ ತೀರ್ಥಸ್ನಾನ, ತೆಪ್ಪೋತ್ಸವ; ಸೋಮವಾರ ಮಹಾ ಸಂಪ್ರೋಕ್ಷಣೆ, ಕೈಲಾಸ ವಾಹನೋತ್ಸವ; ಮಂಗಳವಾರ ಮಹಾಭಿಷೇಕ ಮತ್ತು ನಂದಿ ವಾಹನೋತ್ಸವಗಳು ನಡೆಯಲಿವೆ. ಜಿ.ಪಂ. ಸದಸ್ಯೆ ನಾಗರತ್ನ ಬಸವರಾಜು, ಮಾಜಿ ಸದಸ್ಯ ಜಿ.ದಶರಥ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜು ನೇತೃತ್ವ ವಹಿಸಿದ್ದರು. ಮಹದೇವಪುರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.