ಬುಧವಾರ, ಜೂನ್ 16, 2021
23 °C

ಕಿಂಗ್‌ಫಿಷರ್‌ಗೆ ನೆರವು ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್: `ಕಿಂಗ್‌ಫಿಷರ್ ಏರಲೈನ್ಸ್ ಖಾಸಗಿ ಕಂಪೆನಿಯಾಗಿರುವುದರಿಂದ ಸರ್ಕಾರವು ಸಂಕಷ್ಟ ಪರಿಹಾರ ಪ್ಯಾಕೇಜ್ ನೀಡುವಂತೆ ಶಿಫಾರಸು ಮಾಡುವ ಪ್ರಶ್ನೆಯೇ ಇಲ್ಲ. ಕಂಪೆನಿ ನಿಗದಿಗಿಂತ ಕಡಿಮೆ ಸಂಖ್ಯೆಯ ವಿಮಾನಗಳನ್ನು ಓಡಿಸಿದ ಸಂದರ್ಭದಲ್ಲಿ ಮಾತ್ರ ಸರ್ಕಾರ ಮಧ್ಯಪ್ರವೇಶಿಸುತ್ತದೆ~ ಎಂದು ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.ಇಲ್ಲಿನ ಬೇಗಂಪೇಟ್‌ದಲ್ಲಿ ಬುಧವಾರ ಆರಂಭವಾದ ಐದು ದಿನಗಳ 3ನೇ ಭಾರತೀಯ ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಿಂಗ್‌ಫಿಷರ್‌ಗೆ ನೆರವು ನೀಡದಿರುವ ನಿರ್ಧಾರದಲ್ಲಿ ಗೊಂದಲಕ್ಕೆ ಆಸ್ಪದವೇ ಇಲ್ಲ ಎಂದರು. `ಕಿಂಗ್‌ಫಿಷರ್‌ಗೆ ಹಣದ ನೆರವು ನೀಡಿ ಎಂದು ನಾವು ಶಿಫಾರಸು ಮಾಡಲು ಸಾಧ್ಯವೇ ಇಲ್ಲ. ಆದರೆ ಆ ವಿಮಾನಗಳಲ್ಲಿ ಪ್ರಯಾಣಿಸುವವರ ಸುರಕ್ಷೆ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ~ ಎಂದರು.ಆ ಕಂಪೆನಿಯು ವಿಮಾನಗಳ ಹಾರಾಟ ರದ್ದುಗೊಳಿಸಿರುವ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಪರಿಶೀಲನೆ ನಡೆಸುತ್ತಿದೆ. ಡಿಜಿಸಿಎ ಶಿಫಾರಸು ಸಲ್ಲಿಸಿದ ನಂತರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾಗೆ 6500 ಕೋಟಿ ರೂಪಾಯಿ ಪರಿಹಾರ ಪ್ಯಾಕೇಜ್ ನೀಡಲಾಗಿದೆ. ಅಲ್ಪಾವಧಿ ಸಾಲವನ್ನು ದೀರ್ಘಾವಧಿ ಸಾಲವನ್ನಾಗಿ ಪರಿವರ್ತಿಸುವ, ಬಡ್ಡಿಗೆ ಸರ್ಕಾರದ ಖಾತ್ರಿ ಒದಗಿಸುವ ಪ್ರಸ್ತಾವಗಳನ್ನು ಪ್ಯಾಕೇಜ್ ಒಳಗೊಂಡಿದೆ ಎಂದರು.ಬೋಯಿಂಗ್ ಕಂಪೆನಿಯಿಂದ ಡ್ರೀಮ್ ಲೈನರ್ ವಿಮಾನಗಳ ಪೂರೈಕೆ ವಿಳಂಬವಾಗಿರುವ ಪ್ರಸ್ತಾಪಿಸಿ, 2008ರಲ್ಲೇ ಈ ವಿಮಾನಗಳ ಪೂರೈಕೆ ಆಗಬೇಕಿತ್ತು; ಈಗ ಬೇರೆ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ~ ಎಂದರು.

 

ಪ್ರಸ್ತುತ ವಿಮಾನಯಾನ ಉದ್ದಿಮೆಯು ತಳಮಳ ಎದುರಿಸುತ್ತಿದ್ದು, ಇದನ್ನು ನಿವಾರಿಸಲು ವಿದೇಶ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅನುಮತಿ ನೀಡಲಾಗುವುದು. ವೈಮಾನಿಕ ಇಂಧನ ಆಮದಿಗೆ ಅನುಮತಿ ನೀಡುವ ಜತೆಗೆ ಹೆಚ್ಚೆಚ್ಚು ಖಾಸಗಿ ವಿಮಾನಯಾನ ಕಂಪೆನಿಗಳಿಗೆ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.