ಸೋಮವಾರ, ಏಪ್ರಿಲ್ 19, 2021
28 °C

ಕಿರುಹೊತ್ತಿಗೆಯಲ್ಲಿ ತಪ್ಪುಗಳ ಸರಮಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ‘... ಕುಮಾರವ್ಯಾಸರಂತಹ ಮಹಾನ್ ಕವಿಗಳು ನಮ್ಮೀ ಭಾಷೆಯನ್ನು ಕಾಮ ಕಸ್ತೂರಿಯಾಗಿಸಿದ್ದಾರೆ...’, ‘ಈ ಮಹಾಂತರ ನುಡಿ ತೋರಣದ...’, ‘... ಭೂಪಟದಲ್ಲಿ ಅವಿಛಿನ್ನವಾಗಿ...’ ಬೆಳಗಾವಿಯಲ್ಲಿ ಇದೇ 11ರಿಂದ ಆರಂಭವಾಗಲಿರುವ ಎರಡನೆಯ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಕಿರು ಪರಿಚಯ ನೀಡುವ ‘ಮುನ್ನುಡಿ’ ಕಿರುಹೊತ್ತಿಗೆಯಲ್ಲಿನ ಕೆಲವು ಸಾಲುಗಳು ಇವು. ಈ ಕೈಪಿಡಿಯಲ್ಲಿ ಹಲವೆಡೆ ಕಾಗುಣಿತದ ದೋಷಗಳಿದ್ದರೆ, ಇನ್ನೂ ಕೆಲವೆಡೆ ವಾಕ್ಯ ರಚನೆಯೇ ಸರಿ ಇಲ್ಲ.ಕೈಪಿಡಿಯ 6, 7, 8 ಮತ್ತು 9ನೇ ಪುಟದಲ್ಲಿ ಕನ್ನಡದ ಹಿರಿಯ ಸಾಧಕರ ಭಾವಚಿತ್ರಗಳಿವೆ. ಸಾಹಿತ್ಯ, ಧಾರ್ಮಿಕ,  ರಾಜಕೀಯ, ಕ್ರೀಡೆ, ಉದ್ಯಮ, ಚಲನಚಿತ್ರ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ತೋರಿದ 65 ವ್ಯಕ್ತಿಗಳ ಭಾವಚಿತ್ರ ಈ ಪುಟಗಳಲ್ಲಿವೆ. ಸಾಹಿತ್ಯ ಕ್ಷೇತ್ರದ ಸಾಧಕರಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಭಾವಚಿತ್ರಗಳು ಪ್ರಧಾನವಾಗಿ ಕಂಡುಬಂದಿರುವುದು ಸಂತಸದ ವಿಷಯವಾದರೂ ಕನ್ನಡದ ಕಟ್ಟಾಳು ಆಗಿದ್ದ ಕಾದಂಬರಿ ಸಾರ್ವಭೌಮ ಅ.ನ. ಕೃಷ್ಣರಾಯ, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಚಿತ್ರ ಇಲ್ಲಿ ಇಲ್ಲ.ಹಾಗೆಯೇ ಬಿ.ಎಂ. ಶ್ರೀಕಂಠಯ್ಯ ಅವರ ಚಿತ್ರ ಕೂಡ ಬಿಟ್ಟುಹೋಗಿದೆ. ರಾಜಕೀಯ ಕ್ಷೇತ್ರದಲ್ಲಿ ಎಸ್.ಆರ್. ಕಂಠಿ ಅವರ ಭಾವಚಿತ್ರ ಎಲ್ಲೂ ಕಾಣಿಸುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಭಾವಚಿತ್ರ ಅತ್ಯಂತ ಕಳಪೆ ಗುಣಮಟ್ಟದ್ದಾಗಿದೆ, ಪಟೇಲರ ಒಳ್ಳೆಯ ಭಾವಚಿತ್ರ ಸರ್ಕಾರದ ಬಳಿ ಇರಲೇ ಇಲ್ಲವೇನೊ ಎಂಬ ಭಾವನೆ ಮೂಡಿಸುವಂತಿದೆ. 1985ನೇ ಇಸವಿಯಲ್ಲಿ ಮೈಸೂರಿನಲ್ಲಿ ನಡೆದ ಮೊದಲ ವಿಶ್ವ ಕನ್ನಡ ಸಮ್ಮೇಳನದ ಕುರಿತ ಮಾಹಿತಿ ಕೈಪಿಡಿಯ ಒಂಬತ್ತನೇ ಪುಟದಲ್ಲಿದೆ. ಇದರಲ್ಲಿ ಒಂದು ವಾಕ್ಯ ಬಹಳ ಮಜವಾಗಿದೆ. ‘ಕಡಲತೀರದ ಭಾರ್ಗವನೆಂದೇ ಹೆಸರಾಂಕಿತರಾದ ಶಿವರಾಮ ಕಾರಂತರು...’ ಎಂಬ ವಾಕ್ಯದಲ್ಲಿ ‘ಹೆಸರಾಂಕಿತ’ ಪದ ಪ್ರಯೋಗ ಹಾಸ್ಯಕ್ಕೆ ಈಡಾಗಿದೆ! ಅದು ಹೆಸರಾಂತ ಎಂದು ಆಗಬೇಕಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.